ರೆಡ್ ಕ್ರಾಸ್ ಆಗುಹೋಗುಗಳಲ್ಲಿ ಹಸ್ತಕ್ಷೇಪ ಮಾಡದಂತೆ ಉಚ್ಛಾಟಿತ ಬಸ್ರೂರು ರಾಜೀವ್ ಶೆಟ್ಟಿಗೆ ಕೋರ್ಟ್ ಆದೇಶ

Posted: ಮೇ 13, 2014 in Uncategorized
ಟ್ಯಾಗ್ ಗಳು:, , , , , , , , ,

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಸಭಾಪತಿ ಸ್ಥಾನದಿಂದ ಉಚ್ಚಾಟನೆಗೊಂಡ ಮತ್ತು ರಾಜ್ಯ ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತುಗೊಂಡ ಉಡುಪಿಯ ಬಸ್ರೂರು ರಾಜೀವ್ ಶೆಟ್ಟಿ ಅವರು ಇನ್ನು ಮುಂದೆ ಯಾವುದೇ ಕಾರಣಕ್ಕೂ ರೆಡ್ಕ್ರಾಸ್ ಸೊಸೈಟಿಯ ಆಗುಹೋಗುಗಳಲ್ಲಿ ಯಾವುದೇ ರೀತಿಯಲ್ಲಿಯೂ ಹಸ್ತಕ್ಷೇಪ ಮಾಡಬಾರದು ಎಂದು ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಆದೇಶ ನೀಡಿದೆ.

ಬಸ್ರೂರು ರಾಜೀವ್ ಶೆಟ್ಟಿಯವರು ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಸ್ಥಾನದಿಂದ ಉಚ್ಛಾಟನೆಗೊಂಡಿದ್ದು ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತುಗೊಂಡಿದ್ದು ಸ್ಪಷ್ಟವಾಗಿದೆ. ಹಾಗಾಗಿ ಅವರು ರೆಡ್ ಕ್ರಾಸ್ ನ ಹೊರಗಡೆ ಕೂಡಾ ತಾನು ರೆಡ್ಕ್ರಾಸ್ ಸೊಸೈಟಿಯ ರಾಜ್ಯ ಸಭಾಪತಿ ಎಂದು ಹೇಳಿಕೊಂಡು ಕಾರ್ಯವೆಸಗುವುದು ಸಲ್ಲದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟ ಸೂಚನೆ ನೀಡಿದೆ.

ರಾಜ್ಯಪಾಲರು ಅಧ್ಯಕ್ಷರಾಗಿರುವ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖೆಯ ಆಡಳಿತ ಮಂಡಳಿಯು ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ಸಭೆ ಸೇರಿ, ‘ರಾಜೀವ್ ಶೆಟ್ಟಿಯವರು ಆಡಳಿತ ಮಂಡಳಿಯ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ ಮತ್ತು ಅವರು ರೆಡ್ ಕ್ರಾಸ್ ನ ಧ್ಯೇಯೋದ್ಧೇಶಗಳಿಗೆ ವಿರುದ್ಧವಾಗಿ ಕೆಲಸ ಮಾಡಿರುತ್ತಾರೆ. ರೆಡ್ ಕ್ರಾಸ್ ನ ಘನತೆಗೆ ಅವರ ಮೇಲಿನ ಆರೋಪಗಳಿಂದ ಕುಂದುಂಟಾಗಿದೆ’ ಎಂಬುವುದಾಗಿ ಸದಸ್ಯರು ಮಂಡಿಸಿದ ನಿರ್ಣಯವನ್ನು ಸಭೆಯು ಅಂಗೀಕರಿಸುವ ಮೂಲಕ ಬಸ್ರೂರು ರಾಜೀವ್ ಶೆಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಉಚ್ಛಾಟಿಸುವದರ ಜೊತೆಗೆ, ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು.

ಡಾ.ಶರತ್ ಕುಮಾರ್ ರಾವ್ ಅವರು ವೀಣಾ ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ ಹಾಗೂ ರಾಮಚಂದ್ರ ಬಾಯರಿ ಎಂಬವರ ವಿರುದ್ಧ ಉಡುಪಿಯ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ ನಲ್ಲಿ ಕ್ರಿಮಿನಲ್ ದಾವೆ ಹೂಡಿದ್ದು, ನ್ಯಾಯಾಧೀಶರು ಉಡುಪಿ ನಗರ ಪೊಲೀಸ್ ಠಾಣೆಗೆ ಕ್ರಿಮಿನಲ್ ಪ್ರೊಸಿಜರ್ ನಡಿಯಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನ್ಯಾಯಾಲಯವು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ರಾಜೀವ್ ಶೆಟ್ಟಿಯವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಜಾಮೀನಿನಲ್ಲಿರುವ ವ್ಯಕ್ತಿಗಳು 2013ರ ನವೆಂಬರ್ನಲ್ಲಿ ನಡೆದ ರೆಡ್ಕ್ರಾಸ್ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲರ ಪಕ್ಕದಲ್ಲಿ ಕುಳಿತದ್ದೇ ದೊಡ್ಡ ತಪ್ಪು ಎಂದು ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಬಸ್ರೂರು ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರೆಡ್ ಕ್ರಾಸ್ ಕಾರ್ಯಕ್ರಮಗಳಿದ್ದಾಗ ಸದಸ್ಯರ ಸೇವೆ ಬಳಸಿಕೊಳ್ಳುವ ಬಸ್ರೂರು ಬಳಿಕ ಸದಸ್ಯರಿಗೆ ಅವಮಾನವೆಸಗುತ್ತಾರೆ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಸದಸ್ಯರ ನಡುವೆ ಒಡಕುಂಟುಮಾಡುತ್ತಾರೆ, ಬಸ್ರೂರು ಸಂಸ್ಥೆಯ ರಾಜ್ಯ ಸಭಾಪತಿಯಾದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳೂ ನಡೆದಿಲ್ಲ, ದಾನಿಗಳಿಂದ ಹಣ ತರುವುದರಲ್ಲೂ ಅವರು ವಿಫಲರಾಗಿದ್ದಾರೆ, ಒಬ್ಬ ಸದಸ್ಯರನ್ನು ಮತ್ತೊಬ್ಬ ಸದಸ್ಯರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಅವರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ, ಯಾದಗೀರ್ ನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲು ಸರಕಾರ ಹಣ ಬಿಡುಗಡೆ ಮಾಡಿದೆಯಾದರೂ ಬಸ್ರೂರು ಅವರಿಂದಾಗಿ ಸ್ಥಾಪನೆಯಾಗದೆ ಉಳಿದುಕೊಂಡಿದೆ, ಉಪ ಸಮಿತಿಯ ಬಗ್ಗೆ ಉಪ ಸಮಿತಿಯ ಅಧ್ಯಕ್ಷರ ಗಮನಕ್ಕೇ ತಾರದೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ, ಸಂಸ್ಥೆಯ ಗೌರವ ಕೋಶಾಧ್ಯಕ್ಷರ ಆಯ್ಕೆ ಬಗ್ಗೆ ಕೆಲವರಿಗೆ ಅಮಿಷ ಒಡ್ಡುವ ಕೆಲಸವನ್ನೂ ಮಾಡಿದ್ದಾರೆ, ಎಲ್ಲರ ಬಗ್ಗೆಯೂ ಇಲ್ಲ ಸಲ್ಲದ ಆರೋಪ ಮಾಡುವುದರಲ್ಲಿಯೇ ನಿರಂತರವಾಗಿ ತೊಡಗಿಕೊಂಡಿದ್ದಾರೆ, ಸಂಸ್ಥೆಯ ರಾಷ್ಟ್ರೀಯ ಮಂಡಳಿಯ ಪ್ರದಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಸೋತ ಬಳಿಕ ನೂತನ ಪ್ರದಾನ ಕಾರ್ಯದರ್ಶಿಯ ವಿರುದ್ಧ ಪತ್ರ ಬರೆದು ರಾಷ್ಟ್ರೀಯ ಮಂಡಳಿಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ, ಸಂಸ್ಥೆಯ ಏಳು ಸೂತ್ರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಸಂಸ್ಥೆಗೇ ಮಾರಕವಾಗಿ ಪರಿಣಮಿಸಿದ್ದಾರೆ ಎಂಬಿತ್ಯಾದಿ ಗಂಭೀರ ಆರೋಪಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯರು ಬಸ್ರೂರು ರಾಜೀವ್ ಶೆಟ್ಟಿ ವಿರುದ್ಧ ಮಾಡಿದ್ದರು.

ಉಚ್ಛಾಟನೆಗೊಂಡ ಬಳಿಕವೂ ರಾಜೀವ್ ಶೆಟ್ಟಿಯವರು ಈಗಲೂ ತಾನೇ ಸಭಾಪತಿ ಎಂದು ಹೇಳಿಕೊಂಡು ರೆಡ್ ಕ್ರಾಸ್ ಸೊಸೈಟಿಯ ಬೆಂಗಳೂರಿನಲ್ಲಿರುವ ರಾಜ್ಯ ಘಟಕದ ಕಚೇರಿಗೆ ಬಂದು ಹೋಗುತ್ತಿದ್ದರು, ಕಚೇರಿಗೆ ಬರುವಾಗ ತನ್ನ ಜೊತೆಗೆ ಇತರ ಕೆಲವು ಮಂದಿ ಅಪರಿಚಿತರನ್ನು ಕರೆದುಕೊಂಡು ಬರುತ್ತಿದ್ದರು, ಇತರ ಸಿಬ್ಬಂದಿಗಳಿಗೆ ಆದೇಶಗಳನ್ನು ನೀಡುತ್ತಿದ್ದರು, ಕಚೇರಿ ಹೊರಗಡೆ ಕೂಡಾ ತಾನೇ ಸಭಾಪತಿ ಎಂದು ಹೇಳಿಕೊಂಡು ಬರುತ್ತಿದ್ದರು ಎಂಬ ಕಾರಣಕ್ಕೆ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಆಡಳಿತ ಮಂಡಳಿಯ ಪರವಾಗಿ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಗೌರಿಶಂಕರ್ ಅವರು ಮಾರ್ಚ್11ರಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. (22.03.2014ರಂದು ಪ್ರಕಟಿತ ವರದಿ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s