ಡಾ.ರವೀಂದ್ರರಿಗೆ ನೋಟೀಸ್ : ಕಣಚೂರು ಮೆಡಿಕಲ್ ಕಾಲೇಜು ಹಗರಣ ಬಹಿರಂಗಕ್ಕೆ ಕಾರಣವಾಯಿತೇ ?

Posted: ಸೆಪ್ಟೆಂಬರ್ 20, 2014 in Uncategorized

ಉಡುಪಿ: ಯಾವುದೇ ಒಂದು ಸಂಸ್ಥೆಗೆ ಅಥವಾ ವ್ಯಕ್ತಿಗೆ ಮೆಡಿಕಲ್ ಕಾಲೇಜು ಸ್ಥಾಪಿಸಲು ಸರಕಾರ ಅನುಮತಿ ನೀಡಬೇಕಾದರೆ ಅನೇಕ ಮಾನದಂಡ ಮತ್ತು ಅರ್ಹತೆಗಳೊಂದಿಗೆ ಸಂಬಂಧಿಸಿದ ಸಂಸ್ಥೆಯು ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಹೊಂದಿರುವುದು ಅತೀ ಅಗತ್ಯವಾಗಿದೆ. ಇಂಥದ್ದೊಂದು ಆಸ್ಪತ್ರೆಯನ್ನೇ ಹೊಂದಿರದ ಮಂಗಳೂರಿನ ಕಣಚೂರು ಮೋನು ಅವರಿಗೆ ಸೇರಿದ ಕಣಚೂರು ಶಿಕ್ಷಣ ಸಂಸ್ಥೆಗೆ, ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟವು ಮೆಡಿಕಲ್ ಕಾಲೇಜು ಸ್ಥಾಪಿಸಲು ಅನುಮತಿ ನೀಡಿತು. ಮೆಡಿಕಲ್ ಕೌನ್ಸಿಲ್ ನ ತಂಡವೊಂದು ಸ್ಥಳ ಪರಿಶೀಲನೆಗೆ ಬಂದಾಗ, ಕಣಚೂರು ಶಿಕ್ಷಣ ಸಂಸ್ಥೆಯು ತನ್ನ ಸಂಸ್ಥೆಗೆ ಸೇರಿದ ಶಾಲಾ ಕಟ್ಟಡದಲ್ಲಿ ‘ಕಣಚೂರು ಹೋಸ್ಪಿಟಲ್’ ಎಂಬ ನಕಲಿ ಆಸ್ಪತ್ರೆಯೊಂದನ್ನು ಸೃಷ್ಟಿಸುವ ಮೂಲಕ ಸರಕಾರಕ್ಕೆ ವಂಚಿಸಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಅನುಮತಿಯನ್ನು ಪಡೆದುಕೊಂಡಿತ್ತು. ಈ ಬೃಹತ್ ಮೋಸದಾಟ ಕೊನೆಗೂ ಬಯಲಾಯಿತು. ಹೇಗೆ ಬಯಲಾಯಿತು ಮತ್ತು ಯಾಕಾಗಿ ಬೆಳಕಿಗೆ ಬಂತು ಎಂಬುದು ಇದೀಗ ಬಹಿರಂಗಕ್ಕೆ ಬಂದಿದೆ.

ಡಾ.ಎಚ್.ಎನ್.ರವೀಂದ್ರ ಎಂಬವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ವೈದ್ಯಕೀಯ ಪರಿಷತ್ತು)ದ ಕಾರ್ಯಕಾರೀ ಸಮಿತಿ ಸದಸ್ಯರು. ಮಾತ್ರವಲ್ಲ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಉಪ ನಿರ್ದೇಶಕರು ಮತ್ತು ಕರ್ನಾಟಕ ಮೆಡಿಕಲ್ ಕೌನ್ಸಿಲ್ ನ ಸದಸ್ಯರು. ಇವರು ವಿವಿಧ ದೇಶಗಳ ಮೆಡಿಕಲ್ ಕೌನ್ಸಿಲ್ ಗಳು ಆಯೋಜಿಸಿದ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಉದ್ಧೇಶದಿಂದ ವಿದೇಶಕ್ಕೆ ತೆರಳಿದ್ದು, ಹೀಗೆ ವಿದೇಶಕ್ಕೆ ತೆರಳಿದ್ದರ ವಿರುದ್ಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೋಟೀಸ್ ಮಾಡಿದ್ದರು. ಹೀಗೆ ನೋಟೀಸ್ ಮಾಡಿದುದರ ಪರಿಣಾಮವಾಗಿ ಕಣಚೂರು ಮೆಡಿಕಲ್ ಕಾಲೇಜು ಹಗರಣ ಬಟಾ ಬಯಲಾಗಿದೆ ಎಂದು ಹೇಳಲಾಗುತ್ತಿದೆ.

ಭ್ರಷ್ಟ ಮತ್ತು ದುಷ್ಟ ರಾಜಕಾರಣಿಗಳು ಹಾಗೂ ಉನ್ನತ ಸರಕಾರಿ ಅಧಿಕಾರಿಗಳು ಒಳಗಿಂದೊಳಗೆ ಮತ್ತು ಪರಸ್ಪರ ನಡೆಸುವ ಕುತಂತ್ರ, ಕುಟಿಲತೆ, ರಾಜಕೀಯ ಚದುರಂಗದಾಟಗಳ ಪರಿಣಾಮವಾಗಿ ಕೆಲವೊಮ್ಮೆ ಹಲವಾರು ಸತ್ಯಗಳು, ಗಂಭೀರ ಹಗರಣಗಳು ಬೆಳಕಿಗೆ ಬರಲು ಮೂಲವಾಗುತ್ತದೆ. ಈ ವಾಸ್ತವಾಂಶಕ್ಕೆ ಕಣಚೂರು ಮೆಡಿಕಲ್ ಕಾಲೇಜು ಹಗರಣ ಬಯಲಾದ ಪ್ರಕರಣ ಒಂದು ಉದಾಹರಣೆಯಷ್ಟೆ.

ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಯವರು ಹೊರಡಿಸಿದ ನೋಟೀಸ್ನ ಹಿಂದೆ ಸಚಿವ ಯು.ಟಿ.ಖಾದರ್ ಅವರ ಪಾತ್ರವನ್ನು ಮನಗಂಡಿರುವ ಡಾ.ರವೀಂದ್ರ ಅವರು, ಏಟಿಗೆ ತಿರುಗೇಟು ಎಂಬ ನೀತಿಯಂತೆ, ಯಾರಿಗೂ ಯಾವುದೇ ರೀತಿಯಲ್ಲೂ ತಮ್ಮ ಮೇಲೆ ಅನುಮಾನ ಮೂಡದ ರೀತಿಯಲ್ಲಿ ತಮ್ಮ ಬೆಂಬಲಿಗ ಪಡೆಯ ಮೂಲಕ ಯು.ಟಿ.ಖಾದರ್ ಅವರು ತಯಾರಿಸಿದ ”ಕಣಚೂರು ಮೆಡಿಕಲ್ ಕಾಲೇಜು’ ಎಂಬ ಭಾರೀ ಹಗರಣವನ್ನು ಅತ್ಯಂತ ವ್ಯವಸ್ಥಿತವಾಗಿ ಹೊರಜಗತ್ತಿನ ಗಮನಕ್ಕೆ ಬರುವಂತೆ ಮಾಡಿದ್ದಾರೆ ಎಂದು ವೈದ್ಯಕೀಯ ರಂಗದ ಪ್ರಮುಖರನೇಕರು ಇದೀಗ ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

ಡಾ.ರವೀಂದ್ರ ಎಚ್.ಎನ್. ಅವರು ಸರಕಾರದ ಅನುಮತಿ ಪಡೆಯದೆ ಲಂಡನ್ಗೆ ಹೋಗಿರುವುದು ತಪ್ಪೆಂದೂ, ತಕ್ಷಣವೇ ಬಂದು ವರದಿ ಮಾಡಿಕೊಳ್ಳಬೇಕೆಂದೂ, ಇಲ್ಲದಿದ್ದಲ್ಲಿ ಶಿಸ್ತುಕ್ರಮ ಜರುಗಿಸಬೇಕೆಂದೂ ಪ್ರಧಾನ ಕಾರ್ಯದರ್ಶಿಯವರು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದರು.

ಈ ನಿರ್ದೇಶನ ನೋಡಿ ಡಾ.ರವೀಂದ್ರ ಅವರು ತೀವ್ರ ಆಕ್ರೋಶಿತರಾಗಿದ್ದು, ಅದರ ಒಂದು ಪರಿಣಾಮವಷ್ಟೇ ಈಗ ಹೊರಜಗತ್ತಿಗೆ ತೆರೆದುಕೊಂಡಿದೆ. ಇನ್ನಷ್ಟೂ ಮಹತ್ವಪೂರ್ಣವಾದ ಬೆಳವಣಿಗೆಗಳು ಇನ್ನು ಮುಂದಿನ ದಿನಗಳಲ್ಲಿ ಘಟಿಸಲಿದ್ದು, ಈ ಶೀತಲ ಸಮರ ಹಲವಾರು ಸತ್ಯಗಳನ್ನು ಅನಾವರಣಗೊಳಿಸಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s