# ‘ಮಾಹಿತಿ ಹಕ್ಕು ಅಧಿನಿಯಮ ಜಾರಿಯಾದುದು 2005ರಲ್ಲಿ. 2007ರಿಂದ ನಾನು ಈ ಕಾಯ್ದೆಯನ್ನು ಉಪಯೋಗಿಸಿಕೊಂಡು ಬಂದಿದ್ದೇನೆ. 2012ರವರೆಗೂ ನಾನು ಕೇಳಿದ ಬಹುತೇಕ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸಂಬಂಧಿಸಿದ ಸರಕಾರಿ ಕಚೇರಿಗಳ ಮತ್ತು ಅನುದಾನಿತ ಸಂಸ್ಥೆಗಳ ಅಧಿಕಾರಿಗಳು ನೀಡುತ್ತಾ ಬಂದಿದ್ದಾರೆ. ಮೂರ್ನಾಲ್ಕು ಸಂದರ್ಭಗಳಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಮಾಹಿತಿ ಮತ್ತು ದಾಖಲೆ ಕೊಡುವಲ್ಲಿ ಅತೀ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದರು. ನನಗೂ ಸಂಬಂಧಿಸಿದ ಪ್ರಕರಣಗಳಲ್ಲಿ ಆಸಕ್ತಿ ಕಡಿಮೆ ಇದ್ದ ಕಾರಣ ಆ ಪ್ರಕರಣಗಳನ್ನು ಮುಂದುವರಿಸದೆ ಕೈಬಿಟ್ಟಿದ್ದೆ.

ಇದೀಗ 2014ರ ಫೆಬ್ರವರಿಯಲ್ಲಿ ಒಟ್ಟು ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ಮೆಟ್ಟಿಲು ಹತ್ತುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಐದೂ ಪ್ರಕರಣಗಳು ಗಂಭೀರವಾದ ಪ್ರಕರಣಗಳೇ. ಅತೀ ಸಾಮಾನ್ಯ, ಸಾಮಾನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರಿಗೆ ಕೋರಿದ ಮಾಹಿತಿಗಳನ್ನು ಸಮಸ್ಯೆಯನ್ನು ಉಂಟುಮಾಡದೆ ಕೊಡುವ
ಅಧಿಕಾರಿಗಳು, ಗಂಭೀರವಾದ ಪ್ರಕರಣಗಳಾದಾಗ ಮಾತ್ರ ಅರ್ಜಿದಾರರು ಕೋರಿದ
ಮಾಹಿತಿಗಳನ್ನಾಗಲೀ, ದಾಖಲೆಗಳನ್ನಾಗಲೀ ತೊಂದರೆ ಕೊಡದೆ ನೀಡಲು ಮುಂದಾಗುವ ಮನಸ್ಸೇ ಮಾಡುವುದಿಲ್ಲ. ಕೆಲವೊಮ್ಮೆ ಕೋರಿದ ಮಾಹಿತಿಗಳನ್ನಾಗಲೀ, ದಾಖಲೆಗಳನ್ನಾಗಲೀ ಕೊಡುವುದೇ ಇಲ್ಲ. ಕಾರಣ, ಅಮೂಲ್ಯ ಮಾಹಿತಿ ಇಲ್ಲವೇ ದಾಖಲೆಗಳನ್ನು ನೀಡಿದಲ್ಲಿ ಅದರ ಮುಂದಿನ ಪರಿಣಾಮವನ್ನು ತಾವೇ ಅನುಭವಿಸಬೇಕಾದೀತು ಎಂಬ ಭಯ, ಮುಂಜಾಗ್ರತೆ.

ಇಲ್ಲಿ ಒಂದು ವಿಷಯ ಸ್ಪಷ್ಟ. ಯಾವ ಮಾಹಿತಿ ಅಥವಾ ದಾಖಲೆಗಳನ್ನು ನೀಡಿದಲ್ಲಿ, ವಯುಕ್ತಿಕವಾಗಿ ತಮಗೆ ಅಥವಾ ತಮ್ಮ ಹಿರಿಯ ಹಿರಿಯ ಅಧಿಕಾರಿಗಳಿಗೆ ಇಲ್ಲವೇ
ಜನಪ್ರತಿನಿಧಿಗಳ ಕುತ್ತಿಗೆಗೆ ಬರಬಹುದು ಎಂಬ ಆತಂಕವಿರುತ್ತದೆಯೋ, ಅಂಥ ಮಾಹಿತಿ ಅಥವಾ ದಾಖಲೆಗಳನ್ನು ಸರಕಾರಿ ಅಧಿಕಾರಿಗಳು ಅರ್ಜಿದಾರರಿಗೆ ನೀಡವುದೇ ಇಲ್ಲ. ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ಎಂಟೂವರೆ ವರ್ಷ ಕಳೆದರೂ, ಇನ್ನೂ ಸಹ ನಮ್ಮ ರಾಜ್ಯದ, ದೇಶದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಗಮನಾರ್ಹ ಎನ್ನಬಹುದಾದ
ಪಾರದರ್ಶಕತೆಯಾಗಲೀ, ಹೊಣೆಗಾರಿಕೆಯಾಗಲೀ ಮೂಡಿಲ್ಲ, ಬಂದಿಲ್ಲ, ಸೃಷ್ಟಿಯಾಗಿಲ್ಲ ಎಂದರೆ ನಮ್ಮ ದೇಶಕ್ಕೆ ಇನ್ನೆಷ್ಟು ಕಾಯ್ದೆ ಬಂದರೇನು ಪ್ರಯೋಜನ ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಕೆ.ಎ.ಎಸ್.(ಆಯ್ಕೆ ಶ್ರೇಣಿ) ಅಧಿಕಾರಿಯವರನ್ನು 2013ರ ಅಗೋಸ್ತು 26ರಂದು ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು.

ಆರೋಗ್ಯ ಇಲಾಖೆಯಲ್ಲಿ ನಡೆದ ಮತ್ತು ನಡೆಯುತ್ತಲೇ ಇರುವ ಬಹುಕೋಟಿ ಹಗರಣವೊಂದರ ಬಗ್ಗೆ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ನರಸಿಂಹಮೂರ್ತಿಯವರು ತನಿಖೆ ನಡೆಸುತ್ತಿರುವ ಹಂತದಲ್ಲಿ, ತನಿಖೆಯ ಮಧ್ಯೆ ವರ್ಗಾವಣೆ ಮಾಡಿದ್ದು ಸಂಶಯಕ್ಕೆ ಕಾರಣವಾಗಿತ್ತು. ಸಂಶಯ ನಿವಾರಣೆಗಾಗಿ, ವರ್ಗಾವಣೆಯ ಹಿಂದಿನ ದುರುದ್ಧೇಶವನ್ನು ಪತ್ತೆಹಚ್ಚುವ ಸಲುವಾಗಿ 2013ರ ಸೆಪ್ಟೆಂಬರ್ 7ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು
ಅರ್ಜಿಯೊಂದನ್ನು ಸಲ್ಲಿಸಿದ್ದೆ. ಈ ಅರ್ಜಿಯಲ್ಲಿ, ವರ್ಗಾವಣೆ ಆದೇಶದ ಯಥಾಪ್ರತಿ, ವರ್ಗಾವಣೆಗೆ ಕಾರಣ, ವರ್ಗಾವಣೆ ಸಂಬಂಧ ಇಲಾಖೆ ನಡೆಸಿದ ಲಿಖಿತ ಮತ್ತು ಮೌಖಿಕ ವ್ಯವಹಾರಗಳ ಬಗ್ಗೆ ಮಾಹಿತಿ ಹಾಗೂ ಇತರ ಟಿಪ್ಪಣಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಿದ್ದೆ.

ನಾನು ಯಾವ ಮಾಹಿತಿ ಮತ್ತು ದಾಖಲೆಗಳನ್ನು ಕೋರಿದ್ದೆನೋ, ಆ ಎಲ್ಲಾ ದಾಖಲೆಗಳೂ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಲ್ಲೇ ಲಭ್ಯವಿರುವಂಥವು. ಇದೇ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೇ ನೇರವಾಗಿ ನಾನು ಕೇಳಿದ ಮಾಹಿತಿಗಳನ್ನು ಕಳುಹಿಸಿಕೊಡಬಹುದಿತ್ತು. ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್.ನಾಗರಾಜ್ ಎಂಬವರು ಮಾತ್ರ ಹಾಗೆ ಮಾಡದೆ, ಮಾಹಿತಿ ಕೋರಿ ಕಳುಹಿಸಿದ ಅರ್ಜಿಯನ್ನು ಕಲಂ 6(3)ರಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿದೇಶನಾಲಯದ ಆಯುಕ್ತರಿಗೆ ವರ್ಗಾಯಿಸಿದರು. ನಮಗೇನಂತೆ, ಕೋರಿದ ದಾಖಲೆಗಳು ಸಿಕ್ಕರಾಯಿತಷ್ಟೆ, ಎಂದು ಸುಮ್ಮನಾದೆ.

ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಆಡಳಿತಾಧಿಕಾರಿ (ಸಾಮಾನ್ಯ)ಯವರು ಡಾ.ನರಸಿಂಹಮೂರ್ತಿಯವರನ್ನು ವರ್ಗಾವಣೆ ಮಾಡಿದ ಆದೇಶದ ಯಥಾಪ್ರತಿಯನ್ನು ಕಳುಹಿಸಿಕೊಟ್ಟರು. ಆದರೆ, ನಾನು ಕೋರಿದ ಇತರ ಯಾವುದೇ ದಾಖಲೆಗಳನ್ನಾಗಲೀ, ಮಾಹಿತಿಗಳನ್ನಾಗಲೀ ಕಳುಹಿಸಿಕೊಡದೆ ಅಪೂರ್ಣ ಮಾಹಿತಿಯನ್ನು ನೀಡಿ ಮಾಹಿತಿಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದರು.

ವರ್ಗಾವಣೆ ಆದೇಶದ ಪ್ರತಿಯಲ್ಲಿ, ‘ನರಸಿಂಹಮೂರ್ತಿ ಇವರನ್ನು ಸಾರ್ವಜನಿಕ
ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ’ ಎಂದು
ಸ್ಪಷ್ಟವಾಗಿದೆ. ಆದರೆ, ಸಾರ್ವಜನಿಕ ಹಿತದೃಷ್ಠಿ ಯಾವುದು, ಏನು ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯೂ ಅದರಲ್ಲಿಲ್ಲ. ಈ ಸಾರ್ವಜನಿಕ ಹಿತದೃಷ್ಠಿ ಏನು ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲ ? ಸಾರ್ವಜನಿಕ ಹಿತದೃಷ್ಠಿಯನ್ನೇಕೆ ಇವರು ಗುಟ್ಟು ಮಾಡಬೇಕು ? ಒಬ್ಬನೇ ಒಬ್ಬ ಜನಪ್ರತಿನಿಧಿಯ ಅಥವಾ ಉನ್ನತ ಅಧಿಕಾರಿಯ ಲಿಖಿತ ಇಲ್ಲವೇ ಮೌಖಿಕ ಸೂಚನೆ, ಆದೇಶ ಇಲ್ಲದೆ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಡಲು ಸಾಧ್ಯವೇ ? ಖಂಡಿತಾ ಇಲ್ಲ.

ಮತ್ತೆ, ಕಾಯ್ದೆಯಂತೆ ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಮುಖ್ಯ ಅಡಳಿತಾಧಿಕಾರಿ ಡಾ.ಕೆ.ಎನ್.ಅನುರಾಧಾ ಇವರಿಗೆ ಡಿಸೆಂಬರ್ 28ರಂದು ಮೇಲ್ಮನವಿ ಸಲ್ಲಿಸಿದೆ. ಡಾ.ಅನುರಾಧಾ ಇವರು ಮೇಲ್ಮನವಿಯನ್ನು ಇತ್ಯರ್ಥಪಡಿಸಲು 2014ರ ಜನವರಿ 18ಕ್ಕೆ ದಿನ ನಿಗದಿ ಮಾಡುತ್ತಾರೆ. ಮೇಲ್ಮನವಿ ಸಲ್ಲಿಸಿದ ನನ್ನನ್ನು ತಮ್ಮ ಬೆಂಗಳೂರಿನಲ್ಲಿರುವ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸುತ್ತಾರೆ.

ಮಾಹಿತಿ ಕೋರಿ ಸಲ್ಲಿಸಿದ ಮೂಲ ಅರ್ಜಿಯಲ್ಲಿಯೇ ನಾನು ಕೋರಿದ ಮಾಹಿತಿ ಮತ್ತು ದಾಖಲೆಗಳು ಯಾವುದು ಎಂಬುದು ಸ್ಪಷ್ಟವಾಗಿಯೇ ಇತ್ತು. ನಾನು ಕೇಳಿದ ದಾಖಲೆಗಳಲ್ಲಿ ಒಂದು ದಾಖಲೆಯನ್ನು ಮಾತ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ್ದು, ಉಳಿದ ದಾಖಲೆ ಮತ್ತು ಮಾಹಿತಿಗಳನ್ನು ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ್ದೂ ಸ್ಪಷ್ಟವಾಗಿಯೇ ಇತ್ತು. ಹೀಗಿದ್ದೂ ಉಡುಪಿಯಲ್ಲಿರುವ ಅರ್ಜಿದಾರನನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಅಗತ್ಯ ಖಂಡಿತಾ ಇರಲಿಲ್ಲ. ಆದರೆ, ಆಡಳಿತಶಾಹಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. ಆದರೂ, ಅರ್ಜಿದಾರನಾದ ನಾನು ಮೇಲ್ಮನವಿಯನ್ನು ಇತ್ಯರ್ಥಪಡಿಸುವ ದಿನದಂದು ಹಾಜರಾಗಲು ಸಾಧ್ಯವಾಗದ ಬಗ್ಗೆ ಸ್ಪಷ್ಟಪಡಿಸಿ, ಮತ್ತೊಮ್ಮೆ ನಾನು ಮಾಹಿತಿ ಹಕ್ಕು ಅರ್ಜಿಯಲ್ಲಿ ಕೋರಿದ್ದೇನು, ಸಾರ್ವಜನಿಕ ಮಾಹಿತಿ ಅಧಿಕಾರಿ ಕೊಟ್ಟದ್ದೇನು, ಕೊಡದೇ ಇದ್ದುದೇನು ಎಂಬ ಬಗ್ಗೆ ಎರಡು ಪುಟಗಳ ಪತ್ರದಲ್ಲಿ ಸವಿವರವಾಗಿ ವಿವರ ನೀಡಿ ನೋಂದಾಯಿತ ಅಂಚೆಯಲ್ಲಿ ಆ ಪತ್ರವನ್ನು ಮೇಲ್ಮನವಿ ಪ್ರಾಧಿಕಾರಿಯಾದ ಡಾ.ಅನುರಾಧಾರಿಗೆ ಕಳುಹಿಸಿಕೊಟ್ಟಿದ್ದೆ.

ಆಡಳಿತಶಾಹಿ ವರ್ಗಕ್ಕೆ ಜನಸಾಮಾನ್ಯರ ಮೇಲೆ, ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ಎಷ್ಟೊಂದು ನಿರ್ಲಕ್ಷ್ಯ, ಅಸಡ್ಡೆ ಎಂದರೆ, ಡಾ.ಅನುರಾಧಾ ಅವರು ನನ್ನ ಪತ್ರವನ್ನು ಕನಿಷ್ಟ ಪರಿಗಣನೆಗೂ ತೆಗೆದುಕೊಳ್ಳದೆ, ‘ಅರ್ಜಿದಾರರು ಗೈರು ಹಾಜರಿದ್ದರು, ಅವರ ಗೈರು ಹಾಜರಿಯಲ್ಲಿ ಮೇಲ್ಮನವಿಯನ್ನು ವಜಾಗೊಳಿಸಲಾಯಿತು’ ಎಂದು ‘ಉಕ್ತ ಲೇಖನ ನೀಡಿ, ಕರಡು ಸರಿಪಡಿಸಿ ಸಹಿ ಮಾಡಿ, ಪ್ರಕರಣವನ್ನು ಮುಕ್ತಾಯಗೊಳಿಸಿಬಿಟ್ಟರು’.

ಮೂಲ ಮಾಹಿತಿ ಹಕ್ಕು ಅರ್ಜಿ, ಮೇಲ್ಮನವಿ ಮತ್ತು ಮೇಲ್ಮನವಿ ಇತ್ಯರ್ಥ ಪಡಿಸುವ ದಿನ ಖುದ್ದು ಹಾಜರು ಇರಲು ಸಾಧ್ಯವಾಗದ ಬಗ್ಗೆ ಬರೆದ ಪತ್ರ ಈ ಮೂರನ್ನೂ ಪರಿಶೀಲಿಸಿ ಮಾಹಿತಿಹಕ್ಕು ಅರ್ಜಿಯಲ್ಲಿ ಕೋರಲಾದ, ಆದರೆ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಅರ್ಜಿದಾರನಿಗೆ ಕಳುಹಿಸಿಕೊಡುವಂಥ ದಕ್ಷತೆ, ನಿಷ್ಠೆ, ಪ್ರಾಮಾಣಿಕತೆ ಮೇಲ್ಮನವಿ ಪ್ರಾಧಿಕಾರಿಯಾದ ಮುಖ್ಯ ಆಡಳಿತಾಧಿಕಾರಿ ಡಾ.ಅನುರಾಧಾ ಅವರಲ್ಲಿ ಇರಬೇಕಾಗಿತ್ತು. ನಮ್ಮ ಇಡೀ ಆಡಳಿತಶಾಹಿ ವ್ಯವಸ್ಥೆಯೇ ಅವ್ಯವಸ್ಥೆಯ ಕೊಂಪೆಯಲ್ಲಿರುವಾಗ, ದುಡ್ಡು ಹೊಡೆಯುವುದಷ್ಠೆ ಇವರ ಮುಖ್ಯ
ಕಾಯಕವಾಗಿರುವಾಗ, ಇಂಥ ಭ್ರಷ್ಟ, ದುಷ್ಟ ಮತ್ತು ದುರಹಂಕಾರಿ ಸರಕಾರಿ ಅಧಿಕಾರಿಗಳಿಂದ ಪಾರದರ್ಶಕತೆಯ, ಮುಕ್ತತೆಯ, ಹೊಣೆಗಾರಿಕೆಯ ಸೇವೆಯನ್ನು ನಿರೀಕ್ಷಿಸಲು ಸಾಧ್ಯವೇ ? – ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s