ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ನಕಲಿ ಸಹಿಯನ್ನು ಹಾಕುವ ಮೂಲಕ ನಕಲಿ ದಾಖಲೆಯೊಂದನ್ನು ಸೃಷ್ಟಿಸಿ, ಸುಳ್ಳು ದೂರು ನೀಡಿ ಸರಕಾರಿ ಸೇವೆಯಿಂದ ಅಮಾನತು ಆಗುವಂತೆ ಮಾಡಿ ಮಾನಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಮತಿ ವೀಣಾ ಕೆ.ಶೆಟ್ಟಿ ಎಂಬಾಕೆ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸದೇ ನುಣುಚಿಕೊಳ್ಳುತ್ತಿರುವುದು ಮತ್ತು ಪೊಲೀಸ್ ಅಧಿಕಾರಿಗಳು ಪ್ರಭಾವಿ ದುಷ್ಟ ಶಕ್ತಿಗಳ ಒತ್ತಡಕ್ಕೆ ಒಳಗಾಗಿ ಪ್ರಕರಣವನ್ನು ಮುಚ್ಚಿಹಾಕಲು ಹುನ್ನಾರ ನಡೆಸುತ್ತಿದ್ದಾರೆ.

ಡಾ.ಶರತ್ ಕುಮಾರ್ ರಾವ್ ಅವರು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು (ಕಿರಿಯ ವಿಭಾಗ) ಮತ್ತು ಜೆ.ಎಂ.ಎಫ್. ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ, ನ್ಯಾಯಾಧೀಶರ ಆದೇಶದನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಶ್ರೀಮತಿ ವೀಣಾ ಕೆ.ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಡಾ.ರಾಮಚಂದ್ರ ಬಾಯರಿ ವಿರುದ್ಧ 2013ರ ಸೆಪ್ಟೆಂಬರ್ 27ರಂದು ಕಲಂ 120 ಬಿ, 327, 330, 355, 468, 500 ಮತ್ತು 501 ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಮೊಕದ್ದಮೆ ದಾಖಲಾಗಿತ್ತು.

ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ರಾಜಗೋಪಾಲ್ ಅವರು ಸರ್ಕಲ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದರು. ಮಾರುತಿ ನಾಯಕ್ ತನಿಖೆಗೆ ಮಾರ್ಗದರ್ಶನ ಮಾಡುತ್ತಿದ್ದ ದಿನದ ವರೆಗೂ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿಯೇ ಸಾಗುತ್ತಿತ್ತು. ಯಾವಾಗ ಮಾರುತಿ ನಾಯಕ್ ವರ್ಗಾವಣೆಗೊಂಡು ಶ್ರೀಕಾಂತ್ ಎಂಬವರು ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿಕೊಂಡು, ಪ್ರಕರಣದ ತನಿಖೆಗೆ ಮಾರ್ಗದರ್ಶನ ಮಾಡಲು ಆರಂಭಿಸಿದರೋ, ಇದೀಗ ತನಿಖಾಧಿಕಾರಿ ಸಬ್ ಇನ್ಸ್ ಪೆಕ್ಟರ್ ರಾಜಗೋಪಾಲ್ ಪ್ರಕರಣದ ತನಿಖೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿ ಪ್ರಕರಣವನ್ನು ಮುಚ್ಚಿಹಾಕುವ ಮೂಲಕ ಡಾ.ಶರತ್ ಕುಮಾರ್ ಅವರಿಗೆ ನ್ಯಾಯ ನಿರಾಕರಿಸುವ ಹುನ್ನಾರ ನಡೆಸುತ್ತಿದ್ದಾರೆ.

‘ನನ್ನ ನಕಲಿ ಸಹಿ ಹಾಕಿ ಸೃಷ್ಟಿಸಿದ ನಕಲಿ ದಾಖಲೆ ಹಾಜರುಪಡಿಸುವ ಮೂಲಕ ಆರೋಪಿಗಳು ಐಪಿಸಿ ಕಲಂ 468, 355, 330 ಮತ್ತು 327ರಂತೆ ಅಪರಾಧವೆಸಗಿರುತ್ತಾರೆ. ನನ್ನಿಂದ 14 ಲಕ್ಷ ರು. ಸುಲಿಗೆ ಮಾಡುವ ಮೂಲ ಉದ್ಧೇಶದಿಂದ ಐಪಿಸಿ ಕಲಂ 384ರಂತೆ ಅಪರಾಧವೆಗಿದ್ದಾರೆ. ಆದುದರಿಂದ ಈ ವಿಚಾರದಲ್ಲಿ ಕೂಲಂಕುಶ ವಿಚಾರಣೆ ನಡೆಸಿ ನನಗೆ ನ್ಯಾಯ ದೊರಕಿಸಿಕೊಡಬೇಕು. ಇದೇ ನಕಲಿ ಸಹಿ ಮತ್ತು ದಾಖಲೆಯನ್ನು ಮುಂದಿಟ್ಟುಕೊಂಡು ಆರೋಪಿ ವೀಣಾ ಶೆಟ್ಟಿಯವರು ನೀಡಿದ ದೂರಿನಂತೆ ವೈದ್ಯಾಧಿಕಾರಿ ಹುದ್ದೆಯಿಂದ ನನ್ನನ್ನು ಅಮಾನತುಗೊಳಿಸಲಾಗಿದೆ. ಮಾತ್ರವಲ್ಲ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಹುದ್ದೆಯಿಂದಲೂ ತೆಗೆದುಹಾಕಲಾಗಿದೆ’ ಎಂದು ಡಾ.ಶರತ್ ಕುಮಾರ್ ರಾವ್ ಅವರು ಪೊಲೀಸ್ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು.

‘ನನ್ನಿಂದ 14 ಲಕ್ಷ ರು. ಹಣ ಸಾಲ ಪಡೆದ ಬಗ್ಗೆ ಡಾ.ಶರತ್ ರವರು ನನಗೆ ಮಾಡಿಕೊಟ್ಟ ಅಗ್ರಿಮೆಂಟ್ ಮೂಲ ದಾಖಲೆಯನ್ನು ನಾನು ನನ್ನ ವಕೀಲರಾದ ಶಶಿಕಾಂತ ಶೆಟ್ಟಿ ಅವರಲ್ಲಿ ನೀಡಿದ್ದು, ಅದನ್ನು ತನಿಖೆಯ ಬಗ್ಗೆ ಮುಂದಕ್ಕೆ ಹಾಜರುಪಡಿಸುತ್ತೇನೆ’ ಎಂದು ಆರೋಪಿ ವೀಣಾ ಶೆಟ್ಟಿ ತನಿಖಾಧಿಕಾರಿಯವರು ವಿಚಾರಣೆ ನಡೆಸುವ ಸಮಯದಲ್ಲಿ ಹೇಳಿಕೆ ನೀಡಿದ್ದರು.

ನಕಲಿ ಸಹಿ ಹಾಕುವ ಮೂಲಕ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಸಹಿ ಮತ್ತು ಅಗ್ರಿಮೆಂಟ್ ಅಸಲಿಯೋ, ನಕಲಿಯೋ ಎಂಬುದು ದೃಢಪಡಬೇಕಾದರೆ ಮೊತ್ತ ಮೊದಲು ಪೊಲೀಸರಿಗೆ ಮೂಲ ದಾಖಲೆ ಲಭ್ಯವಾಗಬೇಕು. ಅಂದರೆ ಆರೋಪಿ ವೀಣಾ ಶೆಟ್ಟಿ ತನ್ನಲ್ಲಿರುವ ಅಗ್ರಿಮೆಂಟ್ ನ ಮೂಲಮ ಪ್ರತಿಯನ್ನು ತನಿಕೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಪೊಲೀಸ್ ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು. ತನ್ನ ದೂರಿನಲ್ಲಿ ಸತ್ಯವಿದೆ, ತನಗೆ ನಿಜಕ್ಕೂ ಅನ್ಯಾಯವಾಗಿದೆ ಮತ್ತು ತನ್ನದು ಪ್ರಾಮಾಣಿಕ ಹೋರಾಟ ಎಂದಾದರೆ ವೀಣಾ ಶೆಟ್ಟಿಯವರು ಅಗ್ರಿಮೆಂಟ್ನ ಮೂಲ ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡುವುದು ಅತೀ ಅಗತ್ಯವಾಗಿದೆ. ತನಿಖಾಧಿಕಾರಿಗಳು ಅಗ್ರಿಮೆಂಟ್ನ ಮೂಲ ಪ್ರತಿಯನ್ನು ನ್ಯಾಯಾಲಯದ ಮೂಲಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುವ ಮೂಲಕ ಅಲ್ಲಿಂದ ತಜ್ಞರು ನೀಡುವ ವರದಿಯ ಮೂಲಕ ಮಾತ್ರ ಅಧಿಕಾರತವಾಗಿ ಮತ್ತು ಕಾನೂನು ಬದ್ಧವಾಗಿ ಸಹಿ ಅಸಲಿಯೋ, ನಕಲಿಯೋ ಎನ್ನುವುದು ಸ್ಪಷ್ಟವಾಗಲು ಸಾಧ್ಯ.

ಈ ನಿಟ್ಟಿನಲ್ಲಿ ಆರೋಪಿ ವೀಣಾ ಶೆಟ್ಟಿಯವರ ಹೇಳಿಕೆಯಂತೆ ತನಿಖಾಧಿಕಾರಿಗಳು ಆರೋಪಿಯ ವಕೀಲರು ಎನ್ನಲಾದ ಶಶಿಕಾಂತ್ ಶೆಟ್ಟಿಯವರಲ್ಲಿ ಅಗ್ರಿಮೆಂಟ್ ನ ಮೂಲ ಪ್ರತಿಯನ್ನು ಹಾಜರುಪಡಿಸುವಂತೆ ಲಿಖಿತವಾಗಿಯೇ ಸೂಚಿಸಿದ್ದಾರೆ. ಇದಕ್ಕುತ್ತರಿಸಿದ ಶಶಿಕಾಂತ ಶೆಟ್ಟಿಯವರು, ‘ನನಗೆ ಶ್ರೀಮತಿ ವೀಣಾ ಶೆಟ್ಟಿಯವರು ಯಾವುದೇ ಅಗ್ರಿಮೆಂಟ್ ನೀಡಿರುವುದಿಲ್ಲ’ ಎಂದು ಲಿಖಿತವಾಗಿಯೇ ಸ್ಪಷ್ಟಪಡಿಸಿ ಉತ್ತರ ನೀಡಿದ್ದಾರೆ. ಈ ಮೂಲಕ ವೀಣಾ ಶೆಟ್ಟಿ ಪೊಲೀಸ್ ತನಿಖಾಧಿಕಾರಿಯವರ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಅಗ್ರಿಮೆಂಟ್ ನ ಮೂಲ ಪ್ರತಿಯನ್ನು ವಕೀಲರಾದ ಶಶಿಕಾಂತ ಶೆಟ್ಟಿಯವರಲ್ಲಿ ನೀಡಿದ್ದೇನೆ ಎಂದು ವೀಣಾ ಶೆಟ್ಟಿ ಹೇಳಿಕೆ ಕೊಡುತ್ತಾರೆ. ಶಶಿಕಾಂತ ಅಗ್ರಿಮೆಂಟ್ ನ ಮೂಲ ಪ್ರತಿಯನ್ನು ವೀಣಾ ಶೆಟ್ಟಿ ನನ್ನಲ್ಲಿ ಕೊಟ್ಟಿಲ್ಲ ಎಂದು ಶಶಿಕಾಂತ್ ಶೆಟ್ಟಿ ಉತ್ತರ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತನಿಖಾಧಿಕಾರಿಯವರು ಮತ್ತೆ ಈ ಬಗ್ಗೆ ಸ್ಪಷ್ಟನೆ ಕೋರಿ ವೀಣಾ ಶೆಟ್ಟಿಯವರಿಗೆ ನೋಟೀಸ್ ಜ್ಯಾರಿ ಮಾಡುತ್ತಾರೆ. ಈ ನೋಟೀಸ್ ಗೆ ಉತ್ತರವಾಗಿ ‘ನಾನು ಈಗಾಗಲೇ ಉತ್ತರಿಸಿದ್ದೇನೆ, ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯವಹರಿಸುತ್ತೇನೆ’ ಎಂದು ಉತ್ತರ ಕೊಡುವ ಮೂಲಕ ವೀಣಾ ಶೆಟ್ಟಿ ವಾಸ್ತವದಿಂದ ನುಣುಚಿಕೊಳ್ಳುತ್ತಾರೆ, ಸತ್ಯದಿಂದ ತಪ್ಪಿಸಿಕೊಳ್ಳುತ್ತಾರೆ.

ಪ್ರಕರಣದ ತನಿಖೆಗೆ ಅಗ್ರಿಮೆಂಟ್ನ ಮೂಲ ಪ್ರತಿ ಅತೀ ಅಗತ್ಯವಾಗಿ ಬೇಕಾಗಿರುವುದರಿಂದ ಮತ್ತು ಪೋರ್ಜರಿ ಪ್ರಕರಣದ ಆರೋಪಿ ವೀಣಾ ಶೆಟ್ಟಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಸ್ಪಷ್ಟವಾದ ಬಳಿಕ ತನಿಖಾಧಿಕಾರಿಯವರು ಮೂಲ ದಾಖಲೆ ಪತ್ರವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ವೀಣಾ ಶೆಟ್ಟಿ ಹಾಗೂ ಈಕೆಯ ಅಣ್ಣ ಎಂ.ಬಾಲಗಂಗಾಧರ ಶೆಟ್ಟಿಯವರ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿರುವ ಮನೆಗಳಲ್ಲಿ ಮೂಲ ದಾಖಲೆ ಪತ್ರಗಳನ್ನು ಹುಡುಕಾಡುವ ನಿಟ್ಟಿನಲ್ಲಿ ಸರ್ಚ್ ವಾರೆಂಟ್ ಹೊರಡಿಸುವಂತೆ ಕೋರಿ ನ್ಯಾಯಾಲಯಕ್ಕೆ ನಿವೇದನೆ ಸಲ್ಲಿಸುತ್ತಾರೆ. ನ್ಯಾಯಾಧೀಶರು ಸರ್ಚ್ ವಾರೆಂಟ್ ನೀಡಿ ಆದೇಶ ಹೊರಡಿಸುತ್ತಾರೆ.

ಸರ್ಚ್ ವಾರೆಂಟ್ ಪ್ರಕಾರ ತನಿಖಾಧಿಕಾರಿ ರಾಜಗೋಪಾಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ವೀಣಾ ಶೆಟ್ಟಿ ಹಾಗೂ ಎಂ.ಬಾಲಗಂಗಾಧರ ಶೆಟ್ಟಿ ಮನೆಯಲ್ಲಿ ಹುಡುಕಾಡುತ್ತಾರೆ. ಆದರೆ ಅಗ್ರಿಮೆಂಟ್ನ ಮೂಲ ದಾಖಲೆ ಪತ್ರ ಮಾತ್ರ ಪತ್ತೆಯಾಗುವುದೇ ಇಲ್ಲ.

ತನಿಖೆಯ ಮುಂದುವರಿದ ಭಾಗವಾಗಿ ತನಿಖಾಧಿಕಾರಿಗಳು ಪ್ರಕರಣದ ಎರಡನೇ ಆರೋಪಿ ಡಾ.ರಾಮಚಂದ್ರ ಬಾಯರಿ (ಇವರು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು) ಅವರಿಗೆ ಅಗ್ರಿಮೆಂಟ್ ನ ಮೂಲ ದಾಖಲೆಯನ್ನು ಹಾಜರುಪಡಿಸುವಂತೆ ಸೂಚಿಸಿ ನೊಟೀಸ್ ಮಾಡುತ್ತಾರೆ. ಈ ನೋಟೀಸ್ ಗೆ ಆರೋಪಿ ಡಾ.ರಾಮಚಂದ್ರ ಬಾಯರಿ ಉತ್ತರಿಸುತ್ತಾರೆ: ‘ನನ್ನಲ್ಲಿ ಅಗ್ರಿಮೆಂಟ್ ನ ಮೂಲ ಪ್ರತಿ ಇಲ್ಲ. ಜೆರಾಕ್ಸ್ ಪ್ರತಿಯನ್ನು ನೋಡಿ ನಾನು ಇಲಾಖಾಧಿಕಾರಿಗಳಿಗೆ ಡಾ.ಶರತ್ ಕುಮಾರ್ ರಾವ್ ವಿರುದ್ಧ ವರದಿ ನೀಡಿದ್ದಾಗಿದೆ’ ಎಂದು.

ಇಲ್ಲಿ ಸಹಜವಾಗಿ ಉದ್ಭವವಾಗುವ ಪ್ರಶ್ನೆ. ಡಾ.ಶರತ್ ಕುಮಾರ್ ರಾವ್ ಅವರು ಒಬ್ಬರು ಗಜೆಟೆಡ್ ಅಧಿಕಾರಿ. ಒಬ್ಬರು ಗಜೆಟೆಡ್ ಅಧಿಕಾರಿಯ ವಿರುದ್ಧ ಖಾಸಗಿ ವ್ಯಕ್ತಿಯೊಬ್ಬರು ದಾಖಲೆಯೊಂದರ ಜೆರಾಕ್ಸ್ ಪ್ರತಿ ಇರಿಸಿ ದೂರು ಸಲ್ಲಿಸಿದಾಗ, ದಾಖಲೆಯ ಸಾಚಾತನನ್ನು ಪರಿಶೀಲನೆ ನಡೆಸದೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಗಜೆಟೆಡ್ ಅಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ವಿರುದ್ಧ ತನ್ನ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು, ಮೇಲಾಧಿಕಾರಿಗಳು (ಮದನ್ ಗೋಪಾಲ್, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಡಾ.ಶರತ್ ಅವರನ್ನು ಅಮಾನತು ಮಾಡುವುದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಡಾ.ಶರತ್ ಅವರನ್ನು ಅಮಾನತು ಮಾಡುವ ಕಡತಕ್ಕೆ ತನ್ನ ಒಪ್ಪಿಗೆ ಸೂಚಿಸುವುದು ! ಇದೆಲ್ಲ ಏನು ? ಯಾವ ಸೀಮೆಯ ನ್ಯಾಯ ?

ತನಿಖೆಗೆ ಸಹಕರಿಸದೆ ಅಸಹಕಾರ ವ್ಯಕ್ತಪಡಿಸುತ್ತಿರುವ ಮತ್ತು ಸುಳ್ಳು ಹೇಳಿಕೆ ನೀಡಿದ ಆರೋಪಿ ಶ್ರೀಮತಿ ವೀಣಾ ಶೆಟ್ಟಿಯ ಮೇಲೆ ಸ್ವತಹಾ ಪೊಲೀಸರೇ ಇನ್ನೆರಡು ಐಪಿಸಿ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸುವುದು ಬಿಟ್ಟು, ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ನೋಟೀಸ್ ಮಾಡಿ ಅಗ್ರಿಮೆಂಟ್ನ ಮೂಲ ದಾಖಲೆಯನ್ನು ಹಾಜರುಪಡಿಸುವಂತೆ ಸೂಚಿಸಿ ನೋಟೀಸ್ ಮಾಡುವುದು ಬಿಟ್ಟು, ತನಿಖೆ ಮುಂದುವರಿಸಲು ಮೂಲ ದಾಖಲೆ ಲಭಿಸುತ್ತಿಲ್ಲ ಎಂದು ಕೈಚೆಲ್ಲಿಕೊಂಡು ಇಡೀ ಪ್ರಕರಣಕ್ಕೆ ಸಂಬಂಧಪಟ್ಟಂತೆನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸುವ ಮೂಲಕ ನಿರಂತರವಾಗಿ ಅನ್ಯಾಯಕ್ಕೊಳಗಾದ, ದೌರ್ಜನ್ಯಕ್ಕೆ ಗುರಿಯಾದ ನೊಂದ, ಸಂತ್ರಸ್ತ, ಶೋಷಿತ ವ್ಯಕ್ತಿಯಾದ ಡಾ.ಶರತ್ ಕುಮಾರ್ ರಾವ್ ಅವರಿಗೆ ಸಹಜ ನ್ಯಾಯವನ್ನು ನಿರಾಕರಿಸುವುದು ಎಷ್ಟು ಸರಿ ? ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಖ್ಯ ಕಾರ್ಯದರ್ಶಿಗಳೆಲ್ಲ ಏನು ಮಾಡುತ್ತಿದ್ದಾರೆ ? ಯಾಕಾಗಿ, ಯಾರಿಗಾಗಿ ನ್ಯಾಯವನ್ನು ಕೊಲೆ ಮಾಡುತ್ತಿದ್ದಾರೆ ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s