ಮೆಣಸಿನಹಾಡ್ಯ ಹತ್ಯಾಕಾಂಡಕ್ಕೆ ಏಳು ವರ್ಷ !

Posted: ಜುಲೈ 12, 2014 in Uncategorized
ಟ್ಯಾಗ್ ಗಳು:, , , , , , ,

ಉಡುಪಿ: ಶೃಂಗೇರಿ ಸಮೀಪದ ಮೆಣಸಿನಹಾಡ್ಯದ ಅತ್ಯಡ್ಕದಲ್ಲಿ ನಕ್ಸಲ್ ನಿಗ್ರಹ ದಳ (ಎಎನ್ಎಫ್)ದ ಪೊಲೀಸರು, ಶಂಕಿತ ನಕ್ಸಲೀಯ ಯುವಕ ಹಾಗೂ ಮಹಿಳೆಯೊಬ್ಬರ ಸಹಿತ ನಾಲ್ವರು ಬಡ ಆದಿವಾಸಿಗಳನ್ನು ನಿರ್ದಾಕ್ಷಿಣ್ಯವಾಗಿ ಗುಂಡಿನ ಸುರಿಮಳೆ ಸುರಿಸಿ ಅತ್ಯಂತ ಅಮಾನುಷವಾಗಿ ಹತ್ಯಾಕಾಂಡ ನಡೆಸಿದ ಘಟನೆಗೆ ಜುಲೈ 10ಕ್ಕೆ ಏಳು ವರ್ಷವಾಗಿದೆ.

ಶಂಕಿತ ನಕ್ಸಲೀಯ ಚೆನ್ನಪ್ಪ ಯಾನೆ ಗೌತಮ್, ಬಡ ಆದಿವಾಸಿ ಕುಟುಂಬದ ದಂಪತಿಗಳಾದ ರಾಮೇ ಗೌಡ್ಲು-ಕಾವೇರಿ, ಪ್ರಜಾತಾಂತ್ರಿಕ ಆದಿವಾಸಿ ಹೋರಾಟಗಾರರಾದ ಪರಮೇಶ್ವರ್ ಹಾಗೂ ಸುಂದರೇಶ್ ಎಂಬವರು 2007ರ ಜುಲೈ 10ರಂದು ನಸುಕಿನ ಸಮಯ ಎಎನ್ಎಫ್ ಸಿಬ್ಬಂದಿಗಳು ನಡೆಸಿದ ಅಮಾನವೀಯ ಕಾಯಾಚರಣೆಗೆ ಬಲಿಯಾದವರು.

ನಕ್ಸಲ್ ಕಾರ್ಯಕರ್ತರು ತಾವು ಸಕ್ರಿಯವಾಗಿರುವ ಪ್ರದೇಶಗಳಲ್ಲಿನ ಬಡವರ ಮನೆಗಳಲ್ಲಿ ರಾತ್ರಿ ಹೊತ್ತು ಉಳಕೊಳ್ಳುವುದು, ಊಟ-ತಿಂಡಿ ಕೇಳಿ ತಿನ್ನುವುದು ಅಥವಾ ತಾವು ತಂಗಿರುವ ಸ್ಥಳಗಳಿಗೆ ಒಯ್ಯುವುದು ಇತ್ಯಾದಿಗಳೆಲ್ಲವೂ ಸಾಮಾನ್ಯ. ಉಳಿದವರ ದುರದೃಷ್ಟವೋ ಏನೋ, 2007ರ ಜುಲೈ 9ರಂದು ರಾತ್ರಿ ನಕ್ಸಲ್ ಕಾರ್ಯಕರ್ತರಾದ ಚೆನ್ನಪ್ಪ ಯಾನೆ ಗೌತಮ್ ಮೆಣಸಿನಹಾಡ್ಯದ ಅತ್ಯಡ್ಕ ಎಂಬಲ್ಲಿರುವ ರಾಮೇಗೌಡ್ಲು-ಕಾವೇರಿ ದಂಪತಿಗಳ ಮನೆಯಲ್ಲಿ ಉಳಕೊಂಡಿದ್ದರು. ಹೀಗೆ ನಕ್ಸಲ್ ಗೌತಮ್ ಉಳಕೊಂಡ ಮನೆ ಯಲ್ಲಿ ಇದ್ದವರು ಎಂಬ ಕಾರಣಕ್ಕೆ ಉಳಿದ ನಾಲ್ವರು ಅಮಾಯಕರು ಎಎನ್ಎಫ್ ಸಿಬ್ಬಂದಿಗಳ ಗುಂಡಿನ ದಾಳಿಗೆ ತುತ್ತಾಗಿಬೇಕಾಗಿ ಬಂದಿತ್ತು.

ಹತ್ಯೆಗೀಡಾದ ಪರಮೇಶ್ವರ್ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಕಾರ್ಯದರ್ಶಿಯಾಗಿದ್ದರು. ಧಾರಾವಾಹಿಯಲ್ಲೂ ನಟಿಸಿದ್ದು, ಸಾರ್ವಜನಿಕವಾಗಿ ಪಾರದರ್ಶಕ ಜೀವನ ನಡೆಸಿದವರಾಗಿದ್ದರು. ಪರಮೇಶ್ವರ್ ಜೊತೆಗೆ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಸುಂದರೇಶ್, ತೋಟಕ್ಕೆ ಔಷಧ ಬಿಡುವ ಕೆಲಸಕ್ಕಾಗಿ ರಾಮೇಗೌಡ್ಲು ಮನೆಗೆ ಬಂದವರಾಗಿದ್ದರು.

ಹಿಂದಿನ ದಿನ ರಾತ್ರಿ ನಕ್ಸಲ್ ಗೌತಮ್ ರಾಮೇಗೌಡ್ಲು ಮನೆಗೆ ಬಂದು ಉಳಕೊಂಡಿರುವ ಬಗ್ಗೆ ಎಎನ್ಎಫ್ಗೆ ಖಚಿತ ಮಾಹಿತಿ ಇತ್ತು. ಜುಲೈ 10ರಂದು ನಸುಕಿನ 5ರ ಸುಮಾರಿಗೆ ಎಎನ್ಎಫ್ ಸಿಬ್ಬಂದಿಗಳು ಮನೆಯನ್ನು ಸುತ್ತುವರಿದಿದ್ದಾರೆ. ಕೆಲವು ಮಂದಿ ಸಿಬ್ಬಂದಿಗಳು ಮನೆಯಂಗಳಕ್ಕೆ ಕಾಲಿರಿಸಿದ್ದಾರೆ. ಅಂಗಳಕ್ಕೆ ಕಾಲಿರಿಸಿದ ಸಿಬ್ಬಂದಿ ಮೊದಲಿಗೆ ಅಂಗಳದಲ್ಲಿ ನಿಂತುಕೊಂಡಿದ್ದ ಪರಮೇಶ್ವರ್ ಜೊತೆ ಮಾತಿಗಿಳಿದಿದ್ದಾರೆ. ಬಳಿಕ ಮನೆಯ ಹಿಂಬದಿಗೆ ಹೋಗಿ ಅಲ್ಲಿ ಹಲ್ಲುಜ್ಜುತ್ತಿದ್ದ ಗೌತಮ್ ಅವರನ್ನು ಗುಂಡಿಟ್ಟು ಕೊಂದಿದ್ದಾರೆ. ನಂತರ ಕ್ರಮವಾಗಿ ಮುಖಾಮುಖಿ ಮಾತಾಡುತ್ತಲೇ ಬಹಳ ಹತ್ತಿರದಿಂದಲೇ ಪರಮೇಶ್ವರ್, ಸುಂದರೇಶ್, ರಾಮೇಗೌಡ್ಲು ಹಾಗೂ ಕಾವೇರಿ ಇವರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ನಡುವೆ ರಾಮೇಗೌಡ್ಲು-ಕಾವೇರಿ ದಂಪತಿಗಳ ಪುತ್ರ ಪ್ರಶಾಂತ್ ಭಯದಿಂದ ಓಡಿಹೋಗಿ ತಪ್ಪಿಸಿಕೊಂಡು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ಮನೆಯಲ್ಲಿದ್ದ ಐವರನ್ನು ಗುಂಡಿಟ್ಟು ಕೊಂದ ಬಳಿಕವೂ ಎಎನ್ಎಫ್ ಪೊಲೀಸರು ಎನ್ಕೌಂಟರ್ ಚಿತ್ರಣ ಸೃಷ್ಟಿಸಲು ಮಧ್ಯಾಹ್ನದವರೆಗೂ ಇಡೀ ಮನೆಗೇನೇ ಗುಂಡಿನ ಸುರಿಮಳೆ ಸುರಿಸಿ ಧ್ವಂಸಗೊಳಿಸುವ ಪ್ರಕ್ರಿಯೆ ನಡೆಸಿದ್ದಾರೆ. ಈ ಮಧ್ಯೆ ಊರವರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿ ಎಎನ್ಎಫ್ ಕೃತ್ಯಕ್ಕೆ ಭಾರೀ ಪ್ರತಿಭಟನೆ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಮೆಣಸಿನಹಾಡ್ಯದ ಅತ್ಯಡ್ಕದಲ್ಲಿ ನಡೆದ ಈ ಹತ್ಯಾಕಾಂಡದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಾನವಹಕ್ಕು, ಜನಪರ ಹೋರಾಟಗಾರರು ಹಾಗೂ ಸಂಘಟನೆಗಳು ಅಂದಿನ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರೂ, ಸರಕಾರ ಮಾತ್ರ ಯಾವುದೇ ರೀತಿಯ ತನಿಖೆಯನ್ನೂ ನಡೆಸದೆ ಘಟನೆಯನ್ನು ನಿರ್ಲಕ್ಷಿಸಿತ್ತು. ವರದಿ: ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s