ಮೋದಿ ಸರಕಾರದ ಒಂದು ತಿಂಗಳು

Posted: ಜೂನ್ 28, 2014 in Uncategorized

# ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಾಯಿತು. ಒಂದು ನೂತನ ಸರಕಾರದ ಸಾಧನೆಗಳ ವೌಲ್ಯ ಮಾಪನ ಮಾಡಲು ಒಂದು ತಿಂಗಳ ಕಾಲಾವಧಿ ತುಂಬಾ ಕಡಿಮೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ, ಈ ಸರಕಾರ ಮುಂದೆ ಸಾಗಲಿರುವ ದಾರಿಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿರುವುದರಿಂದ ವಿಶ್ಲೇಷಣೆ ಮಾಡಬೇಕಾಗಿದೆ.

ತಮ್ಮ ಸರಕಾರಕ್ಕೆ ಒಂದು ತಿಂಗಳು ತುಂಬಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ತಮಗೆ ಹನಿಮೂನ್‌ಗೆ ಕಾಲಾವಕಾಶ ಸಿಗಲಿಲ್ಲ ಎಂದು ವಿಷಾದಿಸಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲರೂ ತಮ್ಮನ್ನು ಟೀಕಿಸ ತೊಡಗಿದರು ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಅಭಿಪ್ರಾಯ ಅವರ ದೃಷ್ಟಿಯಲ್ಲಿ ನಿಜವಾಗಿರಬಹುದು. ಆದರೆ, ಜನಸಾಮಾನ್ಯರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿ ಭ್ರಮೆಗಳನ್ನು ಸೃಷ್ಟಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅವರು ಮರೆಯಬಾರದು.

ಹಳಿ ತಪ್ಪಿದ ದೇಶದ ಆರ್ಥಿಕತೆಯನ್ನು ಸರಿಪಡಿಸುವುದಾಗಿ ಹಾಗೂ ಜನಸಾಮಾನ್ಯರನ್ನು ಬಾಚುತ್ತಿರುವ ಬೆಲೆ ಏರಿಕೆ ಹಾಗೂ ಹಣದುಬ್ಬರಕ್ಕೆ ಕಡಿವಾಣ ಹಾಕುವುದಾಗಿ ಜನರಿಗೆ ಭರವಸೆ ನೀಡಿ ಈ ಪವಾಡ ಪುರುಷ ಅಧಿಕಾರಕ್ಕೆ ಬಂದರು. ಎಲ್ಲವೂ ಕ್ಷಣಾರ್ಧದಲ್ಲಿ ಸರಿ ಹೋಗಬಹುದು ಎಂದು ಜನ ನಂಬಿದರು.

ಶೇ.69ರಷ್ಟು ಮಂದಿ ವಿರೋಧವಾಗಿ ಮತ ಚಲಾಯಿಸಿದರೂ ಕೂಡಾ ಶೇ.31ರಷ್ಟು ಜನರ ಓಟಿನಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈ ಹಂತದಲ್ಲಿ ದೇಶದ ಪ್ರಜೆಗಳಲ್ಲಿ ಸಹಜವಾಗಿ ಬದಲಾವಣೆಯ ಆತುರದ ನಿರೀಕ್ಷೆಗಳಿರುತ್ತವೆ.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ಒಂದು ತಿಂಗಳಾಯಿತು. ದೇಶಕ್ಕೆ ಅವರ ಸರಕಾರ ನೀಡಿದ ಮೊದಲ ಕೊಡುಗೆ ರೈಲ್ವೆ ಪ್ರಯಾಣ ದರ ಹೆಚ್ಚಳ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಗಗನಮುಖಿಯಾಗಿ ಸಾಗಿದೆ. ಈರುಳ್ಳಿಯ ಬೆಲೆ ಕಂಡು ಜನ ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲ ವಿದ್ಯಮಾನಗಳಿಂದಾಗಿ ಜನತೆಯ ನಂಬಿಕೆಗೆ ದ್ರೋಹ ಬಗೆದಂತಾಗಿದೆ.

ರೈಲು ಪ್ರಯಾಣ ದರವನ್ನು ಇಷ್ಟು ಅವಸರವಾಗಿ ಹೆಚ್ಚಿಸುವ ಅಗತ್ಯವಿರಲಿಲ್ಲ. ಬಡವರು ಸಂಚರಿಸುವ ರೈಲಿನ ಪ್ರಯಾಣ ದರವನ್ನು ಕಳೆದ 35 ವರ್ಷಗಳಲ್ಲಿ ಯಾವ ಸರಕಾರವೂ ಇಷ್ಟು ಹೆಚ್ಚಳ ಮಾಡಿರಲಿಲ್ಲ. ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಮಂತ್ರಿಯಾಗಿದ್ದಾಗ ರೈಲು ಪ್ರಯಾಣ ದರವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಂದ ಒತ್ತಡ ಬಂದರೂ ಮಣಿಯದೆ ಒಂದೇ ಒಂದು ಪೈಸೆಯನ್ನು ಹೆಚ್ಚು ಮಾಡದೆ ರೈಲ್ವೆ ಇಲಾಖೆಯ ಆದಾಯವನ್ನೇ ಹೆಚ್ಚಿಸಿದ್ದರು. ಅದಕ್ಕಾಗಿ ದೇಶ-ವಿದೇಶಗಳಲ್ಲಿ ಅನೇಕ ಅರ್ಥಶಾಸ್ತ್ರಜ್ಞರು ಲಾಲು ಸಾಧನೆಯನ್ನು ಪ್ರಶಂಸಿಸಿದ್ದರು. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನವರು ಲಾಲು ಅವರನ್ನು ತಮ್ಮ ಕಾಲೇಜಿಗೆ ಕರೆಸಿ ಅವರಿಂದ ಉಪನ್ಯಾಸ ಮಾಡಿಸಿದ್ದರು. ಲಾಲು ನಂತರ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಕೂಡಾ ರೈಲು ಪ್ರಯಾಣ ದರವನ್ನು ಹೆಚ್ಚಿಸಲಿಲ್ಲ.

ಆದರೆ, ಮೋದಿ ಸರಕಾರದ ರೈಲು ಸಚಿವ ಸದಾನಂದ ಗೌಡರಿಗೆ ರೈಲು ಸೇವೆಯ ಸುಧಾರಣೆಗಿಂತ ರೈಲು ಪ್ರಯಾಣ ದರ ಮುಖ್ಯವಾಗಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿರುವುದು ನಿಜ. ಅದನ್ನು ಸರಿಪಡಿಸಬೇಕಾದರೆ ಅಂಬಾನಿ, ಅದಾನಿ, ಟಾಟಾರಂತಹ ಬಂಡವಾಳಗಾರರ ಆದಾಯದ ಮೇಲೆ ಕಡಿವಾಣ ಹಾಕಬೇಕು. ಆದರೆ, ಬಂಡವಾಳಗಾರರ ಕೃಪೆಯಿಂದಲೇ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿಯವರಿಗೆ ಮತ್ತು ಅವರ ಬಿಜೆಪಿ ಪಕ್ಷಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಅಂತಲೆ, ಆರ್ಥಿಕ ಬಿಕ್ಕಟ್ಟಿನ ಹೊರೆಯನ್ನು ಜನಸಾಮಾನ್ಯರ ಹೆಗಲ ಮೇಲೆ ಹೊರಿಸುವುದೇ ಈ ಸರಕಾರದ ಧೋರಣೆಯಾಗಿದೆ. ರೈಲು ಪ್ರಯಾಣ ದರ ಹೆಚ್ಚಳ ಇದಕ್ಕೆ ಒಂದು ಉದಾಹರಣೆ.

ಹಿಂದಿನ ಯುಪಿಎ ಸರಕಾರ ಪ್ರಯಾಣ ದರವನ್ನು ಹೆಚ್ಚಿಸಿ ಜಾರಿಗೆ ತಂದಿರಲಿಲ್ಲ. ಆದರೆ, ತಮ್ಮ ಸರಕಾರ ಅದನ್ನೇ ಜಾರಿಗೆ ತರುತ್ತಿದೆ ಎಂದು ರೈಲ್ವೆ ಸಚಿವರು ಹೇಳುತ್ತಿದ್ದಾರೆ. ಆದರೆ, ಹಿಂದಿನ ಸರಕಾರ ಮಾಡಿದ್ದೆಲ್ಲ ತಪ್ಪೆಂದು ಹೇಳಿ ಅಧಿಕಾರಕ್ಕೆ ಬಂದಿರುವ ಈ ಸರಕಾರ ಹಿಂದಿನ ಸರಕಾರದ ರೈಲು ಪ್ರಯಾಣ ದರ ಹೆಚ್ಚಳದ ತೀರ್ಮಾನವನ್ನು ಜಾರಿಗೆ ತರುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ರೈಲ್ವೆ ಸಚಿವರು ಉತ್ತರಿಸಬೇಕಾಗಿದೆ.

ಹಿಂದಿನ 67 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಒಂದೇ ತಿಂಗಳಲ್ಲಿ ಹೇಗೆ ಸಾಧಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ, ಕಳೆದ 6 ದಶಕದಲ್ಲಿ ಯಾವ
ಅಭಿವೃದ್ಧಿಯೂ ಆಗಿಲ್ಲವೇ? ಈ ರಾಷ್ಟ್ರ ಕಂಡ ಸಂಪರ್ಕ ಕ್ರಾಂತಿ, ಸಾಕ್ಷರತೆ, ಹೆದ್ದಾರಿ ನಿರ್ಮಾಣ ಹಾಗೂ ಮಾಹಿತಿ ಹಕ್ಕು ಕಾನೂನು, ಆಹಾರ ಭದ್ರತಾ ಶಾಸನ ಇವೆಲ್ಲ
ಕಡೆಗಣಿಸಲ್ಪಡುವ ಸಾಧನೆಗಳಲ್ಲ.

ಪರಸ್ಪರ ತೆಗಳಿಕೆಗೆ ಇದು ಸಮಯವಲ್ಲ. ಈ ವರ್ಷ ಮುಂಗಾರು ಕೈಕೊಡುವ ಭೀತಿ ಉಂಟಾಗಿದೆ. ದೇಶಾದ್ಯಂತ ಬರಗಾಲದ ಕರಾಳ ಛಾಯೆ ಕವಿಯುತ್ತಿದೆ. ಜೂನ್ ತಿಂಗಳಲ್ಲಿ ಬಿದ್ದ ಮಳೆ ಪ್ರಮಾಣ ಈ ಶತಮಾನದಲ್ಲೇ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಹೀಗಾಗಿ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಾಗುವ ಎಲ್ಲ ಸೂಚನೆಗಳು ಕಾಣುತ್ತಿವೆ.

ದೇಶದ ದೊಡ್ಡ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಜೂನ್ ತಿಂಗಳಲ್ಲಿ ವಾಡಿಕೆ ಪ್ರಕಾರ 117.6 ಮಿಲಿ ಲೀಟರ್ ಮಳೆ ಬೇಕಾಗಿದೆ. ಆದರೆ, ಈಗ ಬಿದ್ದಿರುವ ಮಳೆಯ ಪ್ರಮಾಣ 72.7 ಮಿಲಿ ಲೀಟರ್. ಇದೇ ಪರಿಸ್ಥಿತಿ ಮುಂದುವರಿದರೆ ದೇಶ ಬರಗಾಲದ ದವಡೆಗೆ ಸಿಲುಕಲಿದೆ. ಇದನ್ನು ಎದುರಿಸಲು ಮೋದಿ ಸರಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಆಹಾರ ಧಾನ್ಯಗಳ ಕೃತಕ ಅಭಾವವನ್ನು ಸೃಷ್ಟಿಸುವ ಕಾಳಸಂತೆಕೋರರನ್ನು, ಅಕ್ರಮ ದಾಸ್ತಾನುಗಾರರನ್ನು ಹತ್ತಿಕ್ಕಬೇಕಾಗಿದೆ. ಗ್ರಾಹಕರಿಗೆ ನ್ಯಾಯವಾದ ಬೆಲೆಯಲ್ಲಿ ಜೀವನಾವಶ್ಯಕ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬಿಜೆಪಿಯೇತರ ರಾಜ್ಯ ಸರಕಾರಗಳೂ ಕೂಡಾ ಕೇಂದ್ರಕ್ಕೆ ಸಹಕಾರ ನೀಡಬೇಕಾಗಿದೆ. ಇಂತಹ ಪ್ರಶ್ನೆಯಲ್ಲಿ ರಾಜಕೀಯಕ್ಕೆ ಅವಕಾಶವಿರಬಾರದು. (ಕೃಪೆ: ವಾರ್ತಾಭಾರತಿ ಸಂಪಾದಕೀಯ, 28.06.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s