ರಾಜ್ಯಪಾಲರ ಘನತೆಗೆ ಧಕ್ಕೆ ಬಾರದಿರಲಿ

Posted: ಜೂನ್ 23, 2014 in Uncategorized

# ದೇಶದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಇದೀಗ, ಬೇರೆ ಬೇರೆ ರಾಜ್ಯಗಳಲ್ಲಿ ಬೇರು ಬಿಟ್ಟಿರುವ ರಾಜ್ಯಪಾಲರು ತಲೆನೋವಾಗಿ ಪರಿಣಮಿಸಿದ್ದಾರೆ. ಈಗ ಇರುವ ರಾಜ್ಯಪಾಲರು ತಮ್ಮ ಗಂಟು ಮೂಟೆಯೊಂದಿಗೆ ಮನೆಗೆ ವಾಪಸಾಗುವುದನ್ನು ಹಲವು ಬಿಜೆಪಿ ಹಿರಿಯ ನಾಯಕರು ನಿದ್ದೆ ಬಿಟ್ಟು ಕಾಯುತ್ತಿದ್ದಾರೆ. ಕೆಲವು ರಾಜ್ಯಪಾಲರ ಅವಧಿ ಮುಗಿಯುತ್ತಾ ಬಂದಿದೆಯಾದರೂ, ಇನ್ನು ಕೆಲವು ರಾಜ್ಯಪಾಲರ ಅವಧಿ ಮುಗಿಯಲು ಇನ್ನೂ ಎರಡು, ಮೂರು ವರ್ಷಗಳಿವೆ.

ಕರ್ನಾಟಕದ ರಾಜ್ಯಪಾಲರಾದ ಭಾರದ್ವಾಜ್ ಅವರ ಅಧಿಕಾರಾವಧಿ ಮುಂದಿನ ಜೂ. 29ಕ್ಕೆ ಮುಗಿಯುತ್ತದೆ. ಹಾಗೆಯೇ ಹರ್ಯಾಣ, ರಾಜಸ್ತಾನ, ಗುಜರಾತ್, ಅಸ್ಸಾಮ್ ರಾಜ್ಯಪಾಲರ ಅವಧಿಯೂ ಇದೇ ವರ್ಷ ಕೊನೆಯಾಗುತ್ತದೆ. ಆದರೆ ಉಳಿದೆಲ್ಲರ ಅವಧಿ ಮುಂದಿನ ವರ್ಷಕ್ಕೆ ವಿಸ್ತರಿಸುತ್ತದೆ. ಕೇರಳದ ರಾಜ್ಯಪಾಲೆ ಶೀಲಾ ಧೀಕ್ಷಿತ್ ಅವರ ಅವಧಿಯಂತೂ 2019ರವರೆಗೆ ವಿಸ್ತರಿಸುತ್ತದೆ.

ಇತ್ತ ಬಿಜೆಪಿಯ ಹಲವು ಹಿರಿಯರು ರಾಜ್ಯಪಾಲರ ಹುದ್ದೆಗೆ ಕಣ್ಣಿಟ್ಟು ಕಾಯುತ್ತಿದ್ದಾರೆ. ಯಶವಂತ್ ಸಿನ್ಹಾ, ಕಲ್ಯಾಣ್ ಸಿಂಗ್, ವಿ. ಕೆ. ಮಲ್ಹೋತ್ರಾ, ಓ. ರಾಜಗೋಪಾಲ್, ರಾಮ್ ನಾಯಕ್, ಕೇಸರಿನಾಥ್ ತ್ರಿಪಾಠಿ…ಹೀಗೆ ರಾಜ್ಯಪಾಲರ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೇಂದ್ರದಲ್ಲಿ ಸೂಕ್ತ ಸ್ಥಾನ ಸಿಗದ ಹಲವರಿಗೆ ರಾಜ್ಯಪಾಲರ ಸ್ಥಾನದ ಭರವಸೆಯನ್ನು ಕೊಡಲಾಗಿದೆ. ಆದರೆ ಭರವಸೆಯನ್ನು ಈಡೇರಿಸಬೇಕಾದರೆ ಮೊದಲು, ಇರುವ ರಾಜ್ಯಪಾಲರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾಗುತ್ತದೆ. ಬಿಜೆಪಿ ಈಗಾಗಲೇ ಬೇರೆ ಬೇರೆ ರೂಪದಲ್ಲಿ ರಾಜ್ಯಪಾಲ ರನ್ನು ಕೆಳಗಿಳಿಯಲು ಸೂಚನೆ ನೀಡಿದೆ. ಪತ್ರವೂ ಹೋಗಿದೆ. ಗೃಹ ಸಚಿವ ರಾಜ್‌ನಾಥ್ ಸಿಂಗ್, ಪರೋಕ್ಷವಾಗಿ ‘‘ನಾನು ರಾಜ್ಯಪಾಲನಾಗಿದ್ದಿದ್ದರೆ ಈ ಹೊತ್ತಿಗೆ ರಾಜೀನಾಮೆ ನೀಡಿ ಆಗುತ್ತಿತ್ತು’’ ಎನ್ನುವ ಮೂಲಕ ‘ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ’ ಎಂಬ ಧ್ವನಿ ಬರುವಂತೆ ಮಾತನಾಡಿದ್ದಾರೆ. ಆದರೆ ರಾಜ್ಯಪಾಲರು ಮಾತ್ರ ಜಪ್ಪಯ್ಯ ಅಂದರೂ ಅಲುಗಾಡುತ್ತಿಲ್ಲ. ರಾಜ್ಯಪಾಲರು ಕೇಂದ್ರ ಸರಕಾರದ ಪಾಲಿಗೆ ಗಂಟಲಿನ ಮುಳ್ಳಾಗಿ ಸಿಕ್ಕಿಕೊಂಡಿದ್ದಾರೆ.

ಒಂದು ರೀತಿಯಲ್ಲಿ ಬಿಜೆಪಿಯ ಇಂದಿನ ಸ್ಥಿತಿಗೆ ಸ್ವತಃ ಬಿಜೆಪಿ ನಾಯಕರೇ ಕಾರಣ. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ, ಕೆಲವು ರಾಜ್ಯಗಳಲ್ಲಿ ಎನ್‌ಡಿಎ ನೇಮಿಸಿದ ರಾಜ್ಯಪಾಲರು ಅಸ್ತಿತ್ವದಲ್ಲಿದ್ದರು. ಯುಪಿಎ ಸರಕಾರ ಅವರನ್ನು ಕಿತ್ತೊಗೆಯಲು ಮುಂದಾಯಿತು. ಆಗ ಇದೇ ಬಿಜೆಪಿಯ ಮುಖಂಡರು ಆಕಾಶ-ಭೂಮಿ ಒಂದು ಮಾಡಿದರು. ರಾಜ್ಯಪಾಲರ ಸ್ಥಾನ ಘನತೆಯಿಂದ ಕೂಡಿದ್ದು. ಅದರಲ್ಲಿ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ಅವರ ಅಧಿಕಾರಾವಧಿ ಇರುವವರೆಗೆ ಮುಂದು ವರಿಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದರು. ಅಂದಿನ ವಿಪಕ್ಷ ನಾಯಕ ಎಲ್.ಕೆ.ಅಡ್ವಾಣಿಯವರು ಯುಪಿಎ ಸರಕಾರದ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಓರ್ವ ರಾಜ್ಯಪಾಲರು ಯುಪಿಎಯ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ಅದರ ಪರಿಣಾಮವಾಗಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿತು. ಇದೀಗ ಅದೇ ಸುಪ್ರೀಂಕೋರ್ಟ್‌ನ ತೀರ್ಪು ಎನ್‌ಡಿಎ ನೇತೃತ್ವದ ಸರಕಾರಕ್ಕೆ ಮುಳುವಾಗಿದೆ. ಯಾವುದೇ ಕಾರಣಕ್ಕೂ ತನ್ನ ಮೂಗಿನ ನೇರಕ್ಕೆ ಸರಕಾರ ರಾಜ್ಯಪಾಲರನ್ನು ಕಿತ್ತು ಹಾಕುವಂತಿಲ್ಲ, ಅದಕ್ಕಾಗಿ ಸೂಕ್ತ ಮಾನದಂಡಗಳನ್ನು ಅನುಸರಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇಂದು ಬಿಜೆಪಿಯ ಕೈಯನ್ನು ಕಟ್ಟಿ ಹಾಕಿದೆ. ಆ ಕಾರಣದಿಂದಲೇ ಯುಪಿಎ ಸರಕಾರ ನೇಮಿಸಿದ ರಾಜ್ಯಪಾಲರನ್ನು ಕಿತ್ತೊಗೆಯಲು ಹಿಂದೆ ಮುಂದೆ ನೋಡುತ್ತಿದೆ. ರಾಜ್ಯಪಾಲರೇ ಸ್ವಯಂ ಕೆಳಗಿಳಿಯ ಬೇಕು ಎಂದು ಒತ್ತಡ ಹೇರುತ್ತಿದೆ. ಒಂದು ರೀತಿಯಲ್ಲಿ ತಾನು ಹೆಣೆದ ಬಲೆಗೆ ತಾನೇ ಬಿದ್ದು ಒದ್ದಾಡುವಂತಾಗಿದೆ ಬಿಜೆಪಿಗೆ.

ರಾಜ್ಯಪಾಲರ ಹುದ್ದೆ ರಾಜಕೀಯೇತರ ವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆತ ಯಾವ ಪಕ್ಷಕ್ಕೇ ಸೇರಲಿ. ಅವನು ಆ ಸ್ಥಾನವನ್ನು ವಹಿಸಿಕೊಂಡಾಕ್ಷಣದಿಂದ ರಾಷ್ಟ್ರಪತಿ ಯನ್ನು ಪ್ರತಿನಿಧಿಸುವ, ಪ್ರಜಾಸತ್ತೆಯ ಕಾವಲುಗಾರನಾಗಿ ಕೆಲಸ ಮಾಡಬೇಕಾಗುತ್ತದೆ. ರಾಜ್ಯ ಮತ್ತು ಕೇಂದ್ರದ ನಡುವಿನ ಸೇತುವೆ ಯಾಗಿ ತನ್ನ ಕಾರ್ಯವನ್ನು ನಿರ್ವಹಿಸಬೇಕಾ ಗುತ್ತದೆ. ಒಂದು ರಾಜ್ಯದಲ್ಲಿ ಸರಕಾರ ಹೇಗೆ ಆಡಳಿತ ನಡೆಸುತ್ತಿದೆ, ಅಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ, ಸಂವಿಧಾನಕ್ಕೆ ಧಕ್ಕೆ ತರುವಂತಹ ಸನ್ನಿವೇಶ ನಿರ್ಮಾಣವಾಗಿದೆಯೋ ಎಂಬಿತ್ಯಾದಿಗಳ ಕುರಿತಂತೆ ಕಾಲ ಕಾಲಕ್ಕೆ ರಾಷ್ಟ್ರಪತಿಗೆ ವರದಿ ಸಲ್ಲಿಸುವುದು ರಾಜ್ಯಪಾಲರ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯಪಾಲರನ್ನು ಆಯ್ಕೆ ಮಾಡುವಾಗಲೇ ಅವರಲ್ಲಿ ಅಂತಹ ವ್ಯಕ್ತಿತ್ವವನ್ನು ಗುರುತಿಸಿ ಆಯ್ಕೆ ಮಾಡಬೇಕಾಗುತ್ತದೆ. ಕಾನೂನು, ಸಂವಿಧಾನ, ಆಡಳಿತದ ಕುರಿತಂತೆ ಅಪಾರ ಅನುಭವವುಳ್ಳವರನ್ನು ಅವರು ನೇಮಕ ಮಾಡಬೇಕಾಗುತ್ತದೆ. ಆಗ ಯಾವ ಸರಕಾರ ಬಂದರೂ ಅವರನ್ನು ವಜಾಗೊಳಿಸುವ ಸನ್ನಿವೇಶ ಏರ್ಪಡುವುದಿಲ್ಲ.

ಸರಕಾರ ಬದಲಾದಂತೆ ರಾಜ್ಯಪಾಲರನ್ನೂ ಬದಲಿಸುವುದು ಸಂವಿಧಾನಕ್ಕೆ ಮಾಡುವ ಅಗೌರವ. ಹಾಗೆಯೇ ರಾಜ್ಯಪಾಲರ ಘನತೆಗೂ ಅದು ತಕ್ಕುದಲ್ಲ. ಹೀಗೆ ಬದಲಾವಣೆ ಮಾಡುವ ಪರಿಪಾಠ ಮುಂದುವರಿದರೆ, ಮುಂದೆ ಕೇಂದ್ರ ಸರಕಾರ ಬದಲಾದಾಗ ರಾಷ್ಟ್ರಪತಿಯೂ ಬದಲಾಗುವ ಸನ್ನಿವೇಶ ಎದುರಾದೀತು. ಹೇಗೆ ಹೊಸ ಸರಕಾರ ರಾಷ್ಟ್ರಪತಿ ಯನ್ನು ಒಪ್ಪಿಕೊಂಡಿದೆಯೋ ಹಾಗೆಯೇ ರಾಜ್ಯಪಾಲರನ್ನು ಒಪ್ಪಿಕೊಳ್ಳುವುದು ನೂತನ ಸರಕಾರದ ಕರ್ತವ್ಯವಾಗಿದೆ. ಆದುದರಿಂದ ಕೇಂದ್ರ ಸರಕಾರ ಯಾವ ಕಾರಣಕ್ಕೂ ರಾಜ್ಯಪಾಲರನ್ನು ಬಲವಂತವಾಗಿ ಕೆಳಗಿಳಿಸಲು ಮುಂದಾಗಬಾರದು. ಇಂದು ಬರೇ ಎನ್‌ಡಿಎ ಸರಕಾರಕ್ಕೆ ಮಾತ್ರವಲ್ಲ, ಮುಂದೆ ಯಾವ ಸರಕಾರ ಬಂದರೂ ಅನ್ವಯವಾಗು ವಂತಿರಬೇಕು. ದೇಶದಲ್ಲಿ ಎನ್‌ಡಿಎ ಸರಕಾರ ವೇನೂ ಶಾಶ್ವತಲ್ಲ. ಇಂದು ಎನ್‌ಡಿಎ ಸರಕಾರ ರಾಜ್ಯಪಾಲ ಸ್ಥಾನವನ್ನು ಗೌರವಿಸಿ, ಅಧಿಕಾರ ದಲ್ಲಿರಲು ಅವಕಾಶ ಕೊಟ್ಟರೆ ಯುಪಿಎ ಸರಕಾರವೂ ಆ ಪರಂಪರೆಯನ್ನು ಮುಂದು ವರಿಸಿಕೊಂಡು ಹೋಗಬಹುದು. ಈ ಮೂಲಕ ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಂತಾಗುತ್ತದೆ. (ಕೃಪೆ: ವಾರ್ತಾ ಭಾರತಿ ಸಂಪಾದಕೀಯ, 23.06.14.)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s