ಉಳ್ಳವರ ಋಣ ತೀರಿಸಿದ ಮೋದಿ ಸರಕಾರ

Posted: ಜುಲೈ 12, 2014 in Uncategorized

# ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿ ಗೆದ್ದು ಪ್ರಧಾನಿ ಯಾದುದು ನಿಜವಾದ ಜನಪ್ರಿಯತೆಯಿಂದಲ್ಲ. ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಬಂಡವಾಳಶಾಹಿಗಳು 10 ಸಾವಿರ ಕೋಟಿ ಗಿಂತ ಹೆಚ್ಚು ಹಣವನ್ನು ಚೆಲ್ಲಿ ತಮ್ಮ ಹಿತರಕ್ಷಕನಾಗಿ ಮೋದಿಯವರನ್ನು ಗೆಲ್ಲಿಸಿದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ ಇವರಿಗೆ ತಮ್ಮ ಮೊದಲ ಮುಂಗಡ ಪತ್ರದಲ್ಲಿ ರಿಯಾಯ್ತಿಯಲ್ಲಿ ರಿಯಾಯ್ತಿ ನೀಡಿ ಋಣ ತೀರಿಸಿದ್ದಾರೆ. ಚುನಾವಣೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಬಡ್ಡಿ ಸಮೇತ ಮರುಪಾವತಿ ಮಾಡಿದ್ದಾರೆ. ಇದರ ಜೊತೆಗೆ ಮಧ್ಯಮ ವರ್ಗವನ್ನು ಓಲೈಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಅರುಣ್ ಜೇಟ್ಲಿಯವರ ಮುಂಗಡ ಪತ್ರದಲ್ಲಿ ಸಾಮಾಜಿಕ ಕಾಳಜಿಗೆ ಜಾಗವಿಲ್ಲ. ಜನಪರ ಯೋಜನೆಗಳಿಗೆ ಆದ್ಯತೆಯಿಲ್ಲ. ಆದರೆ, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅಗ್ರ ಪ್ರಾಶಸ್ತ್ಯವಿದೆ. ಸಾರ್ವಜನಿಕ ಉದ್ಯಮ ವಲಯವನ್ನು ಖಾಸಗಿ ರಂಗದ ರಣಹದ್ದುಗಳಿಗೆ ಒಪ್ಪಿಸುವ ಹುನ್ನಾರ ಎದ್ದು ಕಾಣುತ್ತದೆ.

ದೇಶದ ಆರ್ಥಿಕತೆಯನ್ನು ದೇಶ-ವಿದೇಶಗಳ ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ಒಪ್ಪಿಸಲು ಜೇಟ್ಲಿ ಯಾವ ಸಂಕೋಚವನ್ನೂ ತೋರಿಸಿಲ್ಲ. ಹಿಂದಿನ ಯುಪಿಎ ಸರಕಾರ ಈ ನಿಟ್ಟಿನಲ್ಲಿ ಯತ್ನಿಸಿತ್ತಾದರೂ ಜೇಟ್ಲಿಯವರಂತೆ ದಿಟ್ಟ ಹೆಜ್ಜೆ ಇಟ್ಟಿರಲಿಲ್ಲ. ಉದ್ಯಮ ರಂಗಕ್ಕೆ ಪ್ರೋತ್ಸಾಹಕರವಾದ ಹಲವಾರು ಘೋಷಣೆಗಳನ್ನು ಮಾಡುವುದರ ಜೊತೆಗೆ ವೈಯಕ್ತಿಕ ಆದಾಯ ತೆರಿಗೆಯ ಮಿತಿಯನ್ನು ರೂ. 2.5 ಲಕ್ಷದವರೆಗೆ ಹೆಚ್ಚಿಸುವ ಮೂಲಕ ಮಧ್ಯಮ ವರ್ಗವನ್ನು ಓಲೈಸಲು ಹಣಕಾಸು ಸಚಿವರು ಯತ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ, ಚುನಾವಣಾ ಪೂರ್ವದಲ್ಲಿ ಮಾಡಿದಂತೆ ಈ ಮುಂಗಡ ಪತ್ರದಲ್ಲೂ ಕನಸುಗಳ ಮಾರಾಟ ಮಾಡಲು ಜೇಟ್ಲಿಯವರು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದಾರೆ. ‘ಬೇಟಿ ಬಚಾವೋ’ ಯೋಜನೆಗೆ 100 ಕೋಟಿ ರೂ. ಒದಗಿಸಿದ ಅವರು, ಗುಜರಾತ್‌ನಲ್ಲಿ ಅನಾವರಣಗೊಳ್ಳಲಿರುವ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ 200 ಕೋಟಿ ರೂ.
ಮೀಸಲಿಟ್ಟಿದ್ದಾರೆ. ಈ ಮೂಲಕ ತಮ್ಮ ಆದ್ಯತೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕಾಟಾಚಾರಕ್ಕೆ ಎಂಬಂತೆ ಪೊಲೀಸ್ ವ್ಯವಸ್ಥೆ ಸುಧಾರಣೆಗೆ 100 ಕೋಟಿ ರೂ., ನದಿ ಜೋಡಣೆ ಅಧ್ಯಯನಕ್ಕೆ 100 ಕೋಟಿ ರೂ., ವಿಶಿಷ್ಟ ಕ್ಷೇತ್ರಗಳ ಅಭಿವೃದ್ಧಿಗೆ 100 ಕೋಟಿ ರೂ. ಹೀಗೆ ಕೆಲ ಕೋಟಿಗಳನ್ನು ತೋರಿಕೆಗಾಗಿ ಮೀಸಲಿರಿಸಿದ್ದಾರೆ. ಇದರೊಂದಿಗೆ ಅಕ್ರಮ ಗಣಿಗಾರಿಕೆಯಿಂದ ನಿಂತು ಹೋಗಿದ್ದ ಉಪ್ಪು ಉದ್ಯಮವನ್ನು ಪುನಶ್ಚೇತನಗೊಳಿಸಲು ಗಣಿಗಾರಿಕೆಯನ್ನು ಮತ್ತೆ ನಡೆಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮೋದಿ ಸರಕಾರದ ಮೊದಲ ಬಜೆಟ್‌ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ
ನಿರ್ಲಕ್ಷಿಸಲಾಗಿದೆ. ಮೈಸೂರಿನಲ್ಲಿ ವಸ್ತ್ರೋದ್ಯಮ ಕೇಂದ್ರ ಸ್ಥಾಪನೆ ಹೊರತುಪಡಿಸಿದರೆ ರಾಜ್ಯಕ್ಕೆ ಮತ್ತ್ಯಾವ ಯೋಜನೆಯೂ ದೊರತಿಲ್ಲ. ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಿಗೆ ಹಾಗೂ ಮೋದಿಯವರ ತವರು ರಾಜ್ಯವಾದ ಗುಜರಾತ್ ಮತ್ತು ಅವರ ಪ್ರಧಾನಿ ಹುದ್ದೆಗೆ ನೆರವಾದ ಉತ್ತರಪ್ರದೇಶಕ್ಕೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಹು ದಿನಗಳ ಬೇಡಿಕೆಗಳು
ಕಡೆಗಣಿಸಲ್ಪಟ್ಟಿವೆ. ಈ ಬಜೆಟ್‌ಗೆ ಮುನ್ನ ಮಂಡನೆಯಾದ ರೈಲ್ವೆ ಬಜೆಟ್‌ನಲ್ಲೂ ಕರ್ನಾಟಕ ಕಡೆಗಣಿಸಲ್ಪಟ್ಟಿತ್ತು. ಅದರಲ್ಲೂ ಖಾಸಗಿ ವಲಯಕ್ಕೆ ಆದ್ಯತೆ ನೀಡಲಾಗಿತ್ತು. ಗುಜರಾತ್‌ನಂತೆ ದೇಶವ್ಯಾಪಿಯಾಗಿ 24 ಗಂಟೆ ವಿದ್ಯುತ್ ಒದಗಿಸುವ ಗ್ರಾಮೀಣ ವಿದ್ಯುತ್ ಯೋಜನೆಗೆ ಕೇವಲ 500 ಕೋಟಿ ರೂ. ಒದಗಿಸಿದ್ದಾರೆ. ಇಷ್ಟೊಂದು ಕಡಿಮೆ ಹಣದಲ್ಲಿ ಭಾರತದಂತಹ ಬೃಹತ್ ರಾಷ್ಟ್ರದ ಗ್ರಾಮೀಣ ಪ್ರದೇಶಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವೇ? ಇದು ಗುಜರಾತ್‌ನಂತೆ ಸುಳ್ಳಿನ ಕಂತೆಯಲ್ಲದೆ ಬೇರೇನೂ ಅಲ್ಲ.

ಗುಜರಾತ್‌ನಲ್ಲಿ ಕೂಡ ನಗರ ಪ್ರದೇಶಗಳನ್ನು ಹೊರತುಪಡಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸರಿಯಾದ ವಿದ್ಯುತ್ ಪೂರೈಕೆ ಇಲ್ಲ. ಕೋಟ್ಯಂತರ ಭಾರತೀಯರು ಬಡತನ, ನಿರುದ್ಯೋಗ, ಹಸಿವಿನಿಂದ ಬಳಲುತ್ತಿದ್ದಾರೆ. ಈ ನೊಂದ ಜನರಿಗಾಗಿ ಮೋದಿ ಸರಕಾರದ ಮೊದಲ ಬಜೆಟ್‌ನಲ್ಲಿ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ಉದ್ಯೋಗಾವಕಾಶ ಸೃಷ್ಟಿಗೆ ಯಾವುದೇ
ಕಾರ್ಯಕ್ರಮಗಳಿಲ್ಲ. ಇದು ಬಡವರ ಹೊಟ್ಟೆಗೆ ಹೊಡೆದು, ಉಳ್ಳವರ ತಿಜೋರಿ ತುಂಬುವ ಹುನ್ನಾರವಲ್ಲದೆ ಬೇರೇನೂ ಅಲ್ಲ.

ಒಟ್ಟಾರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಮಾರುಕಟ್ಟೆಯಲ್ಲಿಟ್ಟು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದ ಕಾರ್ಪೊರೇಟ್ ಧಣಿಗಳಿಗೆ ನಿರಾಶೆಯಾಗಿಲ್ಲ. ಅವರನ್ನು ಸಂತೃಪ್ತಿಗೊಳಿಸುವ ಸೂಚನೆಯನ್ನು ಹಣಕಾಸು ಸಚಿವರು ನೀಡಿದ್ದಾರೆ. ಈಗ ಮಂಡನೆಯಾಗಿರುವ ಮುಂಗಡ ಪತ್ರ ಕೇವಲ 10 ತಿಂಗಳಿಗೆ ಮಾತ್ರ ಸೀಮಿತವಾಗಿದೆ. ಮುಂದಿನ ವರ್ಷ ಮಂಡಿಸಲಿರುವ ಮುಂಗಡ ಪತ್ರದಲ್ಲಿ ಕಾರ್ಪೊರೇಟ್ ಬಂಡವಾಳಗಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟರೆ ಆಶ್ಚರ್ಯವಿಲ್ಲ. (ಕೃಪೆ: ವಾರ್ತಾ ಭಾರತಿ ಸಂಪಾದಕೀಯ, 12.07.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s