ಅತ್ಯಾಚಾರ: ಅಟ್ರಾಸಿಟಿ, ವರದಕ್ಷಿಣೆ ಕೇಸುಗಳಂತೆ ದುರ್ಬಳಕೆಯಾಗದಿರಲಿ..!

Posted: ಆಗಷ್ಟ್ 7, 2014 in Uncategorized

# ನಮ್ಮ ನಾಡಿನ, ದೇಶದ ಬಹುತೇಕ ಸಮಸ್ಯೆಗಳಿಗೂ ನಾವೇ ಕಾರಣರು. ನಾವೇ ಎಂದರೆ ನಾಗರಿಕರು ಅಥವಾ ಪ್ರಜೆಗಳು. ಎಲ್ಲರೂ ಅಲ್ಲ, ಕೆಲವರು. ಕೆಲವರು ಎಂದರೆ, ಕೇವಲ ಕೆಲವೇ ಕೆಲವು ಜನರೂ ಅಲ್ಲ. ಈ ಕೆಲವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ನಾಗರಿಕರ ಜೊತೆಗೆ ಪ್ರಜಾಪ್ರಭುತ್ವದ ಪ್ರಮುಖ ಅಂಗಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೂ ಕಾರಣವೇ. ಅಕ್ಷರ ಮತ್ತು ಮತ್ತು ದೃಶ್ಯ ಮಾಧ್ಯಮಗಳ ಕೊಡುಗೆಯೂ ಇಲ್ಲದಿಲ್ಲ.

ಹಣಕ್ಕಾಗಿಯೋ, ಶತ್ರುವಿಗೆ ಬುದ್ಧಿ ಕಲಿಸಲೋ ಅಥವಾ ಇನ್ನಾವುದಾದರೊಂದು ಕಾರಣಕ್ಕಾಗಿ ತಮಗಾಗದವರ ಮೇಲೆ ಸುಳ್ಳು ಕೇಸು ದಾಖಲಿಸುವುದರಲ್ಲಿ ನಾಗರಿಕರು ನಿಸ್ಸೀಮರು. ಶತಮಾನಗಳಿಂದಲೂ ಈ ಕುತಂತ್ರ ಬುದ್ದಿಯನ್ನು ಜನರು ತೋರಿಸಿಕೊಂಡೇ ಬಂದಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಹಲ್ಲೆ, ದಲಿತ ದೌರ್ಜನ್ಯ, ಜಾತಿ ನಿಂದನೆ, ವರದಕ್ಷಿಣೆ ಇತ್ಯಾದಿ ಮೊಕದ್ದಮೆಗಳಲ್ಲಿ ಅನೇಕ ಮೊಕದ್ದಮೆಗಳು ಸುಳ್ಳು ಪ್ರಕರಣಗಳೇ ಆಗಿರುತ್ತವೆ. ಇವುಗಳ ಸಾಲಿನಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ ಎಂಬ ಆರೋಪಗಳು ಮತ್ತು ಸುಳ್ಳು ಕೇಸುಗಳು ಇನ್ನು ಮುಂದೆ ದೊಡ್ಡ ಪ್ರಮಾಣದಲ್ಲೇ ಕೇಳಿ ಬರುವ, ದಾಖಲಾಗುವ
ಸಾದ್ಯತೆಗಳಿವೆ. ಇದು ಆತಂಕಕಾರಿ ವಿಷಯವೂ ಆಗಿದೆ.

ದೈಹಿಕವಾಗಿ ಶಕ್ತಿವಂತರಾಗಿರುವವರು ಅಥವಾ ಯುಕ್ತವಂತರಾಗಿರುವ ಜನರು ತಮಗಾಗದವರ ಮೇಲೆ ಹಲ್ಲೆ ನಡೆಸಿ, ಬಳಿಕ ಅವರಿಗಿಂತ ಮುಂಚಿತವಾಗಿಯೇ ತಾವೇ ಆಸ್ಪತ್ರೆಗೆ ದಾಖಲಾಗಿ ತಾವು ಯಾರಿಗೆ ಹಲ್ಲೆ ನಡೆಸಿದ್ದಾರೆಯೋ, ಅವರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸುಳ್ಳು ಕೇಸು ದಾಖಲಿಸುವುದು ನಡೆಯುತ್ತಲೇ ಇದೆ. ಇದರ ಜೊತೆಗೆ ಹಲ್ಲೆಗೆ ಒಳಗಾದವರು ನಿಜವಾದ ಹಲ್ಲೆಕೋರ ಆರೋಪಿಗಳ ವಿರುದ್ಧ ದೂರು ನೀಡಿದಾಗ, ಮೊಕದ್ದಮೆ ದಾಖಲಾದಾಗ, ನಿಜವಾದ ಆರೋಪಿಗಳನ್ನು ಬಂಧಿಸಬೇಕಾದ ಪೊಲೀಸರು ಅಂಥ ಆರೋಪಿಗಳಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವ ಮೂಲಕ ನಿಜವಾದ ಆರೋಪಿಗಳಿಂದ ದೂರುದಾರ (ಪಿರ್ಯಾದಿ) ಗಾಯಾಳುಗಳ (ನಿಜವಾಗಿ ಪೆಟ್ಟು ತಿಂದವರು) ವಿರುದ್ಧ ಕೌಂಟರ್ ಕೇಸು ದಾಖಲಿಸುವುದೂ ನಡೆಯುತ್ತಿದೆ.

ಎರಡೂ ಕಡೆಯವರಿಂದ ಹಣ ಪೀಕಿಸುವುದು ಮತ್ತು ಪ್ರಕರಣದ ನಿಜವಾದ ಆರೋಪಿಗಳನ್ನು ಬಂಧಿಸದೇ ಇರಲು ಹಾಗೂ ಎರಡು ಮೊಕದ್ದಮೆಗಳು ದಾಖಲಾದ ಬಳಿಕ ಎರಡೂ ಕಡೆಯವರನ್ನು ಪರಸ್ಪರ ರಾಜಿ ಮಾಡಿಸುವುದು ಇತ್ಯಾದಿ ಉದ್ಧೇಶಗಳು ಪೊಲೀಸ್ ಅಧಿಕಾರಿಗಳು ಹೀಗೆ ಮಾಡಲು ಮುಖ್ಯ ಕಾರಣ. ಇಲ್ಲಿ ರಾಜಿ ಮಾಡಿಸುವುದು ಎಂದರೆ, ನೊಂದವರಿಗೆ ಅನ್ಯಾಯವೆಸಗುವುದು ಮತ್ತು ಶೋಷಕರನ್ನು ರಕ್ಷಣೆ ಮಾಡುವುದು ಎಂದೇ ಆರ್ಥವಾಗಿದೆ.

ಹಲ್ಲೆ ಕೇಸುಗಳಂತೆ ಇಂದು ಅತೀ ಹೆಚ್ಚು ದರ್ಬಳಕೆಯಾಗುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಮತ್ತು ವರದಕ್ಷಿಣೆ ವಿರೋಧಿ ಕಾಯ್ದೆಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ತಮ್ಮ ಸ್ವಾರ್ಥಕ್ಕಾಗಿ ಅಥವಾ ಬುದ್ದಿ ಕಲಿಸಲಿಕ್ಕಾಗಿ ಎಸ್ ಸಿ/ಎಸ್ ಟಿ ಕಾಯ್ದೆಯನ್ನು
ದುರುಪಯೋಗಪಡಿಸುತ್ತಾರೆ. ದಲಿತೇತರರು ಸಹ ತಮಗಾಗದವರನ್ನು ಬಗ್ಗು ಬಡಿಯಲು ದಲಿತರನ್ನು ಮುಂದಿಟ್ಟುಕೊಂಡು, ದಲಿತರ ಮೂಲಕ ಎಸ್ ಸಿ/ಎಸ್ ಟಿ ಕಾಯ್ದೆಯನ್ನು
ಪ್ರಯೋಗಿಸುವುದಿದೆ.

ಇದೀಗ ವಿಚ್ಛೇದನೆ (ಡೈವೋರ್ಸ್)ಯ ಪ್ರಕರಣಗಳು ಬಹಳಷ್ಟು ಹೆಚ್ಚಿವೆ. ನ್ಯಾಯಾಲಯದಲ್ಲಿ ಹಲವಾರು ವಿಚ್ಛೇದನೆಯ ಪ್ರಕರಣಗಳು ವಿಚಾರಣೆಯಲ್ಲಿವೆ, ವಿಲೆವಾರಿಯಾಗುತ್ತಲೂ ಇವೆ. ಕ್ಷುಲ್ಲಕ ಕಾರಣಗಳಿಗಾಗಿ ಪತ್ನಿ, ಪತಿಯಿಂದ ದೂರವಾಗುತ್ತಿರುವ ವಿದ್ಯಾಮಾನಗಳು ನಡೆಯುತ್ತಿವೆ. ಶ್ರೀಮಂತ ಕುಟುಂಬದ ಪುರುಷರ ಆಸ್ತಿ ಮತ್ತು ಹಣ ಕಬಳಿಸುವ ಹುನ್ನಾರದ ಭಾಗವಾಗಿಯೂ ಇಂದು ವಿಚ್ಛೇದನೆಗಳು ನಡೆಯುತ್ತಿವೆ ಎಂದು ಹೇಳಿದರೆ ಹಲವರಿಗೆ ಆಶ್ಚರ್ಯವಾಗಲೂಬಹುದು. ಕಾರಣ ಏನೇ ಇರಲಿ, ಇಲ್ಲೆಲ್ಲಾ ಹೆಣ್ಣು ಹಾಗೂ ಹೆಣ್ಣಿನ ಕಡೆಯವರು ಗಂಡಿನ ವಿರುದ್ಧ ಬಳಕೆ ಮಾಡುವುದು ಮಾತ್ರ ವರದಕ್ಷಿಣೆ ತಡೆ ಕಾಯ್ದೆಯನ್ನೇ ಆಗಿದೆ. ಈ ಕಾಯ್ದೆಯ ಮೂಲಕ ಗಂಡು ಹಾಗೂ ಗಂಡಿನ ಮನೆಯವರನ್ನು ಜೈಲಿಗೆ ಹಾಕಬಹುದು ಮತ್ತು ಲಕ್ಷಗಳ ಲೆಕ್ಕದಲ್ಲಿ ಹಣವನ್ನೂ, ಆಸ್ತಿಯನ್ನೂ ತಮ್ಮದನ್ನಾಗಿ ಮಾಡಲು ಈ ಕಾಯ್ದೆಯಲ್ಲಿ ಸಾಧ್ಯವಾಗುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದೆ.

ಯಾವಾಗ ಕಾಯ್ದೆ, ಕಾನೂಗಳು ದೊಡ್ಡ ಪ್ರಮಾಣದಲ್ಲಿ ದುರ್ಬಳಕೆಯಾಗಲು ಆರಂಭವಾಗುತ್ತದೆಯೋ, ಆವಾಗ ಅಂಥ ಕಾನೂನು, ಕಾಯ್ದೆಗಳು ಕೂಡಾ ತನ್ನ ಘನತೆ, ಗೌರವಗಳನ್ನು ಕಳೆದುಕೊಂಡು ಬಲಹೀನಗೊಳ್ಳುತ್ತವೆ. ಎಸ್ ಸಿ/ಎಸ್ ಟಿ ಕಾಯ್ದೆ ಬಲಹೀನಗೊಂಡಂತೆಯೇ, ಪ್ರಸ್ತುತ ವರದಕ್ಷಿಣೆ ಕೇಸು ಸಹ ಬಲಹೀನಗೊಳ್ಳಲಾರಂಭಿಸಿದೆ.

ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಸಹ ಅಟ್ರಾಸಿಟಿ ಮತ್ತು ವರದಕ್ಷಿಣೆ ಕೇಸುಗಳಂತೆ ದೊಡ್ಡ ಪ್ರಮಾಣದಲ್ಲಿ ದುರ್ಬಳಕೆಯಾಗತೊಡಗಿದಲ್ಲಿ ಭವಿಷ್ಯದಲ್ಲಿ ಅಟ್ರಾಸಿಟಿ ಮತ್ತು ವರದಕ್ಷಿಣೆ ಕೇಸುಗಳಂತೆಯೇ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಕೂಡಾ ಬಲಹೀನಗೊಂಡು ತನ್ನ ಸತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾದರೆ ಅದು ನಿಜವಾದ ಪ್ರಕರಣಗಳಿಗೆ ಘೋರ ಅನ್ಯಾಯವಾಗಿ ಪರಿಣಮಿಸಲಿದೆ ಎನ್ನುವುದನ್ನು ಈಗಲೇ ಎಲ್ಲರೂ ಅರ್ಥಮಾಡಿಕೊಳ್ಳುವಂತಾಗಬೇಕು. ಮಾತ್ರವಲ್ಲ, ಈಗಿಂದೀಗಲೇ ಇದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಗಂಭಿರವಾಗಿಯೇ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿನ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಇಂದು ಬಂಧಿಸುವುದೇ ಇಲ್ಲ ಎನ್ನಬಹುದು. ಇಂಥ ಪ್ರಕರಣಗಳಲ್ಲಿ ನೂರರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಆರೋಪಿಗಳು ಬಂಧಿಸಲ್ಪಡುತ್ತಾರೆ. ಕಾರಣ, ಪ್ರಕರಣದ ಸಾಚಾತನದ ಬಗ್ಗೆ ಸಂಶಯ. ಸಂಶಯದ ಲಾಭವನ್ನು ಪಡೆದುಕೊಂಡು ಪೊಲೀಸರು ಆರೋಪಿಗಳಿಂದ ಹಣ ಪಡೆದು ಅವರನ್ನು ರಕ್ಷಿಸುವ ವಿದ್ಯಾಮಾನಗಳಿಗೇನೂ ಇಂದು ಕೊರತೆಯಿಲ್ಲ. ಅಟ್ರಾಟಿಸಿ ಪ್ರಕರಣಗಳು ದುರ್ಬಳಕೆಯಾಗುತ್ತಿರುವುದನ್ನು ಕಂಡುಕೊಂಡೇ ನ್ಯಾಯಾಲಯಗಳು ಸಹ ಆರೋಪಿಗಳನ್ನು ಕೂಡಲೇ ಬಂಧಿಸುವ ಅಗತ್ಯವಿಲ್ಲ ಎಂಬ ತೀರ್ಪನ್ನು ನೀಡಿರುವುದನ್ನು ಇಲ್ಲಿ ಗಮನಿಸಬಹುದು. ಇದೇ ರೀತಿಯಾಗಿ ವರದಕ್ಷಿಣೆ ತಡೆ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ಇದೀಗ ನ್ಯಾಯಾಲಯ ತನ್ನ ಅದೇ ತೀರ್ಪನ್ನು ಪುನರಾವರ್ತಿಸಿದೆ. ಈಗ ವರದಕ್ಷಿಣೆ ಪ್ರಕರಣಗಳ ಆರೋಪಿಗಳೂ ನಿಟ್ಟುಸಿರು ಬಿಡುವಂತಾಗಿದೆ. ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳಿಗೂ ಸೃಷ್ಟಿಯಾದರೆ, ಅದು ದುರಂತವಾಗಿ ಪರಿಣಮಿಸಲಿದೆ.

ಅನೇಕ ಕಾಯ್ದೆ, ಕಾನೂನುಗಳು ದುರ್ಬಳಕೆಯಾಗುತ್ತಿರುವುದು ನಿಜವೇ ಆಗಿದೆ. ಹೀಗೆ ದುರ್ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ, ಇದೇ ನೆಪದಲ್ಲಿ ನೈಜ ಪ್ರಕರಣಗಳ ಆರೋಪಿಗಳು ರಕ್ಷಣೆ ಪಡೆದುಕೊಳ್ಳುತ್ತಿರುವುದು ಇಂದಿನ ಶೋಚನೀಯ ಬೆಳವಣಿಗೆಯಾಗಿದೆ. ಇಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಬಾರದೆಂದರೆ ಜನರು ಯಾವುದೇ ಕಾರಣಕ್ಕೂ ಸುಳ್ಳು ಕೇಸುಗಳನ್ನು ದಾಖಲಿಸುವಂತಾಗಬಾರದು. ಮಾತ್ರವಲ್ಲ, ನಿರಾಪರಾಧಿಗಳಿಗೆ ಶಿಕ್ಷೆಯಾಗುವಂತಾಗಬಾರದು. ಈ ಎಚ್ಚರ ಮತ್ತು ಕನಿಷ್ಟ ಪ್ರಜ್ಞೆ ನಾಗರಿಕರಲ್ಲೂ ಇರಬೇಕು, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಸಾರಥಿಯಾಗಿರುವವರಲ್ಲೂ ಇರಬೇಕಾಗಿರುವುದು ಅನಿವಾರ್ಯ ಮತ್ತು ಅತೀ ಅಗತ್ಯವಾಗಿದೆ.

ಲೈಂಗಿಕ ಕಿರುಕುಳ ಕೊಡದೆಯೇ; ಲೈಂಗಿಕ ಕಿರುಕುಳ ಕೊಟ್ಟ ಎಂಬ ಆರೋಪದಡಿಯಲ್ಲಿ ಅಮಾಯಕರು ಜೈಲು ಸೇರಿದ ಪ್ರಕರಣಗಳನ್ನು ಗಮನಿಸಿದ್ದೇನೆ. ಅತ್ಯಾಚಾರವೆಸಗದೆಯೇ; ಅತ್ಯಾಚಾರವೆಸಗಿದ ಎನ್ನುವ ಆರೋಪದಡಿಯಲ್ಲಿ ನಿರಾಪರಾಧಿಗಳು ಜೈಲು ಸೇರಿದ ಪ್ರಕರಣಗಳನ್ನು ನೋಡಿದ್ದೇನೆ. ಅತ್ಯಾಚಾರವೆಸಗಿದರೂ ಹಣದ ಪ್ರಭಾವದಲ್ಲಿ, ರಾಜಕೀಯ, ಸಾಮಾಜಿಕ ಒತ್ತಡದಿಂದಾಗಿ ನಿಜವಾದ ಅತ್ಯಾಚಾರದ ಆರೋಪಿಗಳು ಅತ್ಯಾಚಾರದ ಆರೋಪಿಗಳೆಂದು ದಾಖಲಾಗದೆಯೇ ಇಂದಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲಾ ಸುಖಗಳನ್ನೂ ಅನುಭವಿಸುತ್ತಾ, ಗೌರವಗಳನ್ನು ಪಡೆಯುತ್ತಾ ಮೆರೆಯುತ್ತಿರುವುದನ್ನು ಕಾಣುತ್ತಿದ್ದೇವೆ.

ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ನಮ್ಮ ವ್ಯವಸ್ಥೆ, ವ್ಯವಸ್ಥೆಯಾಗಿಯೇ
ಮುನ್ನಡೆಯಬೇಕಾದರೆ, ಅವ್ಯವಸ್ಥೆ ವಿಕೋಪಕ್ಕೆ ತಲುಪಬಾರದು ಎಂದಿದ್ದರೆ, ಶಾಸಕಾಂಗ, ಕರ್ಯಾಂಗ ಮತ್ತು ನ್ಯಾಯಾಂಗದ ಸಾರಥಿಗಳು ಹಾಗೂ ಪ್ರಜ್ಞಾವಂತ ನಾಗರಿಕರು,
ಸಂಘ-ಸಂಸ್ಥೆಗಳು ಜಾತಿ, ಮತ, ಪಕ್ಷ, ವರ್ಗವೆಂಬ ಪಕ್ಷಪಾತವಿಲ್ಲದೆ ಇಂಥ ಪ್ರಕರಣಗಳು ಮತ್ತು ಕಾನೂನು, ಕಾಯ್ದೆಗಳ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾದ ಚಿಂತನ-ಮಂಥನ ನಡೆಸಲು ದೊಡ್ಡ ಮನಸು ಮಾಡಬೇಕಾಗಿದೆ, ದಿಟ್ಟತನದಿಂದ ಮುಂದಾಗಬೇಕಾಗಿದೆ.
– ಶ್ರೀರಾಮ ದಿವಾಣ.
(tags: ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳೆ, ಸ್ತ್ರೀ, ಮಹಿಳಾ ದೌರ್ಜನ್ಯ, ಮಹಿಳಾ ಶೋಷಣೆ, ಶೋಷಣೆ, ಲೈಂಗಿಕ ದೌರ್ಜನ್ಯ, ಪೊಲೀಸ್, ಕರ್ನಾಟಕ ಪೊಲೀಸ್, ವರದಕ್ಷಿಣೆ, ಸಮಾಜ ಕಾರ್ಯ, ಹೋರಾಟ, ಪ್ರತಿಭಟನೆ, ಶ್ರೀರಾಮ ದಿವಾಣ, rape, police, karnataka police, http://www.udupibits.com, http://www.udupibits.in, udupibits, rape case, fir, sc/st act]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s