ಕೊಲ್ಲೂರು ದೇವಸ್ಥಾನ ಮತ್ತು ವಿಮಲಾನಂದರ ಸಮಾಧಿ: ಒಂದು ಚರ್ಚೆ

Posted: ಜೂನ್ 12, 2014 in Uncategorized
ಟ್ಯಾಗ್ ಗಳು:, , , , , , ,

# ಅಂತರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಪ್ರತಿಷ್ಟಿತ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಮುಖರು ಹಾಗೂ ಕೆಲವು ಮಂದಿ ಅರ್ಚಕರು ಸೇರಿಕೊಂಡು ಅನಗತ್ಯವಾಗಿ ಸಾಮಾಜಿಕ ಅಶಾಂತಿಯೊಂದನ್ನು ಸೃಷ್ಟಿಸಿಬಿಟ್ಟಿದ್ದಾರೆ. ಊರಿಗೆ ಬೆಂಕಿ ಕೊಟ್ಟು ಆ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುವ ಪ್ರಕ್ರಿಯೆ ಎಂದರೆ ಇದುವೇ ಆಗಿದೆ.

ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಸ್ಥಾನ ಇರುವಂತೆಯೇ ಶ್ರೀ ನಿತ್ಯಾನಂದ ಆಶ್ರಮವೂ ಇದೆ. ಇಲ್ಲಿ ವಿತ್ಯಾನಂದ ಸ್ವಾಮೀಜಿಯವರ ಶಿಷ್ಯರೂ, ಕೊನೆಯ ಕೊಂಡಿಯೂ ಆಗಿದ್ದ ವಿಮಲಾನಂದ ಸ್ವಾಮೀಜಿಯವರು ಇದ್ದರು. ಜೂನ್ 2ರಂದು ಇವರು ಅಸ್ತಂಗತರಾದ ಹಿನ್ನೆಲೆಯಲ್ಲಿ ಅವರ ದೇಹವನ್ನು ಸಹಜವಾಗಿಯೇ ಆಶ್ರಮದ ಆವರಣದೊಳಗೆ ಸಮಾಧಿ ಮಾಡಲಾಗಿದೆ.

ಅಸ್ತಂಗತರಾದ ವಿಮಲಾನಂದರನ್ನು ಆಶ್ರಮದಲ್ಲಿ ಸಮಾಧಿ ಮಾಡಿದ್ದರಲ್ಲಿ ಯಾವುದೇ ವಿಶೇಷವಾಗಲೀ, ಆಶ್ಚರ್ಯವಾಗಲೀ ಇಲ್ಲ. ವಿಮಲಾನಂದ ಸ್ವಾಮೀಜಿಗಳನ್ನು ಸಮಾಧಿ ಮಾಡಿದ ಬಳಿಕ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯವರು ಸಮಾಧಿ ಬಗ್ಗೆ ವೃಥಾ ತಗಾದೆ ತೆಗೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು.

ಸಮಾಧಿ ಸ್ಥಳ ದೇವಸ್ಥಾನಕ್ಕಿಂತ 500 ಮೀಟರ್ ವ್ಯಾಪ್ತಿಯೊಳಗಡೆ ಇದೆ. ದೇವಸ್ಥಾನದ ಸ್ಥಳಾಚಾರ, ಸಂಪ್ರದಾಯ, ಆಗಮ ಶಾಸ್ತ್ರದ ಪ್ರಕಾರ ದೇವಸ್ಥಾನದ 500 ಮೀಟರ್
ವ್ಯಾಪ್ತಿಯಲ್ಲಿ ಸಮಾಧಿ ಮಾಡುವಂತಿಲ್ಲ. ಸಮಾಧಿ ಬಳಿ ದೇವರ ಸವಾರಿ ನಡೆಯುತ್ತದೆ. 500 ಮೀಟರ್ ವ್ಯಾಪ್ತಿಯೊಳಗೆ ಸಮಾಧಿ ಮಾಡುವ ಮೂಲಕ ದೇವಸ್ಥಾನದ ಸಂಪ್ರದಾಯವನ್ನು ಮುರಿಯಲಾಗಿದೆ. ಚ್ಯುತಿಯುಂಟುಮಾಡಲಾಗಿದೆ. ಈ ಮೂಲಕ ದೇವರಿಗೆ ಅಪಚಾರವೆಸಗಲಾಗಿದೆ ಎಂಬಿತ್ಯಾದಿಯಾಗಿ ಹೇಳುವ ಮೂಲಕ ವಿಷಯವನ್ನು ಭಾವನಾತ್ಮಕಗೊಳಿಸಲಾಗಿದೆ.

ಸಮಾಧಿ ಸ್ಥಳ ದೇವಸ್ಥಾನದ ಆವರಣದಿಂದ 500 ಮೀಟರ್ ಗಿಂತಲೂ ದೂರದಲ್ಲಿದೆ. ಸಮಾಧಿ ಮಾಡಿದ್ದು ಆಶ್ರಮದ ಆವರಣದೊಳಗಡೆಯೇ ಆಗಿದ್ದು, ಈ ಸ್ಥಳ ದೇವಸ್ಥಾನಕ್ಕೆ ಸೇರಿದ್ದಲ್ಲ ಎನ್ನುವುದು ಸ್ಪಷ್ಟವಿದೆ. ಅಂದ ಮೇಲೆ ಈ ಸ್ಥಳವನ್ನು ದೇವಸ್ಥಾನದ ಗಡಿ ಎಂದು ವಾದಿಸುವುದು ಎಷ್ಟು ಮಾತ್ರಕ್ಕೂ ಸಮಂಜಸವಾಗಲಾರದು. ಕಾನೂನಿನ ವ್ಯಾಪ್ತಿಯಲ್ಲಿ ಆಶ್ರಮ ಇರುವ ಸ್ಥಳ ದೇವಸ್ಥಾನಕ್ಕೆ ಸೇರಿದ್ದಲ್ಲ, ಆದರೆ ದೇವಸ್ಥಾನದ ಸ್ಥಳಾಚಾರ, ಸಂಪ್ರದಾಯ, ಆಗಮ ಶಾಸ್ತ್ರದ ಪ್ರಕಾರ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶಗಳು ದೇವಸ್ಥಾನದ ಗಡಿಯೇ ಆಗಿದೆ ಎಂಬ ಹೇಳಿಕೆ ವಿತಂಡವಾದವಷ್ಟೇ ಆಗುತ್ತದೆ.

ದೇವಸ್ಥಾನ ಕೊಲ್ಲೂರಿನಲ್ಲಿ ಮಾತ್ರವೇ ಇರುವುದಲ್ಲ. ಇಂದು ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ದೇವಸ್ಥಾನಗಳಿವೆ. ಪಾವಿತ್ಯ್ರತೆಯೂ ಹಾಗೆಯೇ. ಕೊಲ್ಲೂರು ದೇವಸ್ಥಾನಕ್ಕೆ ಮಾತ್ರ ಪಾವಿತ್ರ್ಯತೆ ಇರೋದಲ್ಲ. ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದ ಪಾವಿತ್ರ್ಯತೆ ಇದ್ದೇ ಇದೆ. ಕೊಲ್ಲೂರು ದೇವಸ್ಥಾನಕ್ಕೆ ಪಾವಿತ್ರ್ಯತೆ ಇದೆ, ಹಾಗಾಗಿ 500 ಮೀಟರ್ ವ್ಯಾಪ್ತಿಯ ಎಲ್ಲಾ ಪ್ರದೇಶಗಳೂ ದೇವಸ್ಥಾನಕ್ಕೇ ಸೇರಿದ್ದು, ಈ ಪ್ರದೇಶದಲ್ಲಿ ಯಾರೊಬ್ಬರ ದೇಹಗಳನ್ನೂ ಸಮಾಧಿ ಮಾಡಬಾರದು ಎನ್ನುವುದು
ಒಪ್ಪತಕ್ಕದ್ದಲ್ಲ.

ಹಿಂದಿನ ಪಾಳೇಗಾರಿಕೆ ಕಾಲದಲ್ಲಿ ಪಾಳೇಗಾರರು ಹೇಳಿದ್ದನ್ನು ಅಂದಿನ ಮುಗ್ದ ಜನರು ಮನಸ್ಸಿದ್ದೋ, ಮನಸ್ಸಿಲ್ಲದೆಯೋ, ದೇವರ ಮೇಲಿನ ಭಕ್ತಿಯೊಂದಲೋ, ಗೌರವದಿಂದಲೋ, ಪಾಳೇಗಾರರ ಮೇಲಿನ ಭಯದಿಂದಲೋ ಮೌಖಿಕವಾಗಿ ಒಪ್ಪಿಕೊಂಡದ್ದು ಇರಲೂಬಹುದು. ಹಾಗೆ ನಡೆದುಕೊಂಡಿರಲೂಬಹುದು. ಆದರೆ ಅದುವೇ ಅಂತಿಮವಲ್ಲ. ಈಗ ಪಾಳೇಗಾರಿಕೆ ಕಾಲವಲ್ಲ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಇಲ್ಲಿ ಕಾನೂನು ಕಾಯಿದೆಗಳೇ ಮುಖ್ಯವಾಗುತ್ತದೆ. ಸಾಮಾಜಿಕ ನ್ಯಾಯವೇ ಮಾನ್ಯವಾಗುತ್ತದೆ.

ಹಿಂದೆ ಜನಸಂಖ್ಯೆ ಕಡಿಮೆ ಇತ್ತು. ಅದೇ ರೀತಿ ಮನೆಗಳ ಸಂಖ್ಯೆಯೂ ಕಡಿಮೆ ಇತ್ತು. ಇಂದು ಜನಸಂಖ್ಯೆಯೂ ಹೆಚ್ಚಾಗಿದೆ. ಮನೆಗಳೂ ಅಧಿಕವಾಗಿದೆ. ಇದೇ ರೀತಿಯಾಗಿ ಹಿಂದೆ ಕಾಡು, ಗದ್ದೆ ಇದ್ದಲ್ಲಿ ಇಂದು ದೇವಸ್ಥಾನಗಳಾಗಿರಬಹುದು. ಹಿಂದೆ ದೇವಸ್ಥಾನ, ಮನೆ ಇದ್ದಲ್ಲಿ ಇಂದು ಕಾಡು, ಗದ್ದೆಗಳಾಗಿರಬಹುದು. ಒಂದು ಕಾಲದಲ್ಲಿ ನಗರಗಳಾಗಿದ್ದ ಪ್ರದೇಶ ಇಂದು ಕಾಡುಗಳಾಗಿರುವುದು, ಇಂದು ಕಾಡುಗಳಾಗಿರುವ ಸ್ಥಳಗಳು ಹಿಂದೆ ನಗರಗಳಾಗಿದ್ದುದನ್ನು ಜನರು ಓದಿ, ಕೇಳಿ ತಿಳಿದುಕೊಂಡಿದ್ದಾರೆ. ಕಾಡು, ಗದ್ದೆ, ಮನೆ, ನಗರ, ದೇವಸ್ಥಾನ ಹೀಗೆ ಇಂದೊಂದು ಚಕ್ರದ ಹಾಗೆ ಪರಿವರ್ತನೆಗೊಳಪಡುತ್ತಲೇ ಇರುವಂಥದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದೆ.

ಈ ಭೂಮಿಯಲ್ಲಿ ಮಾನವ ಜನಾಂಗದ ಸೃಷ್ಟಿಯಾದಾಗಿನಿಂದ ಸತ್ತ ಮಾನವರನ್ನು ಸಮಾಧಿ ಅಥವಾ ದಹನ ಮಾಡುತ್ತಲೇ ಬರಲಾಗಿದೆ. ಎಲ್ಲೆಲ್ಲಾ ಸಮಾಧಿ/ದಹನ ಮಾಡಲಾಗಿದೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಹಿಂದೆ ಸ್ಮಶಾನಗಳೂ ಇರಲಿಲ್ಲ. ಸತ್ತವರನ್ನು ಕಾಡುಗಳಲ್ಲೋ, ಗದ್ದೆಗಳಲ್ಲೋ, ಮನೆ ಪರಿಸರದ ಕಾಳಿ ಜಾಗದಲ್ಲೋ ಸಮಾಧಿ/ದಹನ ಮಾಡಲಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮನೆ ಪರಿಸರದ ಯಾವುದಾದರೂ ಒಂದು ಸ್ಥಳದಲ್ಲಿ ಸಮಾಧಿ/ದಹನ ಮಾಡಲಾಗುತ್ತಿದೆ.

ನನ್ನಜ್ಜನನ್ನು ಮನೆ ಪಕ್ಕದ ಗದ್ದೆಯಲ್ಲಿ ದಹನ ಮಾಡಲಾಗಿತ್ತು. ಈ ಗದ್ದೆ ಅದಕ್ಕಿಂತ ಮೊದಲು ಗದ್ದೆ ಆಗಿತ್ತೆಂದು ನನಗನಿಸುವುದಿಲ್ಲ. ಅದೇ ಗದ್ದೆ ಇದೀಗ ಅಡಿಕೆ ತೋಟವಾಗಿ ಬದಲಾಗಿದೆ. ಮುಂದೆ ಇನ್ನೇನಾದರೂ ಆಗಿ ಪರಿವರ್ತನೆ ಆಗಲೂಬಹುದು, ಯಾರಿಗೆ ಗೊತ್ತು ? ನನ್ನ ತಂದೆಯವರನ್ನು ದೇವಸ್ಥಾನವೊಂದರ ಹಿಂಭಾಗದಲ್ಲಿ ದಹನ ಮಾಡಿದ್ದೆವು. ದಹನ ಮಾಡಿದ ಸ್ಥಳ ಗದ್ದೆಯಾಗಿತ್ತು ಮತ್ತು ಆ ಗದ್ದೆ ನಮ್ಮ ಸ್ವಾಧೀನದಲ್ಲಿತ್ತು. ನನಗೆ ತಿಳಿದಂತೆ ಈ ಗದ್ದೆಯನ್ನು ಈಗ ದೇವಸ್ಥಾನದ ಆಡಳಿತ ಮಂಡಳಿ ವಶದಲ್ಲಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಈ ಗದ್ದೆಯನ್ನೂ ಸೇರಿಸಿ ದೇವಸ್ಥಾನಕ್ಕೆ ಆವರಣ ನಿರ್ಮಿಸಿದರೂ ಆಶ್ಚರ್ಯವಿಲ್ಲ. ಇದೆಲ್ಲವೂ ಒಂದು ಸಹಜವಾದ ಪ್ರಕ್ರಿಯೆ.

ಉಡುಪಿ ನಗರದ ಬೀಡಿನಗುಡ್ಡೆ ಎಂಬಲ್ಲಿ ಒಂದು ಹಿಂದೂ ರುದ್ರಭೂಮಿ ಇದೆ. ಚಿಟ್ಪಾಡಿ ಶಾರದಾಂಬ ದೇವಸ್ಥಾನ ಈ ರುದ್ರ ಭೂಮಿಯ ಅನತಿ ದೂರದಲ್ಲೇ ಇದೆ. ಉಡುಪಿ ನಗರದ ಕಲ್ಪನಾ ಟಾಕೀಸ್ ಬಳಿ ಮುಸ್ಲೀಮರ ದಫನ್ ಭೂಮಿ ಇದೆ. ಶ್ರೀಕೃಷ್ಣ ದೇವಸ್ಥಾನ, ಅನಂತೇಶ್ವರ ದೇವಸ್ಥಾನ, ಚಂದ್ರಮೌಳೀಶ್ವರ ದೇವಸ್ಥಾನ, ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಇತ್ಯಾದಿ ದೇವ-ದೈವ- ನಾಗಸ್ಥಾನಗಳು ಈ ರುದ್ರಭೂಮಿ/ದಫನ್ ಭೂಮಿಗಳ ಅನತಿ ದೂರದಲ್ಲೇ ಆಗಿದೆ. ಹೆಚ್ಚೇಕೆ ? ಕೃಷ್ಣ ದೇವಸ್ಥಾನದ ಪಕ್ಕದಲ್ಲಿಯೇ ಮಠಾಧೀಶರುಗಳ ಸಮಾಧಿ (ಬೃಂದಾವನ)ಗಳಿಲ್ಲವೇ ? ಹಾಗಾದರೆ ಈಗ ಏನು ಮಾಡೋದು ? ಇಲ್ಲಿ ಅಥವಾ ಇನ್ನಾವುದೇ ಬೇರೆ ಸ್ಥಳಗಳಲ್ಲಿ ಸ್ಮಶಾನಗಳ ಪಕ್ಕದಲ್ಲಿಯೇ ದೇವಸ್ಥಾನಗಳಿರಬಹುದು ಎಂದಾದರೆ, ಕೊಲ್ಲೂರು ದೇವಸ್ಥಾನದಿಂದ 500 ಮೀಟರ್ ದೂರದಲ್ಲಿ ಯಾಕೆ ಸಂತ ವಿಮಲಾನಂದರ ಸಮಾಧಿ ಇರಬಾರದು ?

ದೇವಸ್ಥಾನಗಳ ಆವರಣದೊಳಗೆ ಕೊಲೆಗಳಾಗಿಲ್ಲವೇ ? ದೇವಸ್ಥಾನದ ಆವರಣದೊಳಗೆ ಅನೈತಿಕ ವ್ಯವಹಾರಗಳು ನಡೆಯುತ್ತಿಲ್ಲವೇ ? ಅನೈತಿಕ ವ್ಯವಹಾರ ನಡೆಸಿ ಸಿಕ್ಕಿಬಿದ್ದವರೇ ಅರ್ಚಕರಾಗಿ ದೇವರ ಪೂಜೆ ಮಾಡುತ್ತಿಲ್ಲವೇ ? ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಪ್ರಮುಖರೇ ಆರ್ಥಿಕ ಅವ್ಯವಹಾರಗಳನ್ನು ನಡೆಸುತ್ತಿಲ್ಲವೇ ? ವೇಶ್ಯಾವಾಟಿಕೆ ದಂಧೆಯಲ್ಲಿ ಗಳಿಸಿದ ಹಣ ದೇವಸ್ಥಾನಕ್ಕೆ ಕಾಣಿಕೆಯಾಗಿ ಬರುತ್ತಿಲ್ಲವೇ ? ಇಂಥದ್ದೆಲ್ಲವೂ ನಿತ್ಯ ನಿರಂತರವಾಗಿರುವ ಆಧುನಿಕ ಕಾಲಘಟ್ಟದಲ್ಲಿ ದೇವಸ್ಥಾನಕ್ಕಿಂತ 500 ಮೀಟರ್ ದೂರದಲ್ಲಿ ಒರ್ವ ಗೌರವಾನ್ವಿತ ಸಾಧು-ಸಂತರ ಸಮಾಧಿ ಇರಬಾರದೆಂದು ವಾದಿಸುವುದು ಮೂರ್ಖತನದ ಪರಮಾವಧಿ ಎನ್ನುವುದರಲ್ಲಿ ಸಂಶಯವೇ ಇಲ್ಲ. – ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s