ಈ ಮನೆ ಸುಮ್ಮನೆ

Posted: ಜುಲೈ 7, 2014 in Uncategorized

# ವಿಧಾನ ಪರಿಷತ್ ಸದಸ್ಯರ ನಾಮಕರಣದ ಕುರಿತಂತೆ ಇತ್ತೀಚೆಗೆ ರಾಜ್ಯದಲ್ಲಿ ವಿವಾದ ಎದ್ದಿತ್ತು. ಸಮಾಜದ ಗಣ್ಯರನ್ನು, ಚಿಂತಕರನ್ನು ನಾಮನಿರ್ದೇಶನ ಮಾಡುವ ಬದಲು ಸರಕಾರ, ರಾಜಕೀಯ ವ್ಯಕ್ತಿಗಳನ್ನು ಆಯ್ಕೆ ಮಾಡಿದೆ. ಈ ಹೆಸರುಗಳನ್ನು ರಾಜ್ಯಪಾಲರು
ತಿರಸ್ಕರಿಸಬೇಕು ಎಂದು ಬಿಜೆಪಿ ಗದ್ದಲ ಎಬ್ಬಿಸಿತ್ತು. ಇದರಲ್ಲಿ ಒಂದಿಷ್ಟು ಸತ್ಯವೂ ಅಡಗಿತ್ತು.

ಮೇಲ್ಮನೆ, ಹಿರಿಯರ ಮನೆ ಎಂದೆಲ್ಲ ಕರೆಯಲ್ಪಡುವ ವಿಧಾನಪರಿಷತ್ ಇಂದು ಹಣವುಳ್ಳವರ ಮನೆ, ನಿರಾಶ್ರಿತರ ಶಿಬಿರ ಎಂದೆಲ್ಲ ವ್ಯಂಗ್ಯಕ್ಕೆ ಒಳಗಾಗುತ್ತಿದೆ. ಮುಂಬಾಗಿಲಿನಲ್ಲಿ ವಿಧಾನಸಭೆಯನ್ನು ಪ್ರವೇಶಿಸಲು ಸಾಧ್ಯವಿಲ್ಲದ ಪ್ರತಿಷ್ಠಿತರಿಗೆ ಹಿಂಬಾಗಿಲಲ್ಲಿ ಪ್ರವೇಶಿಸಲೊಂದು ಅವಕಾಶ ಎಂಬ ಟೀಕೆಯೂ ಇದರ ಕುರಿತಂತಿದೆ.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ನ ಮಾನವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಜೆಡಿಎಸ್‌ನ ಮುಖಂಡ ಎಚ್.ಡಿ.ಕುಮಾರಸ್ವಾಮಿಯವರು ತನ್ನದೊಂದು ದೊಡ್ಡ ಕೊಡುಗೆಯನ್ನು ನೀಡಿ ದ್ದಾರೆ. ವಿಧಾನ ಪರಿಷತ್ ಸದಸ್ಯನೊಬ್ಬನ ಬೆಲೆ ಯನ್ನು ನಿಗದಿ ಪಡಿಸಿ, ಅವರು ಹರಾಜು ಕೂಗಿ ದ್ದಾರೆ. ಆ ಧ್ವನಿ ಮುದ್ರಿಕೆ ಇದೀಗ ಮೇಲ್ಮನೆಗಿ ರುವ ಯೋಗ್ಯತೆಯನ್ನು ಕೂಗಿ ಕೂಗಿ ಹೇಳುತ್ತಿದೆ.

ಜೆಡಿಎಸ್‌ನ ಮುಖಂಡ ವಿಜು ಗೌಡ ಪಾಟೀಲ್‌ಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದಾರೆ. ಅವರ ಮುಂದೆ ಕುಮಾರಸ್ವಾಮಿ ತಮ್ಮ ಪಕ್ಷದ ಅವಹಾಲನ್ನು ಹೇಳಿಕೊಳ್ಳುತ್ತಾ, ಅದರ ಬೆಲೆಯನ್ನು ಘೋಷಿಸಿದ್ದಾರೆ. ಆ ಬೆಲೆಯನ್ನು ನೀಡಿದರೆ, ವಿಜು ಪಾಟೀಲ್‌ಗೆ ಸದಸ್ಯ ಸ್ಥಾನ ನೀಡುತ್ತೇನೆ ಎಂಬಂತಹ ಹೇಳಿಕೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ನ ಸ್ಥಾನಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಹೇಗೆ ತನ್ನ ಶಾಸಕರೇ ತನ್ನನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾರೆ ಎಂಬಂತಹ ವಿವರಗಳನ್ನೂ ಅವರು ಹೇಳಿ
ಕೊಂಡಿದ್ದಾರೆ. ವಿಧಾನಪರಿಷತ್‌ನ ಸ್ಥಿತಿ ಎಷ್ಟರ ಮಟ್ಟಿಗೆ ದೈನೇಸಿಯಾಗಿದೆಯೆಂದರೆ, 40 ಕೋಟಿ ರೂಪಾಯಿಯವರೆಗೆ ಈ ಸ್ಥಾನವನ್ನು ಹರಾಜು ಕೂಗಲಾಗುತ್ತದೆ. ಯಾರು ಹೆಚ್ಚು ಹಣ ನೀಡುತ್ತಾರೆಯೋ ಅವರನ್ನು ಬೆಂಬಲಿಸು ವಂತಹ ಸ್ಥಿತಿಗೆ ವಿಧಾನಸಭಾ ಕ್ಷೇತ್ರಗಳ ಶಾಸಕರು ಇಳಿದಿದ್ದಾರೆ. ಈ ಎಲ್ಲ ಮಾತುಗಳ ಮೂಲಕ ಕುಮಾರಸ್ವಾಮಿಯವರು ವಿಜು ಗೌಡ ಪಾಟೀಲ್‌ರಿಂದ ಹಣವನ್ನು ಅಪೇಕ್ಷಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ದುರದೃಷ್ಟವಶಾತ್, ಕುಮಾರಸ್ವಾಮಿಯವರ ಈ ಹೇಳಿಕೆಯನ್ನು ಯಾರೋ ಮುದ್ರಿಸಿಕೊಂಡಿದ್ದು, ಅದೀಗ
ಜಗಜ್ಜಾಹೀರಾಗಿದೆ.

ಇನ್ನಷ್ಟು ವಿಷಾದನೀಯ ವಿಷಯವೆಂದರೆ, ಈ ಧ್ವನಿಮುದ್ರಿಕೆಯನ್ನು ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ಸಮರ್ಥಿಸಿಕೊಂಡಿದ್ದು. ತಾನು ಹಾಗೆ ಹೇಳಿರುವುದು ನಿಜ. ವಾಸ್ತವವನ್ನೇ ತಾನು ಹೇಳಿದ್ದೇನೆ ಎಂದು ಮಾಧ್ಯಮಗಳಲ್ಲಿ ಘೋಷಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ತಪ್ಪು ಮಾಡಿದ್ದರೆ, ಹೊರ ಜಗತ್ತಿನ ಮುಂದೆಯಾದರೂ ತಾನು ಕಳ್ಳ ಅಲ್ಲ ಎಂದು ಹೇಳುವ ವಾಡಿಕೆಯಿತ್ತು. ಆದರೆ ಇಂದಿನ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಯೆಂದರೆ, ‘‘ಹೌದು ನಾನು ಕದ್ದಿದ್ದೇನೆ. ಇಂದು ಕದಿಯುವುದು ಅನಿವಾರ್ಯ. ಎಲ್ಲರೂ
ಕದಿಯುತ್ತಿದ್ದಾರೆ, ನಾನೂ ಕದಿಯುತ್ತೇನೆ’’ ಎಂದು ಘೋಷಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಭ್ರಷ್ಟರು ಹೀಗೆ ಸಾರ್ವಜನಿಕವಾಗಿ ಎದೆಯುಬ್ಬಿಸಿ ಹೇಳಿಕೆ ನೀಡುವಂತಹ ವಾತಾವರಣ ನಿರ್ಮಾಣವಾಗಿರುವುದು, ಬಿಜೆಪಿ ನೇತೃತ್ವದ ಅಧಿಕಾರಾವಧಿಯಲ್ಲಿ. ತನ್ನ ಮೇಲೆ ಆರೋಪ ಬಂದಾಗ ಯಡಿಯೂರಪ್ಪ, ಕಾಂಗ್ರೆಸ್‌ನವರೇನು ಸಾಚಾನಾ? ಎಂದು ತನ್ನನ್ನು ಸಮರ್ಥಿಸಿ ಕೊಳ್ಳತೊಡಗಿದ್ದರು. ಇದೀಗ ಕುಮಾರಸ್ವಾಮಿ ಯವರು ಅದನ್ನೇ ಪುನರಾವರ್ತಿಸಿದ್ದಾರೆ. ಇಲ್ಲಿ ಕುಮಾರಸ್ವಾಮಿಯವರ ದುಃಖವೆಂದರೆ, ತನ್ನ ಪಕ್ಷದ ಶಾಸಕರು ತನ್ನ ಮಾತನ್ನು ಕೇಳುತ್ತಿಲ್ಲ. ಎಲ್ಲರೂ ಒಂದೊಂದು ಕೋಟಿ ರೂಪಾಯಿ ಕೇಳುತ್ತಿದ್ದಾರೆ. ತನ್ನ ಪಕ್ಷದ ಸ್ಥಿತಿ ಈ ಮಟ್ಟಕ್ಕೆ ಬಂದಿದೆ ಎನ್ನುವುದು. ಆದರೆ ರಾಜ್ಯದ ಜನತೆಯ ದುಃಖ ಬೇರೆಯೇ ಆಗಿದೆ. ಸರಕಾರಕ್ಕೆ ಮಾರ್ಗ ದರ್ಶನ ನೀಡಬೇಕಾದ, ಚಿಂತಕರು, ಹಿರಿಯರು ಇರಬೇಕಾದ ವಿಧಾನಪರಿಷತ್ ಎನ್ನುವ ಮೇಲ್ಮನೆ ಇಂದು ಹಣಕ್ಕೆ ಹರಾಜಾಗುವ ಪರಿಸ್ಥಿತಿಗೆ ಬಂದಿದೆ. ಹೀಗಿರುವಾಗ, ಇಂತಹ ಮನೆಯೊಂದು ಅಸ್ತಿತ್ವದಲ್ಲಿರುವ ಅಗತ್ಯವಿದೆಯೇ?

ವಿಧಾನಪರಿಷತ್‌ನ ನಿರ್ವಹಣೆಗೆ ಸರಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಮೇಲ್ಮನೆಯ ಅಸ್ತಿತ್ವವೇ ಇಲ್ಲದೆ ಇದ್ದರೂ ನಮ್ಮ ರಾಜ್ಯ ಅದನ್ನು ಉಳಿಸಿಕೊಂಡು ಬಂದಿರುವುದು ಆಡಳಿತ ಹೆಚ್ಚು ಪಾರದರ್ಶಕ ವಾಗಿರಬೇಕು ಎನ್ನುವ ಕಾರಣಕ್ಕಾಗಿ. ಜೊತೆಗೆ, ವಿಧಾನಸಭೆಯಲ್ಲಿರುವ ಶಾಸಕರಿಗೆ ಮಾರ್ಗ ದರ್ಶನ ನೀಡಲು ವಿಧಾನ ಪರಿಷತ್‌ನ ಅಗತ್ಯ ಇದೆ ಎಂದು ನಾವು ನಂಬಿದ್ದೇವೆ.

ಆದರೆ ಇತ್ತೀಚೆಗೆ ಈ ವಿಧಾನಪರಿಷತ್‌ಗೆ ಆಯ್ಕೆಯಾಗುತ್ತಿರುವ ಜನಪ್ರತಿನಿಧಿಗಳನ್ನು ಗಮನಿಸಿದರೆ, ಇವರಿಂದ ಮಾರ್ಗದರ್ಶನ ಸಿಗುವುದು ಬಿಡಿ, ಸರಕಾರ ಇನ್ನಷ್ಟು ಗಬ್ಬೆದ್ದು ಹೋಗುವ ಸಾಧ್ಯತೆಯೇ ಕಾಣುತ್ತಿದೆ. ಪಾರ್ಟಿ ಫಂಡಿಗೆ ಹಣ ನೀಡಿದವರಿಗೆ, ಕೋಟಿಗಟ್ಟಲೆ ಹಣ ಸುರಿದವರಿಗೆ ಈ ಸ್ಥಾನಗಳನ್ನು ಹಂಚಿದುದೇ ಆದರೆ, ಅಂತಹ ಜನಪ್ರತಿನಿಧಿಗಳಿಂದ ಯೋಗ್ಯ ಮಾರ್ಗದರ್ಶನ ಸಿಗುವುದು ಹೇಗೆ ಸಾಧ್ಯ? ಪಕ್ಷಗಳಿಗೆ ಹಣ ಮಾಡಿಕೊಡುವುದಕ್ಕಾಗಿ, ಕೆಲವರು ಕೋಟಿ ಗಟ್ಟಲೆ ಹಣವನ್ನು ದೋಚುವುದಕ್ಕಾಗಿ ಈ ಮನೆಯನ್ನು ಸಾಕಬೇಕೇ?

ವಿಧಾನಪರಿಷತ್ ವ್ಯವಸ್ಥೆ ನಮಗೆ ಅಗತ್ಯ ವಿದೆಯೇ ಎನ್ನುವುದನ್ನು ಚರ್ಚೆ ನಡೆಸುವುದಕ್ಕೆ ಇದು ಸಕಾಲ. ವಿಧಾನಪರಿಷತ್ ಎಷ್ಟರ ಮಟ್ಟಿಗೆ ಆಡಳಿತದಲ್ಲಿ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸುತ್ತಿದೆ? ಇದು ಕೇವಲ ಹೆಸರಿಗಷ್ಟೇ ಅಸ್ತಿತ್ವದಲ್ಲಿದೆಯೇ? ಎನ್ನುವುದರ ಕುರಿತಂತೆ ಚಿಂತಕರು, ರಾಜಕೀಯ ನಾಯಕರು ಚರ್ಚೆ ನಡೆಸಿ ಇದನ್ನು ನಿವಾರಿಸುವ ಕೆಲಸವನ್ನು ಮಾಡಬೇಕು. ಆ ಮೂಲಕ ಕಲಾಪದ ಹೆಸರಿನಲ್ಲಿ ನಡೆಸುವ ವ್ಯರ್ಥ ಪ್ರಲಾಪ, ಹಣದಿಂದಲೇ ಮೂಡಿ ಬಂದ ನಕಲಿ ಜನಪ್ರತಿನಿಧಿಗಳನ್ನು ಸಾಕುವ ದುಡ್ಡು ಇವೆಲ್ಲವುಗಳಿಗೆ ಕಡಿವಾಣ ಬಿದ್ದೀತು. ವಿಧಾನ ಪರಿಷತ್‌ಗೆ ವ್ಯಯ ಮಾಡುವ ಹಣವನ್ನು ಜನರ ಅಭಿವೃದ್ಧಿಗೆ ಬಳಸುವಂತಾಗಬೇಕು. (ಕೃಪೆ: ವಾರ್ತಾ ಭಾರತಿ ಸಂಪಾದಕೀಯ, 07.07.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s