ಸಿಐಡಿ ಎಂಬ ಮಹಾದ್ರೋಹ: ಪಾಪದ ಪ್ರಾಯಶ್ಚಿತ್ತಕ್ಕೆ ತರಲಿ ಶ್ವೇತಪತ್ರ !

Posted: ಮೇ 15, 2014 in Uncategorized
ಟ್ಯಾಗ್ ಗಳು:, , , , , , , , , , , ,

# ತನಿಕೋಡು ಚೆಕ್ ಪೋಸ್ಟ್ ನಲ್ಲಿ ಜಾನುವಾರು ಸಾಗಾಟಗಾರ ಕಬೀರ್ ನನ್ನು ಎಎನ್ಎಫ್ ಪೊಲೀಸ್ ಸಿಬ್ಬಂದಿ ನವೀನ್ ನಾಯ್ಕ ಗುಂಡು ಹೊಡೆದು ಕೊಂದ ಪ್ರಕರಣದ ಬಗ್ಗೆ ಮ್ಯಾಜಿಸ್ಟಿರಿಯಲ್ ತನಿಖೆ ಮತ್ತು ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರೆ, ಆರೋಗ್ಯ ಸಚಿವ ಯು.ಟಿ.ಖಾದರ್ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.

ಕಬೀರ್ ಕೊಲೆಯಾಗಿರುವುದು ಸೂರ್ಯ ಸತ್ಯವಾಗಿತ್ತು. ಇದನ್ನು ಯಾರೊಬ್ಬರೂ ಅಲ್ಲಗೆಳೆದಿರಲೇ ಇಲ್ಲ. ನಕ್ಸಲ್ ಎಂದು ಶಂಕಿಸಿ ಎಎನ್ಎಫ್ ಸಿಬ್ಬಂದಿ ಕಬೀರ್ ನನ್ನು ಗುಂಡು ಹಾರಿಸಿದ ಎಂಬುದೂ ಸ್ಪಷ್ಟವಾಗಿತ್ತು. ಇದನ್ನು ಸಹ ಎಲ್ಲರೂ ಒಪ್ಪಿಕೊಂಡಿದ್ದರು. ವಿಷಯ ಹೀಗಿರುವಾಗ, ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ಮೊತ್ತ ಮೊದಲು ಕಬೀರ್ ಹಂತಕ ನವೀನ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕಾಗಿತ್ತು. ಆರೋಪಿ ನವೀನ್ ನಾಯ್ಕನನ್ನು ಕರ್ತವ್ಯದಿಂದ ಅಮಾನತುಪಡಿಸಿ, ಇಲಾಖಾ ತನಿಖೆಗೆ ಆದೇಶಿಸಬೇಕಾಗಿತ್ತು. ಇವೆರಡನ್ನೂ ಮಾಡದೆ ಪೊಲೀಸ್ ಇಲಾಖೆ ಕರ್ತವ್ಯಲೋಪವೆಸಗಿತ್ತು.

ಪ್ರಭುತ್ವದ ಪ್ರತಿನಿಧಿಗಳಿಂದ ಎನ್ ಕೌಂಟರ್ ಮಾದರಿಯ ಕೊಲೆ ನಡೆದಾಗ ನಿಯಮಾವಳಿಗಳ ಪ್ರಕಾರ ಸಹಜವಾಗಿಯೇ ಮ್ಯಾಜಿಸ್ಟಿರಿಯಲ್ ತನಿಖೆ ನಡೆಯಬೇಕು. ಅಸಿಸ್ಟೆಂಟ್ ಕಮಿಷನರ್ (ಎಸಿ) ಅಥವಾ ಜಿಲ್ಲಾಧಿಕಾರಿಗಳು ಇಲ್ಲವೇ ದಂಡಾಧಿಕಾರಿಗಳಾಗಿರುವ ಕಾರ್ಯಾಂಗದ ಹಿರಿಯ ಅಧಿಕಾರಿಗಳು ಮ್ಯಾಜಿಸ್ಟಿರಿಯಲ್ ತನಿಖೆ ನಡೆಸುವ ಅಧಿಕಾರಿಗಳಾಗಿರುತ್ತಾರೆ. ಮ್ಯಾಜಿಸ್ಟಿರಿಯಲ್ ತನಿಖೆಗೆ ಆದೇಶಿಸುವುದು ಗೃಹ ಸಚಿವರ ಉದಾರತೆಯಾಗಲೀ, ಸಾಧನೆಯಾಗಲಿ ಏನೂ ಅಲ್ಲ. ಸಾರ್ವಜನಿಕರ ಆಕ್ರೋಶವನ್ನು ಶಮನಗೊಳಿಸಲು ಸಚಿವ ಕೆ.ಜೆ.ಜಾರ್ಜ್ ಮ್ಯಾಜಿಸ್ಟಿರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿರಬೇಕು.

ಕೊಲೆ ನಡೆದಿದೆ. ಕೊಲೆ ಆರೋಪಿ ಯಾರು ಎನ್ನುವುದು ಗೊತ್ತಾಗಿದೆ. ಇಷ್ಟು ಗೊತ್ತಿದ್ದರೂ ಗೃಹ ಇಲಾಖೆಯ ಅಧೀನದಲ್ಲಿರುವ ಪೊಲೀಸ್ ಅಧಿಕಾರಿಗಳು ಕೊಲೆ ಆರೋಪಿಯ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿಕೊಂಡಿಲ್ಲ. ಪೊಲೀಸ್ ಅಧಿಕಾರಿಗಳು ಕಾನೂನು ಪಾಲಿಸುವಂತೆ ಮಾಡಲು ಗೃಹ ಸಚಿವರಿಗೆ ಸಾಧ್ಯವಾಗಿಲ್ಲ ಎಂಬುದೇ ಇಲ್ಲಿ ಗೃಹ ಸಚಿವ ಜಾರ್ಜ್ ಗೃಹ ಸಚಿವರಾಗಿ ಮುಂದುವರಿಯಲು ಅನರ್ಹ ವ್ಯಕ್ತಿ ಎನ್ನುವುದಕ್ಕೆ ಸಾಕ್ಷಿ.

ಕೊಲೆ ಆರೋಪಿ ನವೀನ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವುದರ ಜೊತೆಗೆ, ಕೊಲೆಯಾದ ಕಬೀರ್ ಹಾಗೂ ಕಬೀರ್ ಜೊತೆಗೆ ಇದ್ದು, ಓಡಿ ಪರಾರಿಯಾದ ಇತರರ ಕಾರ್ಯಾಚರಣೆ ಕಾನೂನು ಬದ್ಧವೋ, ಕಾನೂನು ಬಾಹಿರವೋ ಎಂದು ಪರಿಶಿಲನೆ, ತುರ್ತು ತನಿಖೆ ನಡೆಸಿ ಕಾನೂನು ಬಾಹಿರವಾಗಿದ್ದರೆ, ಅವರ ವಿರುದ್ಧ ಸೂಕ್ತ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸುವ ಬದ್ಧತೆಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಗೃಹ ಸಚಿವರು ಪ್ರದರ್ಶಿಸಬೇಕಾಗಿತ್ತು. ಇಲ್ಲೂ ಕರ್ತವ್ಯ ಪಾಲನೆ ಮಾಡಬೇಕಾದವರು ಸರಿಯಾದ ರೀತಿಯಲ್ಲಿ ಕರ್ತವ್ಯ ಪಾಲನೆ ಮಾಡದೆ ಲೋಪವೆಸಗಿರುವುದು ಸ್ಪಷ್ಟವಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕರ ನಡುವೆ ಮತ್ತು ಅಧಿಕಾರಿಗಳ ಮಧ್ಯೆಯೇ ಅಸ್ಪಷ್ಟತೆ, ಗೊಂದಲ, ವಾದ-ಪ್ರತಿವಾದಗಳಿರುವ ಸಂದರ್ಭದಲ್ಲಿ ಸರಕಾರ ಕಬೀರ್ ಕುಟುಂಬಕ್ಕೆ ತರಾತುರಿಯಲ್ಲಿ ಮೊದಲಿಗೆ ಐದು ಲಕ್ಷ ರು. ಮತ್ತು ಬಳಿಕ ಹತ್ತು ಲಕ್ಷ ರು. ಪರಿಹಾರ ಘೊಷನೆ ಮಾಡಿದ್ದು ಕೂಡಾ ಸರಿಯಾದ ಕ್ರಮವಾಗಿರಲಿಲ್ಲ. ಈ ಹಿಂದೆ ನಡೆದ ಇಂಥ ಎಷ್ಟು ಪ್ರಕರಣಗಳಲ್ಲಿ ಸರಕಾರ ಕೊಲೆಯಾದ ಕುಟುಂಬಕ್ಕೆ ನಷ್ಟ ಪರಿಹಾರ ನೀಡಿದೆ ಎಂದರೆ, `ಇಲ್ಲ’ ಎಂಬುದೇ ಉತ್ತರ. ಅಂದರೆ ಸರಕಾರ ನಿಷ್ಪಕ್ಷಪಾತವಾಗಿಲ್ಲ, ಪಕ್ಷಪಾತವೆಸಗಿದೆ, ಪಕ್ಷಪಾತವೆಸಗುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ.

ಆಡಳಿತಾರೂಢ ಪಕ್ಷದ ಶಾಸಕರು ಹೇಳಿದರೆಂದು, ಸಚಿವರು ಸೂಚಿಸಿದರೆಂದು, ಕೊಲೆಯಾದವನು ಮುಸ್ಲೀಮ್ ಎಂಬ ಕಾರಣಕ್ಕೆ ನಷ್ಟ ಪರಿಹಾರ ಪ್ರಕಟಿಸುವುದು ಇತ್ಯಾದಿಗಳೆಲ್ಲವೂ ರಾಜ್ಯದ ಕಾಂಗ್ರೆಸ್ ಸರಕಾರ ಹೀನಾತಿಹೀನ ಓಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದೆ ಎನ್ನುವುದಕ್ಕೆ ಪುಷ್ಟಿ ಒದಗಿಸುವಂಥದ್ದೇ ಆಗಿದೆ.

ಹೆಬ್ರಿ ಸಮೀಪ ಕೆಲ ವರ್ಷಗಳ ಹಿಂದೆ ಪೊಲೀಸರು ಅಜರುದ್ಧೀನ್ ಎಂಬಾತನನ್ನು ಗುಂಡು ಹಾರಿಸಿ ಕೊಲೆಗೈದಿದ್ದರು. ಕಬೀರ್ ಕೊಲೆಗೆ ಪ್ರತಿಯಾಗಿ ಸಾರ್ವಜನಿಕರು
ಪ್ರತಿಭಟಿಸಿದಂತೆ ಆಗ ಅಜರುದ್ಧೀನ್ ಕೊಲೆಗೆ ಪ್ರತಿಯಾಗಿ ಪ್ರತಿಭಟಿಸಿರಲಿಲ್ಲ. ಸಾರ್ವಜನಿಕರು ದೊಡ್ಡ ಮಟ್ಟಿಗೆ ಪ್ರತಿಭಟಿಸಿಲ್ಲವೆಂಬ ಕಾರಣಕ್ಕೆ ಸರಕಾರ ಅಜರುದ್ಧೀನ್ ಕುಟುಂಬಕ್ಕೆ ನಷ್ಟ ಪರಿಹಾರ ನೀಡಿಲ್ಲವೆಂದಾದರೆ ಇದು ಸಹ ಸರಕಾರದ ತಪ್ಪು ಕ್ರಮವೇ ಆಗಿಬಿಡುತ್ತದೆ. ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ಕೆಲ ವರ್ಷಗಳ ಹಿಂದೆ ನಕ್ಸಲರನ್ನು ಕೊಲ್ಲುವ ಕಾರ್ಯಾಚರಣೆಯಲ್ಲಿ ಅಮಾಯಕ ಮಹಿಳೆ ಸಹಿತ ಒಂದಿಡೀ ಕುಟುಂಬವನ್ನೇ ಎಎನ್ಎಫ್ ಪೊಲೀಸರು ಅನಗತ್ಯವಾಗಿ ಗುಂಡು ಹೊಡೆದು ಅಮಾನುಷವಾಗಿ ಕೊಂದು ಹಾಕಿತು. ಇಲ್ಲೂ ಸಹ ಸರಕಾರ ಹತ್ಯೆಗೀಡಾದ ಅಮಾಯಕ ಕುಟುಂಬಕ್ಕೆ ನಷ್ಟ ಪರಿಹಾರ ನೀಡಿಲ್ಲ. ಇಲ್ಲಿ ಹತ್ಯೆಯಾದ ಕುಟುಂಬದ ಓರ್ವ ಯುವಕ ಟಿವಿ ಧಾರಾವಾಹಿಯಲ್ಲಿ ನಟಿಸಿದವನಾಗಿದ್ದ ಮತ್ತು ಬಹಿರಂಗವಾಗಿಯೇ ಪ್ರಜಾಸತ್ತಾತ್ಮಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದವ ಎನ್ನುವುದು ಗಮನಿಸಬೇಕಾದ ವಿಷಯ. ಇಲ್ಲೆಲ್ಲಾ ಸರಕಾರಕ್ಕೆ, ಅಂದರೆ ಸಚಿವ ಮಹಾಶಯರಿಗೆ ತಮ್ಮ ಆಡೆಳಿತ ವ್ಯವಸ್ಥೆ ಮಾಡಿದ್ದು ಅಕ್ಷಮ್ಯ ಅಪರಾಧವೆಂದು ಕಾಣಲೇ ಇಲ್ಲ. ಇವುಗಳೆಲ್ಲವೂ ಪ್ರಜೆಗಳ ದುರಂತವೇ ಸರಿ.

ಕಬೀರ್ ಕೊಲೆ ಬಗ್ಗೆ ಮ್ಯಾಜಿಸ್ಟಿರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರೆ, ಆರೋಗ್ಯ ಸಚಿವ ಯು.ಟಿ.ಖಾದರ್ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದು ನಮ್ಮ ರಾಜ್ಯದ ಇನ್ನೊಂದು ದುರಂತವೇ ಹೌದು. ಮ್ಯಾಜಿಸ್ಟಿರಿಯಲ್ ತನಿಖೆ ಮತ್ತು ನ್ಯಾಯಾಂಗ ತನಿಖೆ (ಜ್ಯುಡಿಷಿಯಲ್ ಎನ್ ಕ್ವಯರಿ) ಎಂದರೆ ಒಂದೇ ಅಲ್ಲ. ಎರಡೂ ಬೇರೆ ಬೇರೆಯದೇ ಆದ ತನಿಖೆ ಎಂಬ ಕನಿಷ್ಟ ಪರಿಜ್ಞಾನವೂ ಇಲ್ಲದವರು ನಮ್ಮ ರಾಜ್ಯದ ಕ್ಯಾಬಿನೆಟ್ ಸಚಿವ. ನ್ಯಾಯಾಧೀಶರು ನಡೆಸುವ ತನಿಖೆ ನ್ಯಾಯಾಂಗ ತನಿಖೆ. ಕಬೀರ್ ಕೊಲೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವ ಖಾದರ್ ಹೇಳಿ ತಿಂಗಳೊಂದಾಗುತ್ತಾ ಬಂತು. ಇನ್ನಾದರೂ ನ್ಯಾಯಾಂಗ ತನಿಖೆ ನಡೆಸುವ ನ್ಯಾಯಾಧೀಶರು ಯಾರು ಎಂಬುದನ್ನು ಖಾದರ್ ಸಾರ್ವಜನಿಕರಿಗೆ ತಿಳಿಸಬೇಕು.

ಶಾಸಕರು ಹಾಗೂ ಸಚಿವರ ಮನವಿಯ ಮೇರೆಗೆ ಸರಕಾರ ಕಬೀರ್ ಕೊಲೆ ಕೇಸನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ. ಇದು ಕೂಡಾ ಒಂದು ದೊಡ್ಡ ನಾಟಕ. ಕಾಂಗ್ರೆಸ್ನ ಮುಸ್ಲೀಮ್ ಜನಪ್ರತಿನಿಧಿಗಳಾದ ಯು.ಟಿ.ಖಾದರ್ ಹಾಗೂ ಮೊಯಿದೀನ್ ಬಾವಾ ಇವರು ಕಬೀರ್ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಮಾಡಿದ ಬಹಿರಂಗ ದ್ರೋಹವೇ ಸಿಐಡಿ ತನಿಖೆ.

ಹಿಂದಿನ ಸಿಓಡಿಯೇ ಇಂದಿನ ಸಿಐಡಿ. ಈ ಇಲಾಖೆಯಲ್ಲಿರುವವರು ಪೊಲೀಸ್ ಅಧಿಕಾರಿಗಳೇ ಹೊರತು ಬೇರೆ ಯಾರೂ ಅಲ್ಲ. ಪೊಲೀಸ್ ಇಲಾಖೆಯೇ ಭ್ರಷ್ಟವಾಗಿರುವಾಗ, ಇದೇ ಇಲಾಖೆಯಲ್ಲಿದ್ದ ಅಧಿಕಾರಿಗಳು ಸಿಐಡಿ ಇಲಾಖೆಗೆ ಹೋದ ಕೂಡಲೇ ಇವರುಗಳ ಭ್ರಷ್ಟತನ ಮಾಯವಾಲು ಸಾಧ್ಯವೇ ? ಬಜೆಪಿ ಮತ್ತು ಸಂಘ ಪರಿವಾರದ ಕೋಮುವಾದಿ ನಾಯಕ ಕಾಂಗ್ರೆಸ್ ಅಥವಾ ಜೆಡಿಎಸ್ ಗೆ ಸೇರ್ಪಡೆಗೊಂಡ ಕೂಡಲೇ ಆತನನ್ನು ಜಾತ್ಯತೀತರೆಂದೂ, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಇತ್ಯಾದಿ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ತಕ್ಷಣವೇ ಆತ ಕೋಮುವಾದಿಯೆಂದೂ ವಾದಿಸಿದಂತೆಯೇ ಇದು.

ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಗಳ ವಿರುದ್ಧ ಆರೋಪಗಳು ಕೇಳಿ ಬಂದಾಗ ಇದೇ ಅಧಿಕಾರಿಗಳನ್ನು ಸಿಐಡಿ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತದೆ. ಪೊಲೀಸ್
ಇಲಾಖೆಯಲ್ಲಿರುವ ಅಧಿಕಾರಿಗಳಿಗೆ ಭಡ್ತಿ ದೊರೆತಾಗ, ಇಲಾಖೆಯೊಳಗೆ ಅವರಿಗೆ ಕಾಲಿ ಸ್ಥಾನಗಳು ಇಲ್ಲದೇ ಇದ್ದಾಗಲೂ ಇಂಥವರನ್ನು ಸಿಐಡಿ ಇಲಾಖೆಗೆ ವರ್ಗಾಯಿಸಲಾಗುತ್ತದೆ.

ಸರಕಾರ ತಾನೇನೋ ನೊಂದ ಜನರಿಗೆ ಬಹುದೊಡ್ಡ ಉಪಕಾರ ಮಾಡುತ್ತಿರುವುದಾಗಿ ನಂಬಿಸುವ ಯತ್ನದಲ್ಲಿ ಕೆಲವು ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಿ
ಕೈತೊಳೆದುಕೊಂಡುಬಿಡುತ್ತದೆ. ಆದರೆ, ಈ ಸಿಐಡಿ ಇಲಾಖೆ ಇದುವರೆಗೆ ಎಷ್ಟು ಪ್ರಕರಣಗಳನ್ನು ನ್ಯಾಯೋಚಿತವಾಗಿ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿಕೊಟ್ಟಿದೆ ? ಎಷ್ಟು ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸಿದೆ ? ಯಾವ ಪ್ರಕರಣಗಳಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಂಡಿದೆ ? ಇನ್ನಾದರೂ ಬಹಿರಂಗ ಅಂಕಿ ಸಂಖ್ಯೆ ಸಹಿತ ಬಹಿರಂಗಪಡಿಸಬೇಕು.

ಗಂಭೀರವಾದ ಪ್ರಕರಣಗಳನ್ನು ಅಧಿಕೃತವಾಗಿಯೇ ಮುಚ್ಚಿಹಾಕಲು ಸಿಐಡಿ ಯಾನೆ ಸಿಓಡಿ ಇಲಾಖೆಯನ್ನು ದುರ್ಬಳಕೆ ಮಾಡಲಾಗಿದೆ. ಒಂದು ಪ್ರಕರಣದ ತನಿಖೆ ನಡೆಸುವ
ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ತನಿಖಾಧಿಕಾರಿಗಳಿಗೆ ಇರುವ ಯಾವ ಸೌಲಭ್ಯಗಳು ಸಿಐಡಿ ಇಲಾಖೆಯ ತನಿಖಾಧಿಕಾರಿಗಳಿಗೆ ಇರುತ್ತದೆ ? ಗೌರವಾನ್ವಿತ ಮುಖ್ಯ ಅತಿಥಿಗಳಂತೆ ಒಂದೂರಿನ ಪ್ರವಾಸಿ ಬಂಗಲೆ (ಐಬಿ) ಇಲ್ಲವೇ ಲಾಡ್ಜ್ ಗಳಿಗೆ ಬಂದು ಉಳಿದುಕೊಳ್ಳುವ ಸಿಐಡಿ ತನಿಖಾ ತಂಡ, ಕೆಲವರನ್ನು ತಾವಿರುವಲ್ಲಿಗೆ ಕರೆಸಿಕೊಂಡು ಅವರಿಂದ ಹೇಳಿಕೆ ಪಡೆದುಕೊಂಡು ಕೇಸ್ ಫೈಲಿಗೆ ಜೋಡಿಸಿಡುವ ಕೆಲಸ ಬಿಟ್ಟರೆ ಬೇರೆ ಯಾವ ತಳ ಮಟ್ಟದ ತನಿಖಾ ಕಾರ್ಯವನ್ನು ಸಿಐಡಿ ಅಧಿಕಾರಿಗಳು ಮಾಡುತ್ತಾರೆ ? ಈ ಸಿಐಡಿ ಅಧಿಕಾರಿಗಳ ತನಿಖಾ ಪ್ರಕ್ರಿಯೆಗೆ ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರು ಸಹಕಾರ ನೀಡುತ್ತಾರೆ ? ಪೊಲೀಸ್ ತನಿಖಾಧಿಕಾರಿಗಳು ಆರಂಭದಲ್ಲಿ ನಡೆಸಿ ಸಿದ್ಧಪಡಿಸಿದ ತನಿಖಾ ವರದಿಯನ್ನು ಪರಿಶೀಲನೆ ಮಾಡಿ, ಬಳಿಕ ಆ ಕೇಸ್ ಫೈಲಿಗೆ ಮತ್ತೆರಡು ಪುಟಗಳನ್ನು ಸೇರ್ಪಡೆಗೊಳಿಸಿ ಹರಕೆ ತೀರಿಸಲೆಂಬಂತೆ ಕೊನೆಗೊಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದನ್ನು ಬಿಟ್ಟರೆ ಸಿಐಡಿ ತನಿಖಾಧಿಕಾರಿಗಳು ಇದುವರೆಗೆ ಸಿಐಡಿ ಇತಿಹಾಸದಲ್ಲಿ ಬೇರೇನೂ ಸಾಧಿಸಿದ್ದಿದೆ ?

ಇಂಥ ಹತ್ತು ಹಲವಾರು ಪ್ರಶ್ನೆಗಳಿಗೆ ಸರಕಾರ ಇನ್ನಾದರೂ ರಾಜ್ಯದ ಮಹಾಜನತೆಗೆ ಉತ್ತರ ಕೊಡುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಶ್ವೇತಪತ್ರ ಹೊರಡಿಸುವ ಜರೂರತ್ತು ಖಂಡಿತಾ ಇದೆ. ಇಲ್ಲದೇ ಹೋದರೆ ಸಿಐಡಿ ಇಲಾಖೆ ಎನ್ನುವುದು ಅಪರಾಧಿಗಳನ್ನು ರಕ್ಷಿಸುವ, ಪ್ರಕರಣಗಳನ್ನು ಮುಚ್ಚಿಹಾಕುವ ಇಲಾಖೆಯಾಗಿ ಕುಖ್ಯಾತಿಪಡೆದುಕೊಳ್ಳುವುದಂತೂ ಖಚಿತ.

ಈ ಪರಮ ಸತ್ಯವನ್ನು ಮುಖ್ಯವಾಗಿ ನಾಗರಿಕ ಸಮಾಜ ಇನ್ನಾದರೂ ಅರ್ಥಮಾಡಿಕೊಂಡರೆ ಎಲ್ಲರಿಗೂ ಒಳ್ಳೆಯದು. ಇಲ್ಲವಾದರೆ ಅದು ತಮಗೆ ತಾವೇ ಮಾಡುವ ಅನ್ಯಾಯವೂ, ದ್ರೋಹವೂ ಆಗಲಿದೆ. ಕಬೀರ್ ಪ್ರಕರಣದಲ್ಲೂ ಕಾಂಗ್ರೆಸ್ ನ ಶಾಸಕರು, ಸಚಿವರು ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ಹಸ್ತಾಂತರಗೊಳ್ಳುವಂತೆ ಮಾಡುವ ಮೂಲಕ ಮಾಡಿದ್ದು ದ್ರೋಹವನ್ನೇ.

1986ರಲ್ಲಿ ನಡೆದ ಧರ್ಮಸ್ಥಳದ ಪದ್ಮಲತಾ ಸಹಿತ ರಾಜ್ಯದ ಅದೆಷ್ಟೋ ಪ್ರಕರಣಗಳ ತನಿಖೆ ನಡೆಸಿದ ಸಿಓಡಿ ಅಲಿಯಾಸ್ ಸಿಐಡಿ ಇಲಾಖಾಧಿಕಾರಿಗಳಿಗೆ ಇದುವರೆಗೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನವುದು ನಿಗೂಢ ರಹಸ್ಯವೇನೂ ಅಲ್ಲ. ಈ ಪಟ್ಟಿಗೆ ಉಡುಪಿ ಕುಂಜಿಬೆಟ್ಟುವಿನ ಮಹಿಳಾ ವೈದ್ಯೆಯೊಬ್ಬರ ಕೊಲೆ ಪ್ರಕರಣದ ತನಿಖೆಯೂ ಸೇರಿಕೊಂಡಿದೆ. ರಾಜ್ಯ ಸರಕಾರಕ್ಕೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದದ್ದೇ ಆದಲ್ಲಿ ಸಿಐಡಿ ಇಲಾಖೆಯನ್ನು ಪರಿಣಾಮಕಾರಿಯಾಗಿ ಮತ್ತು ಸಮಗ್ರವಾಗಿ ಪುನರ್ ರಚಿಸಬೇಕು. ಅದಕ್ಕೂ ಮೊದಲು ಸಿಐಡಿ ಇಲಾಖೆ ಇದುವರೆಗೆ ಮಾಡಿದ ತನಿಖೆಗಳು ಮತ್ತು ತನಿಖೆಯಲ್ಲಿನ ಯಶಸ್ವು- ಅಪಯಶಸ್ಸುಗಳ ಬಗ್ಗೆ ರಾಜ್ಯದ ಕಾಂಗ್ರೆಸ್ ಸರಕಾರ ಶ್ವೇತಪತ್ರ ಹೊರಡಿಸಬೇಕು. ಇದನ್ನೆಲ್ಲ ಮಾಡದೆ ಈ ವ್ಯವಸ್ತೆ ಎಂಬ ಅವ್ಯವಸ್ಥೆಯನ್ನು ಇದೇ ರಿತಿಯಾಗಿ ಮುಂದುವರಿಬಿಟ್ಟರೆ ಅದು ರಾಜ್ಯದ ಜನತೆಗೆ ಮಾಡುವ ಮಹಾದ್ರೋಹವಲ್ಲದೆ ಬೇರೇನೂ ಅಲ್ಲ. – ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s