ಮೋದಿ ಸರಕಾರಕ್ಕೆ ದಿನ 30-ವಿವಾದಗಳು 10

Posted: ಜೂನ್ 26, 2014 in Uncategorized

ಹೊಸದಿಲ್ಲಿ: ನೆರೆಯ ದೇಶಗಳ ನಾಯಕರು, ಅಗ್ರ ರಾಜಕಾರಣಿಗಳು ಧಾರ್ಮಿಕ ವ್ಯಕ್ತಿಗಳು ಸೇರಿದ್ದ ಮೇ 26ರ ವೈಭವದ ಕಾರ್ಯಕ್ರಮ ‘ಭಾರತಕ್ಕೆ ಭವ್ಯ ಭವಿಷ್ಯವೊಂದನ್ನು ಬರೆಯುವ’ ಭರವಸೆ ನೀಡಿತು. ಅದು ದೇಶವು ನರೇಂದ್ರ ಮೋದಿಯವರನ್ನು ತನ್ನ ಪ್ರಧಾನಿಯಾಗಿ ಪ್ರತಿಷ್ಠಾಪಿಸಿ ಎನ್‌ಡಿಎ ಯುಗವನ್ನು ಮತ್ತೆ ತಂದ ದಿನವಾಗಿದೆ.

ಕಾಲು ಶತಮಾನದಿಂದ ಅತ್ಯಂತ ಕೆಟ್ಟ ಪತನವನ್ನು ಕಂಡಿರುವ ದೇಶದ ಆರ್ಥಿಕತೆಯನ್ನು ಹಲವು ಕ್ರಮಗಳಿಂದ ಪುನಶ್ಚೇತನಗೊಳಿಸುವ ಪ್ರತಿಜ್ಞೆಯೊಂದಿಗೆ ಮೋದಿ ನೇತೃತ್ವದ ಎನ್‌ಡಿಎ ಜನಾದೇಶದೊಂದಿಗೆ ಸರಕಾರದ ವರ್ಚಸ್ಸನ್ನು ಜಿನುಗಿಸಿತ್ತು. ಆದರೆ, ಯಾವುದೇ ಸರಕಾರ ವಿವಾದಗಳಿಂದ ಮುಕ್ತವಾಗಿಲ್ಲ. ಮೋದಿ ಸರಕಾರವು ಮಂಗಳವಾರ ತನ್ನ 30 ದಿನಗಳ ಆಡಳಿತ ಪೂರೈಸಿದ್ದು, ವಿವಾದ ಸೃಷ್ಟಿಸಿದ ಪ್ರಧಾನ 10 ಘಟನೆಗಳು ಈ ಕೆಳಗಿನಂತಿವೆ.

370ನೆ ವಿಧಿಯ ವಿವಾದ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೆ ವಿಧಿ ರದ್ದತಿಯ ಪ್ರಕ್ರಿಯೆ ಆರಂಭವಾಗಿದೆ ಯೆಂದು ಪ್ರಧಾನಿ ಕಚೇರಿಯ ಸಹಾ ಯಕ ಸಚಿವ ಜಿತೇಂದ್ರ ಸಿಂಗ್
ಪ್ರತಿಪಾದಿಸುವ ಮೂಲಕ ವಿವಾದ ವೊಂದಕ್ಕೆ ನಾಂದಿ ಹಾಡಿದ್ದರು.

ಇದು ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. 370ನೆ ವಿಧಿ ಜಮ್ಮು-ಕಾಶ್ಮೀರ ಹಾಗೂ ಭಾರತದ ನಡುವಣ ಏಕೈಕ ಸಾಂವಿಧಾನಿಕ ಸಂಬಂಧವೆಂದು ಅಲ್ಲಿನ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದರು.

ಸ್ಮತಿ ಇರಾನಿಯವರ ಶೈಕ್ಷಣಿಕ ಅರ್ಹತೆ ವಿವಾದ

ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ತನ್ನ ಶೈಕ್ಷಣಿಕ ಅರ್ಹತೆ ವಿವಾದದ ಕೇಂದ್ರವಾದರು. ಚುನಾವಣಾ ಆಯೋಗಕ್ಕೆ ಅವರು ನೀಡಿದ್ದ ಎರಡು ಅಫಿದಾವಿತ್‌ಗಳಲ್ಲಿನ ವಿರೋಧಾಭಾಸ ವಿವಾದಕ್ಕೆ ಕಾರಣವಾಯಿತು.

2004ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಸ್ಮತಿ, ತಾನು ದಿಲ್ಲಿ ವಿಶ್ವವಿದ್ಯಾಲಯದ ದೂರ ಶಿಕ್ಷಣ ಶಾಲೆಯಲ್ಲಿ 1996ರಲ್ಲಿ ಬಿ.ಎ. ಉತ್ತೀರ್ಣಳಾಗಿದ್ದೇನೆಂದು ಅಫಿದಾವಿತ್ ನೀಡಿದ್ದರು. ಆದರೆ, ಈ ಸಲದ ಚುನಾವಣೆಯ ವೇಳೆ ತನ್ನ ಶೈಕ್ಷಣಿಕ ಅರ್ಹತೆ ‘ವಾಣಿಜ್ಯ ಪದವಿ ಭಾಗ-1, ಮುಕ್ತ ಶಿಕ್ಷಣ ಶಾಲೆ, ದಿಲ್ಲಿ ವಿವಿ -1994’’ ಎಂದು ಘೋಷಿಸಿದ್ದರು.

ಎನ್‌ಜಿಒಗಳ ಕುರಿತು ಐಬಿ ವರದಿ ವಿವಾದ

ಗ್ರೀನ್‌ಪೀಸ್‌ನಂತಹ ಸರಕಾರೇತರ ಸಂಘಟನೆಗಳು ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಮಾಡುತ್ತಿವೆಯೆಂದು ಐಬಿ ನೀಡಿದ್ದ ವರದಿ ಆರೋಪಿಸಿತ್ತು. ಆದರೆ, ಪರಿಸರದ ಕುರಿತು ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಎನ್‌ಜಿಒ, ಗ್ರೀನ್‌ಪೀಸ್, ಈ ಆರೋಪ ನಿರಾಕರಿಸಿವೆ.

ಗುಜರಾತ್ ಮೂಲದ ಅನೇಕ ಎನ್‌ಜಿಒಗಳು ಸರಕಾರದ ವಿರುದ್ಧ ಪ್ರಚಾರ ನಡೆಸಿವೆ. ಮಾಲ್ಧಾರಿ ರೂರಲ್ ಆ್ಯಕ್ಷನ್ ಗ್ರೂಪ್, ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಮತ್ತಿತರ ಸಂಘಟನೆಗಳು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತ ಬಂದಿವೆಯೆಂದು ಐಬಿ ವರದಿ ಹೇಳಿತ್ತು.

ಸಚಿವ ನಿಹಾಲ್‌ಚಂದ್ ವಿರುದ್ಧ ಲೈಂಗಿಕ ಹಗರಣ ವಿವಾದ

ಜೈಪುರದ 24ರ ಹರೆಯದ ಮಹಿಳೆಯೊಬ್ಬಳು ದಾಖಲಿಸಿದ್ದ ಎಫ್‌ಐಆರ್ ಒಂದರಲ್ಲಿ ಸಚಿವ ನಿಹಾಲ್‌ಚಂದ್ ಮೇಘ್ವಾಲ್ ಹಾಗೂ ಇತರ 16 ಮಂದಿಯ ಹೆಸರುಗಳಿವೆ. 2011ರಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆಕೆ, ಆರೋಪಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ.

ಮೇಘ್ವಾಲರ ರಾಜೀನಾಮೆಗೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಹೊಸದಿಲ್ಲಿಯ ಬಿಜೆಪಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿ ಹೇರಿಕೆ ವಿವಾದ

ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇಂಗ್ಲಿಷ್‌ಗೆ ಬದಲು ಹಿಂದಿಗೆ ಪ್ರಾಮುಖ್ಯ ನೀಡುವಂತೆ ಸೂಚಿಸಿ, ಮೇ 27ರಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ಸಚಿವರು, ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಬ್ಯಾಂಕ್‌ಗಳಿಗೆ ಸುತ್ತೋಲೆಯೊಂದನ್ನು ಕಳುಹಿಸಿತ್ತು.

ಅನೇಕ ಪಕ್ಷಗಳು ಶುಕ್ರವಾರ ಸರಕಾರದ ಈ ಕ್ರಮವನ್ನು ಟೀಕಿಸಿದವು. ಶಿವಸೇನೆ ಹಾಗೂ ಸಮಾಜವಾದಿ ಪಕ್ಷ ಹಿಂದಿಗೆ ಉತ್ತೇಜನ ನೀಡುವುದನ್ನು ಬೆಂಬಲಿಸಿದರೆ, ಕಾಂಗ್ರೆಸ್ ಇಂತಹ ನಿರ್ಧಾರ ಮುಖ್ಯವಾಗಿ ತಮಿಳುನಾಡು ಸಹಿತ ಹಿಂದಿಯೇತರ ರಾಜ್ಯಗಳಲ್ಲಿ ತಿರುಗು ಬಾಣವಾಗಬಹುದೆಂಬ ಭೀತಿ ವ್ಯಕ್ತಪಡಿಸಿ, ಸಾವಧಾನದಿಂದಿರುವಂತೆ ಸಲಹೆ ನೀಡಿತು.

ಮುಸ್ಲಿಂ ಮೀಸಲಾತಿಯ ಬಗ್ಗೆ ಹೆಫ್ತುಲ್ಲಾರ ಹೇಳಿಕೆ ವಿವಾದ

ಅಲ್ಪಸಂಖ್ಯಾತರಿಗೆ ಸಮಾಜದಲ್ಲಿ ‘ಸಮಾನ ಅವಕಾಶ’ ಅಗತ್ಯವಾಗಿದ್ದು, ಅದಕ್ಕೆ ಮೀಸಲಾತಿ ಉತ್ತರವಾಗದೆಂದು ನೂತನ ಸರಕಾರದ ಅತ್ಯಂತ ಹಿರಿಯ ಸದಸ್ಯೆ ಹಗೂ ಅಲ್ಪಸಂಖ್ಯಾತರ ವ್ಯವಹಾರ ಸಚಿವೆ ನಜ್ಮಾ ಹೆಫ್ತುಲ್ಲಾ ಹೇಳಿದ್ದರು.

ಮತೀಯ ಆಧಾರದ ಮೀಸಲಾತಿಗೆ ಸಂವಿಧಾನದ ಅನುಮತಿಯಿಲ್ಲ. ಅಥವಾ ಅದು ಪರಿಹಾರವೂ ಅಲ್ಲ. ಅದು ಸ್ಪರ್ಧಾಸ್ಫೂರ್ತಿಯನ್ನು ಕೊಲ್ಲುತ್ತದೆಂದು ಅವರು ಅಭಿಪ್ರಾಯಿಸಿದ್ದರು.

ದಿಲ್ಲಿ ವಿವಿಯ 4 ವರ್ಷಗಳ ಪದವಿ ವಿವಾದ

ನಾಲ್ಕು ವರ್ಷಗಳ ಪದವಿ ಶಿಕ್ಷಣ ಯೋಜನೆ ರದ್ದುಪಡಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ ದಿಲ್ಲಿ ವಿವಿಗೆ ಆದೇಶ ನೀಡಿತ್ತು.

ವಿದ್ಯಾರ್ಥಿಗಳು ಪದವಿ ಪಡೆಯುವಲ್ಲಿ ಒಂದು ವರ್ಷ ನಷ್ಟವಾಗದಂತೆ ಅವರಿಗೆ 3 ವರ್ಷಗಳ ಪದವಿ ಶಿಕ್ಷಣಕ್ಕೆ ಮರಳಲು ವ್ಯವಸ್ಥೆ ಮಾಡಬೇಕು. ಉಳಿದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಅಗತ್ಯವಿರುವ ಶೈಕ್ಷಣಿಕ ಹಾಗೂ ಇತರ ಸಾಮರ್ಥ್ಯಗಳಿಸುವುದನ್ನು ಖಚಿತಪಡಿಸಬೇಕೆಂದು ಯುಜಿಸಿ ಆದೇಶಿಸಿತ್ತು.

ಯುಪಿಎ ರಾಜ್ಯಪಾಲರ ರಾಜೀನಾಮೆ ವಿವಾದ

ಯುಪಿಎ ಸರಕಾರವ ನೇಮಕ ಮಾಡಿದ್ದವರನ್ನು ರಾಜಭವನಗಳಿಂದ ತೆರವುಗೊಳಿಸುವ ಕ್ರಮವನ್ನು ಎನ್‌ಡಿಎ ಸರಕಾರವೂ ಮುಂದುವರಿಸಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರಬಂಧನ ಪ್ರಾಧಿಕಾರ(ಎನ್‌ಡಿಎಂಎ) ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ(ಎನ್‌ಸಿಡಬ್ಲು) ಎಲ್ಲ ಸದಸ್ಯರಿಗೆ ರಾಜೀನಾಮೆ ನೀಡುವಂತೆ ಅದು ಜೂ.19ರಂದು ಸೂಚಿಸಿತ್ತು.

ಛತ್ತೀಸ್‌ಗಡದ ರಾಜ್ಯಪಾಲ ಶೇಖರ ದತ್ತ್, ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ತನ್ನ ರಾಜೀನಾಮೆ ಒಪ್ಪಿಸಿದ ದಿನವೇ ಈ ಕ್ರಮ ಹೊರ ಬಿದ್ದಿತ್ತು. ದತ್ತ್ ಸಹಿತ ಇಬ್ಬರು ರಾಜ್ಯಪಾಲರು ರಾಜೀನಾಮೆ ನೀಡಿದ್ದಾರೆ.

ಇದು ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆಗೆ ಕಾರಣವಾಯಿತು. ಸರಕಾರ ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡಬೇಕೇ ಹೊರತು ಛದ್ಮ ಸಮರಕ್ಕಲ್ಲವೆಂದು ಕಾಂಗ್ರೆಸ್ ಹೇಳಿದರೆ, ರಾಜ್ಯಪಾಲರು ಅಗತ್ಯವೇ ಎಂಬ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ಜೆಡಿಯು ಆಗ್ರಹಿಸಿದೆ.

ಯೋಜನಾ ಆಯೋಗದ ರದ್ದತಿ/ಕಡಿತ ಯೋಜನೆ ವಿವಾದ

ಸರ್ವಶಕ್ತ ಯೋಜನಾ ಆಯೋಗ ಸಣ್ಣದಾಗಬಹುದು.ಹೆಚ್ಚು ಉತ್ತರದಾಯಿಯನ್ನಾಗಿ ಮಾಡಬಹುದು, ಹೊಸ ಸರಕಾರ ದೀರ್ಘಾವಧಿ ಚಿಂತನೆ ನಡೆಸಲು ಬಲೊದ್ಬಂಧ ಮಾಡಬಹುದೆಂಬ ವರದಿಗಳ ಬಳಿಕ ವಿವಾದ ಸೃಷ್ಟಿಯಾಯಿತು.

ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ಯೋಜನಾ ಆಯೋಗದ ಭಾರೀ ಹಣಕಾಸು ಅಧಿಕಾರವನ್ನು ಮೊಟಕುಗೊಳಿಸಬಹುದು ಹಾಗೂ ಅದನ್ನು ಅಭಿವೃದ್ಧಿ ಚಿಂತನಾ ವೇದಿಕೆಯಾಗಿ ಪರಿವರ್ತಿಸಬಹುದೆಂದು ವರದಿಗಳು ಹೇಳಿದ್ದವು.

ಸರಕಾರದಿಂದ ದೊರೆಯುವ ನಿಧಿ ಹಾಗೂ ಅದನ್ನು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೇಗೆ ಅತ್ಯುತ್ತಮವಾಗಿ ಉಪಯೋಗಿಸಬಹುದೆಂದು ಅಂದಾಜಿಸಲು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಯೋಜನಾ ಆಯೋಗವನ್ನು ರೂಪಿಸಿದ್ದರು.

ಹೊಸ ಭೂ ಸೇನಾ ದಂಡನಾಯಕನ ನೇಮಕಾತಿಯ ಬಗ್ಗೆ ವಿ.ಕೆ.ಸಿಂಗ್ ಟೀಕೆ

ವಿ.ಕೆ.ಸಿಂಗ್ ಕೈಗೊಂಡಿದ್ದ ‘ಕಾನೂನು ಬಾಹಿರ ಹಾಗೂ ಪೂರ್ವಯೋಜಿತ’ ನಿರ್ಧಾರಗಳನ್ನು ಟೀಕಿಸಿ ರಕ್ಷಣಾ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತ್ತು. (ಕೃಪೆ: ವಾರ್ತಾ ಭಾರತಿ, 26.06.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s