ಜು.5: ಮಕ್ಕಳ ಅಪೌಷ್ಠಿಕತೆ ಕಾರ್ಯಾಗಾರ-ಉಡುಪಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ದಂಡು

Posted: ಜುಲೈ 3, 2014 in Uncategorized

ಉಡುಪಿ: ‘ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವುದರ ಬಗೆಗಿನ ಸಮಗ್ರ ಕಾರ್ಯಯೋಜನೆ’ಯ ಅನುಷ್ಠಾನ ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ ಅರಿವು-ನೆರವು ಎಂಬ ಕಾರ್ಯಾಗಾರವು ಜು.5ರಂದು ಬೆಳಗ್ಗೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು ಎಂದು ನೂತನ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕರದ ಅಧ್ಯಕ್ಷರಾದ ಶಿವಶಂಕರ ಬಿ.ಅಮರಣ್ಣವರ ಅವರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಸಂಜೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರ ಜರುಗಲಿದೆ. ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತರು, ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯೆಯರು, ಸರಕಾರೇತರ ಸ್ವಯಂಸೇವಕ ಸಂಸ್ಥೆಗಳ ಕಾರ್ಯಕರ್ತರು ಮೊದಲಾದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಿವಶಂಕರ ಅಮರಣ್ಣವರ ಅವರು ಹೇಳಿದರು.

ಶನಿವಾರ ಬೆಳಗ್ಗೆ ಗಂಟೆ 10.30ಕ್ಕೆ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಲ್.ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ, ಡಾ.ಕೆ.ಭಕ್ತವತ್ಸಲ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅಶೋಕ ಜಿ.ನಿಜಗಣ್ಣವರ, ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್, ಎಸ್ಪಿ ಡಾ.ಬೋರಲಿಂಗಯ್ಯ, ಜಿ.ಪಂ.ಸಿಈಓ ಶ್ರೀಮತಿ ಎಂ.ಕನಗವಲ್ಲಿ ಹಾಗೂ ಡಿಎಚ್ಓ ಡಾ.ರಾಮಚಂದ್ರ ಬಾಯಿರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇಶಕರಾದ ನಾಗೇಂದ್ರ ಮಧ್ಯಸ್ಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಗ್ರೇಸಿ ಎಲ್.ಗೊನ್ಸಾಲ್ವಿಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.15ರಿಂದ ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವ ಬಗ್ಗೆ ವೈದ್ಯಕೀಯ ವಿಶ್ಲೇಷಣೆಯೊಂದಿಗೆ ತಜ್ಞರ ಸಲಹೆ ಹಾಗೂ 1.15ರಿಂದ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯಯೋಜನೆಯ ಬಗ್ಗೆ ಅಧಿವೇಶನಗಳು ನಡೆಯಲಿದ್ದು, ಇವುಗಳಲ್ಲಿ ಕ್ರಮವಾಗಿ ಡಾ.ರಾಮಚಂದ್ರ ಬಾಯಿರಿ ಹಾಗೂ ಡಾ.ಮಹಾಬಲೇಶ್ವರ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ವಿವರ ನೀಡಿದರು.

ಮಕ್ಕಳಲ್ಲಿನ ಅಪೌಷ್ಠಿಕತೆ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಲ್ಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಾಲಯವು ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಪಾಟೀಲ ಅಧ್ಯಕ್ಷತೆಯ ಸಮಿತಿ ರಾಜ್ಯಾದ್ಯಂತ ವಿವಿಧೆಡೆಗಳಿಗೆ ಭೇಟಿ ನೀಡಿ ಸಿದ್ದಪಡಿಸಿದ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಸಮಿತಿ ಸಲ್ಲಿಸಿದ ವರದಿ ಆಧಾರದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಇದೀಗ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಂದಕ್ಕೆ ತಾಲೂಕು ಮಟ್ಟದಲ್ಲಿ ಇಂಥದ್ದೇ ಕಾರ್ಯಾಗಾರಗಳು ನಡೆಯಲಿವೆ ಎಂದು ಶಿವಶಂಕರ ಅಮರಣ್ಣವರ ಅವರು ತಿಳಿಸಿದರು.

ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನಾಗಜ್ಯೋತಿ ಕೆ.ಎ. ಅವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s