ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಘಟಕವಾಗಿರುವ ನಗರದ
ಕೆ.ಎಂ.ಮಾರ್ಗದಲ್ಲಿರುವ ಜಿಲ್ಲಾ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ವೈದ್ಯರ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಬಾಣಂತಿಯೊಬ್ಬರು ಗಂಭೀರ ಸಮಸ್ಯೆಯೊಂದನ್ನು ಎದುರಿಸುತ್ತಿರುವ ವಿದ್ಯಾಮಾನ ನಡೆದಿದೆ.

ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಜ್ಞ ಪ್ರಸೂತಿ ವೈದ್ಯರು ಹೆರಿಗೆ ಮಾಡಿಸುವ ಬದಲಾಗಿ ಆರೋಗ್ಯ ಸಹಾಯಕಿಯರು ಬೇಕಾಬಿಟ್ಟಿ ಹೆರಿಗೆ ಮಾಡಿಸಿದ್ದರಿಂದಾಗಿ ಹೆರಿಗೆ ಮಾಡಿಸಿದ ಬಳಿಕ ಬಾಣಂತಿಯ ಗುಧಧ್ವಾರದಿಂದ ಮೂತ್ರ ಮತ್ತು ಗುಪ್ತಾಂಗದಿಂದ ಮಲ ಹೊರ ಹೋಗಲಾರಂಭಿಸಿದೆ. ಇದಕ್ಕೆ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣವೆಂದು ಅಧಿಕೃತವಾಗಿ ದೂರಲಾಗಿದೆ.

ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್ ಅವರು, ವಿಷಯವನ್ನು ಸಂಪೂರ್ಣವಾಗಿ ಕಡೆಗಣಿಸಿ ನೊಂದ ಮಹಿಳೆಗೆ ಪರಿಹಾರ ನೀಡುವಂತೆ ಖಾಸಗಿ ಉದ್ಯಮಿಯೊಬ್ಬರಿಗೆ ಪತ್ರ ಬರೆದು ಪ್ರಕರಣವನ್ನು ಮುಚ್ಚಿಹಾಕುವ ವಿಫಲ ಯತ್ನ ನಡೆಸಿದ್ದಾರೆ.

ಇಂದ್ರಾಳಿ ಸಮೀಪದ ಪರಿಶಿಷ್ಟ ಪಂಗಡಕ್ಕೆ ಸೇರಿದ 25 ವರ್ಷ ಪ್ರಾಯದ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆಗೆಂದು ಫೆಬ್ರವರಿ 16ರಂದು ಹೆಂಗಸರ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ಫೆ.18ರಂದು ಬೆಳಗ್ಗೆ ಗಂಟೆ 6.29ಕ್ಕೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾರೆ. ಇವರ ಹೆರಿಗೆ ಕಾರ್ಯವನ್ನು ತಜ್ಞ ಪ್ರಸೂತಿ ವೈದ್ಯರು ಮಾಡದೆ ಅನನುಭವಿ ಆರೋಗ್ಯ ಸಹಾಯಕಿಯರು ಮಾಡಿಸಿದ್ದರೆನ್ನಲಾಗಿದೆ.

ಅನನುಭವಿ ಆರೋಗ್ಯ ಸಹಾಯಕಿರು ಹೆರಿಗೆ ಮಾಡಿಸಿದ ಕಾರಣದಿಂದ ಹೆರಿಗೆ ಬಳಿಕ ಮಹಿಳೆಯ ಗುಧಧ್ವರದಿಂದ ಮೂತ್ರ ಮತ್ತು ಗುಪ್ತಾಂಗದಿಂದ ಮಲ ಹೊರ ಹೋಗಲು ಆರಂಭಗೊಂಡಿತು. ಬಳಿಕ ಈ ಗಂಭೀರ ತೊಂದರೆಯ ಪರಿಹಾರಕ್ಕಾಗಿ ಮಹಿಳೆ ಇದೇ ಆಸ್ಪತ್ರೆಯಲ್ಲಿದ್ದು ಮಾರ್ಚ್ 4ರ ವರೆಗೂ ಚಿಕಿತ್ಸೆ ಪಡೆದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಲಾಗಿದೆ.

ಸೂಕ್ತ ಚಿಕಿತ್ಸೆಗಾಗಿ ಕುಟುಂಬಸ್ಥರು ಬಳಿಕ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದರು. ಇಲ್ಲಿ ಚಿಕಿತ್ಸೆಗಾಗಿ ಈಗಾಗಲೇ
ಕುಟುಂಬಸ್ಥರು 50 ಸಾವಿರ ರು. ವೆಚ್ಚ ಮಾಡಿದ್ದಾರೆ. ಆಸ್ಪತ್ರೆ ಅಧಿಕೃತರ ಪ್ರಕಾರ ತೊಂದರೆ ನಿವಾರಣೆಗೆ ಕುಟುಂಬ ಇನ್ನೂ 50 ಸಾವಿರ ರು. ವೆಚ್ಚ ಮಾಡಬೇಕಾಗಿದೆ ಮತ್ತು ಚೇತರಿಸಿಕೊಳ್ಳಲು ಇನ್ನೂ 6 ತಿಂಗಳ ಕಾಲವಕಾಶ ಬೇಕು ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಂದಾಗಿ ತೀವ್ರವಾಗಿ ನೊಂದ ಬಡ ಕುಟುಂಬ ವರ್ಗದವರು ತಮಗಾದ ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಮೇಲೆ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾದ ಜಿಲ್ಲಾ ಸರ್ಜನ್ ಅವರು, ಇದಾವುದನ್ನು ಮಾಡದೇ ಇಡೀ ಪ್ರಕರಣವನ್ನೇ ಸಂಪೂರ್ಣವಾಗಿ ಮುಚ್ಚಿಹಾಕಲು ಯತ್ನಿಸಿದ ಪ್ರಸಂಗ ನಡೆದಿದೆ.

ವೈದ್ಯಕೀಯ ನಿರ್ಲಕ್ಷ್ಯ ಒಂದು ಗಂಭೀರ ಪ್ರಮಾದವಾಗಿದ್ದು, ಪ್ರಮಾದವೆಸಗಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ ಮತ್ತು ಈ ಪ್ರಕರಣದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕಾದ ಜಿಲ್ಲಾ ಸರ್ಜನ್ ಡಾ. ಆನಂದ ನಾಯಕ್ ಅವರು ತಮ್ಮ ಕನಿಷ್ಟ ಕರ್ತವ್ಯವನ್ನು ಮಾಡದೆ, ಜಿಲ್ಲಾ ಅಸ್ಪತ್ರೆಯ ಅಧಿಕೃತ ಲೆಟರ್ ಹೆಡ್ ನಲ್ಲಿ ಖಾಸಗಿ ವ್ಯಕ್ತಿಯಾದ ಡಾ.ಜಿ.ಶಂಕರ್ ಅವರಿಗೆ ಪತ್ರ ಬರೆದು (ಕ್ರಮ ಸಂಖ್ಯೆ: ಆಡಳಿತ: 39/2013-14, ದಿನಾಂಕ: 10.03.2013) ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಅನ್ಯಾಯಕ್ಕೊಳಗಾದ ಬಾಣಂತಿ ಮಹಿಳೆಯ ವೈದ್ಯಕೀಯ ವೆಚ್ಚಕ್ಕೆ ಸಹಾಯ ಮಾಡಬೇಕೆಂದು ವಿನಂತಿಸಿದ ಪ್ರಸಂಗ ಬಹಿರಂಗಕ್ಕೆ ಬಂದಿದೆ.

ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಸರ್ಜನ್ ಡಾ.ಆನಂದ ನಾಯಕ್ ಅವರು ಗಂಭೀರ ಪ್ರಕರಣವೊಂದನ್ನು ಮುಚ್ಚಿ ಹಾಕಿದ್ದೂ ಅಲ್ಲದೆ, ಖಾಸಗಿ ವ್ಯಕ್ತಿಯೊಬ್ಬರಿಗೆ ಪತ್ರ ಬರೆದು ಆ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬಕ್ಕೆ ವಂಚಿಸಿರುವುದರ ವಿರುದ್ಧ ಇದೀಗ ಕುಟುಂಬ ವರ್ಗ ರಾಜ್ಯ ಸರಕಾರಕ್ಕೆ ದೂರು ನೀಡಲು ನಿರ್ಧರಿಸಿದೆ. ವರದಿ: ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s