ಮನಮೋಹನ್ ಸಿಂಗ್ ದಾರಿಯಲ್ಲಿ ನರೇಂದ್ರ ಮೋದಿ !

Posted: ಜೂನ್ 5, 2014 in Uncategorized
ಟ್ಯಾಗ್ ಗಳು:, , , , , , , , , , ,

# ಹೌದು, ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಹತ್ತೇ ಹತ್ತು ದಿನಗಳಲ್ಲಿಯೇ, ತನ್ನದೂ ಸಹ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ತುಳಿದ ದಾರಿಯೇ ಆಗಿದೆ ಎನ್ನುವುದನ್ನು ಹಾಲಿ ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಡಲು ಹೊರಟಿರುವುದು ಸ್ಪಷ್ಟವಾಗಿದೆ.

ಚುನಾವಣೆಗೆ ಮೊದಲು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ, ಯಾವೆಲ್ಲಾ ವಿಷಯಗಳ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರ ಎದುರಾಡಿತ್ತೋ, ಆ ವಿಷಯಗಳನ್ನೇ ಬಿಜೆಪಿ ನೃತೃತ್ವದ ಎನ್.ಡಿ.ಎ. ಸರಕಾರ ಅನುಸರಿಸುತ್ತಿರುವುದನ್ನು ನೋಡಿದರೆ, ಸಿಂಗ್ ಹತ್ತು ವರ್ಷಗಳಲ್ಲಿ ಮಾಡದೇ ಇದ್ದುದನ್ನು ಮೋದಿ ಹತ್ತೇ ತಿಂಗಳಲ್ಲಿ ಮಾಡಿಬಿಡುವಂತೆ ಕಾಣುತ್ತಿದೆ !

ಕಾಶ್ಮೀರ: 16ನೇ ಸಾರ್ವತ್ರಿಕ ಲೋಕಸಭಾ ಮಹಾಚುನಾವಣೆಯ ಬಹುತೇಕ ಫಲಿತಾಂಶಗಳೂ ಮೇ.16ರಂದು ಮಧ್ಯಾಹ್ನವೇ ಹೊರಬಂದಿತ್ತು. ಬಿಜೆಪಿ ಬಹುಮತ ಬಂದಿತ್ತು. ಮೋದಿ ಪ್ರಧಾನಿಯಾಗುವುದೂ ಸ್ಪಷ್ಟವಾಗಿತ್ತು. ಬಿಜೆಪಿ, ಸಮಘ ಪರಿವಾರದ ನಾಯಕರು,
ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಆಶ್ಚರ್ಯವೆಂದರೆ ಇದೇ ದಿನ ರಾತ್ರಿ ಗಂಟೆ 7.35ಕ್ಕೆ ಜಮ್ಮುವಿನ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ಸಮೀಪ ನಮ್ಮ ದೇಶದ ಸೇನಾ ನೆಲೆಗಳ ಮೇಲೆ ಪಾಕಿಸ್ಥಾನದ ಸೈನಿಕರು ಗುಂಡಿನ ದಾಳಿ ನಡೆಸಿ ಕದನ ವಿರಾಮವನ್ನು ಉಲ್ಲಂಘಿಸಿದ್ದರು. ಈ ಮೂಲಕ ಪಾಕ್ ಮೋದಿಯವರನ್ನು ಸ್ವಾಗತಿಸಿತ್ತು, ಗುಂಡಿನ ಸವಾಲನ್ನೂ ಹಾಕಿತ್ತು.

ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ಕಾರಣಕ್ಕೇ ಇರಬೇಕು, ಬಿಜೆಪಿ-ಸಂಘ ಪರಿವಾರದ ಯಾವೊಬ್ಬ ನಾಯಕರಾಗಲೀ, ಭಾವೀ ಪ್ರಧಾನಿಯಾಗಲೀ ಕದನ ವಿರಾಮ ಉಲ್ಲಂಘಿಸಿದ ಪಾಕ್ ಕ್ರಮದ ವಿರುದ್ಧ ಒಂದೇ ಒಂದು ಖಂಡನಾ ಹೇಳಿಕೆಯನ್ನೂ ನೀಡದೆ ಮೌನ ವಹಿಸಿತು. ಚುನಾವಣೆಗಿಂತ ಮೊದಲೇ ಏನಾದರೂ ಈ ಘಟನೆ ನಡೆಯುತ್ತಿದ್ದರೆ ಭೂಮಿಯೇ ಅಡಿ ಮೇಲಾಗಿಬಿಟ್ಟಿತು ಎಂಬಂತೆ ಇವರೆಲ್ಲ ದೇಶದ್ಯಾಂತ ಭೂಮಿ-ಆಕಾಶ ಒಂದು ಮಾಡುತ್ತಿದ್ದರೋ ಏನೋ ? ಕದನ ವಿರಾಮ ಉಲ್ಲಂಘಿಸಿದ ಪಾಕ್ಗೆ ಸರಿಯಾಗಿ ಪಾಠ ಕಲಿಸಬೇಕೆಂದೂ, ಪ್ರಧಾನಿ ಸಿಂಗ್ ಮೌನ ಮುರಿದು ಸವಾಲಿಗೆ ಪ್ರತಿ ಸವಾಲು ಹಾಕಬೇಕೆಂದೂ ಫರ್ಮಾನು ಹೊರಡಿಸುತ್ತಿದ್ದರೋ ಏನೋ ? ಚುನಾವಣೆ ಮುಗಿದು ಬಿಜೆಪಿಗೆ ಬಹುಮತ ಪ್ರಾಪ್ತಿ ಆದ ಕಾರಣವಿರಬೇಕು, ವಿರೋಧ ಪಕ್ಷದಲ್ಲಿದ್ದಾಗ ಒಂದೇ ಒಂದು ಅವಕಾಶವನ್ನೂ ಕಳೆದುಕೊಳ್ಳಬಾರದೆಂಬಂತೆ ಬೊಬ್ಬೆರಿಯುತ್ತಿದ್ದವರ ಬಾಯಿ ಬಂದಾಗಿತ್ತು !

ಜಮ್ಮು ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ ಕೇವಲ ಎಡರೇ ಎರಡು ದಿನಗಳ ಅಂತರದಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟಗಾರ ಮತ್ತು ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ, ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿದರೆ ಭಾರತಕ್ಕೆ ಒಳಿತು ಎಂಬ ಸವಾಲನ್ನೊಡ್ಡಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಯಾವುದೇ ಕೊಡುಗೆ ಕೊಡಲೂ ಸಆಧ್ಯವಾಗಲಿಲ್ಲ ಎಂಬ ಮೋದಿಯವರ ಹೇಳಿಕೆಗೆ ನೇರವಾಗಿಯೇ ಪ್ರತಿಕ್ರಿಯಿಸಿದ್ದ ಗಿಲಾನಿ, ಕಾಶ್ಮೀರದಲ್ಲಿ ನಡೆಯುತ್ತಿರುವುದು ಸ್ವಾತಂತ್ರ್ಯ ಚಳುವಳಿಯಾಗಿದ್ದು, ಈ ಚಳುವಳಿಯನ್ನು ಅರಿತುಕೊಳ್ಳುವ ಅವಕಾಶವಿದೆ ಎಂದು ತೊಡೆತಟ್ಟಿದ್ದರು.

ಗಿಲಾನಿಯ ನೇರಾನೇರ ಸವಾಲಿಗೂ ಮೋದಿ ತುಟಿ ಪಿಟಕ್ ಅನ್ನಲಿಲ್ಲ. ಸಂಘ ಪರಿವಾರವೂ ಜಾಣ ಮೌನ ತಾಳಿತು. ಇದೆಲ್ಲಕ್ಕೂ ಉತ್ತರವಾಗಿ ಮೋದಿ ತನ್ನ ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿದರು, ಯಾವುದೇ ಎಚ್ಚರಿಕೆಯನ್ನೂ ನೀಡದೆ ಮಾತುಕತೆ ನಡೆಸಿ ಕಳುಹಿಸಿಕೊಟ್ಟರು.

ಕಳೆದ ವರ್ಷ ಭಾರತ-ಪಾಕ್ ಗಡಿಯಲ್ಲಿ ಪಾಕ್ ಸೈನಿಕರು ಭಾರತದ ವೀರ ಯೋಧ ಹೇಮಂತ್ ಅವರನ್ನು ಬರ್ಬರವಾಗಿ ಕೊಂದುಹಾಕಿದ್ದರು. ಮಾತ್ರವಲ್ಲ, ದೇಹದಿಂದ ತಲೆ ಕತ್ತರಿಸಿ ತಮ್ಮ ದೇಶಕ್ಕೆ ಕೊಂಡೊಯ್ಯುವ ಮೂಲಕ ಅಮಾನುಷತೆಯನ್ನೂ ಮೆರೆದಿದ್ದರು. ನಿಯೋಜಿತ ಪ್ರಧಾನಿ ಮೋದಿ ತನ್ನ ಪ್ರಮಾಣವಚನ ಕಾರ್ಯಕ್ರಮಕ್ಕೆ ಅದೇ ಪಾಕ್ ನ ಪ್ರಧಾನಿ ಷರೀಫ್ ರನ್ನು
ಆಹ್ವಾನಿಸಿದ್ದನ್ನು ತಿಳಿದುಕೊಂಡ, ಹುತಾತ್ಮ ಹೇಮಂತ್ ಅವರ ವಿಧವೆ ಪತ್ನಿ ಧರ್ಮಾವತಿ, ದೆಹಲಿಯಲ್ಲಿ ಮೋದಿಯವರು ಷರೀಫ್ ಜೊತೆಗೆ ಕೈಕುಲುಕುತ್ತಿದ್ದಾಗ ಉತ್ತರ ಪ್ರದೇಶದ ಮಥುರಾದಲ್ಲಿ, ‘ಪಾಕ್ ಪ್ರಧಾನಿ ಷರೀಫ್ ಭಾರತಕ್ಕೆ ಕಾಲಿಡುವುದಾದರೆ ಹೊತ್ತೊಯ್ದ ತನ್ನ ಪತಿಯ ಶಿರದೊಂದಿಗೆ ಬರಲಿ’ ಎಂಬ ಬೇಡಿಕೆಯೋಂದಿಗೆ ನಿರಶನ ಕೈಗೊಂಡಿದ್ದರು.

ವಿರೋಧ ಪಕ್ಷದಲ್ಲಿದ್ದ ಅಷ್ಟೂ ವರ್ಷಗಳ ಕಾಲ ಪಾಕ್ ಗಡಿಯಿಂದ ಗುಂಡು ಹಾರಿದ್ದಕ್ಕೆ, ಪ್ರಧಾನಿ ಸಿಂಗ್ ಪಾಕ್ ಪ್ರಧಾನಿಯ ಜೊತೆ ಮಾತನಾಡಿದ್ದಕ್ಕೆಲ್ಲ ಇನ್ನೇನು ಭಾರತ ಪಾಕ್ ಕೈವಶವಾಗಿಹೋಯಿತು ಎಂಬಂತಾಡುತ್ತಿದ್ದ ಬಿಜೆಪಿ, ಸಂಘ ಪರಿವಾರ, ಮೋದಿಯವರಿಗೆಲ್ಲ ಅದೇ ಪಾಕ್ ಪ್ರಧಾನಿ ಜೊತೆಗೆ ಕೈಕುಲುಕುತ್ತಿದ್ದಾಗ ನಾಚಿಕೆಯಾದರೂ ಆಗಬೇಕಲ್ಲ ? ಇಲ್ಲ, ಅವರಿಗೇನೂ ಆಗಿರಲಾರದು. ಯಾಕೆಂದರೆ, ಅವರಿಗೆ ಅದಾಗಲೇ ಮನಮೋಹನ್ ಸಿಂಗ್ ಮಾರ್ಗವನ್ನು ಅನುಸರಿಸಿಯಾಗಿತ್ತು !

ಇವುಗಳೆಲ್ಲದರ ನಡುವೆ ಪ್ರಧಾನಿ ಮೋದಿ, ಕಾಶ್ಮೀರದಿಂದ ವಲಸೆಹೋದ ಪಂಡಿತರಿಗೆ ಮತ್ತೆ ಕಾಶ್ಮೀರದಲ್ಲೇ ಪುನರ್ವಸತಿ ಒದಗಿಸುವುದಾಗಿ ಹೇಳಿಕೊಂಡಿದ್ದಾರೆ. ಈ
ಹೇಳಿಕೆಯನ್ನೋದುವಾಗ ಒಂದೆಡೆ ಖುಷಿಯೇನೋ ಆಗುತ್ತದೆ. ಆದರೆ, ಮತ್ತೊಂದೆಡೆ ಹೀಗೆ ಸರಕಾರಿ ಪುನರ್ವಸತಿಯನ್ನು ನಂಬಿ ಕಾಶ್ಮೀರಕ್ಕೆ ಮರಳುವವರ ಜೀವಕ್ಕೆ ಸರಕಾರ ಯಾವ ಮತ್ತು ಎಷ್ಟು ಭದ್ರತೆ ಓದಗಿಸಲಿದೆ ಮತ್ತು ನಾಳೆ ಅವರುಗಳ ಜೀವಕ್ಕೇನಾದರೂ ಆದಲ್ಲಿ ಅದರ ಹೊಣೆಯನ್ನು ಬಿಜೆಪಿ ಮತ್ತೆ ಮನಮೋಹನ್ ಸಿಂಗ್ ಅವರ ತಲೆಗೆ ಕಟ್ಟಿ ಕೈಚೆಲ್ಲಲಿದೆಯೇ ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಅಧಿಕಾರಕ್ಕೆ ಬಂದ ವಾರದೊಳಗೆಯೇ ಮೊದಿ ಗಾಳಿಯಲ್ಲಿ ಗುಂಡು ಹಾರಿಸಲು ಕಲಿತುಕೊಂಡಿದ್ದಾರೆ ಎನ್ನುವುದಕ್ಕೆ ಇಂಥ
ಸ್ಪಷ್ಟತೆಯಿಲ್ಲದ ‘ಹೇಳಿಕೆಗಳು’ ಪುಷ್ಟಿ ಒದಗಿಸುತ್ತದೆ.

ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಅವರು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊಡುವ ಸಂವಿಧಾನದ 370ನೇ ಕಲಂ ಬಗ್ಗೆ ಚರ್ಚೆಯಾಗಬೇಕೆಂದು ಕರೆಕೊಟ್ಟರು. ಹೀಗೊಂದು ಕರೆಯನ್ನು ಇದುವರೆಗೂ ಯಾರೂ ಕೊಟ್ಟಿಲ್ಲ ಎಂಬಂತೆ ಸಚಿವ ಜಿತೇಂದ್ರರು ಕರೆಕೊಟ್ಟು ಸ್ವಯಂ ಬೀಗಿಕೊಂಡಿರಲೂಬಹುದು. ಆದರೆ ಎಲ್ಲರಿಗೂ ತಿಳಿದೇ ಇರುವಂತೆ 370ನೇ ಕಲಂ ಬಗ್ಗೆ ಜಮ್ಮು ಕಾಶ್ಮೀರ ರಾಜ್ಯ ಯಾವಾಗ ಭರತದೊಂದಿಗೆ ವಿಲೀನಗೊಂಡಿತೋ, ಅಂದಿನಿಂದಲೇ ಈ ಕಲಂ ಬಗ್ಗೆಯೂ ಚರ್ಚೆ ನಡೆಯುತ್ತಲೇ ಇದೆ.

ಸಚಿವ ಜಿತೇಂದ್ರರ ಹೇಳಿಕೆಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಿರುಗೇಟನ್ನೂ ಕೊಟ್ಟದ್ದಾಯಿತು. 370ನೇ ಕಲಂ ರದ್ದಾದರೆ ಕಾಶ್ಮೀರ ಭಾರತದೊಂದಿಗೆ ಇರಲಾರದು ಎಂಬುದು ಅವರ ಸ್ಪಷ್ಟ ನುಡಿ. ಇನ್ನೆರಡು ರಾಜ್ಯಗಳ ಮುಖ್ಯಮಂತ್ರಿಗಳೂ ಈ ಬಗ್ಗೆ ಗೌರವದಿಂದಲೇ ‘ದುಡುಕದಿರಿ’ ಎಂಬ ಕಿವಿಮಾತನ್ನೂ ಸಚಿವ ಜಿತೇಂದ್ರರಿಗೆ ನೀಡಿದ್ದಾಯಿತು. ಆದರೆ, ಇದಾವುದಕ್ಕೂ ನರೇಂದ್ರ ಮೋದಿಯವರ ಸಿಂಹ ಘರ್ಜನೆ ಕೇಳಿಬರಲೇ ಇಲ್ಲ !

ನಮ್ಮ ದೇಶದ ರಕ್ಷಣಾ ಇಲಾಖೆಯಲ್ಲಿ ವಿದೇಶಿ ಕಂಪೆನಿಗಳಿಗೆ 26 ಶೇಕಡಾ ಬಂಡವಾಳ ಹೂಡಲು ಡಾ.ಮನಮೋಹನ್ ಸಿಂಗ್ ರವರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತಮ್ಮ
ಆಡಳಿತಾವಧಿಯಲ್ಲಿ ಅವಕಾಶಮಾಡಿಕೊಟ್ಟಿತ್ತು. ಆಗ ವಿರೋಧ ಪಕ್ಷವಾಗಿದ್ದ ಇದೇ ಬಿಜೆಪಿ, ಸಂಘ ಪರಿವಾರ ಯುಪಿಎ ಸರಕಾರದ ಈ ನಡೆಯನ್ನು ಖಂಡಿಸಿ ದೇಶದ್ಯಾಂತ ಬೀದಿಗಿಳಿಸಿದು ಪ್ರತಿಭಟನೆ ನಡೆಸಿತ್ತು. ಅದೇ ಬಿಜೆಪಿ ಈಗ ಅಧಿಕಾರದಲ್ಲಿದೆ. ಬಿಜೆಪಿಯ ಮೋದಿ ಪ್ರಧಾನಿಯಾಗಿದ್ದಾರೆ. ಮೋದಿ ಹೇಳುತ್ತಿದ್ದಾರೆ: ‘ದೇಶದ ರಕ್ಷಣಾ ಇಲಾಖೆಯಲ್ಲಿ 100 ಶೇಕಡಾ ಬಂಡವಾಳ ಹೂಡಲು ವಿದೇಶಕ್ಕೆ ಅವಕಾಶ ಮಾಡಿಕೊಡಲಾಗುವುದು’.

ಸ್ವಾಭಿಮಾನ, ದೇಶಾಭಿಮಾನವಿರುವ ಯಾವನೇ ಒಬ್ಬ ಭಾರತೀಯನೂ ನಮ್ಮ ದೇಶದ ರಕ್ಷಣಾ ಇಲಾಖೆಯಲ್ಲಿ ನೂರು ಶೇಕಡಾ ವಿದೇಶಿ ಬಂಡವಾಳ ಹೂಡಿಕೆ (ಎಫ್.ಡಿ.ಐ.)ಗೆ ಅವಕಾಶ ಮಾಡಿಕೊಡುವ ಕ್ರಮವನ್ನು ಎಷ್ಟು ಮಾತ್ರಕ್ಕೂ ಒಪ್ಪಲಾರ, ಒಪ್ಪಬಾರದು. ಆದರೆ, ಬಿಜೆಪಿ, ಸಂಘ ಪರಿವಾರದ ಒಬ್ಬನೇ ಒಬ್ಬ ನಾಯಕನಾಗಲೀ, ಕಾರ್ಯಕರ್ತರಾಗಲಿ ಮೋದಿ ಮೇಲಿನ ಹುಚ್ಚು ಅಭಿಮಾನದ ಸಂಭ್ರಮದಲ್ಲು ತೇಲಾಡುತ್ತಿದ್ದಾರೆಯೇ ವಿನಹಾ ನಮ್ಮ ದೇಶದ ಅಳಿವು ಉಳಿವಿನ ಗಂಭೀರವಾದ ವಿಷಯವಾದ ಎಫ್.ಡಿ.ಐ. ಬಗ್ಗೆ ಚಕಾರ ಶಬ್ದ ಮಾತಾಡುತ್ತಿಲ್ಲ. ಎಲ್ಲರೂ ತಮ್ಮಗಳ ಬಾಯಿಗೆ ಬೀಗ ಹಾಕಿ ಕೈಕಟ್ಟಿ ಕುಳಿತುಕೊಂಡು ಟಿವಿ ಛಾನೆಲ್ಗಳಲ್ಲಿ ಮೋದಿಯವರನ್ನು ನೋಡುತ್ತಾ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ಮಾತಾಡಲು ಸಮರ್ಥವಾದೊಂದು ವಿರೋಧ ಪಕ್ಷವೂ ಇಲ್ಲದೆ ದೇಶ ಬಡವಾಗಿದೆ.

ದಿನ ಬಳಕೆಯ, ಅಗತ್ಯ ವಸ್ತುಗಳ ದರ ಏರಿಕೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗಿಳಿದ ಮೋದಿ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಡಿಸೆಲ್ ದರವನ್ನು ಏರಿಸುವ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾಗಿದ್ದು ಕೇವಲ ಪಕ್ಷ ಮತ್ತು ಮುಖಗಳು ಮಾತ್ರ, ಆಡಳಿತ ನೀತಿಯಲ್ಲಿ ಏನೇನೂ ಬದಲಾಗಿಲ್ಲ ಎಂಬುದನ್ನು ಜಗಜ್ಜಾಹೀರುಪಡಿಸಿದರು.

ಒಂದೆಡೆಯಿಂದ ಡಿಸೆಲ್ ದರ ಏರಿಸಿದ ಮೊದಿ ಸರಕಾರ ಮತ್ತೊಂದೆಡೆಯಲ್ಲಿ ರೈಲು ಪ್ರಯಾಣ ದರ ಏರಿಸುವದಾಗಿಯೂ ಪ್ರಕಟಿಸಿತು. ರೈಲ್ವೆ ದರ ಏರಿಕೆ ಮಾಡುವುದಾಗಿ ಘೋಷಿಸಿದ ಮೋದಿ ಸಂಪುಟದ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರು, ಅದೇ ಉಸಿರಿನಲ್ಲಿ ರೈಲ್ವೆ ದರ ಏರಿಸಲು ಕಳೆದ ಯುಪಿಎ ಸರಕಾರವೇ ಕಾರಣವೆಂದೂ, ಅವರು ಮಾಡಿಟ್ಟ ಹೊಂಡವನ್ನು ತುಂಬುವುದು ಅನಿವಾರ್ಯವಾದ ಕಾರಣ ರೈಲ್ವೆ ದರ ಏರಿಕೆ ಅನಿವಾರ್ಯವೆಂದು ತಮ್ಮ ಎಮದಿನ ಮಾತಿನ ಶೈಲಿಯಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಜನತೆಗೆ ವರದಿ ಒಪ್ಪಿಸಿದ್ದಾರೆ.

ಪ್ರಸ್ತುತದ ಎಲ್ಲಾ ಸಮಸ್ಯೆಗಳಿಗೂ, ಅವ್ಯವಸ್ಥೆಗಳಿಗೂ, ನಷ್ಟಗಳಿಗೂ, ಸಾಲಗಳಿಗೂ ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಆಡಳಿತವೇ ಕಾರಣ ಎಂಬುದನ್ನು ಚುನಾವಣೆಯ ಸಮಯದಲ್ಲೇ ಮೋದಿ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ಬಂದಿದ್ದಾರೆ. ಮತದಾರರು ಬಿಜೆಪಿಗೆ ಬಹುಮತವನ್ನೂ ಒದಗಿಸಿಕೊಟ್ಟಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕವೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಆಡಳಿತ ಪಕ್ಷವೊಂದು ಸುಮ್ಮನೇ ಆರೋಪ ಮಾಡುವುದರ ಬದಲಾಗಿ ಇಡೀ ದೇಶದ ಹಾಲಿ ಸ್ಥಿತಿ ಗತಿಗಳ ಬಗ್ಗೆ ಯಾಕೆ ಒಂದು ಸಮಗ್ರವಾದ ಶ್ವೇತಪತ್ರ ಹೊರಗೆ ತರಬಾರದು ? ಶ್ವೇತಪತ್ರ ಬಿಡುಗಡೆ ಮಾಡಿದ್ದೇ ಅದಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ ತಾನೇ ?
– ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s