ಗುತ್ತಿಗೆ ನೌಕರರ ದಿನಗೂಲಿ ಕೇವಲ 197.40 ರು.!

Posted: ಜೂನ್ 2, 2014 in Uncategorized

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಕೂಲಿ ಕಾರ್ಮಿಕರ ದಿನವೊಂದರ ಸಂಬಳ 400ರಿಂದ 500 ರು. ಇದೆ. ಆದರೆ, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ದಿನಗೂಲಿ ನೌಕರರ ದಿನವೊಂದರ ವೇತನ ಕೇವಲ 192.40 ರು.ಗಳಿಂದ 197.40 ರು.!

ರಾಜ್ಯ ವಿಧಾನಸಭಾ ಸದಸ್ಯರ ತಿಂಗಳ ವೇತನ ಈಗಾಗಲೇ 6 ಲಕ್ಷ ರು.ಗಿಂತಲೂ ಅಧಿಕವಿದೆ. ಆದರೂ ಮತ್ತೆ ಇದೀಗ ಪುನಹಾ ತಮ್ಮ ವೇತನವನ್ನು ಹೆಚ್ಚಿಸುವಂತೆ ಶಾಸಕರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಖಾಯಂ ನೌಕರರ ಸಹಿತ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿನ ನೌಕರರ ವೇತನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ ಸರಕಾರಿ ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ಆಧಾರಿತ ನೌಕರರ ವೇತನ ಮಾತ್ರ ನಿಂತ ನೀರಿನಂತೆ ಇದ್ದಲ್ಲೇ ಇದೆ. ಅಧಿಕಗೊಳ್ಳುವುದೇ ಇಲ್ಲ.

ಪೆಟ್ರೋಲ್, ಡಿಸೆಲ್, ರೈಲು, ಖಾಸಗಿ, ಸರಕಾರಿ ಸಾರಿಗೆ ಇತ್ಯಾದಿಗಳ ದರ ಏರಿಕೆಯಾಗುತ್ತಲೇ ಇದೆ. ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಕೋಟ್ಯಧಿಪತಿ ಜನಪ್ರತಿನಿಧಿಗಳಿಗೆ ಬದುಕು ಸಾಗಿಸುವುದು ಕಷ್ಟಸಾಧ್ಯವೆಂದಾದರೆ, ಗುತ್ತಿಗೆ ನೌಕರರು 5,922 ರು.ಗಳಲ್ಲಿ ಬದುಕಲು ಸಾಧ್ಯವೇ ?

ವಿವಿಧ ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ ಆಧಾರಿತ ಅಡುಗೆಯವರಾಗಿ, ಚಾಲಕರಾಗಿ ಕೆಲಸ ಮಾಡುವವರಿಗೆ ನಿಗದಿಪಡಿಸಿ ನೀಡಲಾಗುವ ವೇತನ ದಿನವೊಂದರ ಕ್ರಮವಾಗಿ 192.40 ರು. ಮತ್ತು 193.38 ರು. ಪದವೀಧರ ನೌಕರರಿಗೆ 197.40 ರು. ತಿಂಗಳ ವೇತನವನ್ನು ನೌಕರರಿಗೆ ನೀಡುವ ಸಂದರ್ಭದಲ್ಲಿ ಈ ಹಣದಿಂದಲೇ ಐಟಿ ಟ್ಯಾಕ್ಸ್ ಎಂದು 2.26 ಶೇಕಡಾ ಮತ್ತು ಸರ್ವಿಸ್ ಟ್ಯಾಕ್ಸ್ ಎಂದು 6.26 ಶೇಕಡಾ ಕಡಿತ ಮಾಡಲಾಗುತ್ತದೆ.

ವೇತನವೇ ಅತ್ಯಲ್ಪ. ವಿತರಿಸಲಾಗುವ ವೇತನದಲ್ಲೂ ಒಟ್ಟು 6.26 ಶೇಕಡಾ ಮೊತ್ತವನ್ನು ಕಡಿತ ಮಾಡಿ ನೀಡುತ್ತಾರೆಂದರೆ ತಿಂಗಳೊಂದರ ಕೇವಲ ಐದು ಸಾವಿರ ರು.ಗಳಲ್ಲಿ ಒಬ್ಬ ಗುತ್ತಿಗೆ ಆಧಾರಿತ ನೌಕರರು ಇಂದು ತಮ್ಮ ಕುಟುಂಬಗಳನ್ನು ಸಾಕಿ ಸಲಹಲು ಸಾಧ್ಯವೇ ಎಂಬ ಕನಿಷ್ಟ ಪರಿಜ್ಞಾನವೂ ರಾಜ್ಯ ಸರಕಾರಕ್ಕೆ, ಜಿಲ್ಲಾ ಇಲಾಖಾಧಿಕಾರಿಗಳಿಗೆ ಇಲ್ಲದಿರುವುದು ಅಥವಾ ಇದ್ದರೂ ಜಾಣ ಮೌನ ವಹಿಸಿರುವುದು ದುರಂತವೇ ಸರಿ.

ಈ ದರವನ್ನು ನಿಗದಿಪಡಿಸಿರುವುದು ಮಂಗಳೂರು ವೃತ್ತದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು. ಇವರಿಗೆಲ್ಲ ಸರಕಾರದ ಪ್ರತೀ ಕಾಮಗಾರಿಗಳಲ್ಲೂ ಗುತ್ತಿಗೆದಾರರೇನೂ ದೊಡ್ಡ ಮೊತ್ತದ ಕಮಿಷನ್ ನೀಡಿ ಸಾಕಬಹುದು. ಆದರೆ, ಪಾಪ ಈ ಗುತ್ತಿಗೆ ನೌಕರರಿಗೆ ಸರಕಾರಿ ವೇತನದಲ್ಲೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ. ಬೇಕಾದರೆ ಇವರೂ ಭ್ರಷ್ಟಾಚಾರ ನಡೆಸಲಿ ಎನ್ನುವುದು ಅಧಿಕಾರಿ ವರ್ಗದ ನಿಲುವು ಆಗಿರಲೂಬಹುದು.

ಲೋಕೋಪಯೋಗಿ ಅಧಿಕಾರಿಗಳು ಯಾವ ಮಾನದಂಡದ ಆಧಾರದಲ್ಲಿ ಗುತ್ತಿಗೆ ನೌಕರರಿಗೆ ದಿನಗೂಲಿ ದರವನ್ನು ನಿಗದಿಪಡಿಸಿದರು ಎಂಬುದು ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಯಾಕೆಂದರೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ದರಪಟ್ಟಿಯ ಪ್ರಕಾರ, ಕನಿಷ್ಟ 310.93 ರು.ಗಳನ್ನು ಗುತ್ತಿಗೆ ನೌಕರರಿಗೆ ನೀಡಬೇಕಾಗಿದೆ. ಆದರೆ, ಇಲ್ಲಿ ಕಾರ್ಮಿಕ ಇಲಾಖೆ ನಿಗದಿಪಡಿಸಿದ ದರವನ್ನೂ ನೀಡದೆ, ಅದನ್ನು ಕಡೆಗಣಿಸಿ ತಾವೇ ದರವೊಂದನ್ನು ನಿಗದಿಪಡಿಸಿ ಭಿಕ್ಷೆಯಂತೆ ನೌಕರರಿಗೆ ನೀಡುತ್ತಿರುವುದರ ಹಿನ್ನೆಲೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಗುತ್ತಿಗೆ ನೌಕರರು ಈಗಾಗಲೇ ಕಳೆದ ವರ್ಷವೇ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಕೇಂದ್ರ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್, ಶಾಸಕ ಪ್ರಮೋದ್ ಮಧ್ವರಾಜ್ ಮೊದಲಾದವರಿಗೆ ಮನವಿ ಸಲ್ಲಿಸಿ ತಿಂಗಳೊಂದರ ಕನಿಷ್ಟ350ರಿಂದ 400 ರು. ವೇತನ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಈ ಗುತ್ತಿಗೆ ನೌಕರರ ಬೇಡಿಕೆಯನ್ನು ಈಡೇರಿಸಲು ಯಾರೊಬ್ಬರೂ ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಆಸಕ್ತಿ ವಹಿಸಲೇ ಇಲ್ಲ.

ದಿನವೊಂದಕ್ಕೆ 197.40 ರು.ನಂತೆ ವೇತನ ನೀಡಿದರೆ ತಮಗೆ ಬದುಕು ಸಾಗಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವಾಂಶವನ್ನು ಸಚಿವರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಒಪ್ಪೋದೇ ಆದರೆ, ಇನ್ನಾದರೂ ಇವರುಗಳು ಗುತ್ತಿಗೆ ಆಧಾರಿತ ನೌಕರರ ಸಮಸ್ಯೆಯನ್ನು ಪರಿಹರಿಸುವ ಕಡೆಗೆ ಗಂಭೀರವಾಗಿ ಗಮನಹರಿಸಲಿ. ಇಲ್ಲದಿದ್ದಲ್ಲಿ ಇವರನ್ನು ಯಾಯವೊಬ್ಬ ಗುತ್ತಿಗೆ ನೌಕರನಾಗಲೀ, ಇವರುಗಳ ಕುಟುಂಬ ವರ್ಗವಾಗಲಿ ಖಂಡಿತಾ ಕ್ಷಮಿಸಲಾರದು. – ಶ್ರೀರಾಮ ದಿವಾಣ.
[tags: employments, minimum wages, village panchayats, local bodies, town panchayats, employees, labour rates, pramod madhwaraj mla, vinaya kumar sorake minister, e goverrnance department, e procurement cell, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಕರ್ನಾಟಕ ಸರಕಾರ, ಕರ್ನಾಟಕ ಸರಕಾರ, ಕಾರ್ಮಿಕ ಇಲಾಖೆ, ಕಾರ್ಮಿಕರು, ಶ್ರೀರಾಮ ದಿವಾಣ, ಕರ್ನಾಟಕ ಜನಪರ ವೇದಿಕೆ, ಜನಪರ ವೇದಿಕೆ, ಲೋಕೋಪಯೋಗಿ ಇಲಾಖೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ, ತುಟ್ಟಿಭತ್ಯೆ, ದಿನಗೂಲಿ, ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಗುತ್ತಿಗೆ ನೌಕರರು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s