ಅಕ್ರಮ ಕಲ್ಲು ಗಣಿಗಾರಿಕೆ: ಖಜಾನೆಗೆ ಕೋಟಿ ಕೋಟಿ ನಷ್ಟ

Posted: ಜೂನ್ 23, 2014 in Uncategorized

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಹುನಗುಂದ, ಕೊಪ್ಪಳ ಜಿಲ್ಲೆಯ ಯಲಬುರ್ಗ, ಕುಷ್ಟಗಿ, ರಾಯಚೂರು ಜಿಲ್ಲೆಯ ಲಿಂಗಸಗೂರು, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ ಸಹಸ್ರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ.

ಗಣಿಗಾರಿಕೆಯ ರಾಜಧನ ನಷ್ಟವೇ ₨ 500 ಕೋಟಿಗೂ ಹೆಚ್ಚು, ವಾಣಿಜ್ಯ ತೆರಿಗೆ, ವ್ಯಾಟ್‌, ವಾಹನ ನೋಂದಣಿ ಶುಲ್ಕ ಸೇರಿದರೆ ವರ್ಷಕ್ಕೆ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಂಚನೆ­ಯಾ­ಗುತ್ತಿದೆ ಎಂದು ಬಾಗಲಕೋಟೆ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಕ್ರಮ ಗಣಿಗಾರಿಕೆ ಮತ್ತು ರಾಜಧನ ನಷ್ಟದ ಬಗ್ಗೆ ಈ ಹಿಂದೆ ಲಿಂಗಸಗೂರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವರದಿ ನೀಡಿದ ಅಧಿಕಾರಿಗಳೇ ವರ್ಗಾವಣೆ­ಯಾದರು ಎಂದು ಅವರು ಹೇಳುತ್ತಾರೆ.

ನಾಲ್ಕು ಜಿಲ್ಲೆಗಳಲ್ಲಿ ಕಲ್ಲು ಗಣಿ­ಗಾರಿಕೆ ನಡೆಯುತ್ತಿದ್ದರೂ ಅದ­ಕ್ಕೆಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳ­ಕಲ್‌. ಇಲ್ಲಿನ ವ್ಯವಸ್ಥೆ ಯಾವುದೇ ಸರ್ಕಾರ­ವನ್ನು ನಾಚಿಸುವಂತೆ ಇದೆ. ಪಟ್ಟಣದ ಒಳಗೇ ಗ್ರಾನೈಟ್‌ ಪಾಲಿಶಿಂಗ್‌ ಘಟಕಗಳು ಇವೆ. ಗ್ರಾಮಗಳ ಒಳಗೇ ಗಣಿಗಾರಿಕೆ ನಡೆ­ಯುತ್ತಿದೆ. ಕೆರೆ, ಹಳ್ಳ, ಕಾಲುವೆ, ಗೋಮಾಳ, ಜಲಾಶಯ, ಹೀಗೆ ಯಾವುದೇ ಸ್ಥಳವನ್ನೂ ಗಣಿಗಾರಿಕೆ ಬಿಟ್ಟಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ 111, ಬಾಗಲಕೋಟೆ ಜಿಲ್ಲೆಯಲ್ಲಿ 32 ಗಣಿ ಗುತ್ತಿಗೆ ನೀಡಲಾಗಿದೆ. ಇವುಗಳಲ್ಲಿ ಬಹುತೇಕ ಗಣಿಗಳ ಗುತ್ತಿಗೆ ಅವಧಿ ಮುಗಿದು ಹೋಗಿದೆ. ಆದರೆ ಗಣಿಗಾರಿಕೆ ಮಾತ್ರ ನಿಂತಿಲ್ಲ. ‘ಇದೆಲ್ಲ ಗೊತ್ತಿದ್ದೂ ಯಾವುದೇ ಕ್ರಮ ಕೈಗೊಳ್ಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ’ ಎನ್ನುತ್ತಾರೆ ಅಧಿಕಾರಿಗಳು.

ಅಧಿಕೃತವಾಗಿ ಪರವಾನಗಿ ಪಡೆದ ಗಣಿಗಳಲ್ಲದೆ ಬಾಗಲಕೋಟೆ ಜಿಲ್ಲೆಯ­ಲ್ಲಿಯೇ ಸುಮಾರು 700 ಗಣಿ ಸ್ಥಳ­ಗಳಿವೆ. ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿಯೂ ಅನಧಿಕೃತ ಗಣಿಗಾರಿಕೆ ಇಷ್ಟೇ ಪ್ರಮಾಣ­ದಲ್ಲಿವೆ. ಬೃಹತ್‌ ಯಂತ್ರಗಳು ಕಲ್ಲುಗಳನ್ನು ಸಾಗಿಸುತ್ತಿವೆ. ಭಾರೀ ಸ್ಫೋಟಕಗಳು ಶಬ್ದ ಮಾಡುತ್ತಿವೆ. ಕಡೂರು, ಅಂಟರತಾಣ, ಪುರಚಗೇರಿ, ಕಲ್ಲು ಗೋನಾಳ (ಕಲ್ಲೂರು), ಬಂಡರಗಲ್ಲು, ಹೂಲಗೇರಿ, ಸೇಬಿನಕಟ್ಟಿ, ಮನ್ನೇರಾಳ, ಬಲಕುಂದಿ, ಹೊಸೂರು, ಹನುಮಸಾಗರ ಮುಂತಾದ ಗ್ರಾಮಗಳ ಒಡಲಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿನ ಬಹಳಷ್ಟು ಮನೆಗಳು ಬಿರುಕು ಬಿಟ್ಟಿವೆ. ಸ್ಫೋಟದ ಶಬ್ದ ಜನರ ನಿದ್ದೆಗೆಡಿಸಿದೆ. ಈ ಬಗ್ಗೆ ದೂರು ನೀಡಲು ಹೋದರೆ ‘ಗ್ರಾಮವನ್ನೇ ಬೇರೆಡೆಗೆ ಸ್ಥಳಾಂತರಿಸಿ. ಅದಕ್ಕೆ ನಾವೂ ಸಹಾಯ ಮಾಡುತ್ತೇವೆ ಎನ್ನುತ್ತಾರೆ ಗಣಿ ಮಾಲೀಕರು’ ಎಂದು ಮುದಗಲ್‌ನ ಶರಣಪ್ಪ ಗೋಳು ಹೇಳಿಕೊಳ್ಳುತ್ತಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನಲ್ಲಿ 32 ಅಧಿಕೃತ ಕಲ್ಲು ಗಣಿಗಾರಿಕೆ ಪರವಾನಗಿ ಇವೆ. ಅದರಲ್ಲಿ 23 ಗಣಿ ಪರವಾನಗಿ ಅವಧಿ ಮುಗಿದು ಹೋಗಿದೆ. ಆದರೆ ಗಣಿಗಾರಿಕೆ ಮಾತ್ರ ನಿಂತಿಲ್ಲ. ಒಂದು ಘನ ಮೀಟರ್‌ ಕಲ್ಲು ತೆಗೆದರೆ ಅದರ ಗುಣಮಟ್ಟಕ್ಕೆ ಅನುಗುಣವಾಗಿ ₨ 2,500 ರಿಂದ ₨ 4 ಸಾವಿರ ರಾಜ­ಧನ ನೀಡಬೇಕು. ದಿನಕ್ಕೆ ಒಂದು ಗಣಿ ಪ್ರದೇಶದಲ್ಲಿ ಕನಿಷ್ಠ 2 ಘನ ಮೀಟರ್‌ ಕಲ್ಲು ಹೊರ ತೆಗೆಯಲಾಗು­ತ್ತದೆ.

ಅಂದರೆ ಒಂದು ಗಣಿಯಿಂದ ದಿನಕ್ಕೆ ಕನಿಷ್ಠ ₨ 5 ಸಾವಿರ ರಾಜಧನ ಬರಬೇಕು. ಆದರೆ ಈಗ ಗಣಿ­ಗಾರಿಕೆಗೇ ಪರವಾನಗಿ ಇಲ್ಲದೇ ಇರುವುದರಿಂದ ಆ ಹಣ ಸರ್ಕಾರದ ಬೊಕ್ಕಸಕ್ಕೆ ಬರುತ್ತಿಲ್ಲ ಎಂದು ಹಿರಿಯ ಭೂ ವಿಜ್ಞಾನಿಯೊಬ್ಬರು ಮಾಹಿತಿ ನೀಡುತ್ತಾರೆ.

ಹುನಗುಂದ ತಾಲ್ಲೂಕಿನಲ್ಲಿ 316 ಗ್ರಾನೈಟ್‌ ಕಟಿಂಗ್‌ ಮತ್ತು ಪಾಲಿಶಿಂಗ್‌ ಘಟಕಗಳಿವೆ. ಅವುಗಳಲ್ಲಿ ಇಳಕಲ್‌ ಪಟ್ಟಣದಲ್ಲಿಯೇ 200ಕ್ಕೂ ಹೆಚ್ಚು ಇವೆ. ಕುಷ್ಟಗಿ­ಯಲ್ಲಿ 96 ಘಟಕಗಳು ಇವೆ. ಒಂದು ಘಟಕ­ದಲ್ಲಿ ಕನಿಷ್ಠ 3 ಯಂತ್ರಗಳಿವೆ. ಅಂದರೆ ಹುನಗುಂದ ತಾಲ್ಲೂಕಿನಲ್ಲಿಯೇ ಒಂದು ಸಾವಿರಕ್ಕೂ ಹೆಚ್ಚು ಪಾಲಿಶಿಂಗ್‌ ಯಂತ್ರಗಳಿವೆ. ಅಧಿಕೃತ ಗಣಿಗಾರಿಕೆಯಿಂದ ದಿನಕ್ಕೆ 500 ಘನ ಮೀಟರ್‌ ಕಲ್ಲು ಗಣಿಗಾರಿಕೆ ಮಾಡ­ಬಹುದು. ಆದರೆ ಹುನಗುಂದ, ಕುಷ್ಟಗಿ, ಲಿಂಗಸಗೂರು ಮುಂತಾದ ಕಡೆ ಇರುವ ಗ್ರಾನೈಟ್‌ ಪಾಲಿಶಿಂಗ್‌ ಘಟಕಗಳಲ್ಲಿ ಪ್ರತಿ ದಿನ ಕನಿಷ್ಠ 5 ಸಾವಿರ ಘನ ಮೀಟರ್‌ ಗ್ರಾನೈಟ್‌ ಕಟಿಂಗ್‌ ಆಗುತ್ತಿದೆ. ಅಂದರೆ ಇಲ್ಲಿಗೆ ಬರುವ ಬಹುತೇಕ ಕಲ್ಲುಗಳು ಅಕ್ರಮ ಗಣಿಗಾರಿಕೆಯಿಂದಲೇ ಬರುತ್ತವೆ ಎನ್ನುವುದಕ್ಕೆ ಅನುಮಾನವೇ ಇಲ್ಲ.

ದಿನಕ್ಕೆ 5 ಸಾವಿರ ಘನ ಮೀಟರ್‌ ಕಲ್ಲು ಗಣಿಗಾರಿಕೆ ಎಂದರೆ ₨ 1.25 ಕೋಟಿ ರಾಜಧನ. ವರ್ಷಕ್ಕೆ ಸುಮಾರು ₨ 500 ಕೋಟಿ ಸರ್ಕಾರಕ್ಕೆ ವಂಚನೆ­ಯಾಗು­ತ್ತಿದೆ ಎಂದು ಅವರು ಲೆಕ್ಕ ಕೊಡುತ್ತಾರೆ. ಇದು ಕೇವಲ ಗಣಿಗಾರಿಕೆಯ ರಾಜಧನದ ಲೆಕ್ಕ. ಈ ಪ್ರದೇಶಗಳಲ್ಲಿ ಇರುವ ಗ್ರಾನೈಟ್‌ ಕಟಿಂಗ್‌ ಮತ್ತು ಪಾಲಿಶಿಂಗ್‌ ಘಟಕಗಳಿಂದ ಹೊರಬರುವ ಗ್ರಾನೈಟ್‌ಗಳ ಮೇಲಿನ ವಾಣಿಜ್ಯ ತೆರಿಗೆ, ವ್ಯಾಟ್‌, ಸಾರಿಗೆ ವೆಚ್ಚ ಮುಂತಾದವು­ಗಳೂ ನಷ್ಟವಾಗುತ್ತಿವೆ.

ಹುನಗುಂದ ತಾಲ್ಲೂಕಿನ ಗ್ರಾನೈಟ್‌ ಕಟಿಂಗ್‌ ಮತ್ತು ಪಾಲಿಶಿಂಗ್‌ ಘಟಕಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ನೋಂದಣಿಯಾಗಿಲ್ಲ. ಅಲ್ಲದೆ ಈ ಘಟಕಗಳಿಂದ ಗ್ರಾನೈಟ್‌ ಸಾಗಿಸಲು ಪರವಾನಗಿ ನೀಡಿಲ್ಲ ಎಂದು ಬಾಗಲಕೋಟೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಪರವಾನಗಿ ಇಲ್ಲದೇ ಇದ್ದರೂ ನೂರಾರು ಟ್ರಕ್‌ಗಳು ಗ್ರಾನೈಟ್‌ ಸಾಗಿಸುತ್ತಿವೆ. ಕಟಿಂಗ್‌ ಮತ್ತು ಪಾಲಿಶಿಂಗ್‌ ಘಟಕಗಳಲ್ಲಿ ಇರುವ ಜೆಸಿಬಿ ಯಂತ್ರಗಳು, ತ್ಯಾಜ್ಯ ಮತ್ತು ಕಲ್ಲುಗಳನ್ನು ಸಾಗಿಸುವ ಬಹುತೇಕ ವಾಹನ­ಗಳು ನೋಂದಣಿಯೇ ಆಗಿಲ್ಲ. ಇಡೀ ದಿನ ಅವು ಅನಧಿಕೃತವಾಗಿ ರಸ್ತೆಯಲ್ಲಿ ಸಂಚರಿಸುತ್ತಿವೆ.

‘ಅಕ್ರಮ ಕಲ್ಲು ಗಣಿಗಾರಿಕೆ 3–4 ಜಿಲ್ಲೆಗಳಲ್ಲಿ ನಡೆ­ಯುತ್ತಿದ್ದರೂ ಅದಕ್ಕೆ ಕೇಂದ್ರ ಬಿಂದು ಇಳಕಲ್‌. ಎರಡು ದಶಕಗಳಿಂದ ಇಲ್ಲಿ ‘ಇಳಕಲ್‌ ರಿಪಬ್ಲಿಕ್‌’ ವ್ಯವಸ್ಥೆ ಜಾರಿಯಲ್ಲಿದೆ. ಈ ದೇಶದ ಯಾವುದೇ ಕಾನೂನು ಇಲ್ಲಿ ಚಾಲ್ತಿಯಲ್ಲಿ ಇಲ್ಲ. ಅರಾಜಕತೆ ಇದೆ. ಎಲ್ಲ ಕಾನೂನು­ಗಳನ್ನು ಮುರಿದು ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ.

ಅದನ್ನು ತಡೆಯಲು ಯತ್ನಿಸುವವರ ವಿರುದ್ಧ ದಬ್ಬಾಳಿಕೆ ನಡೆಯುತ್ತದೆ. ಅಧಿಕಾರಿಗಳು ವರ್ಗಾವಣೆಯಾಗು­ತ್ತಾರೆ’ ಎಂದು ಜನ ಜಾಗೃತಿ ವೇದಿಕೆಯ ಅಣ್ಣಾಜಿ­ರಾವ್‌ ಕೋರೆನವರ ಹೇಳುತ್ತಾರೆ.

ಅಕ್ರಮ ಕಲ್ಲು ಗಣಿಗಾರಿಕೆ: ಅಧಿಕಾರಿಗಳಿಗೇ ಗೊತ್ತಿಲ್ಲ!
ಸರ್ಕಾರದ ದಾಖಲೆಗಳ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಆದರೆ ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದಿಂದ ಮೂರ್‍ನಾಲ್ಕು ಕಿ.ಮೀ. ದೂರದ ವರ್ಕನಳ್ಳಿ ರಸ್ತೆಯಲ್ಲಿ ಐದಾರು ಘಟಕ­ಗಳು ನಿತ್ಯ ಕಲ್ಲು ಗಣಿಗಾರಿಕೆ ನಡೆಸುತ್ತಿವೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ­ಗಳು ನೀಡಿರುವ ಮಾಹಿತಿಯ ಪ್ರಕಾರ ಯಾದಗಿರಿ ಹಾಗೂ ಶಹಾಪುರ ತಾಲ್ಲೂಕಿನಲ್ಲಿ ಕಲ್ಲು ಗಣಿ­ಗಾರಿಕೆ ನಡೆಸಲು ಸುರಕ್ಷಿತ ವಲಯವನ್ನು ಗುರುತಿಸ­ಲಾಗಿದೆ. ಯಾದಗಿರಿ ತಾಲ್ಲೂಕಿನ ಹಳಿಗೇರಾದಲ್ಲಿ 18 ಹಾಗೂ ಶಹಾಪುರ ತಾಲ್ಲೂಕಿನ ತಡಿಬಿಡಿ­ಯಲ್ಲಿ 13 ಘಟಕಗಳನ್ನು ನಡೆಸಲು ಸ್ಥಳವನ್ನು ಗುರುತಿಸಲಾಗಿದೆ. ಆದರೆ ಇದುವರೆಗೆ ಕಲ್ಲು ಗಣಿ­ಗಾರಿಕೆ ನಡೆಸುವ ಯಾವ ಕಂಪೆನಿಗಳೂ ರಾಜಧನ ನೀಡಿ, ಇಲ್ಲಿ ಕಲ್ಲು ಗಣಿಗಾರಿಕೆ ಆರಂಭಿಸಲು ಮುಂದಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಇನ್ನೊಂದೆಡೆ ನಗರದ ಸುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಲ್ಲು ಗಣಿ­ಗಾರಿಕೆಯ ಬಗ್ಗೆ ಯಾವುದೇ ವರದಿ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ವಿಶೇಷ ವರದಿ: ರವೀಂದ್ರ ಭಟ್ಟ. (ಕೃಪೆ: ಪ್ರಜಾವಾಣಿ, 23.06.14.)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s