ಕೇಂದ್ರ ಸರಕಾರಕ್ಕೆ ಮೊದಲ ಮುಜುಗರ

Posted: ಜುಲೈ 2, 2014 in Uncategorized

# ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ, ನರೇಂದ್ರ ಮೋದಿಯವರು ಸಾಕಷ್ಟು ಬಾರಿ ತಪರಾಕಿಗಳನ್ನು ತಿಂದಿದ್ದಾರೆ. ಆಗ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅದಕ್ಕಾಗಿ, ವಿಷಾದ ದುಃಖ ಪಟ್ಟವರಲ್ಲ ನರೇಂದ್ರ ಮೋದಿ. ಸಂವೇದನಾ ರಹಿತರಂತೆ ಅವುಗಳನ್ನು ಸ್ವೀಕರಿಸುತ್ತಾ, ತನ್ನ ಕಾರ್ಯವನ್ನು ಮಾಡಿ ಮುಗಿಸುತ್ತಿದ್ದರು. ಒಂದು ಸರಕಾರದ ವರ್ಚಸ್ಸು, ಘನತೆಯ ಮೇಲೆ ಸುಪ್ರೀಂ ಕೋರ್ಟ್‌ನ ಛೀಮಾರಿ ಸಾಕಷ್ಟು ಪರಿಣಾಮ ಗಳನ್ನು ಬೀರುತ್ತದೆ. ಆದರೆ ನರೇಂದ್ರ ಮೋದಿ ಅವುಗಳನ್ನೆಲ್ಲ ತನಗೆ ಪೂರಕವಾಗಿ ಬಳಸಿಕೊಳ್ಳುತ್ತಾ ಬಂದರು. ಒಂದು ರೀತಿಯಲ್ಲಿ ಪ್ರತಿ ನಾಯಕನ ವ್ಯಕ್ತಿತ್ವವನ್ನು ಮೋದಿ ತನ್ನದಾಗಿಸುತ್ತಾ ಬಂದಿದ್ದಾರೆ. ‘ಢರ್’ ಚಿತ್ರದಲ್ಲಿ ಶಾರುಕ್‌ಖಾನ್ ಹೀರೋ ಆಗಿ ಸುದ್ದಿಯಾದಂತೆಯೇ ಇದೂ ಕೂಡ. ಜನರ ಅಭಿರುಚಿ ಬದಲಾದಂತೆ ನಾಯಕರ ವ್ಯಕ್ತಿತ್ವದಲ್ಲೂ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಅಂತೆಯೇ ಮಾಧ್ಯಮಗಳು ನರೇಂದ್ರ ಮೋದಿಯನ್ನು ವಿಲನ್ ಆಗಿ ಚಿತ್ರಿಸುತ್ತಿದ್ದಂತೆಯೇ ಜನರು ವಿಲನ್ ಗುಣಗಳನ್ನೇ ಪ್ರೀತಿಸ ತೊಡಗಿದರು. ಒಂದು ರೀತಿಯಲ್ಲಿ ನಾಯಕ ನಿಷ್ಪ್ರಯೋಜಕನಂತೆ ಭಾಸವಾದಾಗ, ಖಳನಾಯಕನ ಗುಣಗಳು ಜನರನ್ನು ಆಕರ್ಷಿಸತೊಡಗುತ್ತದೆ. ಅಂತೆಯೇ ಮೋದಿಯನ್ನು ಜನರು ಎಷ್ಟರಮಟ್ಟಿಗೆ ಇಷ್ಟಪಡತೊಡಗಿದರು ಎಂದರೆ, ಅಭೂತಪೂರ್ವ ಬೆಂಬಲದೊಂದಿಗೆ ಈ ದೇಶದ ಪ್ರಧಾನಮಂತ್ರಿಯನ್ನಾಗಿ ಆರಿಸಿದರು.

ಇದೀಗ ಪ್ರಧಾನಿಯಾದ ಬಳಿಕವಾದರೂ ಈ ಋಣಾತ್ಮಕ ವರ್ಚಸ್ಸಿನಿಂದ ಹೊರಗೆ ಬಂದಾರು ಎಂದು ಜನರು ನಿರೀಕ್ಷಿಸುತ್ತಿರುವಾಗಲೇ, ಅವರು ಸುಪ್ರೀಂಕೋರ್ಟ್‌ನ ಚಾಟಿಯೇಟನ್ನು ಮತ್ತೆ ಎದುರಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿ ನೇಮಕದಲ್ಲಿ ಹಸ್ತಕ್ಷೇಪ ಮಾಡಿದ ಆರೋಪದಲ್ಲಿ ನ್ಯಾಯಮೂರ್ತಿ ಲೋಧಾ ಅವರು ನರೇಂದ್ರ ಮೋದಿ ಸರಕಾರಕ್ಕೆ ಛೀಮಾರಿ ಹಾಕಿದ್ದಾರೆ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಈ ದೇಶದ ನ್ಯಾಯಾಂಗ ವ್ಯವಸ್ಥೆ ಅವರಿಗೆ ಛೀಮಾರಿ ಹಾಕಿರುವುದು ನಿಜಕ್ಕೂ ಒಂದು ಸರಕಾರಕ್ಕೆ ಮುಜುಗರ ತರುವ ವಿಷಯವಾಗಿದೆ. ಹೊಸ ಸರಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯಿಂದ ಇಂತಹದೊಂದು ಸ್ವಾಗತ ಸಿಕ್ಕಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಂದು ಹಿನ್ನಡೆಯೇ ಆಗಿದೆ. ನ್ಯಾಯಾಂಗದ ಈ ತಪರಾಕಿಯನ್ನು ಎಂದಿನಂತೆಯೇ ಸಹಜವಾಗಿ ಸ್ವೀಕರಿಸುತ್ತಾರೆಯೋ ಅಥವಾ ಒಬ್ಬ ಸಂವೇದನಾಶೀಲ ಪ್ರಧಾನಮಂತ್ರಿಯಾಗಿ ಸ್ಪಂದಿಸುತ್ತಾರೆಯೋ ಎನ್ನುವುದನ್ನು ದೇಶ ಕುತೂಹಲದಿಂದ ನಿರೀಕ್ಷಿಸುತ್ತಿದೆ.

ವಿಪರ್ಯಾಸವೆಂದರೆ ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾದ ಬಳಿಕವೂ ಗುಜರಾತಿನ ಮುಖ್ಯಮಂತ್ರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಪ್ರಧಾನಮಂತ್ರಿಯ ವ್ಯಾಪ್ತಿಗೆ ಪೂರಕವಾಗಿ ತನ್ನ ಆಲೋಚನೆಗಳನ್ನು ವಿಶಾಲಗೊಳಿಸಿಲ್ಲ. ಗುಜರಾತ್‌ನಲ್ಲಿ
ಸರ್ವಾಧಿಕಾರಿಯಾಗಿ ಅಲ್ಲಿನ ನ್ಯಾಯಾಲಯವನ್ನೂ, ಪೊಲೀಸ್ ಇಲಾಖೆಯನ್ನೂ
ನಿಯಂತ್ರಿಸಿದಂತೆಯೇ ಭಾರತದ ಪ್ರಧಾನಿಯಾಗಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಅವರು ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಸ್ತಕ್ಷೇಪ ನಡೆಸಿದ್ದಾರೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿರುವ ನಾಲ್ವರ ಹೆಸರಲ್ಲಿ ಓರ್ವರನ್ನು ಕೇಂದ್ರ ಸರಕಾರ ಕೈ ಬಿಟ್ಟಿತ್ತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯ ಜೊತೆಗೆ ಅನುಮತಿಯನ್ನು ಪಡೆದುಕೊಳ್ಳುವುದು
ಅಗತ್ಯವಿತ್ತಾದರೂ, ನರೇಂದ್ರ ಮೋದಿಯವರು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಒಂದು ರೀತಿಯಲ್ಲಿ ಸುಪ್ರೀಂಕೋರ್ಟ್‌ನ್ನು ತನ್ನ ಮೂಗಿನ ನೇರಕ್ಕೆ ನಿಯಂತ್ರಿಸುವ
ಪ್ರಯತ್ನವನ್ನು ಅವರು ನಡೆಸಿದ್ದಾರೆ. ಕೊಲಿಜಿಯಂ ಶಿಫಾರಸು ಮಾಡಿರುವ ಗೋಪಾಲ್ ಸುಬ್ರಮಣ್ಯಂ ಹೆಸರು ನರೇಂದ್ರ ಮೋದಿ ಸರಕಾರಕ್ಕೆ ಇರಿಸು ಮುರಿಸು ತಂದಿದೆ. ಈ ಹಿಂದೆ ಇದೇ ಗೋಪಾಲ್ ಸುಬ್ರಮಣ್ಯಂ ಕಾರಣದಿಂದ ಮೋದಿಯ ಬಲಗೈ ಬಂಟ ಅಮಿತ್ ಶಾ ನ್ಯಾಯಾಂಗದ ಹಿಡಿತಕ್ಕೆ ಸಿಕ್ಕುವಂತಾಯಿತು. ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಮೇಲೆ ಮೊಕದ್ದಮೆ ದಾಖಲಾಗಲು ಸುಬ್ರಮಣ್ಯಂ ಪಾತ್ರ ದೊಡ್ಡದು. ಇಷ್ಟೇ ಅಲ್ಲ, ತನ್ನ ನಿಷ್ಠುರ ಕಾರ್ಯನಿರ್ವಹಣೆಗಾಗಿ ಸುಬ್ರಹ್ಮಣಿಯಂ ಈಗಾಗಲೇ ಹೆಸರು ಪಡೆದಿದ್ದಾರೆ. ಈ ಕಾರಣದಿಂದಲೇ, ಸುಬ್ರಮಣ್ಯಂ ನ್ಯಾಯಮೂರ್ತಿಯಾಗುವುದು ಮೋದಿ ಸರಕಾರಕ್ಕೆ ಇಷ್ಟವಿಲ್ಲ. ಆದುದರಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವರ ಹೆಸರನ್ನು ಕೈ ಬಿಟ್ಟಿತು. ಈ ಕಾರಣದಿಂದ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಮತ್ತೆ ತಿಕ್ಕಾಟ ಏರ್ಪಡುವಂತಾಗಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್. ಎಂ. ಲೋಧಾ ಅವರಿಗೆ ಮೋದಿಯ ಕ್ರಮ ಸಿಟ್ಟು ತರಿಸಿದೆ. ಇದು ನಿಜಕ್ಕೂ ಆಘಾತಕಾರಿಯಾದ ವಿಷಯ ಮತ್ತು ಕೇಂದ್ರ ಸರಕಾರದ ಕುರಿತಂತೆ ತನಗೆ ಭ್ರಮ ನಿರಸನ ಉಂಟು ಮಾಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಮೋದಿ ಸರಕಾರವನ್ನು ಸುಪ್ರೀಂ ಕೋರ್ಟ್ ಅನುಮಾನದ ಕಣ್ಣಿನಿಂದ ನೋಡುವಂತಾದುದು ನಿಜಕ್ಕೂ ಕೆಟ್ಟ ಬೆಳವಣಿಗೆಯಾಗಿದೆ. ಅಧಿಕಾರ ಹಿಡಿದ ಒಂದು ತಿಂಗಳಲ್ಲಿ ಒಂದು ಸರಕಾರದ ಸಾಧನೆಯನ್ನು ನಾವು ಅಳೆಯಲು ಸಾಧ್ಯವಿಲ್ಲ. ಆದರೆ ಅಧಿಕಾರಕ್ಕೇರಿದ ಒಂದೇ ಒಂದು ತಿಂಗಳಲ್ಲಿ ಈ ಮಟ್ಟಕ್ಕೆ ಜನರಿಂದ ವಿಶ್ವಾಸ ಕಳೆದುಕೊಂಡ ಇನ್ನೊಂದು ಸರಕಾರ ಈವರೆಗೆ ಬಂದಿಲ್ಲವೇನೋ? ಯಾವುದೇ ಸರಕಾರ ಜನಸಾಮಾನ್ಯರಿಗೆ ಸಂಬಂಧ ಪಟ್ಟ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಮಾಡುವಾಗ ಒಂದಿಷ್ಟು ಅಂಜಿಕೆಯನ್ನು ವ್ಯಕ್ತಪಡಿಸುತ್ತದೆ. ಎಲ್ಲಿ ಶ್ರೀಸಾಮಾನ್ಯ ಸಿಟ್ಟಿಗೊಳಗಾಗುತ್ತಾನೋ ಎಂದು ಹೆದರುತ್ತದೆ. ಆದರೆ ಮೋದಿ ಸರಕಾರ ಕಾರ್ಪೊರೇಟ್ ಶಕ್ತಿಗಳ ಕೈಗೊಂಬೆಯಾಗಿ, ಜನಜೀವನದ ಮೇಲೆ ಎರಗಿ ಬಿದ್ದಿದೆ.
ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಎಲ್‌ಪಿಜಿ ಮತ್ತು ಪೆಟ್ರೋಲ್ ಬೆಲೆಯನ್ನು ಎರಡೆರಡು ಬಾರಿ ಏರಿಸಿತು. ರೈಲ್ವೆ ಪ್ರಯಾಣ ದರ ಹೆಚ್ಚಿಸಿರುವುದು ಮಾತ್ರವಲ್ಲ, ಇನ್ನಷ್ಟು ಹೆಚ್ಚು ಮಾಡುವ ಕುರಿತಂತೆ ಅದು ಸೂಚನೆಯನ್ನೂ ನೀಡಿದೆ. ಜನರು ಮೋದಿಯ ಕಡೆಗೆ ಹತಾಶೆಯ ದೃಷ್ಟಿಯನ್ನು ಬೀರುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ಕೂಡ ಕೇಂದ್ರ ಸರಕಾರದ ವಿರುದ್ಧ ಬಿದ್ದಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಲೋಧಾ ಅವರ ಹೇಳಿಕೆಯನ್ನು ಗಂಭೀರವಾಗಿ
ತೆಗೆದುಕೊಳ್ಳಬೇಕಾದ ಹೊಣೆಗಾರಿಕೆ ಕೇಂದ್ರ ಸರಕಾರದ್ದಾಗಿದೆ. ಇಲ್ಲವಾದರೆ, ಮುಂದೊಂದು ದಿನ ಅದು ತೀವ್ರವಾದ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಲೋಧಾ ಹೇಳಿಕೆ, ನರೇಂದ್ರ ಮೋದಿ ಸರಕಾರಕ್ಕೆ ಹಾಕಿದ ಒಂದು ಪುಟ್ಟ ವೇಗ ನಿಯಂತ್ರಕವಾಗಿದೆ. ಅಂಬಾನಿ, ಅಧಾನಿಗಳ ಮಾತುಗಳಿಗಿಂತ ಮುಖ್ಯವಾಗಿ ನ್ಯಾಯಾಂಗದ ಮಾತುಗಳಿಗೆ ಕಿವಿ ಕೊಡುವುದನ್ನು ಮೋದಿ ಸರಕಾರ ಕಲಿಯಬೇಕಾಗಿದೆ. ನ್ಯಾಯಾಂಗದ ಮಾತುಗಳನ್ನು ಸ್ಪಷ್ಟವಾಗಿ ಆಲಿಸಿ ಹೆಜ್ಜೆಯಿಡದೇ ಇದ್ದರೆ, ಸರಕಾರ ಪ್ರಪಾತಕ್ಕೆ ಬೀಳಲು ಹೆಚ್ಚು ಸಮಯಬೇಕಾಗಿಲ್ಲ. ಈ ಎಚ್ಚರಿಕೆಯನ್ನಿಟ್ಟುಕೊಂಡು ಮೋದಿ ಮುಂದುವರಿಯಬೇಕು. (ಕೃಪೆ: ವಾರ್ತಾ ಭಾರತಿ ಸಂಪಾದಕೀಯ, 02.07.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s