ಎಡಿಜಿಪಿ ಸತ್ಯನಾರಾಯಣ ರಾವ್ ವರ್ಗಾಯಿಸಿದ್ದಕ್ಕೆ ಲೋಕಾಯುಕ್ತ ಅಸಮಾಧಾನ : ಸರಕಾರದ ನಿರ್ಧಾರದ ವಿರುದ್ದ ಪಿಐಎಲ್‌

Posted: ಸೆಪ್ಟೆಂಬರ್ 21, 2014 in Uncategorized

ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣದ ಲೋಕಾಯುಕ್ತ ಇಲಾಖೆಯ ಪೊಲೀಸ್ ತನಿಖಾಧಿಕಾರಿಗಳಿಗೆ ತನಿಖೆಗೆ ಮಾರ್ಗದರ್ಶನ ಮಾಡುತ್ತಿದ್ದ ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್‌ ಅವರನ್ನು ಏಕಪಕ್ಷೀಯವಾಗಿ ವರ್ಗಾವನೆ ಮಾಡಿದ ವಿಷಯದಲ್ಲಿ ರಾಜ್ಯ ಸರಕಾರ ಮತ್ತು ಗೌರವಾನ್ವಿತ ಕರ್ನಾಟಕ ಲೋಕಾಯುಕ್ತರ ಮಧ್ಯೆ ತೀವ್ರ ಸಂಘರ್ಷ ಹುಟ್ಟು ಹಾಕಿರುವ ಬೆನ್ನಲ್ಲೇ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಅವರನ್ನು ಏಕಪಕ್ಷೀಯವಾಗಿ ವರ್ಗಾವಣೆ ಮಾಡಿದ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ.

ಲೋಕಾಯುಕ್ತರಾದ ಭಾಸ್ಕರ ರಾವ್ ಅವರೊಂದಿಗೆ ಸಮಾಲೋಚನೆ ನಡೆಸುವ ಸಂಪ್ರದಾಯವನ್ನು ಗಾಳಿಗೆ ತೂರಿ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್‌ ಅವರನ್ನು ರಾಜ್ಯ ಸರಕಾರ ಇತ್ತೀಚೆಗೆ ವರ್ಗಾವಣೆ ಮಾಡಿತ್ತು. ತಮ್ಮೊಂದಿಗೆ ಸಮಾಲೋಚಿಸದೇ ಕೈಗೊಂಡ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಲೋಕಾಯುಕ್ತ ಭಾಸ್ಕರ್‌ ರಾವ್‌ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು.

ಅಧಿಕಾರಿಯ ವರ್ಗಾವಣೆ ಕಾನೂನು ಪ್ರಕಾರ ನಡೆದಿದೆ, ಹೀಗಾಗಿ ಆದೇಶ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾರುತ್ತರ ನೀಡುವ ಮೂಲಕ ಸರಕಾರ ಲೋಕಾಯುಕ್ತದೊಂದಿಗೆ ಸಂಘರ್ಷಕ್ಕೆ ಇಳಿದಿತ್ತು.

ಇದೀಗ ಈ ಪ್ರಕರಣಕ್ಕೆ ಹೊಸ ಆಯಾಮ ಸೇರ್ಪಡೆಗೊಂಡಿದ್ದು, ಲೋಕಾಯುಕ್ತರೊಂದಿಗೆ ಸಮಾಲೋಚನೆ ನಡೆಸದೇ ಮಾಡಲಾದ ವರ್ಗಾವಣೆ ಲೋಕಾಯುಕ್ತ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಜತೆಗೆ, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ. ಹೀಗಾಗಿ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸರಕಾರಕ್ಕೆ ಸೂಚಿಸಬೇಕು ಎಂದು ದೊರೆಸ್ವಾಮಿ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಡಬ್ಲ್ಯುಪಿ 46239 ಆಫ್ 12) ಹೂಡಿದ್ದಾರೆ. ಇದರ ಪ್ರತಿ ಈಗಾಗಲೇ ರಾಜ್ಯದ ಅಡ್ವೋಕೇಟ್‌ ಜನರಲ್‌ ಕಚೇರಿಗೆ ತಲುಪಿದೆ.

ದಿಲ್ಲಿಗೆ ಹೋದಾಗ ವರ್ಗಾವಣೆ

ರಾಜ್ಯ ಸರ್ಕಾರ ಇತ್ತೀಚೆಗೆ ಸತ್ಯನಾರಾಯಣ ರಾವ್‌ ಅವರನ್ನು ಲೋಕಾಯುಕ್ತದಿಂದ ಎತ್ತಂಗಡಿ ಮಾಡಿ, ಆ ಜಾಗಕ್ಕೆ ಐಪಿಎಸ್‌ ಅಧಿಕಾರಿ ಪ್ರೇಮ ಶಂಕರ್‌ ಮೀನಾ ಅವರನ್ನು ನೇಮಕ ಮಾಡಿತ್ತು. ಲೋಕಾಯುಕ್ತ ಭಾಸ್ಕರ್‌ ರಾವ್‌ ಅವರು ದೆಹಲಿ ಪ್ರವಾಸದಲ್ಲಿದ್ದ ವೇಳೆ ಅವರ ಗಮನಕ್ಕೆ ತರದೇ ಏಕಾಏಕಿ ಈ ಆದೇಶ ಹೊರಡಿಲಾಗಿತ್ತು.

ಸರಕಾರದ ಈ ನಿರ್ಧಾರವನ್ನು ವಿರೋಧಿಸಿರುವ ಭಾಸ್ಕರ್‌ ರಾವ್‌, ಲೋಕಾಯುಕ್ತ ರಿಜಿಸ್ಟ್ರಾರ್‌ ಎಚ್‌.ಆರ್‌.ದೇಶಪಾಂಡೆ ಮೂಲಕ ಆದೇಶ ಹಿಂಪಡೆಯುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ವರ್ಗಾವಣೆಯಾಗಿರುವ ಎಡಿಜಿಪಿ ಸತ್ಯನಾರಾಯಣ ರಾವ್‌ ಅವರನ್ನು ಸೇವೆಯಿಂದ ಮುಕ್ತಿಗೊಳಿಸಿಲ್ಲ. ಹಾಗಾಗಿ ಈ ಹುದ್ದೆಗೆ ವರ್ಗಾವಣೆಯಾಗಿರುವ ಪ್ರೇಮ್‌ ಶಂಕರ್‌ ಮೀನಾ ಅವರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ.

ಲೋಕಾಯುಕ್ತರ ವಿರೋಧ ಯಾಕೆ?

1984ರ ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 15-1 ಹಾಗೂ 15-2ರ ಪ್ರಕಾರ ಲೋಕಾಯುಕ್ತ ಸಂಸ್ಥೆಗೆ ಪೊಲೀಸ್‌ ಇಲಾಖೆಯಿಂದ ತನಿಖಾಧಿಕಾರಿಗಳು ಹಾಗೂ ಪ್ರಮುಖ ಅಧಿಕಾರಿಗಳನ್ನು ನೇಮಕ ಹಾಗೂ ವರ್ಗಾವಣೆ ಸಂದರ್ಭದಲ್ಲಿ ಸರಕಾರವು ಲೋಕಾಯುಕ್ತರೊಂದಿಗೆ ಪರಿಣಾಮಕಾರಿ ಸಮಾಲೋಚನೆಯನ್ನು ನಡೆಸಬೇಕು. ಆದರೆ, ಸತ್ಯನಾರಾಯಣ ರಾವ್‌ ಅವರ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರಕಾರ ಲೋಕಾಯುಕ್ತರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ.

ಈ ಬಗ್ಗೆ ಲೋಕಾಯುಕ್ತರ ಪರವಾಗಿ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಯವರಿಗೆ ಸೆ.16ರಂದು ಬರೆದಿರುವ ಪತ್ರದಲ್ಲಿ (ಪತ್ರ ಸಂಖ್ಯೆ ಎಲ್‌ಓಕೆ/ಪಿಎಸ್‌/13/201315) ಲೋಕಾಯುಕ್ತ ರಿಜಿಸ್ಟ್ರಾರ್‌ ಎಚ್‌.ಆರ್‌. ದೇಶಪಾಂಡೆ ಅವರು ಲೋಕಾಯುಕ್ತ ಕಾಯ್ದೆಯ ಪ್ರಕಾರ ಲೋಕಾಯುಕ್ತರೊಂದಿಗೆ ಸಮಾಲೋಚನೆ ನಡೆಸಬೇಕು. ಇದಲ್ಲದೆ, 1999ರಲ್ಲಿ ರಾಜ್ಯ ಹೈಕೋಟ್‌ ಪ್ರಕರಣವೊಂದರಲ್ಲಿ (ಕೆಎಆರ್‌ ಎಲ್‌.ಜೆ. 500) ಲೋಕಾಯುಕ್ತರು ತಮ್ಮ ಜವಾಬ್ದಾರಿ ನಿರ್ವಹಣೆಗೆ ಅನುಕೂಲವಾಗುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ಲೋಕಾಯುಕ್ತ ಕಾಯ್ದೆಯು ಅನುಮೋದಿಸುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖೀಸಿದೆ.

ನಿವೃತ್ತ ಲೋಕಾಯುಕ್ತ ನ್ಯಾ| ಎನ್‌.ಸಂತೋಷ್‌ ಹೆಗ್ಡೆ ಅವರು ತಾವು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಆಗಿನ ಮುಖ್ಯ ಕಾರ್ಯದರ್ಶಿ ಅವರಿಗೆ 2011ರ ಆಗಸ್ಟ್‌ 1ರಂದು ಲೋಕಾಯುಕ್ತ ಪೊಲೀಸರ ನೇಮಕ ನಿಯಮಾವಳಿ ರೂಪಿಸುವ ಸಂಬಂಧ ಪತ್ರ ಬರೆದಿದ್ದು, ಅದರಲ್ಲಿ ಎಡಿಜಿಪಿ ಹುದ್ದೆಗೆ ಸೂಕ್ತ ಅಧಿಕಾರಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಕರ್ನಾಟಕ ಲೋಕಾಯುಕ್ತರ ಶಿಫಾರಸನ್ನು ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ.

ಈ ನಿಯಮಾವಳಿ ಹಾಗೂ ಲೋಕಾಯುಕ್ತ ಕಾಯ್ದೆ ಪ್ರಕಾರ ಎಡಿಜಿಪಿ ವರ್ಗಾವಣೆ ಆಗಿಲ್ಲವಾದ ಕಾರಣ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಕೋರುವಂತೆ ಲೋಕಾಯುಕ್ತರಿಂದ ಆದೇಶಿತನಾಗಿದ್ದೇನೆ ಎಂದು ರಿಜಿಸ್ಟ್ರಾರ್ ದೇಶಪಾಂಡೆ ತಿಳಿಸಿದ್ದಾರೆ.

‘ನೇಮಕ, ವರ್ಗಾವಣೆ ಸರಕಾರಕ್ಕೆ ಬಿಟ್ಟಿದ್ದು’

ಲೋಕಾಯುಕ್ತ ರಿಜಿಸ್ಟ್ರಾರ್ ದೇಶಪಾಂಡೆಯವರ ಪತ್ರಕ್ಕೆ ಸರಕಾರದ ಪರವಾಗಿ ಸೆ.18ರಂದು ಮಾರುತ್ತರ ನೀಡಿರುವ ಡಿಪಿಆರ್‌ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಡಾ| ಬಗಾದಿ ಗೌತಮ್‌, ಲೋಕಾಯುಕ್ತ ಸಂಸ್ಥೆಗೆ ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆ ವಿಚಾರವು ಲೋಕಾಯುಕ್ತ ಕಾಯ್ದೆ 15ರ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಮಹಾದೇವನ್‌ ವರ್ಸಸ್‌ ರಾಜ್ಯ ಸರಕಾರ ಕುರಿತಾದ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪರಿಶೀಲಿಸಿದ್ದು, ಈ ಕಾಯ್ದೆ ಹಾಗೂ ತೀರ್ಪು ಎಡಿಜಿಪಿ ವರ್ಗಾವಣೆ ವಿಚಾರದಲ್ಲಿ ಅರ್ಹರ ಪಟ್ಟಿಯನ್ನು ಲೋಕಾಯುಕ್ತರಿಗೆ ಕಳುಹಿಸಬೇಕು ಎಂದು ಈ ತೀರ್ಪು ನಿರ್ಬಂಧಪಡಿಸುವುದಿಲ್ಲ. ಇನ್ನು, ನ್ಯಾ| ಹೆಗ್ಡೆ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ನಾನು ಲೋಕಾಯುಕ್ತನಾಗಿದ್ದಾಗ ಎಡಿಜಿಪಿ ಹುದ್ದೆಯ ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ನನ್ನ ಗಮನಕ್ಕೆ ತಂದು ಸಮಾಲೋಚನೆ ನಡೆಸಿದ ನಂತರವೇ ಮಾಡುತ್ತಿತ್ತು. ಆದರೆ, ಈಗ ಲೋಕಾಯುಕ್ತರೊಂದಿಗೆ ಸಮಾಲೋಚನೆ ಮಾಡದೆ ವರ್ಗಾವಣೆ ಮಾಡಿದೆ. ಇದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು.
– ಜಸ್ಟೀಸ್‌ ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತರು.

ಎಡಿಜಿಪಿ ವರ್ಗವಣೆಗೊಂಡ ಮರುದಿನ ಸೆ.13ರಂದು http://www.udupibits.in ಮಾಡಿದ ವರದಿ..

# ಬಹುಕೋಟಿ ರಾಸಾಯನಿಕ ಹಗರಣದ ತನಿಖೆಗೆ ಮಾರ್ಗದರ್ಶನ ಮಾಡುತ್ತಿದ್ದ ಎಡಿಜಿಪಿ ದಿಢೀರ್ ಎತ್ತಂಗಡಿ

ಉಡುಪಿ: ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಿಸಿದ ತನಿಖೆಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಕನರ್ಾಟಕ ಲೋಕಾಯುಕ್ತದ ಎಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ಅವರನ್ನು ರಾಜ್ಯದ ಕಾಂಗ್ರೆಸ್ ಸರಕಾರ ದಿಢೀರನೇ ಸಂವಹನ ಸರಕು ಸಾಗಣೆ ಮತ್ತು ಆಧುನೀಕರಣ ವಿಭಾಗಕ್ಕೆ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ. ಸತ್ಯನಾರಾಣ ರಾವ್ ಅವರ ಸ್ಥಾನಕ್ಕೆ ಪ್ರೇಮ್ ಶಂಕರ ಮೀನಾ ಅವರನ್ನು ನೇಮಕ ಮಾಡಿದೆ.

ಎಡಿಜಿಪಿ ಸತ್ಯನಾರಾಯಣ ರಾವ್ ಅವರು, ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮತ್ತು ಉಡುಪಿಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಡೆಸುತ್ತಿದ್ದ ತನಿಖಾ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರು. ರಾಸಾಯನಿಕ ಹಗರಣದ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸುವುದಿತ್ತು. ದೋಷಾರೋಪಣಾ ಪಟ್ಟಿ ಸಲ್ಲಿಸುವ ಮೊದಲೇ ತನಿಖೆಗೆ ಮಾರ್ಗದರ್ಶನ ಮಾಡುತ್ತಿದ್ದ ಎಡಿಜಿಪಿ ರಾವ್ ಅವರನ್ನು ವರ್ಗಾವಣೆ ಮಾಡಿರುವುದು ಕೆಲವೊಂದು ಶಂಕೆಗಳಿಗೆ ಕಾರಣವಾಗಿದೆ.

ಅನೇಕ ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, ಕಾಂಗ್ರೆಸ್ ಮತ್ತು ಬಿಜೆಪಿಯ ಶಾಸಕರು, ಹಾಲಿ ಮತ್ತು ಮಾಜಿ ಸಚಿವರುಗಳ ಸಹಿತ ಪ್ರಭಾವೀ ವ್ಯಕ್ತಿಗಳು ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶಾಮೀಲಾಗಿದ್ದು, ಇವರುಗಳ ಒತ್ತಡಕ್ಕೆ ಒಳಗಾಗಿ ರಾಜ್ಯದ ಕಾಂಗ್ರೆಸ್ ಸರಕಾರ ಎಡಿಜಿಪಿ ಸತ್ಯ ನಾರಾಯಣ ರಾವ್ ಅವರನ್ನು ವರ್ಗಾವಣೆ ಮಾಡಿರುವ ಸಾಧ್ಯತೆ ಇರುವುದರಿಂದ, ವರ್ಗಾವಣೆಯ ನಿಜವಾದ ಕಾರಣವನ್ನು ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ಆಗ್ರಹಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s