ಉಡುಪಿ: ಯಾವುದೇ ಪರವಾನಿಗೆ ಪಡೆಯದೆ ವ್ಯಕ್ತಿಯೋಬ್ಬರು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಉಡುಪಿ ನಗರಸಭೆಯ ಪೌರಾಯುಕ್ತರಾದ ಶ್ರೀಕಾಂತ್ ರಾವ್ ಅವರು ಕಟ್ಟಡ ಕಾಮಗಾರಿಯನ್ನು ಸ್ಥತಗೊಳಿಸುವಂತೆ ಆದೇಶಿಸಿದ ವಿಲಕ್ಷಣ ವಿದ್ಯಾಮಾನ ಬೆಳಕಿಗೆ ಬಂದಿದೆ.

ಕೇವಲ ಭ್ರಷ್ಟಾಚಾರವೊಂದೇ ಇಂಥ ಅಪರೂಪದ ಪ್ರಸಂಗಕ್ಕೆ ಕಾರಣವಾಗಿದೆ, ಹಣವಿದ್ದವರು ಯಾರು ಬೇಕಾದರೂ ನಗರಸಭೆ ಅಧಿಕೃತರಿಗೆ ಕೇಳಿದಷ್ಟು ಹಣ ಕೊಟ್ಟು ಹೊಟ್ಟೆ ತುಂಬಿಸಿದರೆ ಏನು ಬೇಕಾದರೂ ಮಾಡಿ ಸೈ ಎನ್ನಿಸಬಹುದು ಎಂಬ ಶೋಚನೀಯ ಪರಿಸ್ಥಿತಿ ಇದೀಗ ಸೃಷ್ಟಿಯಾಗಿದೆ. ಇದಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಕಾಮಗಾರಿ ಸ್ಥತಗೊಳಿಸಿದ ಪ್ರಕರಣವೇ ಒಂದು ಉಜ್ವಲ ಸಾಕ್ಷಿ ಎಂದು ಸಾರ್ವಜನಿಕರು ದೂರಿದ್ದಾರೆ.

ಕಟ್ಟಡ ಕಾಮಗಾರಿಗೆ ಯಾವುದೇ ಪರವಾನಿಗೆ ಇಲ್ಲ ಎಂಬುದನ್ನು ಆದೇಶದಲ್ಲಿ ಪೌರಾಯುಕ್ತರು ಸ್ಪಷ್ಟಪಡಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಅವರು ಆದೇಶಿಸಿದ್ದಾರೆ. ವಿಚಿತ್ರವೆಂದರೆ, ಇಷ್ಟೆಲ್ಲಾ ಇದ್ದ ಮೇಲೂ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಕಟ್ಟಡಕ್ಕೆ ಪರವಾನಿಗೆ ಪಡೆದುಕೊಳ್ಳಬಹುದು ಎಂದು ಸೂಚಿಸುವ ಮೂಲಕ ಪೌರಾಯುಕ್ತ ಶ್ರೀಕಾಂತ ರಾವ್ ಅವರು, ನಗರಸಭೆ ಅಕ್ರಮಿಗಳ ಪರವಾಗಿದೆ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಉಡುಪಿ ನಗರದ 76 ಬಡಗುಬೆಟ್ಟು ಗ್ರಾಮದ ಪಡುಬೈಲೂರು ಎಂಬಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಶ್ರೀ ಇಷ್ಟ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 9 ಮತ್ತು 10ರಂದು ಎರಡು ದಿನಗಳ ಕಾಲ ನಡೆದಿತ್ತು. ಎಂ.ಪಿ.ಗುರುರಾಜ ಉಪಾಧ್ಯಾಯ ಇವರು ಗೌರವಾಧ್ಯಕ್ಷರು, ಬಿ.ಕೃಷ್ಣಮೂರ್ತಿ ಐತಾಳ್ ಧರ್ಮದರ್ಶಿಗಳೆಂದು ಮತ್ತು ಬಿ.ಗಿರೀಶ್ ಐತಾಳ್, ನಾಗರಾಜ್ ಐತಾಳ್ ಇವರನ್ನು ಮಕ್ಕಳು ಎಂದೂ ಆಮಂತ್ರಣ ಪತ್ರದಲ್ಲಿ ಮುದ್ರಿಸಲಾಗಿತ್ತು.

ಸರ್ವೆ ನಂಬ್ರ 135/20ರ 4 ಸೆಂಟ್ಸ್ ಮತ್ತು 135/19ರ 4.50 ಸೆಂಟ್ಸ್ ಸ್ಥಳದ ಹಿಂಭಾಗದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿತ್ತು. ರತ್ನಾ ರಾವ್ ಎಂಬವರು, ದೇವಸ್ಥಾನ ಕಟ್ಟಲು ಸಂಬಂಧಿಸಿದವರಿಗೆ ಪರವಾನಿಗೆ ಇದೆಯೇ ಎಂದು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ನಗರಸಭೆಯನ್ನು ಕೋರಿದಾಗ; ‘ಪರವಾನಿಗೆ ಕೋರಿ ಇದುವರೆಗೂ ಯಾವುದೇ ಅರ್ಜಿ ಬಂದಿಲ್ಲ’ ಎಂಬ ಉತ್ತರವನ್ನು ಮಾರ್ಚ್ 29ರಂದು ನಗರಸಭೆ ಅಧಿಕಾರಿಗಳು ನೀಡಿದ್ದರು.

ಪರವಾನಿಗೆ ಪಡೆದುಕೊಳ್ಳದೆ ದೇವಸ್ಥಾನ ನಿರ್ಮಿಸಿದ ವಿಷಯ ನಗರಸಭೆ ಅಧಿಕೃತರಿಗೆ ತಿಳಿದಿದ್ದರೂ, ಜಾಣ ಮೌನ ವಹಿಸಿದ್ದರು. ನಡುವೆ ಅಕ್ರಮ ಕಟ್ಟಡಕ್ಕೆ ಕೆಲವರು ಆಕ್ಷೇಪ ದಾಖಲಿಸಿದ ಕಾರಣ, ಪ್ರಕರಣವನ್ನು ವಿಳಂಬಗೊಳಿಸುವ ಹುನ್ನಾರದ ಭಾಗವಾಗಿ ಕಡತವನ್ನು ಕಂದಾಯ ಇಲಾಖೆಗೆ ಕಳುಹಿಸುವ ಮೂಲಕ ನಗರಸಭೆ ಅಧಿಕಾರಿಗಳು ಜಾಣ ನಡೆ ಅನುಸರಿಸಿದ್ದರು. ಇದೀಗ ಇದೇ ಕಟ್ಟಡ ಅನಧಿಕೃತ ಎಂದು ಸ್ಪಷ್ಟಪಡಿಸಿರುವ ಪೌರಾಯುಕ್ತ ಶ್ರೀಕಾಂತ ರಾವ್ ಅವರು, ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ಪರವಾನಿಗೆ ಪಡೆದುಕೊಂಡು ನಿರ್ಮಾಣ ಕಾಮಗಾರಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಉಡುಪಿ ನಗರಸಭೆಯ ಈ ರೀತಿಯ ಕ್ರಮ ಅಕ್ರಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s