ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಶುಲ್ಕವನ್ನು ಈ ಹಿಂದಿನ ದರಕ್ಕಿಂತ ಹತ್ತು ಪಟ್ಟು ಹೆಚ್ಚಿಸಲಾಗಿದ್ದು, ಏರಿಸಿದ ದರವನ್ನು ಇಳಿಸುವಂತೆ ಆಗ್ರಹಿಸಿ ಹಾಗೂ ದರ ಪರಿಷ್ಕರಣೆ ಮಾಡಿದ ಆಡಳಿತ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ವಿರೋಧ ಪಕ್ಷವಾದ ಬಿಜೆಪಿ ಸದಸ್ಯರು ಫೆ.28ರಂದು ನಡೆದ ನಗರಸಭೆಯ ಸಾಮಾನ್ಯಸಭೆಯಲ್ಲಿ ಪ್ರತಿಭಟಿಸಿದ ಅಪರೂಪದ ಪ್ರಸಂಗ ನಡೆಯಿತು.

ಸಭೆ ಆರಂಭಕ್ಕೆ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕರಾದ ಡಾ.ಎಂ.ಅರ್.ಪೈ ಅವರು ಎದ್ದು ನಿಂತು, ಕುಂದಾಪುರ ಪುರಸಭಾ ಆಡಳಿತ ತಪ್ಪು ಮಾಡಿತೆಂದು ನೀವೇಕೆ ಉದ್ದಿಮೆ ಪರವಾನಿಗೆ ಶುಲ್ಕ ಏರಿಸಿ ತಪ್ಪು ಮಾಡಿದಿರಿ, ವರ್ಷಕ್ಕೆ 500 ರು.ಗಿಂತ ಹೆಚ್ಚು ಏರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಏರಿಸಿದ ಕ್ರಮ ಕಾನೂನು ಬಾಹಿರವಾಗಿದ್ದು, ಇನ್ನು ಏರಿಸಿದ ದರವನ್ನು ಇಳಿಸಲು ಇಲ್ಲಿ ನಮ್ಮಿಂದ ಸಾಧ್ಯವಿಲ್ಲ. ಇದಕ್ಕೆ ಆಡಳಿತ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.

ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಅಧ್ಯಕ್ಷ ಯುವರಾಜ್ ಪುತ್ತೂರು ಅವರು, ವಿಷಯ ಸಪ್ಲಿಮೆಂಟರಿ ಅಜೆಂಡಾದಲ್ಲಿ ಇರಿಸಲಾಗಿದೆ. ಆಗ ಈ ವಿಷಯವನ್ನು ಚರ್ಚೆ ಮಾಡೋಣ, ಈಗ ಬೇಡ ಎಂದು ಉತ್ತರಿಸಿದಾಗ ವಿರೋದ ಪಕ್ಷದ ಎಲ್ಲಾ ಸದಸ್ಯರು ಪೂರ್ವ ನಿರ್ಧರಿತರಾದವರಂತೆ ಕೈಯ್ಯಲ್ಲಿ ಧಿಕ್ಕಾರದ ಫಲಕ ಹಿಡಿದುಕೊಂಡು ಪ್ರದರ್ಶಿಸುತ್ತಾ ಎದ್ದು ನಿಂತು ಪ್ರತಿಭಟನೆ ಪ್ರಾರಂಭಿಸಿದರು.

ಉದ್ದಿಮೆ ಪರವಾನಿಗೆ ಶುಲ್ಕವನ್ನು ಏರಿಸಿದ ಬಗ್ಗೆ ಗಜೆಟ್ ನೋಟಿಫಿಕೇಶನ್ ಆಗಿದೆ ಎಂದು ಹೇಳುತ್ತೀರಿ. ಅದಾಗಿದ್ದರೆ ಅದರ ಪ್ರತಿ ಶಾಸಕರಿಗೆ ಬರಲೇಬೇಕು. ಅವರಿಗಿದು ವಿಷಯ ಗೊತ್ತಿರಲಿಲ್ಲವೇ, ಅವರೇಕೆ ಇದನ್ನು ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದ ಎಂ.ಆರ್.ಪೈ, ಜನರ ಹಿತಾಸಕ್ತಿಗೆ ವಿರುದ್ಧವಾದ ಪರವಾನಿಗೆ ಶುಲ್ಕ ಏರಿಕೆ ಕ್ರಮದ ಬಗ್ಗೆ ಮೊದಲು ಚರ್ಚೆಯಾಗಬೇಕು ಮತ್ತು ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ಬೊಬ್ಬೆ ಹೊಡೆದರು. ಪರಸ್ಪರ ವಾದ-ಪ್ರತಿ ವಾದಗಳಿಂದಾಗಿ ಈ ಸಮಯದಲ್ಲಿ ಯಾರು ಏನು ಹೇಳುತ್ತಿದ್ದಾರೆಂಬುದೇ ಯಾರಿಗೂ ಗೊತ್ತಾಗಲಿಲ್ಲ. ಆಡಳಿತದಿಂದ ಕರ್ತವ್ಯಲೋಪ, ಕ್ರೀಯಾಲೋಪವಾಗುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ಹೇಳಿದರೆ, ಪರವಾನಿಗೆ ಶುಲ್ಕ ಏರಿಕೆ ಕ್ರಮಕ್ಕೆ ನಮ್ಮ ವಿರೋಧವೂ ಇದೆ. ಆದರೆ ದರ ಏರಿಸಿದ್ದು, ಜಿಲ್ಲಾಧಿಕಾರಿಗಳು ನಗರಸಭೆ
ಆಡಳಿತಾಧಿಕಾರಿಯಾಗಿದ್ದಾಗಲೇ ಹೊರತು ಕಾಂಗ್ರೆಸ್ ಆಡಳಿತವಲ್ಲ ಎಂದು ಅಧ್ಯಕ್ಷರು ಹಾಗೂ ಇತರ ಅಡಳಿತ ಪಕ್ಷದ ಸದಸ್ಯರು ಸ್ಪಷ್ಟಪಡಿಸಿದರು.

ಆರಂಭದ ಸುಮಾರು 20 ನಿಮಿಷಗಳ ಕಾಲ ಪರವಾನಿಗೆ ಶುಲ್ಕದ ಮೇಲೆಯೇ ಸಭೆಯಲ್ಲಿ ಗದ್ದಲ ನಡೆಯಿತು. ಬಳಿಕವೂ ವಿರೋಧ ಪಕ್ಷದ ಸದಸ್ಯರು ಪಟ್ಟು ಬಿಡದೆ ಅಧ್ಯಕ್ಷರಿಂದ ಉತ್ತರ ಬಯಸಿ ಪ್ರತಿಭಟನೆ ಮುಂದುವರಿಸಿದಾಗ, ಪ್ರತಿಭಟನೆಯನ್ನು ನಿರ್ಲಕ್ಷಿಸಿ ಅದೇ ಗದ್ದಲದ ನಡುವೆಯೇ ಅಧ್ಯಕ್ಷರು ಅಜೆಂಡಾವನ್ನು ಕೈಗೆತ್ತಿಕೊಂಡು ಸಭೆಯನ್ನು ಮುಂದುವರಿಸಿದರು.

ಒಂದು ಹಂತದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ, ಮುಂದಿನ ಮೂರು ವರ್ಷ ಕಾಲ ಯಾವುದೇ ತೆರಿಗೆಯನ್ನು ಏರಿಸುವುದಿಲ್ಲ ಎಂದು ಷ್ಪಷ್ಟಪಡಿಸಿದರು.

ಯಾವ ಅಜೆಂಡಾದ ಬಗ್ಗೆ ಯಾವ ಸದಸ್ಯರು ಯಾವ ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದು ಸಹ ಗದ್ದಲದಿಂದಾಗಿ ಯಾರಿಗೂ ಕೇಳುವಂತಿರಲಿಲ್ಲವಾದ ಕಾರಣ, ಸಭೆ ಆರಂಭಗೊಂಡ ಕೇವಲ ಮುಕ್ಕಾಲು ಗಂಟೆಯ ಅವಧಿಯಲ್ಲಿ ಗಂಟೆ 11.15ಕ್ಕೆ ಅಧ್ಯಕ್ಷರು ಸಾಮಾನ್ಯ ಸಭೆಯನ್ನು ಮುಂದಿನ ತಿಂಗಳಿಗೆ ಮುಂದೂಡಿ ವೇದಿಕೆಯಿಂದ ಕೆಳಗಿಳಿದ ವಿದ್ಯಾಮಾನಕ್ಕೂ ಮೊದಲ ಬಾರಿಗೆ ಉಡುಪಿ ನಗರಸಭೆಯ ಸಾಮಾನ್ಯಸಭೆ ಸಾಕ್ಷಿಯಾಯಿತು. ಈ ಸಮಯದಲ್ಲಿಯೂ ಆಡಳಿತ ಪಕ್ಷದ ಸದಸ್ಯರು ಜೈ ಜೈ ಎಂದು ಘೊಷಣೆ ಕೂಗಿದರೆ, ವಿರೋಧಿ ಸದಸ್ಯರು ಧಿಕ್ಕಾರ ಧಿಕ್ಕಾರ ಎಂಬ ಘೋಷಣೆ ಮೊಳಗಿಸಿದರು.

ಏರಿಸಿದಾಗ ಆಕ್ಷೇಪ ದಾಖಲಿಸದ ಆಡಳಿತ, ವಿರೋಧ ಪಕ್ಷದ ಸದಸ್ಯರು !

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಶುಲ್ಕವನ್ನು ನಗರಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರು ಆಡಳಿತಾಧಿಕಾರಿಯಾಗಿದ್ದಾಗ 2013ರ ಜೂನ್ 4ರಂದು ಪರಿಷ್ಕರಣೆ ಮಾಡಲಾಗಿತ್ತು. ಪರಿಷ್ಕರಿಸಲಾದ ದರವನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಜೂನ್ 27ರಂದು ಪ್ರಕಟಿಸಲಾಗಿತ್ತು. ಈ ಪ್ರಕಟಣೆಯ ಪ್ರತಿಯನ್ನು ಜುಲೈ ಒಂದರಂದು ಸೂಚನಾ ಫಲಕದಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಪ್ರದರ್ಶಿಸಲಾಗಿತ್ತು ಮತ್ತು ಇದಕ್ಕೆ ಯಾರೊಬ್ಬರದೂ, ಯಾವುದೇ ರೀತಿಯ ಆಕ್ಷೇಪಗಳೂ ಬಾರದ ಹಿನ್ನೆಲೆಯಲ್ಲಿ ಆಗಸ್ಟ್ 20ರ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿಯವರ ನಿರ್ಣಯದಂತೆ ನಿಗದಿಪಡಿಸಿದ ಪರಿಷ್ಖೃತ ದರವನ್ನು ಜ್ಯಾರಿಗೊಳಿಸುವ ನಿಟ್ಟಿನಲ್ಲಿ ಮಂಜೂರಾತಿಗಾಗಿ ಸರಕಾರಕ್ಕೆ ಕಳುಹಿಸಲು ಮತ್ತು ಸರಕಾರದ ಮಂಜೂರಾತಿ ನಿರೀಕ್ಷಣೆ ಮೇರೆಗೆ ಪರಿಷ್ಕೃತ ದರವನ್ನು ಜಾರಿಗೆ ತರಲು ಅನುಮೋದನೆ ನೀಡಲಾಗಿದೆ. ಅದರಂತೆ ಹಾಲಿ ಅಡಳಿತ ಪರಿಷ್ಕೃತ ಪರವಾನಿಗೆ ಶುಲ್ಕವನ್ನು ಉದ್ದಿಮೆದಾರರಿಗೆ ವಿಧಿಸುತ್ತಿದೆ. 1987ರಲ್ಲಿ ನಿಗದಿಪಡಿಸಲಾದ ಉದ್ದಿಮೆ ಪರವಾನಿಗೆ ಶುಲ್ಕವನ್ನು ಬಳಿಕ ಪರಿಷ್ಕರಿಸದೇ ಇರುವ ಬಗ್ಗೆ ವಾರ್ಷಿಕ ಲೆಕ್ಕ ತಪಾಸಣಾ ವರದಿಯಲ್ಲಿ ಆಕ್ಷೇಪಣೆ ದಾಖಲಾದ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಪ್ಲಿಮೆಂಟರಿ ಅಜೆಂಡಾದಲ್ಲಿ ಅಧಿಕೃತವಾಗಿಯೇ ಸಮಜಾಯಿಷಿಕೆ ನೀಡಲಾಗಿದೆ.

ಇಲ್ಲಿ ಗಮನಿಸಬೇಕದ ವಿಶೇಷವೆಂದರೆ, ಉದ್ದಿಮೆ ಪರವಾನಿಗೆ ಶುಲ್ಕ ಪರಿಷ್ಕರಣೆಗೆ ಒಳಗದಾಗ, ಆ ಬಗ್ಗೆ ನಗರಸಭೆಯ ಸಾರ್ವಜನಿಕರ ಅವಗಾಹನೆಗಾಗಿ ಮತ್ತು ಆಕ್ಷೇಪಣೆಗಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಯಾವೊಬ್ಬ ಹಾಲಿ ಹಾಗೂ ಮಾಜಿ ನಗರಸಭಾ ಸದಸ್ಯರಾಗಲೀ ಆಕ್ಷೇಪ ವ್ಯಕ್ತಪಡಿಸಿದೇ ಇರುವುದು. ಅಂದು ಆಕ್ಷೇಪ ದಾಖಲಿಸದೇ ಇದ್ದ ಬಿಜೆಪಿ ಮತ್ತು ಅಂದು ಆಕ್ಷೇಪಿಸದೇ ಇದ್ದು, ಅದೇ ಪ್ರಕ್ರಿಯೆಯನ್ನು ಮುಮದುವರಿಸಿದ ಕಾಂಗ್ರೆಸ್ ಇಂದು ನಾವು ಉದ್ದಿಮೆದಾರರ
ಪರವಾಗಿದ್ದೇವೆ ಎಂಬಿತ್ಯಾದಿಯಾಗಿ ಹೇಳುವುದು ಮಾತ್ರ ಹಾಸ್ಯಾಸ್ಪದವಾಗಿದೆ.

ಉಡುಪಿಯಲ್ಲಿ ಜಿಲ್ಲಾ ವರ್ತಕರ ಸಂಘ ಮತ್ತು ಬಳಕೆದಾರರ ವೇದಿಕೆ ಇದ್ದು, ಇವುಗಳ ಸಹ ಉದ್ದಿಮೆ ಪರವಾನಿಗೆ ಶುಲ್ಕ ಏರಿಕೆ ಕ್ರಮದ ವಿರುದ್ಧ ಒಂದೇ ಒಂದು ಆಕ್ಷೇಪ ದಾಖಲಿಸದೇ ಇದೀಗ ವಿರೋಧಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s