ಉಡುಪಿ: ಪಂಕ್ತಿಭೇದ ಒಂದು ಸಾಮಾಜಿಕ ಕ್ರೌರ್ಯ. ಉಣ್ಣುವ ಅನ್ನದಲ್ಲಿ ವಿಷವಿಟ್ಟಂತೆ. ಅಷ್ಠ ಮಠಾಧೀಶರು ನಾಗರೀಕರೇ ಆಗಿದ್ದಲ್ಲಿ ವನಿತಾ ಶೆಟ್ಟಿಯವರನ್ನು ಪಂಕ್ತಿಯಿಂದ ಎಬ್ಬಿಸಿದ ಘಟನೆಯನ್ನು ಖಂಡಿಸಬೇಕು ಮತ್ತು ಮೊದಲು ಕೃಷ್ಣ ದೇವಸ್ಥಾನದಲ್ಲಿ ಪಂಕ್ತಿಭೇದ ವನ್ನು ನಿಷೇಧಿಸುವ ಮೂಲಕ ನಾಗರಿಕತೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಹೇಳಿದರು.

ಉಡುಪಿಯ ಖಾಸಗಿ ಹೋಟೇಲ್ ನಲ್ಲಿ ಮೇ.4ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ಪಂಕ್ತಿಭೇದದಂಥ ಕುಕೃತ್ಯ ಮಾಡುವವರು ಸಂಸ್ಕೃತಿ ಪ್ರತಿಪಾದಕರಾಗಲಾರರು.
ದುರದೃಷ್ಟವೆಂದರೆ ಇಂಥವರೇ ಇಂದು ಸಂಸ್ಕೃತಿ ನೇತಾರರಾಗಿಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪೇಜಾವರರ ಪ್ರಾಮಾಣಿಕತೆ, ಬದ್ಧತೆ ಬಗ್ಗೆ ಅನುಮಾನವಿದೆ. ಅವರಿಗೆ ನಿಜಕ್ಕೂ ಈ ವಿಷಯದಲ್ಲಿ ಕಾಳಜಿ ಇದ್ದದ್ದೇ ಆದಲ್ಲಿ, ಪಂಕ್ತಿಭೇದದ ವಿರುದ್ಧದ ಹೋರಾಟಕ್ಕೆ ನೇತೃತ್ವ ವಹಿಸಿಕೊಳ್ಳಬೇಕು. ಪೇಜಾವರ ಸ್ವಾಮೀಜಿಯವರು ನೇತೃತ್ವ ವಹಿಸಿಕೊಂಡಲ್ಲಿ ಪ್ರಗತಿಪರರು ಅವರಿಗೆ ಬೆಂಬಲ ನೀಡಲಿದ್ದಾರೆಂದು ಶಿವರಾಮು ತಿಳಿಸಿದರು.

ಎಲ್ಲಾ ಜಾತಿಯ ಜನರಿಂದ ಕಾಣಿಕೆ ಪಡೆಯುವಾಗ ಇಲ್ಲದ ಮಡಿವಂತಿಕೆ, ಸರ್ವಜಾತಿಯ ಜನರ ಕಾಣಿಕೆಯಿಂದಲೇ ತಯಾರಾಗುವ ಅನ್ನವನ್ನು ಊಟ ಮಾಡುವಾಗ ಮಾತ್ರ ಹೇಗೆ ಅಡ್ಡ
ಬಂದುಬಿಡುತ್ತದೆ ಎಂದು ಪ್ರಶ್ನಿಸಿದ ಕೆ.ಎಸ್. ಶಿವರಾಮು, ದೇವರು, ಧರ್ಮದ ಹೆಸರಿನಲ್ಲಿ ಮೌಢ್ಯವನ್ನು ಪ್ರತಿಷ್ಠಾಪಿಸಲು ಹೊರಟಿರುವ ಮಠಗಳ ವಿರುದ್ಧ ಸಾಮಾಜಿಕ ಅಪರಾಧದಡಿ ಕ್ರಮ ಕೈಗೊಳ್ಳುವಂತೆಯೂ, ಮೌಢ್ಯಪ್ರತಿಬಂಧಕ ಕಾಯಿದೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಮನವಿ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಕ್ಯಮಂತ್ರಿಗಳು, ಮೇ 16ರ ನಂತರ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದ ಜಾಗೃತ ವೇದಿಕೆಯ ಸಂಚಾಲಕ ಶಶಿಧರ ಸಂಗಾಪುರ, ಜಾತಿ ಗುರುತಿಸಲೆಂದೇ ದೇವಸ್ಥಾನಗಳಲ್ಲಿ ಗಂಡಸರನ್ನು ಅರೆ ಬೆತ್ತಲೆ ಮಾಡಲಾಗುತ್ತದೆ ಎಂದು ಆರೋಪಿಸಿದರು. ಪೇಜಾವರ ಸ್ವಾಮೀಜಿಗಳು ಮೊದಲು ಮೇಲ್ಜಾತಿ ಜನರ ಮನಸನ್ನೇ ಸರಿಪಡಿಸುವ ಕೆಲಸ ಮಾಡಬೇಕು ಎಂದು ಕನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರೊ.ಕ.ಎಫಣಿರಾಜ್ ಸಲಹೆ ನೀಡಿದರು.

ವನಿತಾ ಶೆಟ್ಟಿಯವರನ್ನು ಪಂಕ್ತಿಯಿಂದ ಎಬ್ಬಿಸಿದ ವಿಚಾರ ಈಗಾಗಲೇ ರಾಜ್ಯ ವ್ಯಾಪಕವಾಗಿ ಚರ್ಚೆಗೀಡಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಎಪ್ರಿಲ್ 19ರಂದು ದೂರನ್ನೂ ನೀಡಲಾಗಿದೆ. ಆದರೆ ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ. ಜಿಲ್ಲೆಯ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳ ರಾಜಕಾರಣಿಗಳಾಗಲಿ, ಜನಪ್ರತಿನಿಧಿಗಳು ಸಹ ಈ ಪ್ರಕರಣವನ್ನು ಖಂಡಿಸಿಲ್ಲ. ಇನ್ನಾದರೂ ಜಿಲ್ಲೆಯ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಪಂಕ್ತಿಬೇದ ಮತ್ತು ವನಿತಾ ಶೆಟ್ಟಿಯವರನ್ನು ಪಂಕ್ತಿಯಿಂದ ಎಬ್ಬಿಸಿದ ಘಟನೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕು ಎಂದು ವನಿತಾ ಶೆಟ್ಟಿಯವರ ಪತಿ ಉದ್ಯಮಿ ನಿತ್ಯಾನಂದ ಶೆಟ್ಟಿ ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಜಿ.ಎನ್.ಮಲ್ಪೆ, ಸಂಘಟನಾ ಸಂಚಾಲಕ ಸುಂದರ ಕಪ್ಪೆಟ್ಟು, ಮೈಸೂರಿನ ವಿಪ್ರ ಸಮಾಜ ಯುವ ವೇದಿಕೆಯ ಅಧ್ಯಕ್ಷ ನರಸಿಂಹ ಪ್ರಸಾದ್, ಜಾಗೃತ ವೇದಿಕೆಯ ಮೈಸೂರು ಜಿಲ್ಲಾದ್ಯಕ್ಷ ಬೀರಪ್ಪ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s