Posts Tagged ‘ರತ್ನಾ ಕೊಠಾರಿ ಪ್ರಕರಣ’

ಉಡುಪಿ: ಇತ್ತೀಚೆಗೆ ನಿಗೂಢವಾಗಿ ಸಾವಿಗೀಡಾದ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಸಮೀಪದ ಆಲಂದೂರು ಕೋಲ್ಮಕ್ಕಿ ನಿವಾಸಿ ಶಂಕರ ಕೊಠಾರಿ-ಸಾವಿತ್ರಿ ಕೊಠಾರಿ ದಂಪತಿಗಳ ಏಕೈಕ ಪುತ್ರಿ ರತ್ನಾ ಕೊಠಾರಿ (16) ಮನೆಗೆ ಜುಲೈ 24ರಂದು ಶ್ರೀ ಕ್ಷೇತ್ರ ಕೇಮಾರುವಿನ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಸಂತೈಸಿದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರ ಜೊತೆ ಮಾತನಾಡಿದ ಮನೆಯವರು, ರತ್ನಾಳದು ಕೊಲೆ. ಆದರೆ ಕೊಲೆ ಮಾಡಿದವರು ಯಾರೆಂದು ಮಾತ್ರ ನಮಗೆ ತಿಳಿದಿಲ್ಲ. ರತ್ನಾ ಕಾಲೇಜು ಮುಗಿಸಿ ಮನೆಗೆ ಬಾರದೆ ನಿಗೂಢವಾಗಿ ಅದೇ ದಿನದಂದು ನಾವು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು ಎಂದು ದೂರಿಕೊಂಡರು.

ಕೇಮಾರು ಸ್ವಾಮೀಜಿಯವರ ಜೊತೆಗೆ ರತ್ನಾಳ ಮನೆಗೆ ಭೇಟಿ ನೀಡಿದ ಹೆಜಮಾಡಿಯ ದಯಾನಮದ ಹಾಗೂ ಹಿಂದೂ ಯುವ ಸೇನೆಯ ಪದಾಧಿಕಾರಿಗಳು ಪ್ರತ್ಯೇಕವಾಗಿ ಬಡ ಕುಟುಂಬಕ್ಕೆ ಆರ್ಥಿಕ ಸಹಾಯಯವನ್ನು ಸ್ವಾಮೀಜಿಯವರ ಮೂಲಕ ಹಸ್ತಾಂತರಿಸಿದರು. ವಿದ್ಯಾರ್ಥಿ ಸೇನೆಯ ಮೂಲಕ ಇನ್ನೊಮ್ಮೆ ಕುಟುಂಬಕ್ಕೆ ನಿಧಿ ಸಮಪರ್ಿಸುವುದಾಗಿ ಯುವಸೇನೆಯ ನಾಯಕರು ತಿಳಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಈಶ ವಿಠಲ ಸ್ವಾಮೀಜಿಯವರು, ರತ್ನಾಳ ಸಾವಿನಿಂದಾಗಿ ಅಪಾರವಾಗಿ ನೊಂದಿರುವ ಕುಟುಂಬಕ್ಕೆ ದುಖಃವನ್ನು ಸಹಿಸುವ ಶಕ್ತಿ ದೊರಕಲಿ, ರತ್ನಾಳ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು. ರತ್ನಾಳ ನಿಗೂಢ ಸಾವಿನ ಪ್ರಕರಣದಲ್ಲಿ ಆರೋಪಿಗಳು ಯಾರೇ ಆಗಿರಲಿ, ಅವರನ್ನು ಪೊಲೀಸರು ಶೀಘ್ರವಾಗಿ ಬಂಧಿಸಬೇಕು. ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದಲ್ಲಿ ರತ್ನಾಳ ಮನೆಯವರು ಹಾಗೂ ಹೋರಾಟ ನಿರತ ಸ್ಥಳೀಯ ಸಂಘ-ಸಂಸ್ಥೆಗಳ ಸಲಹೆ ಪಡೆದುಕೊಂಡು, ಅವರ ಸಹಕಾರದೊಂದಿಗೆ ಸಕ್ರಿಯವಾಗಿ ಹೋರಾಟ ರೂಪಿಸುವುದಾಗಿ ಸ್ಪಷ್ಟಪಡಿಸಿದರು.

ರತ್ನಾಳ ನಿಗೂಢಚ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿದರೆ ಯಾವುದೇ ಪ್ರಯೋಜನವಾಗದು, ಸಿಐಡಿಯವರು ಇದುವರೆಗೆ ನಡೆಸಿದ ತನಿಖೆಗಳಲ್ಲಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದು ಬಹಳ ಕಡಿಮೆಯೇ. ಹಾಗಾಗಿ ಪೊಲೀಸರೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಒತ್ತಡ ಹಾಕಬೇಕು ಎಂದು ಸ್ವಾಮೀಜಿ ಹೇಳಿದರು.

ಅತ್ಯಾಚಾರಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ಅಭಿಪ್ರಾಯಪಟ್ಟ ಸ್ವಾಮೀಜಿ, ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಸಮಾಜ ಗೌರವಿಸುವಂತಾಗಬಾರದು ಎಂದು ಕಳಕಳಿ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತರಾದ ರವಿ ಶೆಟ್ಟಿ ಬ್ರಹ್ಮಾವರ, ವಸಮತ ಗಿಳಿಯಾರ್, ಉದ್ಯಮಿ ದಯಾನಂದ ಹೆಜಮಾಡಿ, ಹಿಂದೂ ಯುವ ಸೇನೆಯ ಶಿವಕುಮಾರ್ ಕರ್ಜೆ, ಸಚಿನ್ ಮೊದಲಾದವರು ಕೇಮಾರು ಸ್ವಾಮೀಜಿಯವರ ಜೊತೆಗಿದ್ದರು.