ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾರನ್ನು ತರಾಟೆಗೆತ್ತಿಕೊಂಡ ಜಡ್ಜ್ ವರ್ಗಾವಣೆ

Posted: ಜೂನ್ 28, 2014 in Uncategorized

ಮುಂಬೈ: ತುಳಸಿರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಬಿಐ ಜಡ್ಜ್ ಜೆ.ಟಿ.ಉತ್ಪತ್‌ರನ್ನು ವರ್ಗಾಯಿಸಲಾಗಿದೆ.

ಕೋರ್ಟ್‌ಗೆ ಹಾಜರಾಗುವುದರಿಂದ ತಪ್ಪಿಸಿಕೊಂಡಿದ್ದ ಪ್ರಕರಣದ ಮುಖ್ಯ ಆರೋಪಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾರನ್ನು ತರಾಟೆಗೆ ತೆಗೆದುಕೊಂಡ ಒಂದು ದಿನದ ಬಳಿಕ ವರ್ಗಾವಣೆ ಆದೇಶ ಹೊರಡಿಸಿರುವುದು ಕೌತುಕಗಳಿಗೆ ಕಾರಣವಾಗಿದೆ. ಈ ಸಂಬಂಧ ನ್ಯಾಯಮೂರ್ತಿಗೆ ಬುಧವಾರ ವರ್ಗಾವಣೆ ಆದೇಶ ದೊರಕಿದೆ.

ಸೆಷನ್ಸ್ ಜಡ್ಜ್ ಉತ್ಪತ್‌ರನ್ನು ಪುಣೆಗೆ ವರ್ಗಾಯಿಸಲಾಗಿದ್ದು,ಅವರ ಸ್ಥಾನವನ್ನು ನ್ಯಾ.ಬಿ.ಎಚ್.ಲೊಯಾ ತುಂಬಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಶಾ ಸಲ್ಲಿಸಿದ್ದ ಬಿಡುಗಡೆಯ ಅರ್ಜಿ ಸಂಬಂಧ ತೀರ್ಪು ಪ್ರಕಟವಾಗುವುದೆಂದು ನಿರೀಕ್ಷಿಸಿರುವ ದಿನವೇ ಈ ವರ್ಗಾವಣೆ ನಡೆದಿದೆ.

ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಲು ಉತ್ಪತ್ ನಿರಾಕರಿಸಿದ್ದಾರೆ. ಮೇ ಅಥವಾ ಜೂನ್ ಮೊದಲ ವಾರದಂದು ವರ್ಗಾಯಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಉತ್ಪತ್ ಸಲ್ಲಿಸಿದ್ದ ಅರ್ಜಿಗೆ ಅದು ಸಮ್ಮತಿ ಸೂಚಿಸಿತ್ತು ಎಂದು ಬಾಂಬೆ ಹೈಕೋರ್ಟ್ ಮಹಾನೋಂದಣಾಧಿಕಾರಿ ಶಾಲಿನಿ ಫನ್ಸಾಲ್ಕರ್ ಜೋಶಿ ತಿಳಿಸಿದ್ದಾರೆ.

‘‘ಪುತ್ರಿಯ ವಿದ್ಯಾಭ್ಯಾಸದ ಕಾರಣ ಪುಣೆಗೆ ವರ್ಗಾಯಿಸುವಂತೆ ಕೋರಿ ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ವೈಯಕ್ತಿಕ ಅಥವಾ ಕೌಟಂಬಿಕ ಕಾರಣಗಳ ಹಿನ್ನೆಲೆಯಲ್ಲಿ ವರ್ಗಾವಣೆ ಕೋರಿ ನ್ಯಾಯಾಲಯದ ಅಧಿಕಾರಿಗಳಿಂದ ಸಾಮಾನ್ಯವಾಗಿ ಇಂತಹ ಮನವಿಗಳು ಸಲ್ಲಿಕೆಯಾಗುತ್ತದೆೆ ’’ಎಂದು ಜೋಶಿ ಹೇಳಿದ್ದಾರೆ. ಉತ್ಪತ್ ಹೊರತಾಗಿ ಇತರ ಮೂವರು ನ್ಯಾಯಮೂರ್ತಿಗಳನ್ನು ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೋರ್ಟ್‌ಗೆ ಹಾಜರಾಗುವುದರಿಂದ ತನ್ನ ಕಕ್ಷಿದಾರನಿಗೆ ವಿನಾಯಿತಿ ನೀಡಬೇಕೆಂಬ ಶಾ ಪರ ವಕೀಲರ ಮನವಿಯ ವಿರುದ್ಧ ಜೂ.20ರಂದು ನ್ಯಾ.ಉತ್ಪತ್ ಕಿಡಿಕಾರಿದ್ದರು. ದಿಲ್ಲಿಯಲ್ಲಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಶಾ ಭಾಗವಹಿಸಿರುವುದರಿಂದ ಕೋರ್ಟ್‌ಗೆ ಅವರಿಗೆ ಬರಲಾಗುವುದಿಲ್ಲ ಎಂಬ ಅರ್ಜಿಯನ್ನು ಶಾ ಪರ ವಕೀಲ ರಾಬಿನ್ ಮೊಗೆರಾ ಸಲ್ಲಿಸಿದ್ದರು.

ಜೂ.6ರಂದು ಅನಾರೋಗ್ಯದ ನೆಪವೊಡ್ಡಿ ಕೋರ್ಟ್‌ಗೆ ಬರಲು ಸಾಧ್ಯವಿಲ್ಲವೆಂದು ತಿಳಿಸಿ ಶಾ ಅರ್ಜಿ ಸಲ್ಲಿಸಿದ್ದರು. ತಾನು ಮಧುಮೇಹ ರೋಗದಿಂದ ಬಳಲುತ್ತಿರುವುದರಿಂದ ವಿಶ್ರಾಂತಿಯ ಅವಶ್ಯಕತೆಯಿದ್ದು, ಕೋರ್ಟ್‌ಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಬೇಕೆಂದು ಅವರು ಕೋರಿದ್ದರು.

‘‘ಯಾವುದೇ ಸಮರ್ಪಕ ಕಾರಣಗಳಿಲ್ಲದೆ ಪ್ರತಿ ಸಂದರ್ಭದಲ್ಲಿಯೂ ನೀವು ವಿನಾಯಿತಿ ಅರ್ಜಿಯನ್ನು ನೀಡುತ್ತಿದ್ದೀರಿ’’ ಎಂದು ಶಾ ಪರ ವಕೀಲರನ್ನು ನ್ಯಾ.ಉತ್ಪತ್ ತರಾಟೆಗೆ ತೆಗೆದುಕೊಂಡಿದ್ದರು.

2005ರಲ್ಲಿ ಲಷ್ಕರ್-ಇ-ತೊಯ್ಬ ಕಾರ್ಯಕರ್ತರೆಂದು ಆರೋಪಿಸಿ ಸೊಹ್ರಾಬುದ್ದೀನ್ ಶೇಖ್ ಹಾಗೂ ಕೌಸರ್‌ಬಿಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಮಾಡಲಾಗಿತ್ತು. ಇದರ ಪ್ರಧಾನ ಸಾಕ್ಷಿಯಾಗಿದ್ದ ತುಲಸಿರಾಮ್ ಪ್ರಜಾಪತಿಯನ್ನೂ 2006ರಲ್ಲಿ ದಾರುಣವಾಗಿ ನಕಲಿ ಎನ್‌ಕೌಂಟರ್‌ಗೊಳಪಡಿಸಲಾಗಿತ್ತು. 2005ರಲ್ಲಿ ಗಾಂಧಿಗರದ ಬಳಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಜಸ್ತಾನದ ಬಿಜೆಪಿ ನಾಯಕ ಗುಲಾಬ್ ಚಂದ್ ಕತಾರಿಯಾ ಹಾಗೂ ಆಂಧ್ರಪ್ರದೇಶದ ಐಜಿಪಿ(ಗುಪ್ತಚರ ಇಲಾಖೆ) ಬಾಲಸುಬ್ರಮಣ್ಯಮ್ ವಿರುದ್ಧವೂ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಸಿಬಿಐ ವಾದಿಸಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s