ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ಪ್ರತಿಭಟನೆ: ರೈತರ ಮೇಲೆ ಗುಂಡು !

Posted: ಜುಲೈ 6, 2014 in Uncategorized

ಬಿಜಾಪುರ: ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದಲ್ಲಿ 2,400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಕಾಮಗಾರಿಗೆ ಬೇರೆ ರಾಜ್ಯಗಳಿಂದ ನೂರಾರು ಕಾರ್ಮಿಕರು ಗಂಟುಮೂಟೆ ಸಮೇತ ಕೂಡಗಿಗೆ ಬಂದಿದ್ದು, ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಎನ್‌ಟಿಪಿಸಿಎಲ್ ಕಾರ್ಮಿಕರು ಪ್ರತಿಭಟನಾ ನಿರತ ರೈತರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.

ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಸುತ್ತಮುತ್ತಲಿನ ರೈತರು ಜಮೀನಿಗೆ ಸೂಕ್ತ ಬೆಲೆ ಹಾಗೂ ಸ್ಥಳೀಯರಿಗೆ ಕೆಲಸ ನೀಡುವ ಭರವಸೆ ನೀಡಿದ್ದ ಎನ್‌ಟಿಪಿಸಿಎಲ್ ಇದೀಗ ನಿರ್ಮಾಣ ಕಾಮಗಾರಿಗಾಗಿ ನೆರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತಂದಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನೆಯ ಕಾವು ತೀವ್ರಗೊಂಡ ಪರಿಣಾಮವಾಗಿ ರೈತರು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್‌ಗೆ ಸೇರಿದ ಲಾರಿ, ನಾಲ್ಕು ಟಿಪ್ಪರ್, ಎರಡು ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೊಚ್ಚಿಗೆದ್ದ ರೈತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡಿಗೆ ಇಬ್ಬರು ರೈತರು ಗಾಯಗೊಂಡಿದ್ದರೆ, ಕಾರ್ಮಿಕರು ರೈತರ ಮೇಲೆ ನಡೆಸಿದ ಕಲ್ಲು ತೂರಾಟದಲ್ಲಿ ಕೂಡ ಅನೇಕರು ಗಾಯಗೊಂಡಿದ್ದಾರೆ.

ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಕೆಲ ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಲೇ ಇತ್ತು. ಆದರೆ, ಆ ಪ್ರತಿಭಟನೆ ಜುಲೈ 5ರಂದು ರೌದ್ರಾವತಾರ ತಾಳಿತು. ಪ್ರತಿಭಟನಕಾರರು ಸ್ಥಾವರಕ್ಕೆ ನಾಲ್ಕು ದಿಕ್ಕಿನಿಂದ ಮುತ್ತಿಗೆ ಹಾಕಿ, ಕಂಡಕಂಡ ವಸ್ತುಗಳಿಗೆ ಬೆಂಕಿ ಹಚ್ಚಿದರು. ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯಗಳ ಕಾರ್ಮಿಕರು ಕೂಡ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಹದ್ದುಮೀರುತ್ತಿದೆ ಎಂದು ಅರಿವಿಗೆ ಬರುತ್ತಿದ್ದಂತೆ ಕೊಲ್ಹಾರ್ ಠಾಣಾ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಮುತ್ತಗಿ ಗ್ರಾಮದ ಬಾಬು ಬಡಿಗೇರ್ ಮತ್ತು ಮಸೂತಿ ಗ್ರಾಮದ ಸದಾಶಿವ ಗಣಾಚಾರಿ ಎಂಬಿಬ್ಬರು ಗುಂಡು ತಗುಲಿ ಗಾಯಗೊಂಡಿದ್ದಾರೆ. ಅವರನ್ನು ಮತ್ತು ಕಲ್ಲು ತೂರಾಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಾವರದಲ್ಲಿ ಹೆಚ್ಚಾಗಿ ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಗುಜರಾತ್ ರಾಜ್ಯದಿಂದ ಬಂದಿರುವ ಸುಮಾರು 700ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಕಾರ್ಮಿಕರೆಲ್ಲ ತಮ್ಮ ಸಾಮಾನು ಸರಂಜಾಮು ಎತ್ತಿಕೊಂಡು ದಿಕ್ಕಾ ಪಾಲಾಗಿದ್ದಾರೆ. ರೈತರ ಆಕ್ರೋಶಕ್ಕೆ ಕಾರಣ: ಸ್ಥಾವರಕ್ಕಾಗಿ ತಮ್ಮ ಭೂಮಿಯನ್ನು ಕಿತ್ತುಕೊಂಡಿರುವ ಸಂಸ್ಥೆ ಸ್ಥಳೀಯರಿಗೆ ಸೂಕ್ತವಾದ ಕೆಲಸ ಕೊಟ್ಟಿಲ್ಲ. ಕಾಯುವ, ತೊಳೆಯುವ, ಗುಡಿಸುವ ಕೆಲಸ ಮಾತ್ರ ಕೊಡುತ್ತಿದ್ದಾರೆ. ವಾಗ್ದಾನದಂತೆ ಶಾಲೆ, ರಸ್ತೆ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯ ನಿರ್ಮಿಸುವ ಮಾತನ್ನೂ ಮರೆತಿದ್ದಾರೆ. ಅಲ್ಲದೆ, ಈ ಸ್ಥಾವರದಿಂದಾಗಿ ಸ್ಥಳೀಯರ ಆರೋಗ್ಯ ಹದಗೆಡುತ್ತಿದೆ ಎಂಬುದು ರೈತರ ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಭಟನೆಯಿಂದಾಗಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಥಾವರದಿಂದ ಸುಮಾರು 3 ಕಿ.ಮೀ.ವರೆಗೆ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s