# ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರಕಾರ ‘ಮಾಹಿತಿ ಹಕ್ಕು ಅಧಿನಿಯಮ-2005’ ನ್ನು 2005ರ ಅಕ್ಟೋಬರ್ 12ರಂದು ಜ್ಯಾರಿಗೊಳಿಸಿದೆ. ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ ಮತ್ತು ಸಾರ್ವಜನಿಕ ಸೇವಕರಲ್ಲಿ ಹೊಣೆಗಾರಿಕೆಯನ್ನು ಉಂಟುಮಾಡುವುದೇ ಈ ಅಧಿನಿಯಮದ ಉದ್ಧೇಶ ಎಂಬುದು ಸರಕಾರದ ಹೇಳಿಕೆ.

ಸ್ವಾತಂತ್ರ್ಯ ಸಿಕ್ಕಿದ ಲಾಗಾಯ್ತಿನಿಂದ 2005ರ ವರೆಗೂ, 58 ವರ್ಷಗಳ ಕಾಲ ಆಡಳಿತ ನಡೆಸಿದ್ದು ಭಾರತದ ಸ್ವತಂತ್ರ ಸರಕಾರಗಳೇ ಹೊರತು ವಿದೇಶಿ ಸರಕಾರಗಳೇನೂ ಅಲ್ಲ. ಅದರಲ್ಲೂ ಧೀರ್ಘಾವಧಿ ಕಾಲ ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷದ ಸರಕಾರಗಳೇ. ತನ್ನ ಆಡಳಿತಾವಧಿಯಲ್ಲಿ ಸರಕಾರಿ ನೌಕರರು ಹಾಗೂ ಅಧಿಕಾರಿಗಳಲ್ಲಿ ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ ಮತ್ತು ಹೊಣೆಗಾರಿಕೆ, ಜವಾಬ್ದಾರಿ ಮೂಡಿಸಲು ಕಾಂಗ್ರೆಸ್ ಸರಕಾರಗಳಿಗೆ ಯಾಕೆ ಸಾಧ್ಯವಾಗಲಿಲ್ಲ ? ಸಾಧ್ಯವಾಗುತ್ತಿದ್ದರೆ, ಮಾಹಿತಿ ಹಕ್ಕು ಅಧಿನಿಯಮ ಅನುಷ್ಟಾನಕ್ಕೆ ತರುವ ಅನಿವಾರ್ಯತೆ ಬರುತ್ತಿತ್ತೇ ? ಖಂಡಿತಾ ಬರುತ್ತಿರಲಿಲ್ಲ. ಸರಕಾರಿ ನೌಕರರು, ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳನ್ನು ಇನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದ ಬಳಿಕವಷ್ಟೇ ಸರಕಾರ ಇಂತಹದೊಂದು ಕಾಯ್ದೆ ಜ್ಯಾರಿಗೊಳಿಸಿತು, ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು.

ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನುವುದು ಒಂದು ಹೆಗ್ಗಳಿಕೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗುವುದು. ಕಾಂಗ್ರೆಸ್ ಪ್ರಜೆಗಳೇ ಇಲ್ಲಿ ಪ್ರಭುಗಳಾದರು. ಇವರು ಪ್ರಭುಗಳಾದ ಬಳಿಕ ಪ್ರಜೆಗಳಾಗಲೇ ಇಲ್ಲ. ಪ್ರಭುಗಳಾಗಿಯೇ ಉಳಿದುಬಿಟ್ಟರು,
ಬೆಳೆದೂಬಿಟ್ಟರು. ಈ ಕಾಂಗ್ರೆಸ್ ಪ್ರಭುಗಳಿಗೆ ಪ್ರಜೆಗಳ ಮೇಲೆ ಕಾಳಜಿ ಇಲ್ಲದ ಕಾರಣ ಸರಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಹಾಭ್ರಷ್ಟರಾದರು. ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ, ಹೊಣೆಗಾರಿಕೆಯನ್ನು ಮರೆತೇ ಬಿಟ್ಟರು.

ಪಾರದರ್ಶಕ ರಹಿತ, ಮುಕ್ತತೆ ಇಲ್ಲದ, ಹೊಣೆಗಾರಿಕೆ ಮರೆತು ಆಡಳಿತ ನಡೆಸಿದ ಕಾರಣ ದೇಶದ ಪ್ರಜೆಗಳು ಸರಕಾರದ ವಿರುದ್ಧ ಅಸಮಾಧಾನಗೊಂಡರು, ಆಕ್ರೋಶ ವ್ಯಕ್ತಪಡಿಸತೊಡಗಿದರು. ಆಗ ಪ್ರಜೆಗಳ ಕಣ್ಣೊರೆಸಲು ಸರಕಾರ ರೂಪಿಸಿ ಜ್ಯಾರಿಗೊಳಿಸಿದ ಕಾಯ್ದೆಯೇ ಮಾಹಿತಿ ಹಕ್ಕು. ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬಂತೆ ಈ ಕಾಯ್ದೆಯನ್ನು ರೂಪಿಸಿದ ಕಾರಣ ಮಾಹಿತಿ ಹಕ್ಕು ಕಾಯ್ದೆ ಹಲ್ಲಿಲ್ಲದ ಹಾವಿನಂತಾಗಿದೆ. ಸರಕಾರಗಳು ರೂಪಿಸಿ
ಜ್ಯಾರಿಗೊಳಿಸಿದ ಬಹುತೇಕ ಕಾಯ್ದೆ, ಕಾನೂನುಗಳ ಕಥೆಯೂ ಇದಕ್ಕಿಂತ ಭಿನ್ನವೇನೂ ಇಲ್ಲ.

ಅಭಿವೃದ್ಧಿಯ ಹೆಸರಲ್ಲಿ ಸರಕಾರಿ ನೌಕರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆಸುತ್ತಿರುವ ಸ್ವಹಿತಾಸಕ್ತಿ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ಆರ್ಥಿಕ ಅವ್ಯವಹಾರಗಳಿಗೆ ಮಿತಿಯೇ ಇಲ್ಲ. ಇವರು ಈ ಮೂಲಕ ಗಳಿಸಿದ್ದು, ಗಳಿಸುವುದು ಕೋಟಿಗಳ ಲೆಕ್ಕದಲ್ಲಿ, ಲಕ್ಷಗಳ ಲೆಕ್ಕದಲ್ಲಿ. ಸಾವಿರಗಳೆಲ್ಲ ಇವರಿಗೆ ಏನೇನೂ ಅಲ್ಲ. ಇಂಥವರನ್ನು, ಇಂಥ ಅವ್ಯವಸ್ಥೆಯನ್ನು ಸರಿಪಡಿಸಲು ಮಾಹಿತಿ ಹಕ್ಕು ಕಾಯ್ದೆ-2005ರಿಂದ ಸಾಧ್ಯವಾದೀತೇ ? ಖಂಡಿತಾ ಸಾಧ್ಯವಾಗಲಾರದು.

ಜನ ಚಳುವಳಿಯ ಪರಿಣಾಮವಾಗಿ ಮಾಹಿತಿ ಹಕ್ಕು ಕಾಯ್ದೆ ಜ್ಯಾರಿಗೆ ಬಂತು. ಮಹಾಭ್ರಷ್ಟರೇ ಈ ಕಾಯ್ದೆಯನ್ನು ರೂಪಿಸಿ ಜ್ಯಾರಿಗೊಳಿಸಿದ ಕಾರಣ ಕಾಯ್ದೆ ಹಲ್ಲಿಲ್ಲದ ಹಾವಿನಂತಾಯಿತು. ಭಸ್ಮಾಸುರನಂತೆ ಈ ಕಾಯ್ದೆ ನಮ್ಮನ್ನೇ ನಾಶಪಡಿಸಲು ಮುಂದೆ ಬರುತ್ತಿದೆ, ಮುನ್ನುಗ್ಗಿ ಬರುತ್ತಿದೆ ಎನ್ನುವುದನ್ನು ತಿಳಿದುಕೊಂಡು ಗಾಬರಿಗೊಂಡ ಜನಪ್ರತಿನಿಧಿಗಳು, ಸರಕಾರಿ ನೌಕರರು, ಅಧಿಕಾರಿಗಳು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕಾಯ್ದೆಯನ್ನು
ದುರ್ಬಲಗೊಳಿಸುತ್ತಾ ಹೋದರು. ಈಗ ಈ ಕಾಯ್ದೆಯನ್ನು ಉಳಿಸಲು ಮತ್ತು ಪ್ರಬಲಗೊಳಿಸಲು ಇನ್ನೊಂದು ಜನ ಚಳುವಳಿ ಅಗತ್ಯ ಉದ್ಭವಿಸಿದೆ.

ಮಾಹಿತಿ ಹಕ್ಕು ಕಾಯ್ದೆ-2005ರ ಪ್ರಕಾರ ಒಬ್ಬ ಸಾಮಾನ್ಯ ಪ್ರಜೆ ತನಗೆ ಬೇಕಾದ ಅಗತ್ಯದ ಮಾಹಿತಿ ಅಥವಾ ದಾಖಲೆಗಳನ್ನು ಪಡೆದುಕೊಳ್ಳಬೇಕಾದರೆ ಅರ್ಜಿ ಸಲ್ಲಿಸಿ 30 ದಿನ ಕಾಯಲೇಬೇಕು. ಈ 30 ದಿನಗಳ ಅವಧಿಯಲ್ಲಿ ಅಧಿಕಾರಿಗಳು, ನೌಕರರು ದಾಖಲೆಗಳನ್ನೇ ತಿದ್ದಿಬಿಡುತ್ತಾರೆ. ಅಪೂರ್ಣ ಮಾಹಿತಿ ನೀಡುವುದು, ಸುಳ್ಳು ಮಾಹಿತಿ ನೀಡುವುದು ಮಾಡುತ್ತಾರೆ. ಕೋರಿದ ಮಾಹಿತಿ ಇಲ್ಲವೇ ದಾಖಲೆಯನ್ನು ನೀಡದಿದ್ದಲ್ಲಿ, ಅಪೂರ್ಣ ಅಥವಾ ಸುಳ್ಳು ಮಾಹಿತಿ ನೀಡಿದಲ್ಲಿ ಅರ್ಜಿ ಸಲ್ಲಿಸಿ 30 ದಿನಗಳ ಬಳಿಕ ಮೇಲ್ಮನವಿ ಅಥವಾ ಒಂದನೇ ಅಪೀಲ್ ಸಲ್ಲಿಸಲು ಅವಕಾಶವಿದೆ. ಮಾಹಿತಿ/ದಾಖಲೆ ಕೊಡದಿರುವುದು, ಸುಳ್ಳು, ಅಪೂರ್ಣ ಮಾಹಿತಿ ನೀಡುವುದು, ಇದರ ವಿರುದ್ಧ ಸಲ್ಲಿಸಲಾಗುವ ಮೇಲ್ಮನವಿಯನ್ನು ಇತ್ಯರ್ಥ ಪಡಿಸುವುದು ಎಲ್ಲವೂ ಅದೇ ಸರಕಾರಿ ಅಧಿಕಾರಿಗಳೇ. ಈ ಅಧಿಕಾರಿಗಳು ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಕಚೇರಿಯಲ್ಲೇ, ಜೊತೆಗೆ ಕೆಲಸ ಮಾಡುವ ಅಧಿಕಾರಿಗಳೇ. ಕೆಲವು ಸಂದರ್ಭಗಳಲ್ಲಿ ಮಾತ್ರ ಮೇಲಿನ ಕಚೇರಿಗಳಲ್ಲಿ ಇರುವವರು ಆಗಿರುತ್ತಾರೆ. ಆದರೆ ಒಂದೇ ಇಲಾಖೆಗೆ ಸೇರಿದವರೇ ಆಗಿರುತ್ತಾರೆ. ಇವರೊಳಗೆ ನೇರ ಸಂಬಂಧ ಇರುತ್ತದೆ. ಇವರೆಲ್ಲರೂ ಭ್ರಷ್ಟಾಚಾರದ, ಅವ್ಯವಹಾರದ ಫಲಾನುಭವಿಗಳೇ ಆಗಿರುತ್ತಾರೆ. ಇವರೊಳಗೆ, ನೀ ನನಗಿದ್ದರೆ ನಾ ನಿನಗೆ ಎಂಬ ಸಂಬಂಧ, ಒಪ್ಪಂದ ಇದ್ದೇ ಇರುತ್ತದೆ.

ಹೋಗಲಿ ಬಿಡಿ, ಅರ್ಜಿ, ಮೇಲ್ಮನವಿ ಬಳಿಕ ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಲು ಅವಕಾಶವಿದೆ, ಇಲ್ಲಾದರೂ ನ್ಯಾಯ ಸಿಗಬಹುದು ಎಂದು ಯೋಚಿಸಿದರೆ ಇಲ್ಲೂ ಅಷ್ಟು ಸುಲಭಕ್ಕೆ ನ್ಯಾಯ ಸಿಗದು. ಇಲ್ಲಯೂ ನ್ಯಾಯ ಮರೀಚಿಕೆಯೇ.

ಮಾಹಿತಿ ಆಯೋಗದಲ್ಲಿ ಮುಖ್ಯ ಮಾಹಿತಿ ಆಯುಕ್ತರಾಗಿರುವವರು, ರಾಜ್ಯ ಮಾಹಿತಿ ಆಯುಕ್ತರಾಗಿರುವವರು ಹಿಂದೆ ಸರಕಾರಿ ಅಧಿಕಾರಿಗಳಾಗಿದ್ದವರೇ. ತಮ್ಮ ಸೇವಾವಧಿಯಲ್ಲಿ ಪಾರದರ್ಶಕತೆ ಮತ್ತು ಮುಕ್ತತೆ ಇಲ್ಲದ ಹಾಗೂ ಹೊಣೆಗಾರಿಕೆ ಮರೆತ ಸಾರ್ವಜನಿಕ ಸೇವೆ ಸಲ್ಲಿಸಿದವರೇ ಇಲ್ಲಿ ಇನ್ನೊಮದು ರೀತಿಯ, ಮತ್ತೊಂದು ಹೆಸರಿನ ಉನ್ನತ ಹುದ್ದೆಯನ್ನು ಅಲಂಕರಿಸಿರುತ್ತಾರೆ. ಇವರಿಂದ ಮತ್ತೇನನ್ನು ತಾನೇ ನಿರೀಕ್ಷಸಲು ಸಾಧ್ಯ ?
ದಂಡ ವಿಧಿಸುವುದನ್ನು ಬಿಟ್ಟರೆ ಇವರು ಬೇರೇನನ್ನೂ ಮಾಡುತ್ತಾರೆ ? ವಿಧಿಸುವ ದಂಡವಾದರೂ ಎಷ್ಟು ? ಹೆಚ್ಚೆಂದರೆ ಜುಜುಬಿ 5 ಸಾವಿರ ರು. 25 ಸಾವಿರ ರು.ಗಿಂತ ಹೆಚ್ಚು ದಂಡ ವಿಧಿಸಲು ಕಾಯ್ದೆಯಲ್ಲೇ ಅವಕಾಶವಿಲ್ಲ. ಕೋಟಿಗಳ, ಲಕ್ಷಗಳ ಲೆಕ್ಕದಲ್ಲಿ ಹಣ ನುಂಗುವ ಈ ಸರಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಜುಜುಬಿ 25 ಸಾವಿರ ಯಾವ ಲೆಕ್ಕ ಹೇಳಿ ? ಭ್ರಷ್ಟ ಅಧಿಕಾರಿಗಳು ದಂಡವಾಗಿ 25 ಸಾವಿರ ರು. ಬೇಕಾದರೂ ಕಟ್ಟಿಯಾರು, ಆದರೆ ತಮ್ಮನ್ನೇ ನಾಶಪಡಿಸುವಂಥ ದಾಖಲೆ, ಮಾಹಿತಿಗಳನ್ನು ಮಾತ್ರ ಕೊಡಲಾರರು ! ಕೊಡದೇ ಇರಲೂ ಇವರಿಗೆ ಕಾಯ್ದೆಯಲ್ಲಿ ಅಧಿನಿಯಮ 8 ಎಚ್ ನಂಥ ಕೆಲವೊಂದು ನೆಪಗಳನ್ನು ರಕ್ಷಣಾ ಕವಚವಾಗಿ ರೂಪಿಸಲಾಗಿದೆ.

ಅರ್ಜಿ ಸಲ್ಲಿಸಿ 30 ದಿನ ಕಾಯಬೇಕು, ಮೇಲ್ಮನವಿ/ಒಂದನೇ ಅಪೀಲ್ ಸಲ್ಲಿಸಿ ಮತ್ತೆ 30 ದಿನ ಕಾಯಬೇಕು, ಎರಡನೇ ಅಪೀಲ್ ಸಲ್ಲಿಸಿದ ಬಳಿಕ ಈ ಪ್ರಕರಣ ವಿಚಾರಣೆಗೆ ಬರಲು ಕನಿಷ್ಟ 6 ತಿಂಗಳು ಕಾಯುವಂಥ ಶೋಚನೀಯ ಪರಿಸ್ಥಿತಿ ಮಾಹಿತಿ ಆಯೋಗದಲ್ಲಿದೆ. ವಿಚಾರಣೆ ನಡೆದು ಆದೇಶ ಹೊರಬೀಳುವಷ್ಟರಲ್ಲಿ ಒಂದು ವರ್ಷ ಪೂರ್ಣಗೊಂಡಿರುತ್ತದೆ. ಆಗ ಅರ್ಜಿದಾರ ಕೇಳಿದ, ಅರ್ಜಿದಾರನಿಗೆ ಬೇಕಾದ ದಾಖಲೆಗಳಲ್ಲಿ ಎಷ್ಟು ಬದಲಾವಣೆ, ತಿದ್ದುಪಡಿ ಆಗಿರುತ್ತವೆಯೋ ? ಕೇಳುವವರು ಯಾರು ? ಹೇಳುವವರು ಯಾರು ?

ಸರಕಾರವನ್ನು ಮುನ್ನಡೆಸುವ ಪ್ರಭುಗಳು ಕಾಯ್ದೆ ರೂಪಿಸುವಾಗಲೇ ತಮ್ಮ ರಕ್ಷಣೆಗೆ ಹೇಗೆ ಬೇಕೋ, ಎಷ್ಟು ಬೇಕೋ ಹಾಗೆ, ತಮಗೆ ಬೇಕು ಬೇಕಾದ ಹಲವಾರು ಕಿಟಿಕಿ ಬಾಗಿಲುಗಳನ್ನು ಇರಿಸಿಯೇ ಕಾಯ್ದೆ ರೂಪಿಸುತ್ತಾರೆ. ಈ ಮಾಹಿತಿ ಹಕ್ಕು ಅಧಿನಿಯಮ ರೂಪಿಸಿದ ಬಳಿಕ ಆಯೋಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅಧಿಕಾರಿಗನ್ನು, ಸಿಬ್ಬಂದಿಗಳನ್ನು ನೇಮಕಾತಿ ಮಾಡದೆ ಪ್ರಜೆಗಳ ಕೆಲಸ ಆಗದಂತೆ ನೊಡಿಕೊಳ್ಳುತ್ತಾರೆ.
ಕರ್ನಾಟಕ ಮಾಹಿತಿ ಆಯೋಗ, ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ), ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಇತ್ಯಾದಿಗಳನ್ನೆಲ್ಲಾ ಒಮ್ಮೆ ನೋಡಿ. ಇಲ್ಲೆಲ್ಲೂ ಬೇಕಾದಷ್ಟು ಪ್ರಮಾಣದಲ್ಲಿ ಸಿಬ್ಬಂದಿಗಳೂ ಇಲ್ಲ, ಅಧಿಕಾರಿಗಳೂ ಇಲ್ಲ. ಇದ್ದವರೂ ಸಮರ್ಥವಾಗಿ ಕೆಲಸಗಳನ್ನು ಮಾಡಲಾರರರು. ನಮ್ಮನ್ನಾಳುವ ಇಂಥ ಪ್ರಭುಗಳಿಂದ, ಈ ಅಧಿಕಾರಿಶಾಹಿಯಿಂದ ದೇಶ ಉದ್ಧಾರವಾದೀತೇ ? – ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s