ಬುಡಕಟ್ಟು ಸಮುದಾಯಗಳ ಉಳಿವಿಗಾಗಿ ನಮ್ಮ ನಡೆ ಕಾಲ ್ನಡಿಗೆ ಜಾಥಾ..

Posted: ಫೆಬ್ರವರಿ 8, 2014 in Uncategorized

ಉಡುಪಿ: ‘ಬುಡಕಟ್ಟು ಸಮುದಾಯಗಳ ಉಳಿವಿಗಾಗಿ ನಮ್ಮ ನಡೆ’ ಎಂಬ ಘೋಷ್ಯವಾಕ್ಯದೊಂದಿಗೆ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಮತ್ತು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಇವುಗಳು ಜಂಟಿಯಾಗಿ ಜನವರಿ 28 ರಂದು ತೀರ್ಥಹಳ್ಳಿ ಸಮೀಪದ ಕುವೆಂಪು ಜನ್ಮಸ್ಥಳ ಕವಿಶೈಲದಿಂದ ಆರಂಭಿಸಿದ ಕಾಲ್ನಡಿಗೆ ಜಾಥಾ ಫೆ. 7 ರಂದು ಬೆಳಗ್ಗೆ ಉಡುಪಿ
ಪ್ರವೇಶಿಸಿತು.

ಭಿತ್ತಿ ಪತ್ರ ಹಿಡಿದುಕೊಂಡು, ಘೋಷಣೆ ಕೂಗಿಕೊಂಡು ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾ, ಆದಿ ಉಡುಪಿ ಅಂಬೇಡ್ಕರ್ ಭವನಕ್ಕೆ ತೆರಳಿ ಬಹಿರಂಗ ಸಭೆ ನಡೆಸಿತು. ಜಾಥಾದಲ್ಲಿ ಹಸಲ, ಸಿದ್ದಿ, ಕೊರಗ, ಜೇನು ಕುರುಬ, ಎರವ, ಬೆಟ್ಟ ಕುರುಬ, ಸೋಲಿಗ, ಹಕ್ಕಿ ಪಿಕ್ಕಿ, ಗೊಂಡ, ಮೇಧ ಮತ್ತು ಮಲೆಕುಡಿಯ ಬುಡಕಟ್ಟು ಸಮುದಾಯಗಳ ನೂರರಷ್ಟು ಜನರು ಸಕ್ರಿಯವಾಗಿ ಭಾಗವಹಿಸಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಾಥಾ ಫೆಬ್ರವರಿ ತಿಂಗಳಾಂತ್ಯಕ್ಕೆ ಬೆಂಗಳೂರಿನ ವಿಧಾನಸೌಧದ ಮುಂದೆ ಸಮಾಪನಗೊಳ್ಳಲಿದೆ.

ಉಡುಪಿ ಜಿಲ್ಲೆಯಲ್ಲಿ ಕೊರಗ ಮತ್ತು ಮಲೆಕುಡಿಯ ಸಮುದಾಯದವರ ಜನಸಂಖ್ಯೆಯು
ಇಳಿಮುಖವಾಗುತ್ತಿದ್ದು, ಈ ಕುರಿತು ಸಮಗ್ರ ಅಧ್ಯಯನ ಕೈಗೊಳ್ಳಬೇಕು, ಕೊರಗ ಮತ್ತು ಮಲೆಕುಡಿಯ ಸಮುದಾಯದ ಎಲ್ಲಾ ಹಾಡಿಗಳಲ್ಲಿ ಸುಸಜ್ಜಿತವಾದ ಸಮುದಾಯ ಭವನಗಳು, ಗ್ರಂಥಾಲಯಗಳು, ಟ್ಯೂಷನ್ ಮತ್ತು ಅಂಗನವಾಡಿ ಕೇಂದ್ರಗಳನ್ನು ತೆರೆಯಬೇಕು, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಲ್ಲಿ ಅಭಿವೃದ್ಧಿ ಅಧಿಕಾರಿ ಸಹಿತ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರಿಗಾಗಿ ಏಕಲವ್ಯ ಶಾಲೆ ಮತ್ತು ಕ್ರೀಡಾ ವಸತಿ ಶಾಲೆಯನ್ನು ಆರಂಭಿಸಬೇಕು ಎಂದು ‘ಬುಡಕಟ್ಟು ಸಮುದಾಯಗಳ ಉಳಿವಿಗಾಗಿ ನಮ್ಮ ನಡೆ-ಕಾಲ್ನಡಿಗೆ ಜಾಥಾ ರಾಜ್ಯ ಸರಕಾರ ಹಾಗೂ ಉಡುಪಿ ಜಿಲ್ಲಾಡಳಿತದ ಮುಂದೆ ಹಕ್ಕೋತ್ತಾಯ ಮಂಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರ ಮಾನವ ಸಂಪನ್ಮೂಲ ಮತ್ತು ಸ್ವ-ಉದ್ಯೋಗ ಭದ್ರತೆ ಹಾಗೂ ತರಬೇತಿಗಾಗಿ ನೂರು ಎಕರೆ ಭೂಮಿ ಕಾದಿರಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಬೇಕು, ಕೇಂದ್ರದ ಆರಂಭಿಕ ಚಟುವಟಿಕೆಗಳಿಗಾಗಿ 2 ಕೋಟಿ ರು. ಅನುದಾನ ಮಂಜೂರು ಮಾಡಬೇಕು, ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ಸಾಂಸ್ಕೃತಿಕ ಕಲೆ-ಕೌಶಲ್ಯಗಳು, ಚಹರೆಗಳು, ಜನಪದ ಸಾಹಿತ್ಯ ಇತ್ಯಾದಿಗಳ ದಾಖಲಾತಿ ಮತ್ತು ಸಂಶೋಧನೆ ಕೈಗೊಳ್ಳಲು ಕೇಂದ್ರವೊಂದನ್ನು ಆರಂಭಿಸಬೇಕು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮತ್ತು ಕೇಂದ್ರ ಸರಕಾರದ ಮೂಲ ನಿವಾಸಿ ಅಭಿವೃದ್ಧಿ ಯೋಜನೆಯಡಿ ಜಾರಿಯಾಗುವ ಯೋಜನೆಗಳನ್ನು ಏಕಗವಾಕ್ಷಿ ಮಾದರಿಯಲ್ಲಿ ಅನುಷ್ಠಾನ ಮಾಡಬೇಕು, ಯೋಜನೆಗಳ ಮಾನದಂಡಗಳನ್ನು ಜನಪರವಾಗಿ ಸರಳೀಕರಿಸಬೇಕು, ಬುಡಕಟ್ಟು ಸಮುದಾಯದವರಿಗಾಗಿ ಪ್ರತೀ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಪೊಲೀಸ್ ಜನ ಸಂಪರ್ಕ ಸಭೆಗಳನ್ನು ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಡಬೇಕು, ಈ ಸಭೆಯಲ್ಲಿ ಕರ್ನಾಟಕ ಅಜಲು ನಿಷೇಧ ಕಾಯ್ದೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡಬೇಕು, ಕೊರಗ ಯುವ ಜನರ ಕಲಾ ತಂಡಗಳನ್ನು ಸಂಘಟಿಸಿ ಅಜಲು ನಿಷೇಧ ಕಾಯ್ದೆಗಾಗಿ ವ್ಯಾಪಕ ಜನಜಾಗೃತಿ ರೂಪಿಸಬೇಕು ಎಂದು 12 ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಜನರು ಸರಕಾರವನ್ನು ಒತ್ತಾಯಿಸಿದ್ದಾರೆ.

ಕೊರಗ ಮತ್ತು ಮಲೆಕುಡಿಯ ಸಮುದಾಯಗಳ ಸಾಂಸ್ಕೃತಿಕ ಪರಂಪರೆ, ಅಸ್ಮಿತೆ, ಚಹರೆಗಳನ್ನು ಎತ್ತಿ ಹಿಡಿಯುವಂಥ ಕಲಾ ತಂಡಗಳನ್ನು ಸಂಘಟಿಸಲು ತಜ್ಞರಿಂದ ತರಬೇತಿ, ವಸ್ತ್ರಾಭರಣ, ಸಂಗೀತ ಪರಿಕರ, ಪ್ರಸಾದನ ಸಾಮಾಗ್ರಿಯೇ ಮೊದಲಾದವುಗಳನ್ನು ಒದಗಿಸಬೇಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಉತ್ಸವ, ಹಬ್ಬ, ಜಾತ್ರೆಗಳಲ್ಲಿ ಪ್ರದರ್ಶನ ಕಲೆಯಾಗಿ ಪ್ರದರ್ಶಿಸುವುದಕ್ಕೆ ಅವಕಾಶ, ಅಗತ್ಯ ಪ್ರವಾಸ ವೆಚ್ಚ, ಭತ್ಯೆಗಳನ್ನು ನೀಡಬೇಕು, ಐಟಿಡಿಪಿ ಮತ್ತು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಅನುದಾನ ಕಾಯ್ದಿರಿಸಬೇಕು, ಕಂದಾಯ ಭೂಮಿಗೆ ಸಂಬಂಧಿಸಿ ಹಕ್ಕುಪತ್ರ ನೀಡುವುದಕ್ಕಾಗಿ ತುರ್ತು ಕಾನೂನನ್ನು ಜ್ಯಾರಿಗೊಳಿಸಬೇಕು, ಈಗಾಗಲೇ ಹಕ್ಕುಪತ್ರ ಹೊಂದಿರುವ ಹಿರಿಯರ
ಹೆಸರಿನಲ್ಲಿರುವ ಭೂಮಿಗೆ ಸಂಬಂಧಿಸಿ ಕಾಲಬದ್ಧ ನಿಯಮವೊಂದನ್ನು ರೂಪಿಸಿ ಪ್ರಸ್ತುತ ಅನುಭವಿಸುವವರ ಹೆಸರಿಗೆ ಖಾತೆ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು, ಗಿರಿಜನ ಉಪಯೋಜನೆಯ ದಕ್ಷ ಅನುಷ್ಠಾನಕ್ಕಾಗಿ 2013ರ ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆ ಕಾನೂನಿನಿಂದ ಗಿರಿಜನ ಉಪಯೋಜನೆ ಕಾನೂನನ್ನು ಪ್ರತ್ಯೇಕಗೊಳಿಸಿ ಪ್ರತ್ಯೇಕ ಕಾನೂನನ್ನು ತರಬೇಕು, ಪ್ರತೀ ತಾಲೂಕುಗಳಲ್ಲೂ ಬುಡಕಟ್ಟು ಕಲ್ಯಾಣ ಕಚೇರಿಗಳನ್ನು ಪ್ರಾರಂಭಿಸಬೇಕು, ರಾಜ್ಯದಲ್ಲಿ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ ಪ್ರತ್ಯೇಕ ಬುಡಕಟ್ಟು ಅಭಿವೃದ್ಧಿ ಸಚಿವಾಲಯವನ್ನು ಆರಂಭಿಸಬೇಕು, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಬೇಕು, ಆಶ್ರಮ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸುವುದಕ್ಕಾಗಿ ಬುಡಕಟ್ಟುಗಳ ಅಸ್ಮಿತೆ ಚಹರೆಗಳನ್ನೊಳಗೊಂಡ ನವೋದಯ ಮಾದರಿ ಶಾಲೆಗಳನ್ನಾಗಿ ಪರಿವರ್ತನೆಗೊಳಪಡಿಸಬೇಕು ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಮತ್ತು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.

ಬುಡಕಟ್ಟು ಸಂಸ್ಕೃತಿಯ ಉಳಿವು ಮತ್ತು ಪರಿಚಯಕ್ಕಾಗಿ ಸಂಸ್ಕೃತಿ, ಸಂಶೋಧನೆ, ತರಬೇತಿಗಾಗಿ ಮ್ಯೂಸಿಯಂ ಸಹಿತವಾದ ಸಾಂಸ್ಕೃತಿಕ ಕೇಂದ್ರ ಆರಂಭಿಸಬೇಕು, ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿ ಯುವಜನ ಮತ್ತು ಉದ್ಯೋಗ ನಿತಿಯನ್ನು ರೂಪಿಸಿ ಜ್ಯಾರಿಗೆ ತರಬೇಕು, ಕುಟುಂಬದ ಪ್ರತೀ ಸದಸ್ಯರಿಗೂ ಸಂಪೂರ್ಣ ಆರೋಗ್ಯ ಮತ್ತು ಆಹಾರ ಭದ್ರತೆ ಒದಗಿಸಬೇಕು, ಪೌಷ್ಠಿಕ ಆಹಾರ ಯೋಜನೆಯನ್ನು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಎಲ್ಲಾ ಬುಡಕಟ್ಟು ಸಮುದಾಯಗಳಿಗೂ ವಿಸ್ತರಿಸಬೇಕು, ತಕ್ಷಣವೇ ಸಮುದಾಯ ಮತ್ತು ವಯಕ್ತಿಕ ಹಕ್ಕುಪತ್ರಗಳನ್ನು ವಿತರಿಸಬೇಕು, ಯಾವುದೇ ಕಾರಣಕ್ಕೂ ಬುಡಕಟ್ಟು ಕುಟುಂಬಗಳನ್ನು ಅರಣ್ಯ ‘ಹ್ಯಾಬಿಟ್ಯಾಬ್’ನಿಂದ ಒಕ್ಕಲೆಬ್ಬಿಸಬಾರದು, ಅರಣ್ಯ ಮತ್ತು ವಿವಿಧ ಇಲಾಖೆಗಳು ಮಹಿಳೆಯರ ಮೇಲೆ ನಡೆಸುತ್ತಿರುವ ಹಿಂಸೆ ಮತ್ತು ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ರಾಜ್ಯದಲ್ಲಿ ಬುಡಕಟ್ಟು ಪ್ರದೇಶಗಳನ್ನು 5ನೇ ಶೆಡ್ಯೂಲ್ ಪ್ರದೇಶವಾಗಿ ಇದುವರೆಗೂ ಘೋಷಣೆ ಮಾಡಿಲ್ಲವಾದುದರಿಂದ ಕೂಡಲೇ ಪಶ್ಚಿಮಘಟ್ಟ ವ್ಯಾಪ್ತಿಯ ಬುಡಕಟ್ಟು ಪ್ರದೇಶವನ್ನು 5ನೇ ಶೆಡ್ಯೂಲ್ ಪ್ರದೇಶವಾಗಿ ಘೋಷಣೆ ಮಾಡಬೇಕು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಕ್ಷಣವೇ ಐಟಿಡಿಪಿ ಇಲಾಖೆಯನ್ನು ಆರಂಭಿಸಬೇಕು ಎಂದು ಬುಡಕಟ್ಟು ಜನರ ಕಾಲ್ನಡಿಗೆ ಜಾಥಾ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s