ಕೊಟ್ಟ ಮಾತಿಗೆ ತಪ್ಪಿದವರು ಯಾರು?

Posted: ಜೂನ್ 25, 2014 in Uncategorized

# ಚುನಾವಣಾ ಪ್ರಚಾರ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾತ­ನಾ­­ಡುವ ಭರದಲ್ಲಿ ‘ಬಿಜೆಪಿ ನನಗೆ ಮಾತೃ ಸ್ವರೂಪಿ’ ಎಂದಿದ್ದರು. ಅದು ಅವರ ಭಾವೋ­ದ್ವೇಗದ ಹೇಳಿಕೆ ಎಂದು ನಾನು ಭಾವಿಸಿದ್ದೆ. ಅವರು ಪ್ರಧಾನ ಮಂತ್ರಿಯಾದ ನಂತರ ಮಾತ­ನಾ­ಡುತ್ತಾ ‘ಈ ದೇಶದ 125 ಕೋಟಿ ಜನರನ್ನು ನಾನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವೆ’ ಎಂದಿದ್ದೂ
ಅರ್ಥಪೂರ್ಣವಾಗಿತ್ತು.

ಈಚೆಗೆ ಆ ಪಕ್ಷದ ಕಾರ್ಯಕ್ರಮಗಳ ವಿವರಗ­ಳನ್ನು ನೋಡಿದಾಗ ಎಲ್ಲವೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶಯಕ್ಕೆ ಪೂರಕವಾಗಿವೆ ಎಂದೆನಿ­ಸು­ವಂತಿದೆ. ಆರ್‌ಎಸ್‌ಎಸ್‌ ತನ್ನ ನಂಬಿಕ­ಸ್ಥ­ರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕುಳ್ಳಿರಿಸುವ ಪ್ರಕ್ರಿ­ಯೆಗೆ ಇದೀಗ ಚಾಲನೆ ಸಿಕ್ಕಂತಿದೆ. ಕೆಳಸ್ತರದ ಕಾರ್ಯ­ಕ್ರಮಗಳಿಗೆ ಆರ್‌ಎಸ್‌ಎಸ್‌ನ
ಕಾರ್ಯ­ಕ­ರ್ತ­ರನ್ನೇ ನೇಮಿಸಲಾಗುತ್ತಿದೆ. ಅಧಿಕಾರಿ ವರ್ಗ­ವಂತೂ ಯಾವತ್ತೂ ಗಾಳಿ ಬಂದತ್ತ ತೂರಿಕೊ­ಳ್ಳುವ ಸ್ವಭಾವ ಹೊಂದಿರುತ್ತದೆ ತಾನೆ. ಹೀಗಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತನ್ನ ಕಾರ್ಯ­ಸೂ­ಚಿಯನ್ನು ಕಾರ್ಯರೂಪಕ್ಕೆ ತರಲು ಯಾವುದೇ ಅಡ್ಡಿ ಇಲ್ಲ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳೂ ಆಗಿ­ರುವ ಕೇಂದ್ರದ ಮಾಜಿ ಕೃಷಿ ಸಚಿವ ಶರದ್‌ ಪವಾರ್‌ ಮಾತನಾಡುತ್ತಾ ‘ಬಿಜೆಪಿಯ ಗೆಲು­ವಿನ ನಂತರ ದೇಶದ ಎಲ್ಲೆಡೆಯೂ ಕೋಮು­ವಾದ ಎದ್ದು ಕಾಣತೊಡಗಿದೆ’ ಎಂದಿರುವುದು ಗಮ­ನಾರ್ಹ.

ಮೋದಿಯವರು ಅಧಿಕಾರದ ಗದ್ದು­ಗೆಗೆ ಏರಿ ಕೆಲವು ದಿನಗಳಾಗಿವೆ ಅಷ್ಟೆ. ಅವರು ಐದು ವರ್ಷಗಳ ಅವಧಿಯನ್ನು ಪೂರ್ಣ­ಗೊ­ಳಿಸಲು ಇನ್ನೂ ಬಲು ದೂರ ಸಾಗುವುದಿದೆ. ಅಷ್ಟ­ರಲ್ಲಿಯೇ ನಡೆದಿರುವ ಕೆಲವು ಘಟನೆಗಳು ಆತಂಕ ಕಾರಿಯಾಗಿವೆ. ಅವುಗಳಲ್ಲಿ ಪುಣೆಯಲ್ಲಿ ನಡೆ­ದಿ­ರುವ ಘಟನೆಯೂ ಒಂದು. ಮಹಾರಾ­ಷ್ಟ್ರದ ಮಟ್ಟಿಗೆ ಅತ್ಯಂತ ಪ್ರಶಾಂತವಾದ ನಗರ ಪುಣೆ­ಯಲ್ಲಿ ನಡೆದ ಘಟನೆಯೊಂದು ಈಚೆಗೆ ಎಂಥ­ವ­ರನ್ನೂ ಭಯಭೀತರನ್ನಾಗಿಸುವಂತಿದೆ. ತೀವ್ರ­ವಾದಿ ಹಿಂದೂ ಸಂಘಟನೆಯೊಂದರ ಕೆಲ­ವರು ಮೊಹಿಸಿನ್‌ ಶೇಕ್‌ ಎಂಬ ಇಪ್ಪತ್ತೆಂಟರ ಹರೆ­ಯದ ಯುವಕನನ್ನು ಇರಿದು ಕೊಂದಿದ್ದಾರೆ. ಅವರು ಐ.ಟಿ. ಕಂಪೆನಿಯೊಂದರಲ್ಲಿ ಮ್ಯಾನೇ­ಜರ್‌ ಆಗಿದ್ದರು. ಶಿವಾಜಿ ಮತ್ತು ಬಾಳಾ ಠಾಕ್ರೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕೆಟ್ಟ ಚಿತ್ರ­ವೊಂದು ಅಂತರ್ಜಾಲದಲ್ಲಿ ಹರಿದಾಡು­ತ್ತಿತ್ತು. ಅದರ ಹಿಂದೆ ಮೊಹಿಸಿನ್‌ ಕೈವಾಡ ಇರಬ­ಹು­ದೆಂದು ಶಂಕಿಸಿದ ಕೆಲವರು ಅವರ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಮೊಹಿಸಿನ್‌ ಅವರ ಕೈವಾಡ ಇತ್ತು ಎನ್ನುವುದಕ್ಕೆ ಯಾವುದೇ ಸಾಕ್ಷಿ ಅಥವಾ ಆಧಾರಗಳು ಇರಲಿಲ್ಲ.

ಬಿಜೆಪಿಯೂ ಈ ಕಗ್ಗೊಲೆಯನ್ನು ಖಂಡಿಸಿದೆ, ನಿಜ. ಆದರೆ ಪ್ರಧಾನಿ ಮೋದಿಯವರಿಗೆ ಈಗ ಒಂದು ಸುವರ್ಣ ಅವಕಾಶ ಲಭಿಸಿದೆ. ಈ ಕೊಲೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮೋದಿ­ಯವರು ನೋಡಿಕೊಳ್ಳಬೇಕಿದೆ. ಇದ­ರಿಂದ ಮುಸ್ಲಿಮ್‌ ಸಮುದಾಯದ ಒಡಲಲ್ಲಿ ಭದ್ರ­ತೆಯ ಮನೋಭಾವ ಮೂಡಿಸಲು ಸಾಧ್ಯ­ವಿದೆ. ಕೊಲೆಯಾದ ಮೊಹಿಸಿನ್‌ ಅವರ ಕುಟುಂ­ಬ­ವನ್ನು ಸಂಪರ್ಕಿಸಿ ಕನಿಷ್ಠ ಸಹಾನುಭೂತಿಯ ಮಾತು­ಗಳನ್ನಾದರೂ ಮೋದಿಯವರು ಹೇಳ­ಬಹುದಿತ್ತು.

ಇವತ್ತು ನನ್ನಂತಹವರು ಮುಸಲ್ಮಾನ ಸಮು­ದಾಯಕ್ಕೆ ಭದ್ರತೆಯ ಮತ್ತು ಧೈರ್ಯ ತುಂಬುವ ಮಾತು­ಗಳನ್ನು ಹೇಳಬೇಕಿದೆ. ಸುಮಾರು 15­ರಿಂದ 16 ಕೋಟಿಯಷ್ಟು ಜನಸಂಖ್ಯೆ ಹೊಂದಿ­ರುವ ಈ ಸಮುದಾಯ ಯಾವುದೇ ಕಾರಣಕ್ಕೂ ಎದೆ­ಗುಂದಬಾರದು, ತಲ್ಲಣಗೊಳ್ಳಬಾರದು ಎಂಬ ಭರವಸೆ ನೀಡಬೇಕಿದೆ. ಈ ದೇಶದ ಸಂವಿ­ಧಾನ, ಇಲ್ಲಿಯ ಕಾನೂನುಗಳು ಈ ನೆಲದಲ್ಲಿ ಪ್ರತಿ­ಯೊಬ್ಬರೂ ಸಮಾನರು ಎಂಬ ನೆಲೆ­ಯ­ಲ್ಲಿಯೇ ರೂಪುಗೊಂಡಿವೆ. ಅದರ ಚೌಕಟ್ಟಿನ­ಲ್ಲಿಯೇ ಇವತ್ತು ಆಡಳಿತ ನಡೆಯುತ್ತಿದೆ. ಇಲ್ಲಿ ನ್ಯಾಯಾ­ಲಯಗಳಿವೆ, ಮಾಧ್ಯಮಗಳಿವೆ, ಜನ­ಪರ ಧೋರಣೆಯ ಮುಖಂಡರಿದ್ದಾರೆ, ನಿಷ್ಪಕ್ಷ­ಪಾ­ತ­ವಾಗಿ ಯೋಚಿಸುವ ಜನರಿದ್ದಾರೆ. ಒಂದು ವೇಳೆ ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಕುಕೃ­ತ್ಯಗಳನ್ನು ಯಾರೇ ಎಸಗಿದರೂ ಅಂತಹ ಮಂದಿಯ ವಿರುದ್ಧ ಧ್ವನಿ ಎತ್ತುವವರು ದೇಶದಾದ್ಯಂತ ಇದ್ದಾರೆ ಎನ್ನುವುದನ್ನು ಮುಸ­ಲ್ಮಾನರು ಮರೆಯಬಾರದು. ಹಿಂದೆ ಬಾಬರಿ ಮಸೀ­ದಿಯನ್ನು ಉರುಳಿಸಿದಾಗ ಮತ್ತು ಗುಜ­ರಾತ್‌ನಲ್ಲಿ ಮುಸ್ಲಿಮರ ಮೇಲೆ ದಾಂದಲೆ ನಡೆ­ದಾಗ ದೇಶದ ಎಲ್ಲೆಡೆಯೂ ಆ ಕೃತ್ಯದ ವಿರುದ್ಧ ಪ್ರತಿಭಟನೆ ನಡೆದಿದ್ದು ನಮಗೆ ಗೊತ್ತೇ ಇದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಮುಸ್ಲಿಮ್‌ ಸಮುದಾಯವೇ ಬಹುಸಂಖ್ಯಾತ­ರಾಗಿರುವ ಪ್ರದೇಶ. ಅಲ್ಲಿಗೆ ಸಂಬಂಧಿಸಿದ ಸಂವಿ­ಧಾನದ 370ನೇ ವಿಧಿ ಸ್ವತಂತ್ರ ಭಾರತಕ್ಕೆ ಇರು­ವಷ್ಟೇ ಇತಿಹಾಸವನ್ನು ಹೊಂದಿದೆ. ಇದೀಗ ಮೋದಿ ಸರ್ಕಾರ ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನ­ಮಾ­ನಕ್ಕೆ ಧಕ್ಕೆ ಉಂಟು ಮಾಡಬಹುದೇ ಎಂಬ ಅನುಮಾನ ಆ ರಾಜ್ಯದ ಜನರನ್ನು ಕಾಡುತ್ತಿದೆ.

1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತ­ವನ್ನು ತೊರೆದು ಹೋದರು. ಆ ಸಂದರ್ಭದಲ್ಲಿ ಈ ದೇಶದಲ್ಲಿ ಸುಮಾರು 560ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳಿದ್ದವು. ಆ ಸಂಸ್ಥಾನಗಳ ರಾಜರು ಒಂದೋ ಭಾರತದ ಜತೆಗೆ ನಿಲ್ಲ­ಬ­ಹುದಿತ್ತು, ಇಲ್ಲವೇ ಪಾಕಿಸ್ತಾನದ ಜತೆಗೆ ಹೋಗ­ಬ­ಹುದಿತ್ತು. ಧರ್ಮ ಅಥವಾ ಇನ್ನಾವುದೇ ಅಂಶ­ಗಳನ್ನು ಮುಂದಿಟ್ಟುಕೊಂಡು ಆ ಆಡಳಿತಗಾರರು ನಿರ್ಧಾರ­ಗಳನ್ನು ತೆಗೆದುಕೊಳ್ಳಬಹುದಿತ್ತು. ಸ್ವತಂತ್ರವಾಗಿ ಉಳಿಯುವ ಅವಕಾಶಗಳೂ ಆ ಸಂಸ್ಥಾನಗಳಿಗೆ ಇದ್ದವು.

ಅಂದು ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದರು. ಆದರೆ ಅಲ್ಲಿ ಮಹಾ­ರಾಜಾ ಹರಿಸಿಂಗ್‌ ಎಂಬುವವರು ಆಡಳಿತ ನಡೆ­ಸು­ತ್ತಿದ್ದರು. ಅವರು ಭಾರತ ಒಕ್ಕೂಟವನ್ನು ಸೇರಿ­ಕೊಂಡರು. ಆ ಸಂದರ್ಭದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗನ್ನಿಸುತ್ತಿದೆ, ಒಂದು ವೇಳೆ ಪಾಕಿಸ್ತಾನ ತಾಳ್ಮೆಯಿಂದ ಇದ್ದು ಬಿಟ್ಟಿದ್ದರೆ, ಆ ಪ್ರದೇಶ ಪಾಕ್‌ನೊಳಗೆ ಸೇರುವ ಸಾಧ್ಯತೆಯೂ ಇತ್ತು. ಆದರೆ ಅಂದು ಪಾಕಿಸ್ತಾನ ಏಕಾಏಕಿ ತನ್ನ ಸೇನೆಯನ್ನೇ ಕಾಶ್ಮೀರ ಪ್ರದೇಶದೊಳಗೆ ಕಳುಹಿಸಿ ಆಕ್ರಮಣಕ್ಕಿಳಿದು ಬಿಟ್ಟಿತು. ಆಗ ಹರಿಸಿಂಗ್‌ ಅವರು ಪಾಕ್‌ ಸೇನೆಯನ್ನು ತಡೆಯಲು ಸಹಜವಾಗಿಯೇ ಭಾರತದ ನೆರವು ಯಾಚಿಸಿದರು. ಪಾಕ್ ಸೇನೆಯಿಂದ ಅಲ್ಲಿ ನಡೆಯಬಹುದಾಗಿದ್ದ ಪ್ರಾಣಹಾನಿಯನ್ನು ತಪ್ಪಿಸಲು ಅವರು ಆ ರೀತಿ ನಡೆದುಕೊಂಡಿದ್ದರು. ಜತೆಗೆ ಅವರು ಭಾರತದ ಒಕ್ಕೂಟದೊಳಗೆ ಸೇರಿಕೊಳ್ಳುವ ಒಪ್ಪಂದಕ್ಕೂ ಸಹಿ ಹಾಕಿದರು. ಅಂದು ಅವರು ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಖಾತೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲೂ ಕಾಶ್ಮೀರ ಸ್ವಾಯತ್ತತೆ ಹೊಂದಿರುತ್ತದೆ ಎಂದು ಅಲ್ಲಿನ ಜನರಿಗೆ ತಿಳಿಸಿದ್ದರು. 370ನೇ ವಿಧಿ ಇದಕ್ಕೆ ಸಂಬಂಧಿಸಿದ ಕಾನೂನು ನಿಯಮಗಳ ಸಂಗ್ರಹವೇ ಆಗಿದೆ. ಒಂದು ವೇಳೆ ಕೇಂದ್ರ ಸರ್ಕಾರಕ್ಕೆ ಹೆಚ್ಚು ವಿಷಯಗಳಲ್ಲಿ ಹಿಡಿತ ಬೇಕೆಂದರೆ, ಅದಕ್ಕೆ ಜಮ್ಮು ಮತ್ತು ಕಾಶ್ಮೀರದ ಒಪ್ಪಿಗೆ ಬೇಕೇ ಬೇಕು. ಅಂತಹ ಷರತ್ತಿನ ಮೇರೆಗೇ ಆ ರಾಜ್ಯ ಭಾರತ ಒಕ್ಕೂಟ ವ್ಯವಸ್ಥೆಯ ಒಳಗೆ ಸೇರಿದ್ದು ತಾನೆ. ಹೀಗಾಗಿ, ಒಂದು ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂದಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಬೇಕು ಎಂದು ಒತ್ತಡ ಹೇರಿದರೆ, ಅದು ತಪ್ಪಾಗುತ್ತದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದ ಅಷ್ಟೊಂದು ಸರಳವಾಗಿಲ್ಲ. ಅದ­ಕ್ಕೊಂದು ಸೂಕ್ತ ಪರಿಹಾರ ಹುಡುಕಬೇಕೆಂದರೆ, ಅದಕ್ಕೆ ಭಾರತ, ಪಾಕಿಸ್ತಾನ ಅಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಒಪ್ಪಿಗೆಯೂ ಬೇಕಾಗುತ್ತದೆ. ಒಂದು ವೇಳೆ ಇವತ್ತು ಜನಮತಗಣನೆ ನಡೆಯಿತು ಎಂದಿಟ್ಟುಕೊಳ್ಳಿ, ಆಗ ಕಾಶ್ಮೀರ ಕಣಿವೆಯ ಮಂದಿ ಸ್ವತಂತ್ರ ಕಾಶ್ಮೀರದ ಬಗ್ಗೆಯೇ ಒಲವು ತೋರ­ಬಹುದು. ಜಮ್ಮು ಪ್ರದೇಶದಲ್ಲಿ ಹಿಂದೂ­ಗಳೇ ಬಹು
ಸಂಖ್ಯೆಯಲ್ಲಿರುವುದರಿಂದ ಅವರು ಭಾರತದ ಜತೆಗೇ ಇರಲು ಇಷ್ಟಪಡು­ತ್ತಾರೆ. ಲಡಾಖ್‌ ಪ್ರದೇಶದಲ್ಲಿ ಬೌದ್ಧ ಧರ್ಮೀಯರೇ ಬಹುಸಂಖ್ಯಾತರು. ಅವರು ನವದೆಹಲಿಯ ಆಡಳಿತಗಾರರ ಜತೆಗೆ ನೇರ ಸಂಪರ್ಕವಿರಿ­ಸಿ­ಕೊಂಡು ಕೇಂದ್ರಾಡಳಿತ ಪ್ರದೇಶವಾಗಿರಲು ಇಚ್ಛಿ­ಸ­ಬಹುದು. ಈ ಎಲ್ಲಾ ಅಂಶಗಳು ಕಾಶ್ಮೀರ ವಿವಾ­ದ­ವನ್ನು ಇನ್ನಷ್ಟು ಜಟಿಲಗೊಳಿಸು­ವಂತಹದ್ದಾಗಿವೆ. ಅದೇನೇ ಇರಲಿ, ಇಂತಹ ಯಾವುದೇ ವಿಚಾರ­ಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಹಸ್ತಕ್ಷೇಪ ನಡೆಸಬಾರದು. ಏಕೆಂದರೆ ಆರ್‌ಎಸ್‌ಎಸ್‌ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದೇ ಬಿಂಬಿಸಿಕೊಳ್ಳುತ್ತಾ ಬಂದಿದೆ!

1948ರ ಜನವರಿ 30ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದವರು ಎನ್ನಲಾ­ಗಿದ್ದ ನಾಥೂರಾಮ್‌ ಗೋಡ್ಸೆ ಎನ್ನುವವರು ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿದ್ದ­ರೆಂಬ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಲಾಗಿತ್ತು. ಆ ನಿಷೇಧವನ್ನು ತೆಗೆಯಬೇಕೆಂದು ಆರ್‌ಎಸ್‌ಎಸ್‌ ಸಂಘಟನೆ­ಯವರು ನಂತರ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆಗ ವಲ್ಲಭಭಾಯ್‌ ಪಟೇಲ್‌ ಅವರು ಕೇಂದ್ರ ಗೃಹ ಸಚಿವರಾಗಿದ್ದರು. ಆರ್‌ಎಸ್‌ಎಸ್‌ ಸಂಘಟ­ನೆಯ ಮುಖಂಡರು ಗೃಹ ಸಚಿವಾಲಯದ ಜತೆಗೆ ಸಾಕಷ್ಟು ಮಾತುಕತೆ ನಡೆಸಿ, ಮನ­ವೊ­ಲಿ­ಸಲೆತ್ನಿಸಿದ್ದರು. ಕೊನೆಗೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಯಾವುದೇ ರಾಜಕೀಯ ಚಟು­ವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಕೇವಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಷ್ಟೇ ತೊಡಗಿ­ಕೊಳ್ಳು­ವುದು’ ಎಂಬ ಷರತ್ತಿನ ಮೇರೆಗೆ ನಿಷೇಧವನ್ನು ತೆಗೆಯಲಾಯಿತು.

ಅಷ್ಟಾದರೂ ಪಟೇಲ್‌ ಅವರಿಗೆ ತೃಪ್ತಿ ಆಗಿರ­ಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ­ದ­ವರ ಸಂವಿಧಾನದಲ್ಲಿಯೇ ಈ ಬದಲಾವಣೆ ಬಗ್ಗೆ ಸ್ಪಷ್ಟ­ಪಡಿಸುವಂತೆ ಕೋರಿದ್ದರು. ಆಗ ‘ಆರ್‌ಎಸ್‌ಎಸ್‌ ಸಾಂಸ್ಕೃತಿಕ ಸಂಘಟನೆ. ಯಾವುದೇ ಕಾರಣಕ್ಕೂ ಯಾವುದೇ ರಾಜಕೀಯ ಚಟು­ವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಖಚಿತಪಡಿಸಿದ ಮೇಲೆಯೇ ನಿಷೇಧ ತೆರವು­ಗೊ­ಳಿಸಲಾಯಿತು ಎನ್ನುವುದು ಈಗ ಇತಿಹಾಸ. ಆದರೆ ಈಗ ಏನಾಗಿದೆ ನೋಡಿ. ಆರ್‌ಎಸ್ಎಸ್‌ ಕೊಟ್ಟ ಮಾತಿಗೆ ತಪ್ಪಿತು ಅಲ್ಲವೇ?

ಈಚೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಅವರೇ ರಾಜಕೀಯ ಚಟುವಟಿಕೆ­ಗಳಲ್ಲಿ ಪಾಲ್ಗೊಂಡಿದ್ದರಲ್ಲ. ಹಿಂದೆ
ಆರ್‌ಎಸ್‌ಎಸ್‌ ಪ್ರಚಾರಕ್‌ ಆಗಿದ್ದ ನರೇಂದ್ರ ಮೋದಿ­ಯವರನ್ನು ಪ್ರಧಾನಿ
ಪಟ್ಟಕ್ಕೇರಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ದುಡಿ­ದಿರುವುದು ಸತ್ಯ ತಾನೆ? ಫಲಿತಾಂಶ ಈಗ ಎಲ್ಲರ ಮುಂದಿದೆ. – ಕುಲದೀಪ್ ನಯ್ಯರ್. (ಕೃಪೆ: ಪ್ರಜಾವಾಣಿ, 25.06.14.)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s