ಜೈಲಿನಲ್ಲಿ ಜೀವಚ್ಛವವಾಗುತ್ತಿರುವ ಪ್ರೊ. ಜಿ.ಎನ್. ಸಾಯಿಬಾಬಾ

Posted: ಜೂನ್ 28, 2014 in Uncategorized

– ಡಾ. ಪರಂಜಿತ್ ಸಿಂಗ್ ಸಾಹ್ನಿ
ಶನಿವಾರ – ಜೂನ್ -28-2014
ಮಾವೊವಾದಿಗಳ ಜೊತೆ ಸಂಪರ್ಕವನ್ನು ಹೊಂದಿದ್ದಾರೆಂಬ ಆರೋಪದಲ್ಲಿ ನಾಗಪುರ ಜೈಲಿನಲ್ಲಿ ಬಂಧಿತರಾಗಿರುವ ಪ್ರೊಫೆಸರ್ ಜಿ.ಎನ್. ಸಾಯಿಬಾಬಾರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿ ಡಾ.ಪರಂಜಿತ್ ಸಿಂಗ್ ಸಾಹ್ನಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಬರೆಯುತ್ತಿರುವ ಬಹಿರಂಗ ಪತ್ರ.

ಪ್ರಿಯ ಡಾ. ಹರ್ಷವರ್ಧನ್,

ಭಾರತದಲ್ಲಿ ತುರ್ತು ಪರಿಸ್ಥಿತಿ (1975-1977) ಹೇರಿಕೆಯ ವಾರ್ಷಿಕ ದಿನದ ಸಂದರ್ಭದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಸೇರಿದ ರಾಮ್‌ಲಾಲ್ ಆನಂದ್ ಕಾಲೇಜ್‌ನ ಉಪನ್ಯಾಸಕ ಪ್ರೊಫೆಸರ್ ಜಿ.ಎನ್. ಸಾಯಿಬಾಬಾರ ದುರ್ದೆಸೆಯನ್ನು ನಿಮ್ಮ ಗಮನಕ್ಕೆ ತರಲು ನಾನು ಈ ಪತ್ರ ಬರೆಯುತ್ತಿದ್ದೇನೆ. ಅವರು ಮೇ 9ರಿಂದ ನಾಗಪುರ ಜೈಲಿನಲ್ಲಿದ್ದಾರೆ. ಅವರಿಗೆ ಸಿಗಬೇಕಾಗಿರುವ ವೈದ್ಯಕೀಯ ಸೇವೆ ಸಿಗುತ್ತಿಲ್ಲ ಎಂಬುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ.

ಪ್ರೊ. ಸಾಯಿಬಾಬಾರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಾನು ಕೆಲವು ವಿಷಯಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಅವರು ತನ್ನ ಐದನೆ ವರ್ಷದಿಂದ ಎರಡೂ ಕಾಲುಗಳು ಪೋಲಿಯೊ ಪಕ್ಷವಾತಕ್ಕೆ ಗುರಿಯಾಗಿದ್ದಾರೆ. ಮೇಲ್ಭಾಗದ ಕಾಲುಗಳಲ್ಲೂ ಅವರು ಬಲಹೀನತೆ ಅನುಭವಿಸುತ್ತಿದ್ದಾರೆ. ಮೂಳೆ ಮತ್ತು ಬೆನ್ನೆಲುಬು ರಚನೆಯ ದೋಷದಿಂದಾಗಿ ಅವರು ತೀವ್ರ ಕೆಳ ಬೆನ್ನು ನೋವಿಗೂ ಗುರಿಯಾಗಿದ್ದಾರೆ. ಅವರಿಗೆ ಹೃದಯದ ಸಮಸ್ಯೆ ಮತ್ತು ಅತಿ ರಕ್ತದೊತ್ತಡವೂ ಇದೆ. ಗಾಲಿಕುರ್ಚಿಯಲ್ಲೇ ಓಡಾಡುತ್ತಿರುವ ಅವರಿಗೆ ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಓರ್ವ ಸಹಾಯಕನ ಅಗತ್ಯವಿದೆ. ಅವರ ಎರಡೂ ಕಾಲುಗಳ ಕೆಳ ಭಾಗ ದುರ್ಬಲಗೊಂಡಿದ್ದು ಜೈಲಿನಲ್ಲಿ ಅವರಿಗೆ ಒದಗಿಸಲಾಗಿರುವ ಭಾರತೀಯ ಮಾದರಿಯ ಶೌಚಾಲಯವನ್ನು ಬಳಸುವುದು ಅಸಾಧ್ಯವಾಗಿದೆ.

ಮಾಧ್ಯಮ ವರದಿಗಳನ್ನು ಆಧರಿಸಿ ಹೇಳುವುದಾದರೆ ಅವರಿಗೆ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಅತಿ ರಕ್ತದೊತ್ತಡಕ್ಕೆ ಔಷಧಿ ನೀಡಲಾಗಿಲ್ಲ. ಇದು ಮೆದುಳಿನ ರಕ್ತಸ್ರಾವ, ಹೃದಯಾಘಾತ ಮತ್ತು ದೀರ್ಘಾವಧಿಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದಾದ ಸಾಧ್ಯತೆಯಿದೆ. ಸಹಾಯಕರಿಲ್ಲದೆ ಅವರು ಶೌಚಾಲಯವನ್ನು ಬಳಸಲು ಪ್ರಾಣಿಗಳಂತೆ ತೆವಳಿಕೊಂಡು ಹೋಗಬೇಕಾಗಿದೆ. ಅವರು ಬಗ್ಗಿಕೊಂಡು ಹೋಗಬೇಕಾಗಿದ್ದು ಇದರಿಂದ ಬೆನ್ನಿನಲ್ಲಿ ಅಸಹನೀಯ ನೋವು ಉಂಟಾಗುತ್ತಿದೆ.

ಸಾಯಿಬಾಬಾರ ಕಾಯಿಲೆಗಳ ಬಗ್ಗೆ ಪ್ರಮಾಣೀಕೃತ ಮೂಳೆ ಸರ್ಜನ್ ಆಗಿರುವ ನನ್ನಿಂದ ಅಭಿಪ್ರಾಯ ಕೋರಲಾಯಿತು. ನಾನು ಹೊಸದಿಲ್ಲಿಯ ವೌಲಾನಾ ಆಝಾದ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದಾಗ ಕೆಳ ಕಾಲುಗಳ ‘ಪೋಸ್ಟ್ ಪೋಲಿಯೊ ರೆಸಿಡುಯಲ್ ಪ್ಯಾರಲಿಸಿಸ್’ ಬಗ್ಗೆ ಪ್ರಬಂಧವೊಂದನ್ನು ಸಲ್ಲಿಸಿದ್ದೆ. ಬಳಿಕ ಅಂಗವೈಕಲ್ಯ ವೌಲ್ಯಮಾಪನ ಮತ್ತು ಪೋಸ್ಟ್ ಪೋಲಿಯೊ ರೆಸಿಡುಯಲ್ ಪ್ಯಾರಲಿಸಿಸ್‌ನಿಂದ ಉಂಟಾಗುವ ಅಂಗವೈಕಲ್ಯದ ಬಗ್ಗೆ ಹೊಸದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪುನರ್ವಸತಿ ವಿಭಾಗದಲ್ಲಿ ರಿಸರ್ಚ್ ಫೆಲೊ ಮತ್ತು ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಅಂಗವೈಕಲ್ಯ ಮಾನವರನ್ನು ಯಾವ ರೀತಿ ಕಾಡುತ್ತದೆ ಎಂದು ಹೇಳಲು ನಾನು ಅಧಿಕೃತ ಸ್ಥಾನಮಾನ ಹೊಂದಿರದಿದ್ದರೂ ನಾನು ಜನರ ಆರೋಗ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಕುಷ್ಠ ರೋಗಿಗಳೊಂದಿಗೆ ಏಳು ವರ್ಷಗಳ ಕಾಲ ಸ್ವಯಂಪ್ರೇರಿತವಾಗಿ ಕೆಲಸ ಮಾಡಿದ ಬಳಿಕ ಅಂಗವೈಕಲ್ಯ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಪ್ರಾಯೋಗಿಕ ಜ್ಞಾನವನ್ನು ನಾನು ಹೊಂದಿದ್ದೇನೆ.

ಪ್ರೊ. ಸಾಯಿಬಾಬಾ 90 ಶೇ. ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ನಿಮ್ಮ ಹಿನ್ನೆಲೆ ಹಾಗೂ ಪಲ್ಸ್ ಪೋಲಿಯೊ ಕಾರ್ಯಕ್ರಮದ ಮೂಲಕ ಭಾರತವನ್ನು ಪೋಲಿಯೊ
ಮುಕ್ತಗೊಳಿಸುವಲ್ಲಿ ನೀವು ತೋರಿದ ಕಾಳಜಿಯ ಬಗ್ಗೆ ನನಗೆ ಗೊತ್ತಿರುವುದರಿಂದ ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ.

ದುರದೃಷ್ಟವಶಾತ್ ನಾಗಪುರದ ಜೈಲು ಅಧಿಕಾರಿಗಳು ತಮ್ಮ ಕೃತ್ಯಗಳಿಂದ ಪ್ರೊ. ಸಾಯಿಬಾಬಾರನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಭಿನ್ನ ರಾಜಕೀಯ ಸಿದ್ಧಾಂತಗಳಿಗೆ ಸೇರಿದ ರಾಜಕೀಯ ಪಕ್ಷಗಳು, ನಾಯಕರು ಹಾಗೂ ಜನಸಾಮಾನ್ಯರನ್ನು ಬಂಧಿಸಿರುವುದು ನಿಮಗೆ ತಿಳಿದಿರುವ ವಿಷಯ. ಆ ವೇಳೆ ನಿಮ್ಮ ಪಕ್ಷ (ಆಗಿನ ಜನಸಂಘ) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವಾರು ನಾಯಕರನ್ನೂ ಬಂಧಿಸಿದ್ದರು. ಹಾಗಾಗಿ, 90 ಶೇ. ದೈಹಿಕ ಅಂಗವೈಕಲ್ಯ ಹೊಂದಿದವರಿಗೆ ಭಾರತೀಯ ಜೈಲುಗಳಲ್ಲಿ ವಿಶೇಷ ವೈದ್ಯಕೀಯ ಸೇವೆಗಳು ಸಿಗುವುದಿಲ್ಲ ಎಂಬುದು ನಿಮಗೂ ಗೊತ್ತು.

ಪ್ರೊ. ಸಾಯಿಬಾಬಾರಿಗೆ ಒಂದು ಗಾಲಿ ಕುರ್ಚಿ ಮತ್ತು ದಿನದ 24 ಗಂಟೆಯೂ ಅವರೊಂದಿಗೆ ಇರಲು ಓರ್ವ ಸಹಾಯಕನ ಅಗತ್ಯವಿದೆ. ಅವರಿಗೆ ಪಾಶ್ಚಿಮಾತ್ಯ ಮಾದರಿಯ ಶೌಚಾಲಯ, ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ, ಇಸಿಜಿ ಮತ್ತು ಇಕೊ ಮುಂತಾದ ಮೂಲ ತಪಾಸಣೆ, ದಿನಂಪ್ರತಿ ಫಿಸಿಯೋಥೆರಪಿ ಮತ್ತು ಒಕ್ಯುಪೇಶನಲ್ ಥೆರಪಿ, ಕೆಳ ಬೆನ್ನಿಗೆ ಹೀಟ್ ತೆರಪಿ, ಕೆಳ ಬೆನ್ನು ನೋವಿಗೆ ವಿಶೇಷ ಬ್ರೇಸ್ ಹಾಗೂ ಚಾಪೆ ಹೊಂದಿರುವ ಗಟ್ಟಿ ಬೆಡ್‌ನ್ನು ಅವರಿಗೆ ಒದಗಿಸಬೇಕಾಗಿದೆ. ಅವರ ವೈದ್ಯಕೀಯ ಸ್ಥಿತಿ ಮತ್ತು ಮೂಳೆ ಕಾಯಿಲೆಗಳ ಬಗ್ಗೆ ನನಗೆ ಗೊತ್ತಿರುವುದರಿಂದ ನಾನು ಈ ಅಭಿಪ್ರಾಯಕ್ಕೆ ಬಂದಿದ್ದೇನೆ.

ಸ್ವಾಮಿ, ಅವರನ್ನು ಕತ್ತಲೆಯ ಏಕಾಂತದ ಕೋಣೆಯಲ್ಲಿ ಇಡಲಾಗಿದೆ ಎಂಬುದಾಗಿ ವರದಿಗಳು ಹೇಳುತ್ತಿವೆ. ಅವರ ಕೆಳ ಕಾಲಿನ ಮೂಳೆಗಳು ಈಗಾಗಲೇ ತೆಳುವಾಗಿವೆ ಹಾಗೂ ಅವರ ‘ಅಂಡಾ’ ಸೆಲ್‌ನಲ್ಲಿ ಅವರಿಗೆ ಸೂರ್ಯನ ಕಿರಣ ಸಿಗದಿದ್ದರೆ ಅವರ ಮೂಳೆಗಳು ಇನ್ನಷ್ಟು ದುರ್ಬಲಗೊಳ್ಳುತ್ತವೆ. ಇದು ಮತ್ತಷ್ಟು ನೋವು ಸೃಷ್ಟಿಸುತ್ತದೆ ಹಾಗೂ ಮೂಳೆ ಮುರಿಯಲೂ ಬಹುದು. ಒಮ್ಮೆ ಮೂಳೆ ಮುರಿತವಾದರೆ ಅದನ್ನು ಸರಿಪಡಿಸಲು ತುಂಬಾ ಕಷ್ಟ ಎಂಬುದು ತಮಗೂ ಗೊತ್ತಿದೆ. ಅವರ ಇತ್ತೀಚಿನ ಕ್ಯಾಲ್ಸಿಯಂ, ಸೀರಂ ಫಾಸ್ಫೇಟ್ ಮತ್ತು ಆಲ್ಕಲೈನ್ ಫಾಸ್ಫೇಟ್ ವರದಿಗಳು ಹಾಗೂ ಮೂಳೆ ಸಾಂದ್ರತೆ ಮತ್ತು ವಿಟಮಿನ್ ಡಿ3 ಮಟ್ಟದ ವರದಿಗಳು ನನಗೆ ಲಭ್ಯವಿಲ್ಲವಾದುದರಿಂದ ಅವರಿಗೆ ವಿಟಮಿನ್ ಡಿ ನೀಡಬೇಕಾಗಿದೆಯೇ ಬೇಡವೇ ಎಂಬುದನ್ನು ನಾನು ಹೇಳಲಾರೆ.

ತಮಗೆ ಗೊತ್ತಿರಬಹುದು. ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಲಂಡನ್‌ನಲ್ಲಿರುವ ಈಕ್ವಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅವರ ಕೋಣೆಯಲ್ಲಿ ಸೂರ್ಯನ ಬೆಳಕಿನ ಕೊರತೆಯಿರುವುದರಿಂದ ಎಲುಬುಗಳು ದುರ್ಬಲವಾಗುವುದನ್ನು ತಡೆಯಲು ಅವರು ‘ಸನ್‌ಲ್ಯಾಂಪ್’ ಎಂಬ ಉಪಕರಣವನ್ನು ಬಳಸುತ್ತಿರುವುದು ತಮಗೆ ಗೊತ್ತಿರಬಹುದು. ಇದರಿಂದಾಗಿ ಅವರು ಕೃತಕ ಸೂರ್ಯ ಕಿರಣವನ್ನು ಪಡೆಯುತ್ತಿದ್ದಾರೆ ಹಾಗೂ ಅದು ಮೂಳೆಗಳಲ್ಲಿ ವಿಟಮಿನ್ ಡಿ ಉತ್ಪಾದನೆಗೆ ನೆರವಾಗುತ್ತದೆ. ಪ್ರೊ. ಸಾಯಿಬಾಬಾರಿಗೆ ಒಂದು ‘ಸನ್‌ಲ್ಯಾಂಪ್’ ಆದರೂ ಕೊಡಬಹುದಾಗಿದೆ.

ಅವರ ಮೂಲಭೂತ ಆರೋಗ್ಯ ಪರಿಸ್ಥಿತಿಯ ಅಂದಾಜಿಗಾಗಿ ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸುವುದು ಉತ್ತಮವಾಗಿದೆ. ಬಳಿಕ ಸಾಯಿಬಾಬಾರಿಗೆ ನೀಡಬೇಕಾದ ತುರ್ತು ಚಿಕಿತ್ಸೆಗಳ ಬಗ್ಗೆ ಜೈಲು ವೈದ್ಯರಿಗೆ ವಿವರಿಸಬಹುದಾಗಿದೆ. ‘ಹಿಪ್ಪೋಕ್ರಾಟಿಕ್ ಓತ್’ (ಆಧುನಿಕ ವೈದ್ಯ ವಿಜ್ಞಾನಕ್ಕೆ ಅಡಿಪಾಯ ಹಾಕಿದ ಗ್ರೀಕ್ ವೈದ್ಯನ ಹೆಸರಲ್ಲಿ ವೈದ್ಯರು ತೆಗೆದುಕೊಳ್ಳುವ ಪ್ರಮಾಣ) ತೆಗೆದುಕೊಂಡ ವೈದ್ಯರಾಗಿ ಬಂಧಿತನಿಗೆ ನ್ಯಾಯಯುತವಾಗಿ ಸಿಗಬೇಕಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕಾದರೆ ಪ್ರೊ. ಸಾಯಿಬಾಬಾರ ಹಿತೈಷಿಗಳು ಆ ವೆಚ್ಚವನ್ನು ಭರಿಸಲು ಸಿದ್ಧರಿದ್ದಾರೆ.

ಪ್ರೊ. ಸಾಯಿಬಾಬಾರನ್ನು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ಪರಿಚ್ಛೇದಗಳಡಿ ಬಂಧಿಸಲಾಗಿದೆ ಎಂಬುದು ಸತ್ಯ. ನಿಮಗೆ ನೆನಪಿರಬಹುದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಜಾರ್ಜ್ ಫೆರ್ನಾಂಡಿಸ್‌ರನ್ನು ಬರೋಡ ಡೈನಮೈಟ್ ಪ್ರಕರಣದಲ್ಲಿ ಆರೋಪಿಯಾಗಿಸಿ ಜೈಲಿಗೆ ಅಟ್ಟಿದ್ದರು. ಫೆರ್ನಾಂಡಿಸ್ ಮತ್ತು ಇತರರು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದುದಕ್ಕಾಗಿ ಅವರ ವಿರುದ್ಧ ಸರಕಾರಿ ಕಚೇರಿಗಳು ಮತ್ತು ರೈಲ್ವೆ ಹಳಿಗಳನ್ನು ಸ್ಫೋಟಿಸಲು ಡೈನಮೈಟ್ ಸಾಗಿಸಿದ ಸುಳ್ಳು ಪ್ರಕರಣಗಳನ್ನು ಸಿಬಿಐ ದಾಖಲಿಸಿತ್ತು. ಸರಕಾರವನ್ನು ಕಿತ್ತೊಗೆಯಲು ದೇಶದ ವಿರುದ್ಧ ಯುದ್ಧ ಸಾರಿದ ಆರೋಪವನ್ನೂ ಅವರ ವಿರುದ್ಧ ಹೊರಿಸಲಾಗಿತ್ತು. ಅವರನ್ನು 1976ರ ಜೂನ್‌ನಲ್ಲಿ ಬಂಧಿಸಿ ದಿಲ್ಲಿಯ ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. ಅದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು ಅವರು ತನ್ನ ವಿರುದ್ಧದ ಎಲ್ಲ ಪ್ರಕರಣಗಳಿಂದ ನಿರಪರಾಧಿಯಾಗಿ ಹೊರಬಂದರು ಹಾಗೂ ಬಿಜೆಪಿ ನೇತೃತ್ವದ ಹಿಂದಿನ ಎನ್‌ಡಿಎ ಸರಕಾರದಲ್ಲಿ ರಕ್ಷಣಾ ಸಚಿವರಾದರು.

ಪ್ರೊ. ಸಾಯಿಬಾಬಾರ ಪ್ರಕರಣವೂ ರಾಜಕೀಯ ಪ್ರೇರಿತವಾಗಿದ್ದು ಅದನ್ನು ಹಿಂದಕ್ಕೆ ಪಡೆಯಬೇಕಾಗಿದೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಎಸ್. ಜೈಪಾಲ್ ರೆಡ್ಡಿ ಕೂಡ 17 ತಿಂಗಳುಗಳ ಕಾಲ ಜೈಲಿನಲ್ಲಿದ್ದರು. ಅವರೂ ತನ್ನ ಎರಡನೆ ವರ್ಷದಿಂದ ಎರಡೂ ಕಾಲುಗಳ ಪೋಸ್ಟ್ ಪೋಲಿಯೊ ರೆಸಿಡುಯಲ್ ಪ್ಯಾರಲಿಸಿಸ್‌ನಿಂದ ಬಳಲುತ್ತಿದ್ದರು. ಅವರೂ ಗಾಲಿಕುರ್ಚಿಯಲ್ಲಿ ಓಡಾಡುತ್ತಿದ್ದಾರೆ. ಆದರೆ ಮೊಣಕೈ ಆಧಾರದ ಸಹಾಯದಿಂದ ಕೆಲವು ಹೆಜ್ಜೆಗಳನ್ನು ಇಡಬಲ್ಲರು. 90 ಶೇ. ಅಂಗವೈಕಲ್ಯಕ್ಕೆ ಒಳಗಾಗಿದ್ದ ಅವರನ್ನು ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೈಲಿಗಟ್ಟಲಾಗಿತ್ತು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡಲಾಗಿತ್ತು.

ಇಂದು ತುರ್ತು ಪರಿಸ್ಥಿತಿಯ ಘೋಷಣೆಯಂತೂ ಆಗಿಲ್ಲ. ಆದರೂ ಪ್ರೊ. ಸಾಯಿಬಾಬಾರಂಥ ಅಂಗವಿಕಲರನ್ನು ಜೈಲಿಗಟ್ಟಲಾಗುತ್ತಿದೆ. ಅದೂ ಅಲ್ಲದೆ, ಜೈಪಾಲ್ ರೆಡ್ಡಿಗೆ 1975-77ರ ಅವಧಿಯಲ್ಲಿ ಜೈಲಿನಲ್ಲಿ ಯಾವ ಸವಲತ್ತು ನೀಡಲಾಗಿತ್ತೋ ಕನಿಷ್ಠ ಅದನ್ನಾದರೂ ಪ್ರೊ. ಸಾಯಿಬಾಬಾರಿಗೆ ನೀಡಬೇಕಾಗಿದೆ.

ಸ್ವಾಮಿ, ಪ್ರೊ. ಸಾಯಿಬಾಬಾ ಶೋಷಿತ ವರ್ಗ ಹಾಗೂ ದುರ್ಬಲ ಆರ್ಥಿಕ ಹಿನ್ನೆಲೆಯಿಂದ ಬಂದವರು. ತನ್ನ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಅವರು ದಿಲ್ಲಿ
ವಿಶ್ವವಿದ್ಯಾನಿಲಯದ ರಾಮ್ ಲಾಲ್ ಆನಂದ್ ಕಾಲೇಜ್‌ನ ಉಪನ್ಯಾಸಕರಾದರು. ಅವರಿಗೆ ನೀಡಲಾಗುತ್ತಿರುವ ಚಿತ್ರಹಿಂಸೆ ಮತ್ತು ಅವರ ಬಂಧನ ರಾಜಕೀಯ ವ್ಯವಸ್ಥೆ ಅವರನ್ನು ‘ಏಕಲವ್ಯ’ನ ರೀತಿಯಲ್ಲಿ ಬಲಿಪಶು ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ. ಧನ್ಯವಾದಗಳೊಂದಿಗೆ,
ನಿಮ್ಮವನೆ,
ಡಾ. ಪರಂಜಿತ್ ಸಿಂಗ್ ಸಾಹ್ನಿ
ಎಂ.ಬಿ.ಬಿ.ಎಸ್., ಎಂ.ಎಸ್. (ಓರ್ತೊ)
ಹಾಗೂ ಕಾರ್ಯದರ್ಶಿ, ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ವಾಚ್ ಗ್ರೂಪ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s