ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಆಕ್ರೋಶ ಸ್ಫೋಟ: ಅಧಿಕಾರ ಹಂಚಿಕೆಯಲ್ಲಿ ನಿಷ್ಠಾವಂತರ ಕಡೆಗಣನೆ ಆರೋಪ

Posted: ಜೂನ್ 29, 2014 in Uncategorized

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಆದರೆ, ಅಧಿಕಾರವಂಚಿತ ಕಾರ್ಯಕರ್ತರ ಆಕ್ರೋಶ ಮಾತ್ರ ಇನ್ನು ತಣ್ಣಗಾಗಿಲ್ಲ. ಪಕ್ಷದ ಘಟಾನುಘಟಿ ನಾಯಕರ ಎದುರೇ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಜೂನ್ 28ರಂದು ಆರಂಭವಾದ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಹಲವಾರು ಕಾರ್ಯಕರ್ತರು, ಸರಕಾರ ಹಾಗೂ ಹಿರಿಯ ನಾಯಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರ ಹಂಚಿಕೆಯಲ್ಲಿ ನಿಷ್ಠಾವಂತ ಕಾರ್ಯಕರ್ತ ರನ್ನು ಕಡೆಗಣನೆ ಮಾಡಿದ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿಲ್ಲ. ಪಕ್ಷದಲ್ಲಿ ಕಾಲೆಳೆಯುವ ಸಂಸ್ಕೃತಿ ಹೆಚ್ಚಿದೆ. ಪ್ರಾಮಾಣಿಕ ಕಾರ್ಯಕರ್ತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ನಾಯಕರ ಎದುರು ತಮ್ಮ ಅಳಲನ್ನು ತೋಡಿ ಕೊಂಡರು.

ಸಂಘಟನೆ, ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಕಾರ್ಯಕರ್ತರು ನೆನಪಾಗುತ್ತಾರೆ. ಅಧಿಕಾರ ಹಂಚಿಕೆಯ ವಿಚಾರ ಬಂದಾಗ ಅದು ಕೆಲವರಿಗೆ ಮಾತ್ರ ಸೀಮಿತ ವಾಗಿರುತ್ತದೆ. ನಿಗಮ-ಮಂಡಳಿಗಳ ನೇಮಕಾತಿ ವಿಳಂಬವಾಗುತ್ತಿದೆ. ಪಕ್ಷಕ್ಕಾಗಿ ದುಡಿಯ ದವರಿಗೆ ಮಣೆ ಹಾಕಲಾಗುತ್ತಿದೆ, ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದೆ ಎಂದು ಕಾರ್ಯಕರ್ತರು ದೂರಿದರು.

ಲೋಕಸಭಾ ಚುನಾವಣೆ ಫಲಿತಾಂಶದಿಂದ ಆತ್ಮವಿಶ್ವಾಸ ಕುಗ್ಗಿಸಿಕೊಂಡಿರುವ ರಾಜ್ಯ ಕಾಂಗ್ರೆಸ್‌ಗೆ ಚೈತನ್ಯ ತುಂಬಿಸಲು ಆಯೋಜಿಸಲಾಗಿದ್ದ ಸಭೆಯೂ ಮುಖಂಡರ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಲು ಸೀಮಿತವಾಗಿತ್ತು. ಬಳಿಕ ಉದ್ರಿಕ್ತ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ನಾಯಕರು, ಹಂತ ಹಂತವಾಗಿ ಎಲ್ಲ ಕಾರ್ಯಕರ್ತರಿಗೂ ಅಧಿಕಾರ ಸಿಕ್ಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಧಾನಪಡಿಸಿದರು.

ಸಿಎಂ ವಿರುದ್ಧ ಅಸಮಾಧಾನ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಆದರೆ, ಈವರೆಗೆ ನಿಗಮ, ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ವಿವಿಧ ಕಾರಣಗಳನ್ನು ಹೇಳಿಕೊಂಡು ನೇಮಕಾತಿಯನ್ನು ಮುಂದೂಡಿಕೊಂಡೇ ಬರಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆಯ ಉಪ ಚುನಾವಣೆ, ಅಧಿವೇಶನ, ಬಜೆಟ್, ಲೋಕಸಭಾ ಚುನಾವಣೆ ಸೇರಿದಂತೆ ವಿವಿಧ ನೆಪಗಳನ್ನು ಮುಂದಿಡುತ್ತಾ ನಿಗಮ ಮಂಡಳಿಗೆ ನೇಮಕಾತಿಯನ್ನು ಮುಂದೂಡುತ್ತ ಬರಲಾಗುತ್ತಿದೆ. ಇನ್ನು ಎಷ್ಟು ಸಮಯ ಬೇಕಾಗುತ್ತದೆ ನಿಗಮ, ಮಂಡಳಿಗಳಿಗೆ ನೇಮಕ ಮಾಡಲು ಎಂದು ಸರಕಾರದ ವಿರುದ್ಧ ಕಿಡಿಗಾರಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಕರ್ತರ ಶ್ರಮದಿಂದಾಗಿಯೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಕಾರ್ಯಕರ್ತರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಿಗಮ, ಮಂಡಳಿಗೆ ನೇಮಕ ಮಾಡುವ ಪ್ರಕ್ರಿಯೆಗೆ ಶೀಘ್ರವೆ ಚಾಲನೆ ನೀಡಲಾಗುವುದು. ಆದುದರಿಂದ, ಯಾರೂ ಕೂಡ ಅಸಮಾಧಾನಗೊಳ್ಳುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಮಹಿಳಾ ನಾಯಕಿಯರ ಆಕ್ರೋಶ: ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ, ಮಹಿಳೆಯರಿಗೆ ಮಾತ್ರ ಸರಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಲೋಕಸಭಾ ಚುನಾವಣಾ ಹಂಚಿಕೆ, ವಿಧಾನಪರಿಷತ್‌ಗೆ ನಾಮನಿರ್ದೇಶನದಲ್ಲೂ ಮಹಿಳೆಯರಿಗೆ ಅನ್ಯಾಯವಾಗಿದೆ. ನಿಗಮ, ಮಂಡಳಿಗಳ ನೇಮಕಾತಿಯಲ್ಲಾದರೂ ಆದ್ಯತೆ ನೀಡಲಾಗುತ್ತದೋ, ಇಲ್ಲವೋ ಎಂದು ಮಹಿಳಾ ಕಾಂಗ್ರೆಸ್ ನಾಯಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಎಐಸಿಸಿ ಕಾರ್ಯದರ್ಶಿ ಡಾ.ಚಲ್ಲಕುಮಾರ್, ರಾಜ್ಯದ ಹಲವು ಸಚಿವರು, ಶಾಸಕರು, ಜಿಲ್ಲಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s