ಜಡ್ಜ್‌ಗಳ ನೇಮಕದಲ್ಲಿ ರಾಜಕೀಯ ಬೇಡ

Posted: ಜೂನ್ 28, 2014 in Uncategorized

# ಹಿರಿಯ ವಕೀಲ ಮತ್ತು ಕಾನೂನು ತಜ್ಞ ಗೋಪಾಲ ಸುಬ್ರಮಣಿಯಂ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ನರೇಂದ್ರ ಮೋದಿ ನೇತತ್ವದ ಸರಕಾರ ನಿರಾಕರಿಸಿರುವ ಕ್ರಮ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗದ ಪಾತ್ರ ಏನಿರಬೇಕು ಎಂಬ ಬಗ್ಗೆ ಉದ್ವೇಗದ ಚರ್ಚೆಗೆ ಈ ವಿವಾದ ಆಸ್ಪದ ನೀಡಿದೆ. ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸುಪ್ರೀಂ ಕೋರ್ಟ್‌ನ ಆಯ್ಕೆ ಮಂಡಳಿ ನಾಲ್ವರ ಹೆಸರನ್ನು ಅಂತಿಮಗೊಳಿಸಿ ಸರಕಾರಕ್ಕೆ ಕಳುಹಿಸಿತ್ತು. ಆ ಪೈಕಿ ಮೂವರ ಹೆಸರನ್ನು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ ಅವರ ಹೆಸರನ್ನು ಸರಕಾರ ಪಟ್ಟಿಯಿಂದ ವಾಪಸ್ ಪಡೆದಿತ್ತು.

ಸುಬ್ರಮಣಿಯಂ ಅವರೇ ತಿಳಿಸಿರುವಂತೆ ಅವರ ನೇಮಕಾತಿಗೆ ಸರಕಾರ ಹಲವು ಆಕ್ಷೇಪಗಳನ್ನು ಎತ್ತಿದೆ. ಅದೂ ಗುಪ್ತಚರ ಇಲಾಖೆ ಕೊಟ್ಟಿರುವ ಮಾಹಿತಿ ಆಧಾರದ ಮೇಲೆ ಸರಕಾರ ಆಕ್ಷೇಪ ಎತ್ತಿರುವುದು ಅರ್ಥವಿಲ್ಲದ್ದು ಎನ್ನುವುದು ಅವರ ವಾದ. ನ್ಯಾಯಮೂರ್ತಿಯನ್ನಾಗಿ ಮಾಡಿ ಎಂದು ತಾವು ಕೋರಿರಲಿಲ್ಲ ಮತ್ತು ಕೋರ್ಟ್ ತಾನಾಗಿಯೇ ನ್ಯಾಯಮೂರ್ತಿಯಾಗಲು ತಮ್ಮನ್ನು ಆಹ್ವಾನಿಸಿತ್ತು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಆಯ್ಕೆಯನ್ನು ಕೋರ್ಟ್ ಸಮರ್ಥಿಸಿಕೊಳ್ಳದೆ ಸರಕಾರದ ನಿರ್ಧಾರಕ್ಕೆ ತಲೆಬಾಗಿದ್ದು ನ್ಯಾಯಾಂಗದ ಸ್ವಾತಂತ್ಯ್ರಕ್ಕೆ ಧಕ್ಕೆ ತಂದಂತಾಗಿದೆ ಎನ್ನುವುದು ಅವರ ಅಭಿಪ್ರಾಯ. ಅವರ ನೇಮಕಾತಿಯನ್ನು ತಿರಸ್ಕರಿಸಿರುವುದರ ಹಿಂದೆ ನಿರ್ದಿಷ್ಟ ರಾಜಕೀಯ ಕಾರಣವೂ ಇರಬಹುದು ಎನ್ನುವುದು ಅವರ ಅನುಮಾನ.

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ (ಕೋರ್ಟ್ ಸ್ನೇಹಿತರಾಗಿ) ಕೆಲಸ ಮಾಡಲು ಗೋಪಾಲ ಸುಬ್ರಮಣಿಯಂ ಅವರನ್ನು ಸುಪ್ರೀಂ ಕೋರ್ಟ್ ಕೋರಿತ್ತು. ಆ ಪ್ರಕರಣದ ತನಿಖೆಯನ್ನು ಅವರು ಕೈಗೆತ್ತಿಕೊಂಡ ಮೇಲೆ ಅಂದಿನ ಗಹ ಸಚಿವ ಹಾಗೂ ಮೋದಿ ಅವರ ಆಪ್ತ ಅಮಿತ್ ಷಾ ವಿರುದ್ಧ ಹಲವು ಹೊಸ ಸಾಕ್ಷ್ಯಾಧಾರಗಳು ಬೆಳಕಿಗೆ ಬಂದವು. ಅವರು ಕೊಟ್ಟ ಸಾಕ್ಷ್ಯಾಧಾರಗಳಿಂದಾಗಿಯೇ ಸುಪ್ರೀಂ ಕೋರ್ಟ್ ಆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು. ನ್ಯಾಯಮೂರ್ತಿಯಾಗಿ ತಮ್ಮ ನೇಮಕಾತಿಯನ್ನು ಸರಕಾರ ನಿರಾಕರಿಸಲು ಇದೇ ಕಾರಣವಿರಬೇಕೆಂದು ಗೋಪಾಲ ಸುಬ್ರಮಣಿಯಂ ಹೇಳುತ್ತಾರೆ. ಇದು ನಿಜವೇ ಆಗಿದ್ದರೆ ಮೋದಿ ಸರಕಾರಕ್ಕೆ ಇದೊಂದು ಕಳಂಕ.

ನ್ಯಾಯಾಂಗ ನೇಮಕಾತಿಗಳು ವಿವಾದಕ್ಕೆ ಗುರಿಯಾಗುತ್ತಿರುವುದು ಇದು ಹೋಸದೇನಲ್ಲ. ನಿರ್ದಿಷ್ಟ ಮಾನದಂಡ ರಚನೆಯಾಗದಿರುವುದೇ ಸಮಸ್ಯೆಯ ಮೂಲ. ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಆ ಕೋರ್ಟಿನ ನ್ಯಾಯಮೂರ್ತಿಗಳ ಆಯ್ಕೆ ಮಂಡಳಿ ಹೆಸರುಗಳನ್ನು ಸೂಚಿಸುತ್ತದೆ. ಭಿನ್ನಾಭಿಪ್ರಾಯ ಬಂದ ಸಂದರ್ಭದಲ್ಲಿ ಮಂಡಳಿ ಜತೆ ಸರಕಾರ ಮತ್ತೆ ಚರ್ಚಿಸಿ ಹೆಸರುಗಳಿಗೆ ಅಂತಿಮ ಅನುಮತಿ ನೀಡಬೇಕು. ಸುಪ್ರೀಂಕೋರ್ಟ್ ತಾನು ಸೂಚಿಸಿದವರೇ ನ್ಯಾಯಮೂರ್ತಿಗಳಾಗಬೇಕು ಎಂದು ಪಟ್ಟು ಹಿಡಿದರೆ ಸರಕಾರ ಒಪ್ಪಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ವಾಸ್ತವವಾಗಿ ಏನು ನಡೆಯಿತು ಎನ್ನುವುದು ಬಹಿರಂಗವಾಗಿಲ್ಲ.

ಇದೇನೇ ಇದ್ದರೂ ಗೋಪಾಲ ಸುಬ್ರಮಣಿಯಂ ಅಂಥ ಸ್ವತಂತ್ರ ಕಾನೂನು ತಜ್ಞರು ನ್ಯಾಯಮೂರ್ತಿಗಳಾಗಲು ಅವಕಾಶವಾಗದಿದ್ದುದು ಒಳ್ಳೆಯ ಬೆಳವಣಿಗೆಯಲ್ಲ. ತಾವು ನ್ಯಾಯಮೂರ್ತಿಗಳಾಗಲು ಬಯಸುವುದಿಲ್ಲ ಎಂದು ಗೋಪಾಲ ಸುಬ್ರಮಣಿಯಂ ಅವರು ಈಗಾಗಲೇ ಘೋಷಿಸಿರುವುದರಿಂದ ಸರಕಾರ ಅವರ ನೇಮಕಾತಿ ನಿರಾಕರಣೆಯ ನಿಜವಾದ ಕಾರಣಗಳನ್ನು ಬಹಿರಂಗ ಮಾಡಬೇಕು. ನ್ಯಾಯಾಂಗ ನೇಮಕಾತಿ ವಿಚಾರದಲ್ಲಿ ಪ್ರಸ್ತುತ ಇರುವ ಗೊಂದಲಕಾರಿ ನಿಯಮಗಳನ್ನು ಬದಲಾಯಿಸಿ ಮಾದರಿ ವ್ಯವಸ್ಥೆಯೊಂದು ರೂಪುಗೊಳ್ಳಬೇಕು. (ಕೃಪೆ: ಪ್ರಜಾವಾಣಿ ಸಂಪಾದಕೀಯ, 28.06.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s