ಭ್ರಷ್ಟ ಅಧಿಕಾರಿಗಳು, ದುಷ್ಟ ರಾಜಕಾರಣಿಗಳು..!

Posted: August 21, 2014 in Uncategorized
Tags: , , , , , , , , , , , , , , , , , , , , , , , , , , , , , , , , , , , , , , , , , , , , , , , , , ,

# ಭ್ರಷ್ಟ, ದುಷ್ಟ, ಸ್ವಾರ್ಥಿ, ಕುತಂತ್ರಿ, ಜಾತಿವಾದಿ, ನಿಷ್ಕಾಳಜಿಯ ಮಂತ್ರಿಗಳು/ ಜನಪ್ರತಿನಿಧಿಗಳು/ ರಾಜಕಾರಣಿಗಳು ಹಾಗೂ ಸರಕಾರಿ ಅಧಿಕಾರಿಗಳು/ ನೌಕರರ ಬೇಜವಾಬ್ದಾರಿ, ಹೊಣೆಗೇಡಿ, ಅದಕ್ಷ ಆಡಳಿತ ವ್ಯವಸ್ಥೆಯಿಂದಾಗಿಯೇ ಬಡವರ, ನೊಂದವರ, ಶೋಷಿತರ ಮತ್ತು ನಾಡಿನ ಬಹುತೇಕ ಯಾವುದೇ ಸಮಸ್ಯೆಗಳೂ ಪರಿಹಾರ ಕಾಣದೆ ಎಲ್ಲವೂ ನೆನೆಗುದಿಯಲ್ಲಿರಲು ಮುಖ್ಯ ಕಾರಣವಾಗಿದೆ. ಹಣ ಮತ್ತು ಮತ ಬ್ಯಾಂಕ್ ರಾಜಕಾರಣವೇ ಇವರ ಬಂಡವಾಳ.
ಎಲ್ಲಿಂದೆಲ್ಲ, ಯಾವುದರಿಂದೆಲ್ಲ ದೊಡ್ಡ ಮೊತ್ತದ ಆರ್ಥಿಕ ಲಾಭ ಇದೆಯೋ ಅಲ್ಲಿಗೆಲ್ಲ ಇಂಥವರು ಗಮನ ಕೊಡುತ್ತಾರೆ, ಭೇಟಿ ಕೊಡುತ್ತಾರೆ. ಎಲ್ಲೆಲ್ಲಿಂದೆಲ್ಲಾ ಯಾವುದೇ ಲಾಭವಿಲ್ಲವೋ ಅದರ ಕಡೆಗೆ ದಿವ್ಯ ನಿರ್ಲಕ್ಷ್ಯ. ಅಂತಿಮವಾಗಿ ಅನಿವಾರ್ಯವಾದರೆ ಭೇಟಿಯ, ಕಾಳಜಿಯ ನಾಟಕವಾಡುತ್ತಾರೆ. ಇಂಥ ನಾಟಕ ಪ್ರದರ್ಶನದಲ್ಲೂ ಪ್ರಚಾರ ಪಡೆದುಕೊಂಡು ಅಲ್ಲೂ ಲಾಭ ಮಾಡಿಕೊಳ್ಳುವ ಅಯೋಗ್ಯರು ನಮ್ಮನ್ನಾಳುವವರು.

ಯಾವುದೇ ಪ್ರಕರಣ, ವಿಷಯ, ಬೆಳವಣಿಗೆಗಳಿರಲಿ. ಅವುಗಳ ಹಾದಿ ತಪ್ಪಿಸುವುದು, ಅವುಗಳನ್ನು ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳುವುದು, ತಿರುಚುವುದು ಇವರೇ. ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡಂತೆ. ಸತ್ಯದ ತಲೆ ಮೇಲೆಯೇ ಮೊಳೆ ಹೊಡೆಯುವುದರಲ್ಲಿ ಇವರದು ಎತ್ತಿದ ಕೈ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಕಲೆಯೂ ಇವರಿಗೆ ಕರಗತ.

ಆಗಸ್ಟ್ 18ರಂದು ಹೀಗೆಯೇ ಆಯಿತು. ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ ಸಭೆ) ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಾರ್ಡನ್ ಗಿರಿಧರ ಗಾಣಿಗ ಎಂಬವರು ತಮ್ಮ ಇಲಾಖೆಯ ಸರದಿ ಬಂದಾಗ ಎದ್ದು ನಿಂತವರೆ, ಬಿಸಿಎಂ ಹಾಸ್ಟೆಲ್ ಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರಿಕಾ ಹೇಳಿಕೆಯೊಂದರ ಮೇಲೆ ಹರಿಹಾಯ್ದಿದ್ದರು.

ವಾರ್ಡನ್ ಗಿರಿಧರ್ ಗಾಣಿಗರು ಬಿಸಿಎಂ ಹಾಸ್ಟೆಲ್ ಗಳ ಕುಂದು ಕೊರತೆ ಬಗ್ಗೆ, ಸಮಸ್ಯೆಗಳ ಕುರಿತು, ಸರಕಾರ ಏನು ಮಾಡುತ್ತಿದೆ, ಸರಕಾರದಿಂದ ಏನೆಲ್ಲಾ ಬರುತ್ತಿದೆ, ಯಾವುದೆಲ್ಲಾ ಬರುತ್ತಿದೆ, ಎಷ್ಟು ಬರುತ್ತಿದೆ, ಇದರಲ್ಲಿ ಯಾವ ಬದಲವಣೆ, ಹೆಚ್ಚಳವನ್ನು ಸರಕಾರ ಮಾಡಬೇಕಾಗಿದೆ, ನಾವೇನು ಮಾಡುತ್ತಿದ್ದೇವೆ, ಹಾಸ್ಟೆಲ್ ವ್ಯವಸ್ಥೆ ಸುಧಾರಿಸಬೇಕಾದರೆ ಮುಂದಿನ ದಿನಗಳಲ್ಲಿ ಸರಕಾರವೇನು ಮಾಡಬೇಕು, ಶಾಸಕರಿಂದ ತಮ್ಮ ಇಲಾಖೆ ಏನನ್ನು ಬಯಸುತ್ತದೆ ಇತ್ಯಾದಿ ವಿಚಾರಗಳನ್ನು ಸಭೆಯ ಮುಂದಿಡಬೇಕಾಗಿತ್ತು. ಇದು ಅಗತ್ಯವೂ, ಅನಿವಾರ್ಯವೂ ಆಗಿದೆ. ವಾರ್ಡನ್ ಹೀಗೆ ಮಾಡಿದರಾ ಎಂದು ಕೇಳಿದರೆ ಅವರು ಹಾಗೆ ಮಾಡಲೇ ಇಲ್ಲ ಎಂಬುದಾಗಿದೆ ಉತ್ತರ.

ಉಡುಪಿಯ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಸ್ವಂತ ಕಟ್ಟಡವಿಲ್ಲ. ಕಳೆದ ಐದು ವರ್ಷಗಳಿಂದ ಅಲ್ಲಿ ಇಲ್ಲಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಕಾರ್ಯ
ನಿರ್ವಹಿಸುತ್ತಿದೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳಿರುವ ಉತ್ತಮ ಬಾಡಿಗೆ ಕಟ್ಟಡಗಳನ್ನು ಪಡೆದುಕೊಳ್ಳಲು
ಸಾಧ್ಯವಾಗುತ್ತಿಲ್ಲ. ಪ್ರಸ್ತುತ ತೊಟ್ಟಂ ಎಂಬಲ್ಲಿ ಹಾಸ್ಟೆಲ್ ಇದ್ದು, ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಪ್ರತಿದಿನವೂ ವಿದ್ಯಾರ್ಥಿನಿಯರು ಬಹಳಷ್ಟು ಸಂಕಟಗಳನ್ನು ಅನುಭವಿಸುತ್ತಿದ್ದಾರೆ. 125 ಮಂದಿಗೆ ಈ ಹಾಸ್ಟೆಲ್ ನಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಆದರೆ ಈಗ ಇರುವ ವಿದ್ಯಾರ್ಥಿನಿಯರ ಸಂಖ್ಯೆ ಕೇವಲ 82. ಎಷ್ಟು ಸಂಖ್ಯೆಯ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅವಕಾಶವಿದೆಯೋ, ಅಷ್ಟು ಸಂಖ್ಯೆಯ
ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ಇಲ್ಲವಾದರೂ, ಇರುವ ವಿದ್ಯಾರ್ಥಿನಿಯರಿಗೂ ಈ ಹಾಸ್ಟೆಲ್ ನಲ್ಲಿ ಶೌಚಾಲಯಗಳಿಲ್ಲ. ಬಾತ್ ರೂಮ್ ಗಳು ಇಲ್ಲ. ಡ್ರೆಸ್ಸಿಂಗ್ ರೂಮ್ ಇಲ್ಲ. ಬಟ್ಟೆ ಬರೆಗಳ ಬ್ಯಾಗ್ ಮತ್ತು ಕಾಲೇಜು ಪುಸ್ತಕಗಳ ಬ್ಯಾಗ್ ಇಡಲು
ಸ್ಥಳಾವಕಾಶವಿಲ್ಲ. ನೆಲದಲ್ಲೇ ಮಲಗಬೇಕಾದ ದುರವಸ್ಥೆ ಇದೆ. ಈ ಸತ್ಯವನ್ನು, ವಾಸ್ತವಾಂಶಗಳನ್ನು ಗಿರಿಧರ್ ಗಾಣಿಗ ಸಹಿತ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸೇರಿದ ಯಾವನೇ ಅಧಿಕಾರಿ ಇದುವರೆಗೆ ತಾಲೂಕು ಮಟ್ಟದ್ದಿರಬಹುದು, ಜಿಲ್ಲಾ ಮಟ್ಟದ್ದಿರಬಹುದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಿಲ್ಲ, ಹೇಳುವುದೂ ಇಲ್ಲ. ಯಾಕೆಂದು ಅರ್ಥವಾಗುವುದಿಲ್ಲ.

ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೇಲಿಗೊಂದು ಸ್ವಂತ ಕಟ್ಟಡ ಬೇಕು. ಸ್ವಂತ ಕಟ್ಟಡ ಬೇಕಾದರೆ ಸ್ವಂತ ಜಾಗ ಬೇಕು. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಲ್ಲಿ ಮಾತುಕತೆ ನಡೆಸಿ ಸೂಕ್ತ ಆದೇಶ ಮಾಡುವ ಮೂಲಕ ಆ ಜಾಗವನ್ನು ಆದಷ್ಟು ಬೇಗ ನಮ್ಮ ಇಲಾಖೆಗೆ ಒದಗಿಸಿ ಕೊಡಬೇಕು. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರ ಕಡಿಮೆ ಇರುವುದರಿಂದ ಈ ದರದಲ್ಲಿ ಉತ್ತಮ ಬಾಡಿಗೆ ಕಟ್ಟಡ ಇಲಾಖೆಗೆ ಸಿಗುತ್ತಿಲ್ಲ. ಆದುದರಿಂದ ಸರಕಾರದ ಮಟ್ಟದಲ್ಲಿ ಮಾತಾಡಿ ಲೋಕೋಪಯೋಗಿ ನಿಗದಿಪಡಿಸಿದ ದರವನ್ನು ಏರಿಸಬೇಕು. ತೊಟ್ಟಂನಲ್ಲಿರುವ ವಿದ್ಯಾರ್ಥಿನಿ ನಿಲಯದಲ್ಲಿ 82 ವಿದ್ಯಾರ್ಥಿನಿಯರಿಗೆ ಇರುವುದು ಕೇವಲ ಎರಡೇ ಎರಡು ಶೌಚಾಲಯ ಮತ್ತು ಎರಡೇ ಎರಡು ಬಾತ್ ರೂಮುಗಳು ಮಾತ್ರ. ಡ್ರೆಸ್ಸಿಂಗ್ ರೂಮ್ ಇಲ್ಲವೇ ಇಲ್ಲ. ಮಲಗಲು, ಬ್ಯಾಗ್ ಗಳನ್ನು ಇಡಲು ಸ್ಥಳವಿಲ್ಲ. ಓದುವ ವಾತಾವರಣವೇ ಇಲ್ಲ ಎಂಬ ಸತ್ಯವನ್ನು ವಾರ್ಡನ್ ಗಿರಿಧರ್ ಗಾಣಿಗ ಹೇಳುವುದಿಲ್ಲ. ವಾಸ್ತವಾಂಶಗಳನ್ನು ಶಾಸಕರಿರುವ ಅಥವಾ ಸಚಿವರಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳದೇ ಇದ್ದರೆ ಅಭಿವೃದ್ಧಿಯಾಗಲು ಸಾಧ್ಯವೇ ? ಕನಿಷ್ಟ ಮಟ್ಟದ ಸುಧಾರಣೆಯನ್ನಾದರೂ ಸಾಧಿಸಲು ಸಾಧ್ಯವೇ ? ಇಲ್ಲವೇ ಇಲ್ಲ. ಆದರೆ ಇದನ್ನೆಲ್ಲಾ ಇವರುಗಳು ಯಾಕಾಗಿ ಮನವರಿಕೆ ಮಾಡಿಕೊಳ್ಳುವುದಿಲ್ಲ ಎನ್ನುವುದೂ ತಿಳಿಯುವುದಿಲ್ಲ.

ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸುವಂಥ ಶಾಸಕರಿಗೂ, ಸಚಿವರಿಗೂ ಇದ್ಯಾವುದೂ ಬೇಕಾಗಿಲ್ಲ. ಇಂಥವುಗಳ ಬಗ್ಗೆ ನೈಜ ಕಾಳಜಿ ಇರುತ್ತಿದ್ದರೆ, ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕವಾದರೂ ಸ್ಥಳಕ್ಕೆ ಭೇಟಿ ಕೊಡಬಹುದಿತ್ತು. ಸ್ಥಳಕ್ಕೆ ಭೇಟಿ ಕೊಡುವುದು ಬಿಡಿ, ಸತ್ಯವನ್ನು ಅರಿತುಕೊಳ್ಳಬೇಕೆಂಬ ಕನಿಷ್ಟ ಪ್ರಾಮಾಣಿಕ ಕಾಳಜಿಯೂ ಸಹ ಇವರಲ್ಲಿ ಇಲ್ಲವಾಗಿದೆ. ಇವರಿಗೆ ಅಭಿವೃದ್ಧಿ, ಪ್ರಗತಿ ಎಂದರೆ ರಸ್ತೆ ಕಾಂಕ್ರಿಟೀಕರಣ, ಡಾಮರೀಕರಣ, ಸೇತುವೆ, ದೊಡ್ಡ ದೊಡ್ಡ ಕಟ್ಟಡಗಳು ಇತ್ಯಾದಿಗಳು ಮಾತ್ರ. ಇಲ್ಲಿ ದೊಡ್ಡ ಮೊತ್ತದ ಹಣ ಸರಕಾರದಿಂದ ಬಿಡುಗಡೆಗೊಳ್ಳುತ್ತವೆ. ಇದರಲ್ಲಿ ಅಷ್ಟೇ ದೊಡ್ಡ ಮೊತ್ತದ ಕಮಿಷನ್ ಹಣವೂ ಜೇಬಿಗಿಳಿಸಲಾಗುತ್ತದೆ. ಇದಕ್ಕೇ ಇರಬೇಕು ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳು, ನೌಕರರು ಇದಕ್ಕೆ ಕೊಡುವಷ್ಟು ಕಾಳಜಿ ಮತ್ತು ಆಸಕ್ತಿಯನ್ನು ಇತರ ವಿಷಯಗಳ ಕಡೆಗೆ ಕೊಡದಿರುವುದು.

ಇಂಥ ವಿಷಯಗಳು ಒಂದೆರಡಲ್ಲ. ಅದೆಷ್ಟೋ ಇದೆ. ಗ್ರಾಮ ಪಂಚಾಯಿತಿಗೋ, ತಾಲೂಕು ಪಂಚಾಯಿತಿಗೋ, ಜಿಲ್ಲಾ ಪಂಚಾಯಿತಿಗೋ ಪಕ್ಷದ ಹೆಸರಿನಲ್ಲಿ ಸದಸ್ಯರಾಗಿಬಿಡುತ್ತಾರೆ. ಸದಸ್ಯರಾದ ಬಳಿಕ ಸಾಮಾನ್ಯ ಸಭೆಗಳಲ್ಲಿ ಬೆಂಚು ಬಿಸಿ ಮಾಡುವುದು ಬಿಟ್ಟರೆ ಬೇರೆ ಮಾಡುವುದೇನೂ ಇಲ್ಲ (ಎಲ್ಲರೂ ಅಲ್ಲ). ಸಭೆಯಿಂದ ನಿರ್ಗಮಿಸುವ ಮೊದಲು ಗೌರವ ಧನದ ಕವರ್ ಪಡೆದುಕೊಳ್ಳಲು ಮಾತ್ರ ಇವರು ಮರೆಯುವುದಿಲ್ಲ. ಉಳಿದ ಸಮಯಗಳಲ್ಲಿ ವರ್ಗಾವಣೆ ರಾಜಕೀಯದಲ್ಲಿ, ತಮ್ಮ ಕ್ಷೇತ್ರಗಳಲ್ಲಿ ಗುಂಪುಗಾರಿಕೆ ನಡೆಸುವುದರಲ್ಲಿ, ಸೇಡಿನ ರಾಜಕಾರಣ ನಡೆಸುವುದರಲ್ಲಿ ಸಕ್ರಿಯವಾಗಿರುತ್ತಾರೆ.

ಜನಪ್ರತಿನಿಧಿಗಳಾಗಿರುವ ಕಾರಣಕ್ಕೆ, ಸರಕಾರದ ಕಾರ್ಯಕ್ರಮ ಎಂಬ ಕಾರಣಕ್ಕೆ ಇವರಿಗೆ ಮಾಧ್ಯಮ ಪ್ರಚಾರ ಸಿಕ್ಕೇ ಸಿಗುತ್ತವೆ, ಸರಕಾರ ಮತ್ತು ಇವರು ವಯುಕ್ತಿಕವಾಗಿಯೋ, ಸಂಸ್ಥೆಗಳ ಹೆಸರಿನಲ್ಲಿ ಬಹಳಷ್ಟು ಜಾಹೀರಾತುಗಳನ್ನೂ ಮಾಧ್ಯಮಗಳಿಗೆ
ಕೊಡಮಾಡುತ್ತಾರಾದ್ದರಿಂದ ಮಾಧ್ಯಮಗಳೂ ಇವರಿಗೆ ಸಾಕಷ್ಟು ಪ್ರಚಾರವನ್ನು ಕೊಡುತ್ತವೆ, ವಿರುದ್ಧವಂತೂ ಬರೆಯುವುದಿಲ್ಲ. ಬರೆದರೂ ಅದು ಬರುವುದು ಸಣ್ಣದಾಗಿ ಒಂದು ಮೂಲೆಯಲ್ಲಿ, ಯಾರೂ ನೋಡದ ಜಾಗದಲ್ಲಿಯೇ.

ಚುನಾವಣೆ ಸಮೀಪಿಸುವಾಗ ಜನ ಮರುಳು ಯೋಜನೆಗಳ ಜ್ಯಾರಿ, ಮತದಾರರನ್ನು ಮಂಗ ಮಾಡುವ ಭಾಷಣ, ಹಾದಿ ಬೀದಿಯಲ್ಲಿ ಫ್ಲೆಕ್ಸ್ ಬ್ಯಾನರ್, ಕೌಟೌಟ್ ಗಳು. ಕಾಮಗಾರಿಗಳಿಗೆ ಸರಕಾರ ಬಿಡುಗಡೆ ಮಾಡಿದ ಹಣವನ್ನು ತಮ್ಮಪ್ಪನ ತಿಜೋರಿಯಿಂದಲೇ ಕೊಟ್ಟಿದ್ದು ಎಂಬಂತೆ ಅಲ್ಲಿಗೆ ಅಷ್ಟು ಕೋಟಿ ಕೊಟ್ಟೆ, ಇಲ್ಲಿಗೆ, ಇದಕ್ಕೆ ಇಷ್ಟು ಕೋಟಿ ಕೊಟ್ಟೆ ಎಂಬ ಪ್ರಚಾರ ಬೇರೆ. ಥೂ..

ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವುದೇ ತಮ್ಮ ಗುರಿ ಎಂದು ಚುನಾವಣೆಗೆ ಮೊದಲು ಬೋಂಗು ಬಿಟ್ಟು ಭಾರೀ ಸುಭಗರಾಗುವ ಇವರು, ಆಯ್ಕೆಯಾದ ಬಳಿಕ ನಡೆಸಿದ್ದು, ನಡೆಸುವುದು ಭ್ರಷ್ಟಾಚಾರವನ್ನೇ. ಭ್ರಷ್ಟರನ್ನು ರಕ್ಷಿಸುವುದೇ ದಿನಚರಿಯಾಗುತ್ತದೆ. ಇಂಥ ಗೋಮುಖವ್ಯಾಘ್ರರಿಂದಾಗಿಯೇ ನಮ್ಮ ದೇಶ ಇನ್ನೂ ಸಹ ಸುಧಾರಿಸಿಲ್ಲ. – ಶ್ರೀರಾಮ ದಿವಾಣ.

ಉಡುಪಿ: ಪೆರಂಪಳ್ಳಿ ಶೀಂಬ್ರ ನಿವಾಸಿ ವಸಂತ ಜತ್ತನ್ (50) ಎಂಬವರು ಮಾವಿನ ಮರಕ್ಕೆ ಹತ್ತಿ ಮಾನಕಾಯಿ ಕೊಯ್ಯುವಾಗ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾರ್ಚ್ 12 ರಂದು ಮಧ್ಯಾಹ್ನ ಗಂಟೆ 2.30ಕ್ಕೆ ತಮ್ಮ ಮನೆಯ ತೋಟದಲ್ಲಿರುವ ಮಾವಿನ ಮರದಿಂದ ಬಿದ್ದ ವಸಂತರನ್ನು ಕೂಡಲೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಒಂದು ತಿಂಗಳ ಚಿಕಿತ್ಸೆಯ ಬಳಿಕ ಆರ್ಥಿಕ
ಅಡಚಣೆಯಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆದೊಯ್ಯಲಾಗಿತ್ತು. ಮನೆಯಲ್ಲಿರುವಾಗ ಮತ್ತೆ ಬೆನ್ನು ಮತ್ತು ಸೊಂಟ ನೋವು ಕಾಣಿಸಿಕೊಂಡ ಕಾರಣ ಎಪ್ರಿಲ್ 25ರಂದು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ದಾಖಲಿಸಲಾಗಿತ್ತು. ಇಲ್ಲೂ ಚಿಕಿತ್ಸೆ ಫಲಕಾರಿಯಾಗದೆ, ಆ.18ರಂದು ರಾತ್ರಿ ಗಂಟೆ 7.30ಕ್ಕೆ
ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಮೃತರ ಪುತ್ರ ಪ್ರಕಾಶ್ ಜತ್ತನ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಗ್ರಾಮ ಪಂಚಾಯಿತಿಗಳು ಈಗಾಗಲೇ ತಯಾರಿಸಿರುವ ನಿವೇಶನ ರಹಿತರ ಪಟ್ಟಿಯಿಂದ ಬೋಗಸ್ ಹೆಸರುಗಳನ್ನು ಕಿತ್ತುಹಾಕುವುದರ ಜೊತೆಗೆ ಸಮಗ್ರವಾಗಿ ಮರು ಪರಿಶೀಲನೆಗೆ ಒಳಪಡಿಸಲು ಮತ್ತು ನಿವೇಶನ ವಿತರಿಸುವ ಪ್ರಕ್ರಿಯೆಯಲ್ಲಿ ಒಕ್ಕಲುದಾರರ ಸಹಿತ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಲು ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಪ್ರಮೋದ್ ಮ್ವರಾಜ್ ಅಧ್ಯಕ್ಷತೆಯಲ್ಲಿ ಆಗಸ್ಟ್ 17ರಂದು ನಡೆದ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ನಿವೇಶನ ರಹಿತರ ಪಟ್ಟಿಯನ್ನು ಪ್ರಚುರಪಡಿಸಲು ಮತ್ತು ಆಕ್ಷೇಪಗಳಿದ್ದರೆ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಿವೇಶನಗಳನ್ನು ವಿತರಿಸಲು ಬೇಕಾದಷ್ಟು ಸರಕಾರಿ ಭೂಮಿ ಇಲ್ಲವಾಗಿರುವ ಗ್ರಾಮಗಳಲ್ಲಿನ ನಿವೇಶನ ರಹಿತರಿಗೆ ಇತರ ಗ್ರಾಮಗಳಲ್ಲಿ ನಿವೇಶನಗಳನ್ನು ವಿತರಿಸುವ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಯಿತು.

ಎರಡೂವರೆ ವರ್ಷಗಳ ಹಿಂದೆಯೇ ನಿವೇಶನ ರಹಿತರ ಪಟ್ಟಿ ತಯಾರಿಸಿ ತಾಲೂಕು ಪಂಚಾಯಿತಿಗೆ ಕಳುಹಿಸಿಕೊಡುವಂತೆ ಕೋರಿ ಮಾರ್ಗಸೂಚಿ ಸಹಿತ ಪತ್ರ ಬರೆಯಲಾಗಿತ್ತಾದರೂ, ಇದುವರೆಗೂ ಗ್ರಾ.ಪಂ.ಗಳು ತಾ.ಪಂ.ಗೆ ಕಳುಹಿಸಿಕೊಟ್ಟಲ್ಲ ಎಂಬ ಅಂಶ ಸಭೆಯಲ್ಲಿ ಬಹಿರಂಗಕ್ಕೆ ಬಂತು. ನಿವೇಶನ ರಹಿತರ ಪಟ್ಟಿ ದೋಷಪೂರಿತವಾಗಿರುವ ಕಾರಣದಿಂದಾಗಿ ಹಕ್ಕುಪತ್ರ ವಿತರಿಸಿದ ಬಳಿಕ ಆಕ್ಷೇಪಗಳು ದಾಖಲಾಗುವ ಪ್ರಮೇಯ ಒದಗಿಬಂದಿದೆ ಎನ್ನುವುದು ಚರ್ಚೆಗೀಡಾಯಿತು.

ಗ್ರಾಮ ಕರಣಿಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಬೇಕಾಗಿದೆ. ಆದರೆ ಪ್ರಸ್ತುತ ತಯಾರಿಸಲಾದ ಪಟ್ಟಿಯಲ್ಲಿ ಗೊಂದಲಗಳಿವೆ. ಬೆಳಪು ಗ್ರಾಮದಲ್ಲಿ 272 ಮಮದಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಇಲ್ಲಿ ಭೂಮಿ ಇದ್ದವರಿಗೂ ನಿವೇಶನದ ಹಕ್ಕುಪತ್ರ ವಿತರಿಸಿರುವ ವಿಷಯ ಸಭೆಯಲ್ಲಿ ಬಯಲಾಯಿತು.

ಉಡುಪಿ ನಗರ ಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ವಿತರಿಸುವ ಪ್ರಕ್ರಿಯೆಯಲ್ಲಿ ಕನಕಪುರ ಮಾದರಿಯನ್ನು ಅನುಸರಿಸುವ ನಿಟ್ಟಿನಲ್ಲಿ ಆಯುಕ್ತರ ಸಹಿತ ನಗರಸಭೆಯ ತಂಡವೊಂದು ಕನಕಪುರಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳುವುದು ಸೂಕ್ತ ಎಂದು ಶಾಸಕರು ಸೂಚಿಸಿದರು.

ಅರಣ್ಯ ಇಲಾಖೆಯ ವಶದಲ್ಲಿದ್ದ 900 ಎಕರೆ ಡೀಮ್ಡ್ ಫಾರೆಸ್ಟ್ ನ್ನು ಮತ್ತೆ ಕಂದಾಯ ಇಲಾಖೆ ಪಡೆದುಕೊಂಡಿದೆ. ಇನ್ನಷ್ಟೂ ಡೀಮ್ಡ್ ಫಾರೆಸ್ಟ್ ನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಕುಮ್ಕಿ ಭೂಮಿ ಬಗ್ಗೆ
ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿದೆ, ಆದರೆ ಅಂತಿಮ ತೀರ್ಮಾನವಾಗಿಲ್ಲ. ಹಾವಂಜೆಯಲ್ಲಿ ಕೂಂಬಿಂಗ್ ನಡೆಸಿ ಕಾಡುಕೋಣಗಳನ್ನು 5 ಕಿ.ಮೀ.ದೂರದವರೆಗೆ ಓಡಿಸಲಾಗಿದೆ.
ಚೇರ್ಕಾಡಿಯಲ್ಲಿ ಚಿರತೆಗೆ ಗೂಡು ಇಡಲಾಗಿದೆ. ಕೇಗಾರಿಕಾ ಇಲಾಖೆಯ ಉಡುಪಿ ತಾಲೂಕು ವಿಸ್ತರಣಾಧಿಕಾರಿ ಹುದ್ದೆ ಕಳೆದ ಮೂರು ವರ್ಷಗಳಿಂದ ಕಾಲಿ ಇದೆ ಎಂಬಿತ್ಯಾದಿ ವಿಷಯಗಳು ಸಭೆಯಲ್ಲಿ ಗಮನ ಸೆಳೆದ ಇತರ ವಿಚಾರಗಳು.

ತಾ.ಪಂ.ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್, ತಹಶಿಲ್ದಾರ್
ಗುರುಪ್ರಸಾದ್, ತಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಜಿ.ಪಂ.ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಉಪೇಂದ್ರ ನಾಯಕ್ ಮೊದಲಾದವರು ಸಬೆಯಲ್ಲಿ ಉಪಸ್ಥಿತರಿದ್ದರು.
tags: ನಿವೇಶನ, ಭೂಮಿ, ಭೂರಹಿತರು, ಹೋರಾಟ, ಆಡಳಿತ, ಪ್ರಮೋದ್ ಮಧ್ವರಾಜ್ ಶಾಸಕರು, ಶಾಸಕರು, ತಾಲೂಕು ಪಂಚಾಯಿತಿ, ಉಡುಪಿ ತಾಲೂಕು ಪಂಚಾಯತ್, ಪ್ರಗತಿ ಪರಿಶೀಲನಾ ಸಭೆ, pramod madhwaraj mla, mla’s, udupi news, udupibits]

ಉಡುಪಿ: ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಹೋದ ದಲಿತರೊಂದಿಗೆ ಅನುಚಿತವಾಗಿ ವರ್ತಿಸಿದ ಹಿರಿಯಡ್ಕ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್ ಪೆಕ್ಟರ್ ರಫೀಕ್ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ರಾಜ್ಯದ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ದೂರು ನೀಡಿದೆ.

ಬೊಮ್ಮರಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿ ಡಿಸಿ ಮನ್ನಾ ಭೂಮಿಯಲ್ಲಿರುವ, ಕಳೆದ 49 ವರ್ಷಗಳಿಂದ ದಲಿತ ಕುಟುಂಬಗಳು ಉಪಯೋಗಿಸುತ್ತಿದ್ದ ರಸ್ತೆಯನ್ನು ದಲಿತೇತರ
ಕುಟುಂಬವೊಂದು ಕಡಿದು ತಡೆ ಒಡ್ಡಿದ ಬಗ್ಗೆ ಮೂವರು ಮಕ್ಕಳೊಂದಿಗೆ ವಾಸವಾಗಿರುವ ದಲಿತ ವಿಧವೆಯೊಬ್ಬರು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಹಿರಿಯಡ್ಕ ಪಿಎಸ್ಐ ರಫೀಕ್ ಅವರು ಈ ದೂರನ್ನು ದಾಖಲಿಸದೆ ಮುಚ್ಚಿ ಹಾಕಿದ್ದಾರೆ. ಮಾತ್ರವಲ್ಲ, ನ್ಯಾಯ ಕೇಳಲು ಹೋದರೆ ತಾನೇ ರಸ್ತೆ ನಿರ್ಮಿಸಿಕೊಡುವುದಾಗಿ ಹೇಳಿಕೊಂಡು ಪ್ರಕರಣವನ್ನು ಕಡೆಗಣಿಸಿದ್ದಾರೆ. ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಮೊಕದ್ದಮೆ ದಾಖಲಿಸಬೇಕಾದ ರಫೀಕ್ ಅವರು, ರಸ್ತೆ ನಿರ್ಮಿಸುವ ಮಾತನಾಡುವುದಲ್ಲದೆ, ಹೆಚ್ಚು ಮಾತಾಡಿದರೆ ಒದ್ದು ಒಳಗೆ ಹಾಕುವುದಾಗಿ ಬೆದರಿಕೆ ಹಾಕುವ ಮೂಲಕ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಸಚಿವರಿಗೆ ಸಲ್ಲಿಸಿದ ದೂರಿನಲ್ಲಿ ದಸಂಸ ಆರೋಪಿಸಿದೆ.

ಹಿರಿಯಡ್ಕ ಪೊಲೀಸ್ ಠಾಣೆಗೆ ಇದುವರೆಗೂ ಇಂಥ ಪೊಲೀಸ್ ಅಧಿಕಾರಿ ಬಂದಿಲ್ಲ. ಇದೇ ಮೊದಲ ಬಾರಿ ದಲಿತ ವಿರೋಧಿ, ಕಾನೂನು ವಿರೋಧಿ, ನ್ಯಾಯವನ್ನು ನಿರ್ಲಕ್ಷಿಸುವ ಮತ್ತು ಸಾರ್ವಜನಿಕರೊಂದಿಗೆ ಅಗೌವರದಿಂದ ವರ್ತಿಸುವ ಪೊಲೀಸ್ ಅಧಿಕಾರಿ ಸಬ್ ಇನ್ಸ್ ಪೆಕ್ಟರ್ ಬಂದಿದ್ದಾರೆ ಎಂದು ದಸಂಸ ಅಪಾದಿಸಿದೆ.

ರಸ್ತೆಯನ್ನು ಗುರುತಿಸುವ ಮತ್ತು ನಿರ್ಮಿಸುವ ಬಗ್ಗೆ ಗ್ರಾಮ ಕರಣಿಕರಿಗೆ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು, ಅದನ್ನವರು
ಮಾಡಿಕೊಡುವವರಿದ್ದಾರೆ. ಸಬ್ ಇನ್ಸ್ ಪೆಕ್ಟರ್ ರಸ್ತೆ ನಿರ್ಮಿಸಿಕೊಡುವ ಅಗತ್ಯವಿಲ್ಲ. ಅದವರ ಕೆಲಸವೂ ಅಲ್ಲ, ಆಗಬಾರದು ಎಂದು ದಸಂಸ ಸಂಚಾಲಕ ದೇಜಪ್ಪ ಹಿರಿಯಡ್ಕ ಅವರು ಸಚಿವರುಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಉಡುಪಿ: ‘ನಿಮ್ಮ ಮೊಬೈಲ್ ನಂಬ್ರ ಲಕ್ಕಿ ನಂಬ್ರ ಎಂದು ಡ್ರಾ ಆಗಿದೆ, ನೀವು 25 ಸಾವಿರ ಡಾಲರ್ ಗೆದ್ದಿದ್ದೀರಿ, ಈ ಹಣ ನೀವು ನಿಮಗೆ ತಲುಪಬೇಕಾದಲ್ಲಿ ನೀವು ಸರಕಾರಕ್ಕೆ ಟ್ಯಾಕ್ಸ್ ಹಣವನ್ನು ಪಾವತಿ ಮಾಡಬೇಕು’ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮೊಬೈಲ್ ಗೆ ಕರೆ ಮಾಡಿ ತಿಳಿಸಿದಂತೆ ಆತ ಸೂಚಿಸಿದ ಬ್ಯಾಂಕ್ ಖಾತೆಗೆ 3.50 ಲಕ್ಷ ರು. ಪಾವತಿಸುವ ಮೂಲಕ ಮಹಿಳೆಯೊರ್ವಳು ಮೋಸ ಹೋದ ಪ್ರಕರಣ ಮಣಿಪಾಲದಲ್ಲಿ ನಡೆದಿದೆ.

80 ಬಡಗಬೆಟ್ಟು ಗ್ರಾಮದ ಅಲೆವೂರು ರಸ್ತೆಯಲ್ಲಿರುವ ಆದರ್ಶನಗರದ ಎ.ವಿ.ಕಂಪೌಂಡ್ ನಿವಾಸಿ ಚಂದ್ರಶೇಖರ್ ರವರ ಪತ್ನಿ ಗೀತಾ ಎಂಬವರೇ ಮೋಸ ಹೋದವರಾಗಿದ್ದಾರೆ. ಆಗಸ್ಟ್ 4 ರಂದು ಬೆಳಗ್ಗೆ ಗಂಟೆ 10ರಿಂದ 11ರ ನಡುವೆ ಅಪರಿಚಿತ ವ್ಯಕ್ತಿ ತನ್ನ ಮೊಬೈಲ್ ಗೆ ಕರೆ ಮಾಡಿದ್ದು, ಆತನ ಸೂಚನೆಯಂತೆ ಎಸ್.ಬಿ.ಎಂ ಬ್ಯಾಂಕ್ ನಿಂದ ಹತ್ತು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಮತ್ತು 25 ಸಾವಿರ ರು.ಗಳಂತೆ ಒಟ್ಟು 3.50 ಲಕ್ಷ ರು.ಗಳನ್ನು ಪಾವತಿ ಮಾಡಿರುತ್ತೇನೆ. 11 ನೇ ಬಾರಿ 50 ಸಾವಿರ ರು. ಪಾವತಿಸುವಂತೆ ಸೂಚಿಸಿದಾಗ ತಾನು ಮೋಸ ಹೋದುದು ಅರಿವಾಯಿತು ಎಂದು ಗೀತಾ ದೂರಿದ್ದಾರೆ.

ಗೀತಾ ನೀಡಿದ ದೂರಿನಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಣಿಪಾಲ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Image  —  Posted: August 17, 2014 in Uncategorized

ಉಡುಪಿ: ದಿನ ಪತ್ರಿಕೆಯೊಂದರಲ್ಲಿ ಏಸುಕ್ರಿಸ್ತರನ್ನು ಅವಹೇಳನ ಮಾಡುವ ಭಾವಚಿತ್ರವೊಂದು ಪ್ರಕಟವಾಗಿದ್ದು, ಇದರಿಂದಾಗಿ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ಆರೋಪಿಸಿ ಶಿರ್ವದ ಭಾರತೀಯ ಕ್ರಿಶ್ಚಿಯನ್ ಸೇವಾದಳ (ರಿ) ಉಡುಪಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ತಾನು ಭಾಗವಹಿಸಿಲ್ಲವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ ಹಮ್ಮಿಕೊಂಡ ಸಂಘಟಕರು ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದಕ್ಕೆ ಜಯನ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಧಾರ್ಮಿಕ ಭಾವನೆಗಳಿಗೆ ಚ್ಯುತಿಯಾಗಿದೆ ಎಂದು ಹೋರಾಟ ನಡೆಸುವಾಗ ಇತರರ ಹಕ್ಕಿಗೂ ಧಕ್ಕೆಯಾಗಬಾರದೆಂಬ ಕನಿಷ್ಟ ಪರಿಜ್ಞಾನ ಇಲ್ಲದ ಸಂಘಟಕರು ಅನಗತ್ಯವಾಗಿ ತನ್ನ ಹೆಸರು ಬಳಸಿ ಮಾಧ್ಯಮಕ್ಕೆ ನೀಡಿರುವುದನ್ನು ಜಯನ್ ಮಲ್ಪೆ ಖಂಡಿಸಿದ್ದಾರೆ.