# ಸರಿಯಾಗಿ ಮೂರು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರ ಹಿಂದಿನ ಅರ್ಧ ಸತ್ಯ ಇದೀಗ ಅಧಿಕೃತವಾಗಿ ಬಹಿರಂಗಕ್ಕೆ ಬಂದಿದೆ. ಈ ಸತ್ಯವನ್ನು ಈ ಹಿಂದೆಯೇ ಸಾರ್ವಜನಿಕರು ವ್ಯಕ್ತಪಡಿಸಿದ್ದರು. ಮಾಧ್ಯಮಗಳು ಸಹ ಬೆಳಕಿಗೆ ತಂದಿತ್ತು. ವಿಷಯ ಎಷ್ಟೇ ಸತ್ಯವಾದರೂ ಸತ್ಯಕ್ಕೆ ಕಾನೂನಿನ ಆಡಳಿತದಲ್ಲಿ ನ್ಯಾಯ ದಕ್ಕಬೇಕಾದರೆ ಆ ಬಗ್ಗೆ ತನಿಖೆ ಎಂಬುದೊಂದು ಆಗಬೇಕಾಗುತ್ತದೆ. ಈ ತನಿಖೆಯಲ್ಲೇ ಸತ್ಯ ಹೊರಬರಬೇಕಾಗುತ್ತದೆ. ಸತ್ಯದಿಂದ ಕೂಡಿದ ತನಿಖಾ ವರದಿಯ ಆಧಾರದಲ್ಲಿ ಸರಕಾರ ಪರಿಣಾಮಕಾರಿಯಾದ ಕಾನೂನು ಕ್ರಮ
ತೆಗೆದುಕೊಳ್ಳಬೇಕಾಗುತ್ತದೆ. ಮತ್ತೆ ನ್ಯಾಯಾಲಯದ ಅಂಗಳದಲ್ಲಿಯೂ ಈ ಸತ್ಯ ಸೂಕ್ತ, ಸಮರ್ಥ ಸಾಕ್ಷ್ಯಾಧಾರಗಳ ಸಹಿತ ಸಾಬೀತಾಗಬೇಕು. ಶಿಕ್ಷೆ ಏನಿದ್ದರೂ ಆಮೇಲೆಯೇ. ಇಷ್ಟಾಗಲು ಅದೆಷ್ಟು ವರ್ಷ ಬೇಕು ಎನ್ನುವುದು ಎಲ್ಲರನ್ನೂ ಕಾಡುವ, ಎಲ್ಲರೂ ಕೇಳುವ ಮತ್ತೊಂದು ಪ್ರಶ್ನೆ.

2014ರ ಜನವರಿ 8ರಂದು ಗುಲ್ಬರ್ಗದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಇವರ ಹತ್ಯೆ ನಡೆಯಿತು. ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದು ಬಂಡೆ ಹೆಸರು ಗಳಿಸಿದ್ದರು. ಜನವರಿ 8ರಂದು ಗುಲ್ಬರ್ಗದ ಕುಖ್ಯಾತ ರೌಡಿ, ಮೋಸ್ಟ್ ವಾಂಟೆಡ್ ಮುನ್ನಾ ದರ್ಬದಾರ್ ಎಂಬಾತನ ಬಂಧನ ಕಾರ್ಯಾಚರಣೆಗಿಳಿದಿದ್ದರು ಪಿಎಸ್ಐ ಬಂಡೆ ನೇತೃತ್ವದ ಪೊಲೀಸರ ತಂಡ. ರೌಡಿ ಮುನ್ನಾ ಹಾಗೂ ಪೊಲೀಸ್ ಅಧಿಕಾರಿಗಳ ನಡುವಿನ ಚಕಮಕಿಯಲ್ಲಿ ಬಂಡೆ ಸಾವನ್ನಪ್ಪಿದರು. ಕಾರ್ಯಾಚರಣೆಯ ಸಮಯದಲ್ಲಿ ರೌಡಿಗಳು ಹಾರಿಸಿದ ಗುಂಡಿಗೆ ಬಂಡೆ ವೀರ ಮರಣವನ್ನಪ್ಪಿದರು, ಹುತಾತ್ಮರಾದರು ಎಂದು ಅಧಿಕೃತವಾಗಿ ಘೊಷಿಸಲಾಯಿತು.

ಸಾರ್ವಜನಿಕರು, ಮಲ್ಲಿಕಾರ್ಜುನ ಬಂಡೆ ಪತ್ನಿ ಹಾಗೂ ಮಾಧ್ಯಮಗಳು ಬಂಡೆ ಕೊಲೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೊನೆಗೂ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿಕೊಟ್ಟಿತು. ಬಿಪಿನ್ ಗೋಪಾಲಕೃಷ್ಣ ನೇತೃತ್ವದ ಸಿಐಡಿ ತನಿಖಾ ತಂಡ, ಇದೀಗ ಮೂರು ತಿಂಗಳ ಬಳಿಕ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ರೌಡಿ ಮುನ್ನಾ ತಂಡದ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಇನ್ನೋರ್ವ ಪಿಎಸ್ಐ ಮುರಳಿ ಎಂಬವರಲ್ಲಿದ್ದ ಸರ್ವಿಸ್ ಪಿಸ್ತೂಲ್ 9 ಎಂಎಂ ನ್ನು ಕಸಿದುಕೊಂಡ ರೌಡಿ ಮುನ್ನಾ ಇದೇ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಡೆಯನ್ನು ಹತ್ಯೆಗೈದಿದ್ದಾರೆ ಎಂಬುದು ಸಿಐಡಿ ತನಿಖಾ ವರದಿ !

ಇದು ಅರ್ಧ ಸತ್ಯದಿಂದ ಕೂಡಿದ ಒಂದು ತನಿಖಾ ವರದಿ. ಹಾವು ಸಾಯಬಾರದು. ಕೋಲೂ ಮುರಿಯಬರದು ಎನ್ನುವುದು ಈ ತನಿಖಾ ವರದಿಯ ಉದ್ಧೇಶ ಇರಲೂಬಹುದು. ಮಲ್ಲಿಕಾರ್ಜುನ ಬಂಡೆ ಹಾಗೂ ಮುರಳಿ ಇಬ್ಬರೂ ಪೊಲೀಸ್ ಅಧಿಕಾರಿಗಳೇ. ಈ ಇಬ್ಬರು ಪೊಲೀಸ್ ಅಧಿಕಾರಿಗಳೂ ರೌಡಿ ಮುನ್ನಾ ವಿರುದ್ಧದ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇಂಥ ಸಮಯದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಸೊಂಟ ಅಥವಾ ಕೈಯ್ಯಲ್ಲಿದ್ದ ಪಿಸ್ತೂಲನ್ನು ರೌಡಿಯೋರ್ವ ಕಸಿದುಕೊಳ್ಳಲು ಸಾದ್ಯವೇ ? ಸಾಧ್ಯವಾಯಿತೆಂದೇ ಇಟ್ಟುಕೊಳ್ಳೋಣ, ಆತ ಯಾರ ವಶದಲ್ಲಿದ್ದ ಪಿಸ್ತೂಲನ್ನು ಕಸಿದುಕೊಂಡಿದ್ದಾನೋ, ಆತನಿಗೆ ಗುಂಡು ಹಾರಿಸದೆ ಇನ್ನೋರ್ವ ಪೊಲೀಸ್ ಅಧಿಕರಿಗೆ ಯಾಕೆ ಗುಂಡು ಹಾರಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತದೆ.

ಬಂಡೆ ದೇಹದಲ್ಲಿರುವ ಗುಂಡು 9 ಎಂಎಂ ಸರ್ವಿಸ್ ಪಿಸ್ತೂಲಿನಿಂದ ಹಾರಿಸಿದ ಗುಂಡುಗಳು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಈ ವಿಷಯ ಸ್ಪಷ್ಟವಾಗುತ್ತದೆ. ಮುಚ್ಚಿ ಹಾಕುವುದು ಕಷ್ಟದ ಕೆಲಸ. 9 ಎಂಎಂ ಸರ್ವಿಸ್ ಪಿಸ್ತೂಲ್ ಪೊಲೀಸ್ ಅಧಿಕಾರಿಯಲ್ಲಿ ಮಾತ್ರ ಅಲ್ಲಿ ಇರಲು ಸಾಧ್ಯ. ಆ ಪಿಸ್ತೂಲ್ ರೌಡಿ ಮುನ್ನಾನದ್ದೇ ಎಂದು ವಾದಿಸಲು ಸಾಧ್ಯವಿಲ್ಲ. ಹಾಗೆ ವಾದಿಸಿದರೆ, ಆ ಪಿಸ್ತೂಲ್ ಮುನ್ನಾ ಕೈಗೆ ಹೇಗೆ ಬಂತು ಎಂಬುದರ ಬಗ್ಗೆ ಮತ್ತೊಂದು ತನಿಖೆಯಾಗಬೇಕಾಗುತ್ತದೆ. ಹಾಗಾಗಿ ಇಲ್ಲಿ ಪಿಎಸ್ಐ ಮುರಳಿಯವರಲ್ಲಿದ್ದ ಪಿಸ್ತೂಲನ್ನು ರೌಡಿ ಮುನ್ನಾ ಕಸಿದುಕೊಂಡು ಮಲ್ಲಿಕಾಜರ್ುನ ಬಂಡೆ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ತನಿಖಾ ವರದಿ ಸಿದ್ದಪಡಿಸಿದ್ದಾರೆ. ಇದು ಅಡ್ಡ ಗೋಡೆ ಮೇಲಿನ ವರದಿ.

ಸಿಐಡಿ ತನಿಖಾ ವರದಿ ಪ್ರಕಾರ, ಪೊಲೀಸ್ ಅಧಿಕಾರಿ ಬಂಡೆಯವರನ್ನು ಕೊಂದದ್ದು ಇನ್ನೋರ್ವ ಪೊಲೀಸ್ ಅಧಿಕಾರಿಯಲ್ಲ. ಹಾಗಾಗಿ ಇಲ್ಲಿ ಪೊಲೀಸ್ ಅಧಿಕಾರಿ ಕೊಲೆಗಾರನಲ್ಲ. ಪೊಲೀಸ್ ಅಧಿಕಾರಿಯನ್ನು ಇಲ್ಲಿ ಬಚಾವ್ ಮಾಡಲಾಯಿತು. ಜೊತೆಗೆ, ಸರ್ವಿಸ್ ಪಿಸ್ತೂಲ್ 9 ಎಂಎಂನಿಂದ ಹಾರಿದ ಗುಂಡಿಗೆ ಬಂಡೆ ಸಾವನ್ನಪ್ಪಿದರು ಎಂಬ ಅರ್ಧ ಸತ್ಯವನ್ನೂ ಕೂಡಾ ಒಪ್ಪಿಕೊಳ್ಳಲಾಯಿತು. ಅರ್ಧ ಸತ್ಯ ಮತ್ತು ಅರ್ಧ ಸುಳ್ಳಿನಿಂದ ಕೂಡಿದ ತನಿಖಾ ವರದಿಯಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಪೊಲೀಸ್ ಅಧಿಕಾರಿಗಳು ಏನು ಬೇಕಾದರೂ ಮಾಡಬಹುದು. ಅವರೇನೂ ಮಾಡಿದರೂ ಅದನ್ನು ಮುಚ್ಚಿಹಾಕುವ ಎಲ್ಲಾ ಪ್ರಯತ್ನಗಳನ್ನೂ ಈ ವ್ಯವಸ್ಥೆ ಎಂಬ ಅವ್ಯವಸ್ಥೆ ಅತ್ಯಂತ ವ್ಯವಸ್ಥಿತವಾಗಿ ಮಾಡಿ ಮುಗಿಸುತ್ತದೆ. ಕೊಂದವರು ಪೊಲೀಸ್ ಅಧಿಕಾರಿಗಳಾದರೆ, ಅಧಿಕಾರಶಾಹಿಯಾದರೆ, ಅಧಿಕಾರಶಾಹಿ ಮತ್ತು ಸರಕಾರ ನಿಜವಾದ ಅಪರಾಧಿಯನ್ನು ರಕ್ಷಿಸುತ್ತದೆ. ವ್ಯವಸ್ಥೆಯ ವಿರುದ್ಧವಿರುವ ವ್ಯಕ್ತಿಯನ್ನೇ, ವ್ಯಕ್ತಿಗಳನ್ನೇ, ಶಕ್ತಿಗಳನ್ನೇ ತಪ್ಪಿತಸ್ಥನನ್ನಾಗಿ ಮಾಡಿಬಿಡುತ್ತದೆ.

ಪೊಲೀಸ್ ಅಧಿಕಾರಿಗಳು ಕಾನೂನು ಪಾಲಿಸಬೇಕಾದವರು. ಇದರರ್ಥ, ಇತರರು ಕಾನೂನು ಪಾಲಿಸಬೇಕು ಎಂದಿಲ್ಲ ಎಂದಲ್ಲ. ಕಾನೂನು ಪಾಲಿಸಲೇಬೇಕಾದ, ಕಾನೂನನ್ನು ಜಾರಿ ಮಾಡಬೇಕಾದ ಪೊಲೀಸ್ ಅಧಿಕಾರಿಗಳೇ ಕಾನೂನಿನ ಕಣ್ಣಿಗೆ ಮಣ್ಣೆರಚಿ ಸುಭಗರಾಗುವುದು ಇದೆಯಲ್ಲ, ಇದಕ್ಕೇನು ಮಾಡುವುದು ? ಯಾರನ್ನೇ ಆಗಲಿ, ಪೊಲೀಸ್ ಅಧಿಕಾರಿಗಳೇ ಕೊಂದರೆ, ಅದು ಕೊಲೆಯಲ್ಲವೇ ? ಕೊಂದ ಪೊಲೀಸ್ ಅಧಿಕಾರಿ ವಿರುದ್ಧ ಕೊಲೆ ಕೇಸು ದಾಖಲಿಸಿ, ಇತರ ಕೊಲೆಗಡುಕರಂತೆಯೇ, ಕೊಲೆಗಡುಕ ಪೊಲೀಸ್ ಅಧಿಕಾರಿಯನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಡವೇ ? ನಮ್ಮ ಈ ಪ್ರಜಾಪ್ರಭುತ್ವ, ಜನತಂತ್ರ ವ್ಯವಸ್ಥೆಯಲ್ಲಿ, ಕಾನೂನಿನ ಆಡಳಿತದಲ್ಲಿ, ಸಂವಿಧಾನಬದ್ದ ಆಡಳಿತ ವ್ಯವಸ್ಥೆಯಲ್ಲಿ ಈ ಸಹಜ ನ್ಯಾಯ ಯಾಕಾಗಿ ಪಾಲನೆಯಾಗುತ್ತಿಲ್ಲ. ಸರಕಾರವೇಕೆ ಈ ಸಹಜ ನ್ಯಾಯವನ್ನು ಕಸಿದುಕೊಂಡು ಅನ್ಯಾಯವೆಸಗುತ್ತಿದೆ ?

ಕಾರ್ಕಳ-ಮೂಡಬಿದ್ರೆ ಮಧ್ಯದ ಈದುವಿನಲ್ಲಿ ಪಾರ್ವತಿ ಹಾಗೂ ಹಾಜಿಮಾ ಎಂಬಿಬ್ಬರು ಯುವತಿಯರನ್ನು ಕೊಂದು, ಯಶೋದಾ ಎಂಬಾಕೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪೊಲೀಸ್ ಅಧಿಕಾರಿಗಳು ನಮ್ಮ ವ್ಯವಸ್ಥೆಯಲ್ಲಿ ಕೊಲೆ ಆರೋಪಿಗಳಾಗಲೇ ಇಲ್ಲ. ಪಾರ್ವತಿ, ಹಾಜಿಮಾರಲ್ಲದೆ ಅಜಿತ್ ಕುಸುಬಿ, ವಸಂತ ಕುತ್ಲೂರು, ಮನೋಹರ್, ಸಾಕೇತ್ ಸಹಿತ ನಏಕ ಮಂದಿ ನಕ್ಸಲರನ್ನೂ, ನಕ್ಸಲರ ಜೊತೆಗೆ ಮೆಣಸಿನ ಹಾಡ್ಯದಲ್ಲಿ ಅಮಾಯಕ ಮಹಿಳೆ ಎಂದೂ ನೋಡದೆ ಒಂದಿಡೀ ಕುಟುಂಬವನ್ನೇ ಕೊಂದು ಹಾಕಿದರಲ್ಲ ಪೊಲೀಸರು.. ಇವರೆಲ್ಲ ಕೊಲೆಗಡುಕರಲ್ಲವೇ ? ಇವರ ಮೇಲೂ ಕೊಲೆ ಕೇಸು ದಾಖಲಿಸಬೇಕಲ್ಲವೇ ?

ನಕ್ಸಲರ ಸಹಿತ ಇನ್ಯಾರೇ ಆಗಿರಲಿ, ಪೊಲೀಸರ ಬಂದೂಕಿಗೆ ಬಲಿಯಾದವರ ಮೇಲೆಯೇ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸುತ್ತಾರೆ. ಇದು ತಪ್ಪಲ್ಲ. ಇದಕ್ಕೆ ಆಕ್ಷೇಪವೂ ಇಲ್ಲ. ಆದರೆ, ಇದೇ ಸಂದರ್ಭದಲ್ಲಿ ನಕ್ಸಲರ ಸಹಿತ ಇನ್ಯಾರನ್ನೇ ಆಗಲಿಗುಂಡು ಹಾರಿಸಿ ಕೊಲೆ ಮಾಡುತ್ತಾರಲ್ಲ ಪೊಲೀಸರು, ಈ ಕೊಲೆಗಡುಕ ಪೊಲೀಸರ ಮೇಲೂ ಕೊಲೆ ಕೇಸು ದಾಖಲಿಸಬೇಕು. ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸಲು ನ್ಯಾಯಾಲಯವಿದೆ. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಕೊಡಬಹುದಾದ ತೀರ್ಪನ್ನು ನ್ಯಾಯಾಲಯ ಕೊಡಲಿ. ಅದಕ್ಕೂ ಮೊದಲು, ಕನಿಷ್ಟ ವಿಚಾರಣೆಯನ್ನೂ ನಡೆಸದೆ ಪೊಲೀಸರೇ ಗುಂಡು ಹಾರಿಸಿ ಕೊಂದು ಮರಣದಂಡನೆ ಶಿಕ್ಷೆ ವಿಧಿಸುವುದು ಎಷ್ಟು ಮಾತ್ರಕ್ಕೂ ಒಪ್ಪಲು ಸಾಧ್ಯವಿಲ್ಲ. ನ್ಯಾಯಾಲಯದ ಕೆಲಸದಲ್ಲಿ ಪೊಲೀಸರು ಹೀಗೆ ಹಸ್ತಕ್ಷೇಪ ನಡೆಸುವುದು ಸಂವಿಧಾನಬಾಹಿರ.

ಪೊಲೀಸರು ಕೊಂದರೆ, ಅದು ಕೊಲೆಯಲ್ಲ ಎಂಬ ನಮ್ಮ ಸರಕಾರಗಳ ಧೋರಣೆ ಬದಲಾಗದ ವಿನಹಾ ಇದನ್ನು ವ್ಯವಸ್ಥೆ ಎಂದು ಒಪ್ಪಲು ಸಾಧ್ಯವಿಲ್ಲ. ಇದೊಂದು ಅವ್ಯವಸ್ಥೆಯೇ ಸರಿ. ಇವೆಲ್ಲಕ್ಕೂ ನಮ್ಮನ್ನಾಲಿದ ಸರಕರಗಳೇ ನೇರ ಹೊಣೆ. ಅದಕ್ಕೆ ನಾನು ಹೇಳುವುದಿಷ್ಟೇ: ಸರಕಾರವೇ ಕೊಲೆ ಆರೋಪಿ.. – ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s