ಗೋವಾ: ಪ್ರವಾಸಿಗರಿಂದ ಬರುವ ಹಣ ಬೇಕು, ಹೊಣೆ ಬೇಡ

Posted: ಜುಲೈ 3, 2014 in Uncategorized

# ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಲು ಹೊರಟಿದೆ ಗೋವಾದ ಸರಕಾರ. ಇಡೀ ಗೋವಾವನ್ನು ಬೆತ್ತಲೆಯಾಗಿಸಿ ‘ಬನ್ನಿ ಆನಂದಿಸಿ’ ಎಂದು ವಿಶ್ವವನ್ನು ಕರೆದು, ಅದಕ್ಕೆ ‘ಪ್ರವಾಸೋದ್ಯಮ’ ಎಂಬ ಸುಂದರ ಹಣೆ ಫಲಕವನ್ನು ಹಾಕಿ ಆರ್ಥಿಕವಾಗಿ ಗೋವಾವನ್ನು ಮೇಲೆತ್ತುವ ದಾರಿ ಕಂಡುಕೊಂಡ ಬಹು ಸಮಯದ ಬಳಿಕ ಆ ಸರಕಾರಕ್ಕೆ ಅಚಾನಕ್ ಸಂಸ್ಕೃತಿಯ ನೆನಪಾಗಿದೆ.

ಗೋವಾ ಇಂದು ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಹೆಸರಾಗಿರುವುದು ವಿಲಾಸಿ ಬದುಕಿಗಾಗಿ. ಮದ್ಯ, ಹೆಣ್ಣು, ಗಾಂಜಾ ಮತ್ತು ಅಶ್ಲೀಲದ ಪರಮಾವಧಿಯ ಮೂಲಕ ಜನರನ್ನು ಸೆಳೆಯುವ ಗೋವಾವನ್ನು ಅಲ್ಲಿನ ಸರಕಾರ ಪತಿವ್ರತೆಯ ರೂಪದಲ್ಲಿ ನೋಡಲು ಹವಣಿಸುತ್ತಿದೆ. ಈವರೆಗೆ ಬಿಕಿನಿ ತೊಟ್ಟು ವಿಶ್ವವನ್ನು ಕೈ ಸನ್ನೆ ಮಾಡಿ ಕರೆಯುತ್ತಿದ್ದ ಗೋವಾಕ್ಕೆ ಜರತಾರಿ ಸೀರೆ ಉಡಿಸಿ, ಕೊರಳಿಗೆ ಕರಿಮಣಿ ಸರ, ಹಣೆಗೆ ಕುಂಕುಮ ಇಡುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿರುವಂತಿದೆ. ಆದರೆ, ಈ ಪ್ರಯತ್ನ ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿದೆ ಎನ್ನುವ ಪ್ರಶ್ನೆ ಉಳಿದೇ ಬಿಡುತ್ತದೆ.

ಇದೊಂದು ರೀತಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕಾಂಡೋಮ್ ಕುರಿತಂತೆ ನೀಡಿರುವ ಹೇಳಿಕೆಯ ಮುಂದುವರಿದ ಭಾಗ. ಹರ್ಷವರ್ಧನ್‌ರ ಮಾತಿನಲ್ಲಿ ಒಂದಿಷ್ಟು ಪ್ರಾಮಾಣಿಕತೆಯಿತ್ತು. ಬರೇ ಕಾಂಡೋಮ್‌ಗಳ ಮೂಲಕ ಏಡ್ಸನ್ನು ತಡೆಯಲು ಮುಂದಾಗುವುದು ಅಪ್ರಾಮಾಣಿಕತೆಯಾಗುತ್ತದೆ. ಕಾಂಡೋಮ್ ಧರಿಸಿ, ಎಷ್ಟು ಅಧಃಪತನಕ್ಕೆ ತಲುಪಿದರೂ ಸರಿಯೇ ಎಂಬ ನಿಲುವು ಏಡ್ಸ್ ವಿರುದ್ಧದ ಹೋರಾಟದ ಅಪ್ರಾಮಾಣಿಕ ನಡೆಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇದೀಗ ಅದೇ ಹೇಳಿಕೆಯನ್ನು ಬಳಸಿಕೊಂಡು ಗೋವಾದ ಸಚಿವರೊಬ್ಬರು, ಇಲ್ಲಿ ನಡೆಯುವ ಅತ್ಯಾಚಾರ, ಕೊಲೆ ಇತ್ಯಾದಿಗಳಿಗೆ ಮಹಿಳೆಯರು ತುಂಡು ಬಟ್ಟೆ ಧರಿಸುವುದು ಮತ್ತು ಕುಡಿತದ ಚಟವನ್ನು ಹೊಂದಿರುವುದೇ ಕಾರಣ ಎಂದು ಘೋಷಿಸಿದ್ದಾರೆ. ‘‘ಯುವತಿಯರು ತುಂಡುಡುಗೆಗಳನ್ನು ಧರಿಸಿಕೊಂಡು ಪಬ್‌ಗಳಿಗೆ ಹೋಗುವುದು ನಮ್ಮ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ. ಇದಕ್ಕೆ ನಾವು ಆಸ್ಪದ ಕೊಟ್ಟರೆ ಗೋವಾದ ಸಂಸ್ಕೃತಿ ಏನಾಗಬಹುದು? ಅಲ್ಪ ಡ್ರೆಸ್‌ಗಳನ್ನು ಧರಿಸಿದ ಯುವತಿಯರು ಪಬ್‌ಗಳಿಗೆ ಭೇಟಿ ನೀಡಿದರೆ ಕೆಟ್ಟ ಸಂಸ್ಕೃತಿಯನ್ನು ಪ್ರಚಾರ ಮಾಡಿದಂತಾಗುತ್ತದೆ ಹಾಗೂ ಈ ರೀತಿಯ ನಡವಳಿಕೆಗಳು ಕೊನೆಗೊಳ್ಳಬೇಕು’’ ಎಂದಿದ್ದಾರೆ.

ಗೋವಾ ಬೀಚುಗಳು ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ವಿಶ್ವಕ್ಕೇ
ತಿಳಿದಿರುವಂತಹದು. ಪ್ರವಾಸೋದ್ಯಮದ ಹೆಸರಿನಲ್ಲಿ ಗೋವಾದಲ್ಲಿ ನಡೆಯುತ್ತಿರುವ ಕೃತ್ಯಗಳು ಏನೇನು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇಂದು ಗೋವಾ ತನ್ನ ಅನೈತಿಕ, ಸ್ವಚ್ಛಂದ ಬದುಕಿಗಾಗಿಯೇ ಗುರುತಿಸಲ್ಪಡುತ್ತಿದೆ. ಇಂತಹ ಹೊತ್ತಿನಲ್ಲಿ ಗೋವಾದ ಸಂಸ್ಕೃತಿ ಹರಾಜಾಗುವ ಕುರಿತಂತೆ ಬಿಜೆಪಿ ಸಚಿವರು ಮಾತನಾಡಿರುವುದು ತಮಾಷೆಯಾಗಿದೆ. ಬಿಜೆಪಿ ಸರಕಾರವೆಂದಲ್ಲ, ಎಲ್ಲ ಪಕ್ಷಗಳಿಗೂ ಗೋವಾದ ಪ್ರವಾಸೋದ್ಯಮ ಉಳಿಯಬೇಕಾಗಿದೆ. ಅಂದರೆ, ವಿದೇಶೀಯರ ಹಣ ಅವರಿಗೆ ಬೇಕಾಗಿದೆ. ಅದಕ್ಕಾಗಿಯೇ ಗೋವಾವನ್ನು ಅರೆ ಬೆತ್ತಲೆಯಾಗಿ ತೆರೆದಿಟ್ಟಿದ್ದಾರೆ. ಇಲ್ಲಿ ಮದ್ಯಕ್ಕೆ ಮುಕ್ತ ಅವಕಾಶವಿದೆ. ಸರಕಾರವೇ ಈ ಮುಕ್ತ ಅವಕಾಶವನ್ನು ತೆರೆದಿಟ್ಟಿದೆ. ಆದರೆ, ಪ್ರವಾಸಿಗರು ಮದ್ಯ ಕುಡಿಯಲು ಪಬ್‌ಗೆ ಹೋಗಬಾರದು ಎಂದೂ ಹೇಳುತ್ತದೆ. ನಾಳೆ ಗೋವಾದೊಳಗೆ ಮದ್ಯವನ್ನು ನಿಷೇಧಿಸಿದರೆ, ಬೆತ್ತಲೆ ಬದುಕಿಗೆ ನಿಷೇಧ ಹೇರಿದರೆ ವಿದೇಶೀಯರು ಪ್ರವಾಸದ ಹೆಸರಿನಲ್ಲಿ ಗೋವಾಕ್ಕೆ ಆಗಮಿಸುವುದನ್ನು ಅರ್ಧಕ್ಕರ್ಧ ನಿಲ್ಲಿಸುತ್ತಾರೆ. ಭಾರತೀಯ ಸಂಸ್ಕೃತಿಯೂ ಉಳಿಯುತ್ತದೆ. ವೇಶ್ಯಾವಾಟಿಕೆ, ಡ್ರಗ್ಸ್, ಗಾಂಜಾ ಇತ್ಯಾದಿಗಳಿಗೂ ತಡೆ ಬೀಳುತ್ತದೆ. ಇದಕ್ಕೆ ಸರಕಾರ ಸಿದ್ಧವಿದೆಯೇ? ಇಲ್ಲ.

ಮದ್ಯ, ಜೂಜು, ವಿಲಾಸಿ ಬದುಕು ಇವೆಲ್ಲವನ್ನೂ ಮುಕ್ತವಾಗಿಟ್ಟು, ಬಳಿಕ ಮಹಿಳೆಯರಿಗೆ ಸಂಸ್ಕೃತಿಯನ್ನು ಬೋಧಿಸುವ ಸರಕಾರ ನಿಜಕ್ಕೂ ಅಪಾಯಕಾರಿಯಾಗಿದೆ. ಗೋವಾದಲ್ಲಿ ಹೆಚ್ಚುತ್ತಿರುವ ಕ್ರೈಂ, ಅತ್ಯಾಚಾರ ಇವುಗಳಿಗೆ ತಾನು ಹೊಣೆಯಲ್ಲ ಎಂದು
ನುಣುಚಿಕೊಳ್ಳುವುದಕ್ಕಾಗಿಯಷ್ಟೇ ಸರಕಾರ ಈ ಹೇಳಿಕೆಯನ್ನು ನೀಡಿದೆ. ಇಂತಹ ಹೇಳಿಕೆ ಗೋವಾದಲ್ಲಿ ಅಪರಾಧಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಪರಾಧಿಗಳಿಗೆ ಸಚಿವರ ಹೇಳಿಕೆ, ಅರೆ ನಗ್ನ ಹೆಣ್ಣುಗಳನ್ನು ಅತ್ಯಾಚಾರಗೈಯಲು ಕುಮ್ಮಕ್ಕು ನೀಡಬಹುದು ಮತ್ತು ತಮ್ಮ ಕೃತ್ಯಗಳಿಗೆ ಮಹಿಳೆಯರನ್ನೇ ಹೊಣೆ ಮಾಡಬಹುದು. ಸರಕಾರವಂತೂ ‘‘ನಾನು ಮೊದಲೇ ಎಚ್ಚರಿಕೆ ನೀಡಿದ್ದೆ’’ ಎಂದು ಹೇಳಿ ಹೆಗಲು ಜಾರಿಸಿಕೊಳ್ಳಬಹುದು.

ಗೋವಾ ಸಚಿವರ ಹೇಳಿಕೆಯಿಂದ ಇನ್ನೊಂದು ಅಪಾಯವಿದೆ. ಗೋವಾದಲ್ಲಿ ಈಗಾಗಲೇ ಸಂಸ್ಕೃತಿ ಸಂರಕ್ಷಕರು, ಅನೈತಿಕ ಪೊಲೀಸರು ಜಾಗೃತಗೊಂಡಿದ್ದಾರೆ. ಮುತಾಲಿಕ್ ನೇತೃತ್ವದ ಶ್ರೀರಾಮಸೇನೆಯೂ ಸೇರಿದಂತೆ ಹಲವು ಕೇಸರಿ ಸಂಘಟನೆಗಳು ಅಲ್ಲಿ ಸಕ್ರಿಯವಾಗಿವೆ. ಗೋವಾ ಸಚಿವರ ಹೇಳಿಕೆಯಿಂದಾಗಿ ಈ ಸಂಘಟನೆಗಳಿಗೆಲ್ಲ ಹೆಂಡ ಕುಡಿಸಿದಂತಾಗಬಹುದು. ನಾಳೆ ಕಂಡ ಕಂಡ ಮಹಿಳೆಯರ ಮೇಲೆ ದಾಳಿ ನಡೆಸಲು, ಪಬ್‌ಗಳಿಂದ ಹಫ್ತಾ ವಸೂಲಿ ಮಾಡಲು ಈ
ಹೇಳಿಕೆಯನ್ನು ಪರವಾನಿಗೆಯನ್ನಾಗಿ ಬಳಸಿಕೊಳ್ಳಬಹುದು. ಆದುದರಿಂದ ಗೋವಾ ಸರಕಾರ ತನ್ನ ದ್ವಂದ್ವ ನಿಲುವುಗಳಿಂದ ಹೊರ ಬರಬೇಕು. ನಿಜಕ್ಕೂ ಗೋವಾವನ್ನು ಅಶ್ಲೀಲ, ಅನೈತಿಕತೆಯಿಂದ ಮುಕ್ತ ಮಾಡುವ ಉದ್ದೇಶವಿದ್ದರೆ ಅಲ್ಲಿನ ಪೊಲೀಸ್ ಇಲಾಖೆಯನ್ನು ಇನ್ನಷ್ಟು
ಬಿಗಿಗೊಳಿಸಲಿ. ಹಾಗೆಯೇ ಹುಚ್ಚು ಹೊಳೆಯಂತೆ ಹರಿಯುತ್ತಿರುವ ಮದ್ಯಕ್ಕೆ ಕಡಿವಾಣ ಹಾಕಲಿ. ಸಾಧ್ಯವಾದರೆ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವನ್ನು ಜಾರಿಗೆ ತರಲಿ. ಜೊತೆಗೆ ಅನಧಿಕೃತ ಲಾಡ್ಜ್‌ಗಳು, ವಿಲಾಸಿ ಮನೆಗಳನ್ನು ಮುಚ್ಚುವ ಕೆಲಸ ನಡೆಸಲಿ. ರಾತ್ರಿಯ ಓಡಾಡಕ್ಕೆ ಮಿತಿಯನ್ನು ಹೇರಲಿ. ಆದರೆ, ಗೋವಾ ಸರಕಾರ ಇದಕ್ಕೆ
ಸಿದ್ಧವಿದ್ದಂತಿಲ್ಲ. ಪ್ರವಾಸಿಗರ ಹಣ ಬೇಕು ಆದರೆ, ಅವರ ರಕ್ಷಣೆಯ ಹೊಣೆ ಬೇಡ ಎನ್ನುವ ಬೇಜವಾಬ್ದಾರಿ ಮನಸ್ಥಿತಿಯನ್ನು ಗೋವಾ ಸರಕಾರ ಹೊಂದಿರುವುದು ಸ್ಪಷ್ಟವಾಗಿದೆ. (ಕೃಪೆ: ವಾರ್ತಾ ಭಾರತಿ ಸಂಪಾದಕೀಯ, 03.07.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s