ಉಡುಪಿ: ಇನ್ನಾ ಗ್ರಾಮ ಪಂಚಾಯತ್ನ ಪಂಪ್ ಆಪರೇಟರ್ ಬಗ್ಗೆ ಕಾರ್ಕಳ ತಾಲೂಕು ಪಂಚಾಯತ್ನ ಕಾರ್ಯ ನಿರ್ವಹಣಾಧಿಕಾರಿ ತೆಗೆದುಕೊಂಡ ಕ್ರಮದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರ-ವಿರೋಧ ಚರ್ಚೆ ಕಾವೇರಿದ ಪ್ರಸಂಗ ಫೆ.25ರಂದು ಉಡುಪಿ ಜಿಲ್ಲಾ ಪಂಚಾಯತ್ನ 15ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಇನ್ನಾ ಗ್ರಾ.ಪಂ.ನಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಿಂದಿನ ಆಡಳಿತದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅವರು ಸರಿಯಾಗಿಯೇ ನೀರು ಬಿಡುತ್ತಿದ್ದರು. ಹೊಸ ಅಧ್ಯಕ್ಷರು ಆಡಳಿತಕ್ಕೆ ಬಂದ ಬಳಿಕ, ಅಧ್ಯಕ್ಷರ ಪುತ್ರ ‘ನೀರು ಸರಿಯಾಗಿ ಬಿಡುತ್ತಿಲ್ಲ’ ಎಂದು ಆರೋಪಿಸಿ ದಬಾಯಿಸಿದ ಘಟನೆ ನಡೆದಿದೆ. ಗ್ರಾ.ಪಂ.ಆಡಳಿತ ನಡೆಸುವವರು ಪ್ರಶ್ನಿಸಬೇಕಾದ್ದನ್ನು ಆಡಳಿತಕ್ಕೆ ಸಂಬಂಧಪಡದವರು ವಿಚಾರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಗ್ರಾ.ಪಂ.ನಲ್ಲಿ ಯಾರೂ ಇಲ್ಲದಿರುವಾಗ, ಯಾರಿಗೂ ಮಾಹಿತಿ ನೀಡದೆ ಗ್ರಾ.ಪಂ.ಗೆ ಬಂದ ಕಾರ್ಕಳ ತಾಲೂಕು ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿ (ಇಓ) ಅವರು ಸಂದರ್ಶಕರ ಪುಸ್ತಕದಲ್ಲಿ ‘ಪಂಪ್ ಆಪರೇಟರ್ ರಾಜೀನಾಮೆ ನೀಡಿದ್ದಾರೆ, ನೀರು ಬಿಡಲು ಬೇರೆ ವ್ಯವಸ್ಥೆ ಮಾಡುವುದು’ ಎಂದು ದಾಖಲಿಸುವ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಪಂಪ್ ಆಪರೇಟರ್ ರಾಜೀನಾಮೆ ನೀಡದಿದ್ದರೂ, ರಾಜೀನಾಮೆ ನೀಡಿದ್ದಾರೆಂದು ಇಓ ಸುಳ್ಳು ಬರೆದಿದ್ದಾರೆ ಎಂದು ಜಿ.ಪಂ.ನ ಬಿಜೆಪಿನ ಸದಸ್ಯೆ ಮಮತಾ ಅಧಿಕಾರಿ ಮೊದಲಿಗೆ ವಿಷಯ ಪ್ರಸ್ತಾಪಿಸಿದರು.

ಜಿ.ಪಂ.ಸಿಎಸ್ ಅವರ ಆದೇಶದಂತೆ ತಾನು ಗ್ರಾ.ಪಂ.ಗೆ ಭೆಟಿ ನೀಡಿರುವುದಾಗಿ ಇಓ ಹೇಳಿಕೊಂಡಿದ್ದಾರೆ. ಇದು ನಿಜವಾದಲ್ಲಿ ಅವರು ಆದೇಶವನ್ನು ತೋರಿಸಬೇಕು.
ಸರ್ವಾನುಮತದಿಂದ ಪಂಪ್ ಆಪರೇಟರ್ ನ್ನು ನಿಯುಕ್ತಿ ಮಾಡಿರುವಾಗ, ಇದೀಗ ಏಕಪಕ್ಷೀಯವಾಗಿ ಅವರನ್ನು ತೆಗೆದು ಬೇರೆಯವರನ್ನು ನಿಯುಕ್ತಿ ಮಾಡುವುದು ಎಷ್ಟು ಸರಿ ? ಎಲ್ಲರನ್ನೂ ಕರೆಸಿ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದರ ಬದಲು ಈ ರೀತಿಯ ಕ್ರಮ ಸಮರ್ಥನೀಯವೇ ಎಂದು ಖಾರವಾಗಿಯೇ ಮಮತಾ ಪ್ರಶ್ನಿಸಿದರು.

ಜನವರಿಯಲ್ಲಿ ವಾರದ ಕಾಲ ನೀರು ಬಿಟ್ಟಿರಲಿಲ್ಲ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಎಸ್) ಯವರು ಸೂಚಿಸಿದ ಕಾರಣ ತಾನು ಗ್ರಾ.ಪಂ.ಗೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡದ್ದು ನಿಜ ಎಂದು ಇಓ
ಸ್ಪಷ್ಟಪಡಿಸಿದರು. ಸ್ಪಷ್ಟನೆ ಅಪೂರ್ಣವಾಗಿದ್ದುದರಿಂದ ಮಮತಾ ಮತ್ತೆ ಇಓ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯರಾದ ಮಂಜುನಾಥ ಪೂಜಾರಿ, ಅನಂತ ಮೊವಾಡಿ ಮೊದಲಾದವರು, ಮಮತಾ ಅಧಿಕಾರಿಯವರು ಈ ವಿಷಯದಲ್ಲಿ ರಾಜಕೀಯ ಮಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಬಿಟ್ಟರೆ ಬೇರೇನೂ ಇಲ್ಲ. ಪಂಪ್ ಆಪರೇಟರ್ ಆಗಿ ಕೆಲಸ
ಮಾಡುತ್ತಿರುವವರಿಗೆ ಈಗಾಗಲೇ 70 ವರ್ಷ ದಾಟಿದೆ. ಅವರಿಗೆ ನೀರು ಬಿಡಲು ಆಗುತ್ತಿಲ್ಲ. ಪಂಪ್ ಆಪರೇಟರ್ ಎಂದು ಆ ವೃದ್ಧರ ಹೆಸರಿದ್ದರೂ, ನೀರು ಬಿಡುವ ಕೆಲಸವನ್ನು ಅವರು ಮಾಡುತ್ತಿಲ್ಲ. ಇತರರು ನೀರು ಬಿಡುವುದಾಗಿದೆ. ಅವರು ರಾಜೀನಾಮೆ ನೀಡಿದ್ದಾರೆ. ನೀರು ಸರಬರಾಜು ಮೂಲಭೂತ ಸೌಲಭ್ಯದ ವಿಷಯವಾದುದರಿಂದ ಇಓ ಗ್ರಾ.ಪಂ.ಗೆ ಭೆಟಿ ನೀಡಿ ಮುಂದಿನ ಕ್ರಮಕ್ಕೆ ಬೇಕಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕಾರ್ಕಳ ಇಓ ಅವರ ಕ್ರಮವನ್ನು ಸಮರ್ಥಿಸಿದರು.

ವಾದ-ಪ್ರತಿವಾದಗಳಿಂದಾಗಿ ಸ್ವಲ್ಪ ಹೊತ್ತು ಚರ್ಚೆ ಕಾವೇರಿತು. ಮಮತಾ ಅವರು ತಮ್ಮ ಆಸನದಿಂದ ಎದ್ದು ಅಧ್ಯಕ್ಷರ ಮುಂಭಾಗಕ್ಕೆ ಹೋಗಿ ತನ್ನ ಆರೋಪವನ್ನು ಸಮರ್ಥಿಸಿದ ವಿದ್ಯಾಮಾನವೂ ನಡೆಯಿತು. ಈ ಸಮಯದಲ್ಲಿ ಮಮತಾ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ಆರೋಪಿಸಿದರೆ, ರಾಜಕೀಯ ಮಾಡಲು ಜನಪ್ರತಿನಿಧಿಗಳಿರುವಾಗ, ಇಓ ಯಾಕೆ ರಾಜಕಾರಣಿಗಳ ಏಜೆಂಟರಂತೆ ಕೆಲಸ ಮಾಡುವುದು ಎಂದು ಪ್ರಶ್ನಿಸಿದರು.

ಕಾರ್ಕಳ ಇಓ ಅವರಿಗೆ ಸ್ವಂತ ವಿವೇಚನೆ ಬಳಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿವರು ಹೇಳಿದಂತೆ ಮಾಡುತ್ತಿದ್ದಾರೆ ಎಂದು ಜಿ.ಪಂ.ಅದ್ಯಕ್ಷ ಉಪೇಂದ್ರ ನಾಯಕ್ ಹೇಳಿಕೊಂಡರು. ಪಂಪ್ ಆಪರೇಟರ್ ಗೆ 70 ವರ್ಷ ಎಂಬ ಕಾರಣಕ್ಕೆ ಅವರನ್ನು ಕೆಲಸದಿಮದ ತೆಗೆದು ಹಾಕುವುದಾದರೆ, ಈ ಕ್ರಮ ಜಿಲ್ಲೆಯ ವಿವಿಧೆಡೆಗಳಿಗೆ ಅನ್ವಯವಾಗಬೇಕು. ಇತರ ಕೆಲವು ಗ್ರಾ.ಪಂಗಳಲ್ಲೂ ಇಂಥದ್ದೇ ಸ್ಥಿತಿ ಇದೆ. ಎಲ್ಲೆಡೆ ಈ ಕ್ರಮ ಕೈಗೊಳ್ಳುವುದಾದರೆ ಪರವಾಗಿಲ್ಲ. ಅದು ಸಾಧ್ಯವೇ ಎಂದು ಸ್ಥಾಯೀ ಸಮಿತಿ ಅಧ್ಯಕ್ಷರೊಬ್ಬರು ಅಧ್ಯಕ್ಷರಿಗೆ ಸವಾಲೆಸೆದುದು ನಡೆಯಿತು.

ಇನ್ನಾ ಗ್ರಾ.ಪಂ.ನಲ್ಲಿನ ಪಂಪ್ ಆಪರೇಟರ್ ವಿವಾದದ ಬಗ್ಗೆ ಸಮಗ್ರ ವರದಿ ಕೊಡುವಂತೆ ಇಓ ಅವರಿಗೆ ಸೂಚಿಸಿದ್ದೇನೆ. ಅವರು ಇನ್ನೂ ವರದಿ ನೀಡಿಲ್ಲ. ಆ ವರದಿಯನ್ನು ಕೂಡಲೇ ಕೊಡಬೇಕು ಎಂದು ಸಬೆಯಲ್ಲೇ ಖಡಕ್ ಆಗಿ ಸೂಚಿಸಿದ ಸಿಎಸ್ ಶ್ರೀಮತಿ ಕನಗವಲ್ಲಿ ಅವರು, ಶೀಘ್ರವೇ ತಾನು ಸಹ ಗ್ರಾ.ಪಂ.ಗೆ ಭೀಟಿ ನೀಡಿ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವೆ ಎಂದು ಸ್ಪಷ್ಟಪಡಿಸಿದರು.

ಯುಪಿಸಿಎಲ್, ಎಸಿಸಿ ಪ್ರಸ್ತಾಪ:

ಯುಪಿಸಿಎಲ್ನಿಂದಾಗಿ ಎಲ್ಲೂರು ಮತ್ತು ಪಡುಬಿದ್ರಿ ಗ್ರಾ.ಪಂ.ವ್ಯಾಪ್ತಿಯ ಪರಿಸರ ಹಾಗೂ ಈ ಎರಡೂ ಕ್ಷೇತ್ರಗಳ ಜನರಿಗೆ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. 1992ರಲ್ಲಿ ಎನ್ ಟಿಪಿಸಿಗಾಗಿ ಭೂಸ್ವಾಧೀನ ಮಾಡಲಾದ ಭೂಮಿಯಲ್ಲಿ ಇದೀಗ ಎಸಿಸಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಇಲ್ಲಿ ಎಷ್ಟು ಎಕ್ರೆ ಭೂಮಿ ಸ್ವಾಧಿನವಾಗಿದೆ, ಗೋಮಾಳ ಭೂಮಿ ಎಷ್ಟಿದೆ ಇತ್ಯಾದಿ ಯಾವುದೇ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಆದರೆ ಇಲ್ಲಿ ತಯಾರಾಗುವ ವಿದ್ಯುತ್ ಹೊರ ಜಿಲ್ಲೆಗೆ ಸರಬರಾಜಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ವಿದ್ಯುತ್ ಕಡಿತ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟೂ ಹೆಚ್ಚುವ ಸಾದ್ಯತೆ ಇದೆ. ವಿದ್ಯುತ್ ಕಡಿತದಿಂದಾಗಿ ಪರೀಕ್ಷೆ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಅರುಣ್ ಶೆಟ್ಟಿ ಗಮನ ಸೆಳೆದರು. ಗೀತಾಂಜಲಿ ಸುವರ್ಣ ಅರುಣ್ ಶೆಟ್ಟಿಯವರ ಅಳಲಿಗೆ ಪೂರಕವಾಗಿ ಸಭೆಯಲ್ಲಿ ಧ್ವನಿ ಎತ್ತಿದರು.

ಬಿಪಿಎಲ್ ಕಾರ್ಡ್ ಸಂತೆಯಲ್ಲಿ ಮಾರಾಟ !

500 ರು. ನೀಡಿದವರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಬಡವರು ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಲಿದ್ದಾರೆ ಎಂದು ಸದಸ್ಯರೊಬ್ಬರು ಸಭೆಯಲ್ಲಿ ಬಹಿರಂಗಪಡಿಸಿದರು. ಬಿಪಿಎಲ್ ಕಾರ್ಡ್ ಸಂತೆಯಲ್ಲಿ ಮಾರಾಟವಾಗುವಂಥ ಸ್ಥಿತಿ ಸೃಷ್ಟಿಯಾಗಿದೆ ಎಂದು ಇನ್ನೊಬ್ಬ ಸದಸ್ಯರು ಆತಂಕ
ವ್ಯಕ್ತಪಡಿಸಿದರು. 6 ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿ, ಫೋಟೋ ತೆಗೆಸಿಕೊಂಡವರಿಗೆ ಇನ್ನೂ ಸಹ ಬಿಪಿಎಲ್ ಕಾರ್ಡ್ ವಿತರಿಸಲಾಗಿಲ್ಲ. ನಿಜವಾದ ಬಡವರಿಗೆ ವಿತರಿಸಬೇಕಾದ ಬಿಪಿಎಲ್ ಕಾರ್ಡ್ ಗಳನ್ನು ಇನ್ನು ಕೂಡಾ ಮುದ್ರಣ ಮಾಡಲಾಗಿಲ್ಲ. ಆದರೆ ಒಂದು ತಿಂಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿ ಫೋಟೋ ತೆಗೆಸಿಕೊಂಡು 500, 2000 ರು. ಕೊಟ್ಟವರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ ಎಂದು ಮತ್ತೊಬ್ಬರು ಸದಸ್ಯರು ಪಕ್ಷ ಬೇಧ ಮರೆತು ಸಭೆಯಲ್ಲಿ ಹಾಲಿ ಬಿಪಿಎಲ್ ಅವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದರು.

ಎಂಡೋಸಲ್ಫಾನ್ ಪಟ್ಟಿ ಅಪೂರ್ಣ

ತ್ರಾಸಿಯಲ್ಲಿ 147 ಎಕ್ರೆ ಭೂಮಿಯಲ್ಲಿ ಗೇರುಬೀಜ ತಫು ಇದೆ. ಇಲ್ಲಿ ಏರಿಯಲ್ ಸ್ಪ್ರೆ ಸಹ ಮಾಡಲಾಗಿದೆ. ಆದರೆ ಎಂಡೋಸಲ್ಪಾನ್ ಪಟ್ಟಿಯಲ್ಲಿ ಮಾತ್ರ ತ್ರಾಸಿ ಇಲ್ಲ ಎಂದು ಅನಂತ ಮೊವಾಡಿ ಹೇಲಿದರೆ, ಯಡ್ತಾಡಿಯದೂ ಇದೇ ಕಥೆ ಎಂದು ಮಂಜುನಾಥ ಪೂಜಾರಿ ತಿಳಿಸಿದರು. ಇಡೀ ಜಿಲ್ಲೆಯನ್ನು ಎಂಡೋಸಲ್ಪಾನ್ ಬಾಧಿತವೆಂದು ಗುರುತಿಸಬೇಕು ಎಂದು ಈ ಸಂದರ್ಭ ದಲ್ಲಿ ಬಹುತೇಕ ಸದಸ್ಯರು ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ 45 ಗ್ರಾಮಗಳು ಈ ಪಟ್ಟಿಯಲ್ಲಿದೆ. ಇಲ್ಲೆಲ್ಲಾ ಕ್ಯಾಂಪ್ ಮಾಡಲಾಗುತ್ತಿದೆ. ಗೇರು ನಿಗಮ ಗಿಡಗಳನ್ನು ನೆಟ್ಟಿದೆ. ಅರಣ್ಯ ಇಲಾಖೆ ಬೆಳೆಸಿದೆ. ಆರೋಗ್ಯ ಇಲಾಕೆ ಇದೀಗ ಪುನರ್ವಸತಿ ವ್ಯವಸ್ಥೆ ನಡೆಸುತ್ತಿದೆ. ನಿಗಮ ನೀಡಿದ ಪಟ್ಟಿಯಂತೆ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಡಿಎಚ್ಓ ಡಾ.ರಾಮಚಂದ್ರ ಬಾಯಿರಿ ಸ್ಪಷ್ಟಪಡಿಸಿದರು.

ಜಿಲ್ಲೆಯ ಕ್ರೈಸ್ತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾದ ಮೌಂಟ್ ರೊಸಾರಿಯೋ ಮತ್ತು ಕ್ರೈಸ್ಟ್ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯಿದೆಯಿಂದ ವಿನಾಯಿತಿ ಕೋರಿ ಹೈಕೋರ್ಟ್ ಮೊರೆ ಹೋಗಿದೆ. ಕೋರ್ಟ್ ಕಾಯಿದೆಯಂತೆ ಮಕ್ಕಳನ್ನು ಸೇರ್ಪಡೆಗೊಳಿಸಬೇಕೆಂಬ ಇಲಾಖಾ ಸೂಚನೆಗೆ ತಡೆಯಾಜ್ಞೆ ನೀಡಿದೆ ಎಂದು ಡಿಡಿಪಿಐ ಅವರು ತಿಳಿಸಿದರು.

ವಂಡ್ಸೆ ಮತ್ತು ಕೆಮ್ಮಣ್ಣು ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ ಹಲವು ಸಮಯಗಳಿಂದ ವೈದ್ಯರಿಲ್ಲದಿರುವುದು ಹಾಗೂ ಬೈಂದೂರು ಸರಕಾರಿ ಅಸ್ಪತ್ರೆಯ ಡಿ ದರ್ಜೆ ನೌಕರರಿಗೆ ಕಳೆದ ಎಂಟು ತಿಂಗಳುಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೇತನ
ನೀಡಿದಿರುವುದು, ಮರವಂತೆ ಪಿಡಿಓ ಅವರನ್ನು ಡೆಪ್ಯುಟೇಶನ್ ಮೇಲೆ ಬೇರೆ ಇಲಾಖಾ ಕೆಲಸಕ್ಕೆ ನಿಯುಕ್ತಿ ಮಾಡಿರುವುದರಿಂದ ಮರವಂತೆ ಗ್ರಾ.ಪಂ.ನ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿರುವುದು ಇತ್ಯಾದಿ ಗಂಭೀರ ವಿಷಯಗಳೂ ಸಭೆಯಲ್ಲಿ ಗಮನ ಸೆಳೆದವು.

ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಉದಯ
ಎಸ್.ಕೋಟ್ಯಾನ್, ಗಣಪತಿ ಟಿ.ಶ್ರೀಯಾನ್, ಕಟಪಾಡಿ ಶಂಕರ ಪೂಜಾರಿ, ಮಲ್ಲಿಕಾ ಪೂಜಾರಿ, ಉಡುಪಿ ತಾ.ಪಂ.ಅಧ್ಯಕ್ಷೆ ಗೌರಿ ಪೂಜಾರಿ, ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s