ಕೇಂದ್ರ ಆರೋಗ್ಯ ಸಚಿವರ ಆರೋಗ್ಯಕರ ಹೇಳಿಕೆ

Posted: ಜೂನ್ 26, 2014 in Uncategorized

# ಏಡ್ಸ್ ಮತ್ತು ಕಾಂಡೋಮ್‌ಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ನೀಡಿರುವ ಹೇಳಿಕೆ ವಿದೇಶೀಯರೂ ಸೇರಿದಂತೆ ಹಲವು ಎನ್‌ಜಿಒಗಳಿಗೆ ಸಿಟ್ಟು ತರಿಸಿದೆ. ಕೆಲವು ಮಾಧ್ಯಮಗಳೂ ಈ ಕುರಿತಂತೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿವೆ. ಇಷ್ಟಕ್ಕೂ ಅವರು ಬಡವರ ವಿರುದ್ಧ ಏನಾದರೂ
ಹೇಳಿಕೆಯನ್ನು ನೀಡಿದ್ದರೆ ಅವರಿಗೆ ಈ ಸಿಟ್ಟು ಬರುತ್ತಿರಲಿಲ್ಲವೇನೋ. ನೂತನ ಸರಕಾರ ಮಾಡಿದ್ದು, ಆಡಿದ್ದು ಎಲ್ಲವೂ ಇತ್ತೀಚಿನ ದಿನಗಳಲ್ಲಿ ಮುದ್ದು ಮುದ್ದಾಗಿ
ಕಾಣಿಸುತ್ತಿದೆ. ಅದೆಷ್ಟು ದಾಂಧಲೆ ಮಾಡಿದರೂ, ಮಗುವನ್ನು ತಾಯಿ ‘ತುಂಟ’ ಎಂದು ಟೀಕಿಸಿ ಮುದ್ದಿಸಿದಂತೆ, ಮೋದಿ ನೇತೃತ್ವದ ಸರಕಾರ ಮಾಡುತ್ತಿರುವ ದಾಂಧಲೆಗಳನ್ನೆಲ್ಲ ಮಾಧ್ಯಮಗಳು ಮುದ್ದು ಮಾಡುತ್ತಿವೆ. ಅವುಗಳೆಲ್ಲ ಸರಕಾರದ ತುಂಟತನವಾಗಿ ಮಾತ್ರ ಕಾಣಿಸುತ್ತಿದೆ. ಆದರೆ ಹರ್ಷವರ್ಧನ್ ಕಾಂಡೋಮ್ ಬಗ್ಗೆ ನೀಡಿದ ಹೇಳಿಕೆ ಮಾತ್ರ ಕೆಲವು ಮಾಧ್ಯಮಗಳಿಗೆ ಅಸಹನೆಯ ವಿಷಯವಾಗಿದೆ. ಇಷ್ಟಕ್ಕೂ ಹರ್ಷವರ್ಧನ್ ಹೇಳಿದ್ದಾದರೂ ಏನು? ಏಡ್ಸ್‌ನಿಂದ ರಕ್ಷಣೆ ಪಡೆಯಲು ಪರಿಹಾರ ಕಾಂಡೋಮ್ ಅಲ್ಲ, ಬದಲಿಗೆ ಜೀವನದಲ್ಲಿ ನೈತಿಕತೆಯನ್ನು ರೂಢಿಸಿಕೊಳ್ಳುವುದೇ ಏಡ್ಸ್‌ನಿಂದ ರಕ್ಷಿಸಿಕೊಳ್ಳುವ ಮಾರ್ಗ ಎಂದು ಅವರು ‘ದಿ ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಏಡ್ಸ್ ಮೂಲದಲ್ಲಿರುವುದು ಕೇವಲ ಅಜ್ಞಾನ, ಆಕಸ್ಮಿಕಗಳಷ್ಟೇ ಅಲ್ಲ. ವಿಲಾಸಿ ಪ್ರವೃತ್ತಿ, ಅನೈತಿಕತೆ ಇತ್ಯಾದಿಗಳೂ ಏಡ್ಸ್‌ನ ಹುಟ್ಟಿಗೆ ಕಾರಣವಾಗಿವೆ. ಆದುದರಿಂದ ಮೊತ್ತ ಮೊದಲು ನೈತಿಕ ವೌಲ್ಯಗಳನ್ನು, ಕೌಟುಂಬಿಕ ವೌಲ್ಯಗಳನ್ನು ಜೋಪಾನ ಮಾಡುವುದರತ್ತ ಜಾಗ್ರತೆ ವಹಿಸಬೇಕು. ಕಾಂಡೋಮ್ ಮಾತ್ರವೇ ಏಡ್ಸ್‌ಗೆ ಪರಿಹಾರ ಎನ್ನುವುದು ಪರೋಕ್ಷವಾಗಿ ಮನುಷ್ಯನನ್ನು ಅನೈತಿಕತೆಗೆ ಪ್ರೋತ್ಸಾಹಿಸಿದಂತೆ ಎಂದು ಹರ್ಷವರ್ಧನ್ ಹೇಳಿದರು

ಒಬ್ಬ ಆರೋಗ್ಯ ಸಚಿವನಾಗಿ ಅವರು ಆಡಿದ ಮಾತು ತೂಕವುಳ್ಳದ್ದಾಗಿತ್ತು ಮತ್ತು ಏಡ್ಸನ್ನು ದಂಧೆ ಮಾಡಿಕೊಂಡಿರುವ ಕೆಲವು ನಿರ್ದಿಷ್ಟ ಎನ್‌ಜಿಒಗಳಿಗೆ, ಕಾಂಡೋಮ್ ಸಂಸ್ಥೆಗಳಿಗೆ ಚಾಟಿ ಏಟಿನ ರೂಪದಲ್ಲಿತ್ತು. ಉದಾರೀಕರಣ ಮತ್ತು ಜಾಗತೀಕರಣದ ಜೊತೆಗೇ ವಿಲಾಸಿ ಬದುಕಿನ ಹೆಬ್ಬಾಗಿಲು ಪೂರ್ಣವಾಗಿ ತೆರೆದುಕೊಂಡಿದೆ. ಹೆಣ್ಣು ಮಾರಾಟದ ಸರಕಾದಳು. ಗಂಡಿಗೆ ಯಾವುದೇ ನೈತಿಕ ಕಟ್ಟುಪಾಡುಗಳು ಇಲ್ಲವಾದವು. ವೇಶ್ಯಾವಾಟಿಕೆ ಪ್ರವಾಸೋದ್ಯಮದ ಒಂದು ಭಾಗವಾಯಿತು. ಇಂತಹ ಸಂದರ್ಭದಲ್ಲೇ ಏಡ್ಸ್ ತನ್ನ ಉತ್ಕರ್ಷಕ್ಕೆ ತಲುಪಿದ್ದು. ಪಾಶ್ಚಿಮಾತ್ಯ ರಾಷ್ಟ್ರಗಳು ಏಡ್ಸನ್ನು ಎದುರಿಸಲು ಹೊರಟಿದ್ದು ಕಾಂಡೋಮ್ ಮೂಲಕ. ಅಷ್ಟೇ ಅಲ್ಲ, ಭಾರೀ ಉದ್ಯಮಿಗಳು ಏಡ್ಸ್‌ನ ತಡೆಗಾಗಿ ಭಾರೀ ನಿಧಿಯನ್ನು ಚೆಲ್ಲಿದರು. ಯಾಕೆಂದರೆ ಪ್ರವಾಸೋದ್ಯಮದ ಜೊತೆಗೆ ವೇಶ್ಯಾವಾಟಿಕೆ, ವಿಲಾಸಿ ಜೀವನ ಸಂಬಂಧವನ್ನು ಹೊಂದಿವೆ. ಏಡ್ಸ್ ವಿಶ್ವವನ್ನು ಕಾಡುವ ಒಂದು ಭೀಕರ ಸಮಸ್ಯೆಯಾಗಿ ರೂಪ ತಳೆದರೆ ಭಾರೀ ಉದ್ಯಮಗಳೆಲ್ಲ ನೆಲ ಕಚ್ಚುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶ್ರೀಮಂತ ರಾಷ್ಟ್ರಗಳು ಏಡ್ಸ್ ಬಗ್ಗೆ ಭಾರೀ ತಲೆ ಕೆಡಿಸಿಕೊಂಡವು. ಇವುಗಳೆಲ್ಲ ಕ್ಷಯ, ಅಸ್ತಮಾ, ಕ್ಯಾನ್ಸರ್ ಇವುಗಳ ಬಗ್ಗೆ ಈ ಪರಿ ತಲೆ ಕೆಡಿಸಿಕೊಂಡಿರಲಿಲ್ಲ.

ಹಾಗೆ ನೋಡಿದರೆ ಏಡ್ಸ್ ಅತ್ಯಂತ ಕಡಿಮೆ ಅಪಾಯಕಾರಿ ರೋಗ. ಅದು ನೇರವಾಗಿ ಮಲೇರಿಯಾ, ಕ್ಷಯದಂತೆ ಹರಡುವುದಿಲ್ಲ. ಸೊಳ್ಳೆಗಳ ಮೂಲಕವೂ ಹಂಚಲ್ಪಡುವುದಿಲ್ಲ. ಅದು ತಾನಾಗಿ ಮನುಷ್ಯನ ಕಡೆಗೆ ಧಾವಿಸುವುದು ತೀರಾ ಅಪರೂಪ. ವೈದ್ಯರ ಬೇಜವಾಬ್ದಾರಿ ಅಥವಾ ಬ್ಲೇಡ್, ಸೂಜಿ ಇತ್ಯಾದಿಗಳ ಮೂಲಕ ಮಾತ್ರ ಹರಡುತ್ತವೆ. ಇದಕ್ಕೆ ಹೊರತು ಪಡಿಸಿದರೆ, ಮನುಷ್ಯ ತಾನಾಗಿಯೇ ಆ ರೋಗದ ಹತ್ತಿರ ಧಾವಿಸುತ್ತಾನೆ. ಆದುದರಿಂದ ಏಡ್ಸ್ ಹರಡುವಲ್ಲಿ ಮನುಷ್ಯನ ಸ್ವಯಂಕೃತಾಪರಾಧ ಬಹು ದೊಡ್ಡದಿದೆ. ಏಡ್ಸ್‌ನಿಂದ ದೂರವಿರಬೇಕು ಎಂದು ದೃಢವಾಗಿ ನಿಶ್ಚಯಿಸಿದರೆ ಅವರು ಖಂಡಿತವಾಗಿಯೂ ಆ ರೋಗದಿಂದ ಮುಕ್ತರಾಗಿರಬಹುದು. ಆದರೆ ಕ್ಯಾನ್ಸರ್‌ನಂತಹ ರೋಗಗಳು ಹಾಗಲ್ಲ. ಇದನ್ನು ನಾವು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು. ಮನುಷ್ಯನ ವಿಲಾಸಿ ಬದುಕು ತನ್ನ ಗಡಿಯನ್ನು ಮೀರಿದಾಗಷ್ಟೇ ಈ ಜಗತ್ತಲ್ಲಿ ಏಡ್ಸ್ ಕಾಣಿಸಿಕೊಂಡಿತು ಮತ್ತು ಈಗಲೂ ಮನುಷ್ಯನಿಗೆ ಏಡ್ಸ್ ರೋಗ ತನ್ನಿಂದ ಪಾರಾಗಲು ಅವಕಾಶವನ್ನು ಕೊಟ್ಟಿದೆ. ಅಂದರೆ ಮನುಷ್ಯನಿಗೆ ಇಲ್ಲಿ ಆಯ್ಕೆಯ ಅವಕಾಶ ಇದೆ.

ಆದರೆ ದುರದಷ್ಟಕ್ಕೆ, ಪಾಶ್ಚಿಮಾತ್ಯ ರಾಷ್ಟ್ರಗಳು ಏಡ್ಸ್‌ನಿಂದ ಪಾರಾಗಲು ಕಾಂಡೋಮ್‌ನಲ್ಲಿ ಪರಿಹಾರವನ್ನು ಕಂಡುಕೊಂಡಿವೆ. ಅಂದರೆ ‘ನೀವು ಸ್ವಚ್ಛಂದ ಬದುಕನ್ನು ಅಳವಡಿಸಿಕೊಳ್ಳಿ. ಆದರೆ, ಕಾಂಡೋಮ್ ಧರಿಸಿಕೊಳ್ಳಿ’ ಎಂದು ಹೇಳಿ ಪ್ರಕೃತಿಗೆ ಮರು ಸವಾಲು ಹಾಕಿವೆ. ಅಂದರೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಪಾಶ್ಚಾತ್ಯರು ಇನ್ನೂ ಸಿದ್ಧರಾಗಿಲ್ಲ. ಇಂದು ಏಡ್ಸ್ ವಿರೋಧಿ ಚಳವಳಿಯಲ್ಲಿ ತೊಡಗಿಸಿಕೊಂಡ ಕೆಲವು ಎನ್‌ಜಿಓಗಳ ರಾಯಭಾರಿಗಳನ್ನೇ ನೋಡಿ. ಅವರಲ್ಲಿ ಹೆಚ್ಚಿನವರು ಬಿಕಿನಿ ತೊಟ್ಟ ಬಾಲಿವುಡ್, ಹಾಲಿವುಡ್ ನಟಿಯರು. ಪರದೆಯ ಮೇಲೆ ಸ್ವಚ್ಛಂದ ಲೈಂಗಿಕತೆಗೆ ಪ್ರೋತ್ಸಾಹ ನೀಡುವ ಇವರು ವೇದಿಕೆಯಲ್ಲಿ ಏಡ್ಸ್ ವಿರುದ್ಧ ಮಾತನಾಡುತ್ತಾರೆ. ಅಂದರೆ, ಕಾಂಡೋಮ್ ಬಗ್ಗೆ ಪಾಠ ಮಾಡುತ್ತಾರೆ. ಏಡ್ಸ್ ರೋಗದ ಹರಡುವಿಕೆಯಲ್ಲಿ ಪರೋಕ್ಷವಾಗಿ ತಾವೂ ಇದ್ದೇವೆ ಎನ್ನುವುದನ್ನು ಮರೆತು ಮಾತನಾಡುತ್ತಾರೆ. ಇದು ಏಡ್ಸ್ ಕುರಿತಂತೆ ಜಗತ್ತು ತಳೆದ ಇಬ್ಬಂದಿತನವಾಗಿದೆ. ಆದುದರಿಂದಲೇ ಇಂದಿಗೂ ಏಡ್ಸ್ ನಮಗೆ ಸವಾಲಾಗಿಯೇ ಉಳಿದಿದೆ. ಇದರ ಅರ್ಥ ಕಾಂಡೋಮನ್ನು ನಿರಾಕರಿಸಬೇಕು ಎಂದಲ್ಲ. ಮೊದಲು ನಾವು ನೈತಿಕತೆಯ ಕಾಂಡೋಮನ್ನು ಬಳಸಬೇಕು. ಕೆಲವು ಸಣ್ಣ ಪುಟ್ಟ ವೌಲ್ಯಗಳಿಗಾದರೂ ಬದ್ಧರಾಗಿ ಬದುಕಬೇಕು. ಕೌಟುಂಬಿಕ ವೌಲ್ಯಗಳನ್ನು ಗೌರವಿಸಬೇಕು. ತನ್ನ ಪತ್ನಿಗೆ, ನಂಬಿದ ಸಂಗಾತಿಗೆ ಮೋಸ ಮಾಡಬಾರದು ಎಂಬ ಬದ್ಧತೆ ಇರಬೇಕು. ಹೆಣ್ಣು ಸರಕಲ್ಲ. ಆಕೆಯೊಳಗೂ ಭಾವನೆಗಳಿವೆ. ಅವಳನ್ನು ಬಳಸಿ ಎಸೆಯಲಾಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದುವೇ ಏಡ್ಸ್ ರೋಗಕ್ಕೆ ಇರುವ ಮೊದಲ ಪರಿಹಾರ. ಏಡ್ಸ್ ರೋಗಾಣು ನಮ್ಮ ಆಲೋಚನೆಗಳಲ್ಲಿ, ನಾವು ಬದುಕುವ ಸೋಗಲಾಡಿ ಬದುಕಿನಲ್ಲಿದೆ. ಅಲ್ಲಿಯೇ ಅದನ್ನು ಸಾಯಿಸಬೇಕು. ಇದರ ಜೊತೆಗೆ ಎರಡನೆಯ ಭಾಗವಾಗಿ ನಾವು ಕಾಂಡೊಮನ್ನು ಆಯ್ಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಆರೋಗ್ಯ ಸಚಿವರು ವಿದೇಶಿ ಪತ್ರಿಕೆಗೆ ನೀಡಿದ ಹೇಳಿಕೆ ನಿಜಕ್ಕೂ ಗಂಭೀರವಾದುದು ಮತ್ತು ಪಾಶ್ಚಿಮಾತ್ಯರು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದಂತಹದು. (ಕೃಪೆ: ವಾರ್ತಾ ಭಾರತಿ ಸಂಪಾದಕೀಯ, 26.06.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s