ಅಕ್ರಮ ಆಸ್ತಿ ಸಂಪಾದನೆ: ತಮಿಳುನಾಡು ಸಿಎಂ ಜಯಲಲಿತಾಗೆ ಜೈಲು !

Posted: ಸೆಪ್ಟೆಂಬರ್ 28, 2014 in Uncategorized

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಪ­ರಾಧಿ ಎಂದು ಶನಿವಾರ ಸಾರಿರುವ ಇಲ್ಲಿನ ವಿಶೇಷ ನ್ಯಾಯಾಲಯ, ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ರೂ 100 ಕೋಟಿ ದಂಡ ವಿಧಿಸಿದೆ.

ಇದೇ ಪ್ರಕರಣದಲ್ಲಿ ಸಹಆರೋಪಿ­ಗಳಾದ ಜಯಲಲಿತಾ ಅವರ ಗೆಳತಿ ವಿ.ಕೆ.ಶಶಿಕಲಾ, ಸಂಬಂಧಿ ಜೆ.ಇಳವರಸಿ ಮತ್ತು ಸಾಕುಮಗ ವಿ.ಎನ್‌.­ಸುಧಾ­ಕರನ್‌ ಕೂಡ ದೋಷಿಗಳು ಎಂದು ವಿಶೇಷ ನ್ಯಾಯಾಲಯದ ನ್ಯಾಯಾ­ಧೀಶ ಜಾನ್‌ ಮೈಕೆಲ್‌ ಡಿ ಕುನ್ಹ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ಮೂವರಿಗೂ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ತಲಾ ರೂ 10 ಕೋಟಿ ದಂಡ ವಿಧಿಸಲಾಗಿದೆ. ಸಂಜೆಯೇ ಎಲ್ಲ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಯಿತು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 13(1)(ಇ) (ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ) ಅಡಿಯಲ್ಲಿ ಜಯ­ಲಲಿತಾ ಮತ್ತು ಇತರೆ ಮೂವರು ಅಪ­ರಾಧಿ ಎಂದು ನ್ಯಾಯಾಲಯ ಘೋಷಿ­ಸಿದೆ. ಈ ಅಪರಾಧಕ್ಕಾಗಿ ಕಾಯ್ದೆಯ ಸೆಕ್ಷನ್‌ 13(2)ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಶಶಿಕಲಾ, ಇಳವರಸಿ ಮತ್ತು ಸುಧಾ­ಕರನ್‌ ಮೇಲಿದ್ದ ಕ್ರಿಮಿನಲ್‌ ಒಳಸಂಚು ಆರೋಪ ಕೂಡ ಸಾಬೀತಾಗಿದೆ ಎಂದು ನ್ಯಾಯಾಲಯ ಪ್ರಕಟಿಸಿದೆ. ಈ ಅಪ­ರಾಧ­­ಕ್ಕಾಗಿ ಮೂವರಿಗೂ ತಲಾ ಆರು ತಿಂಗಳ ಸೆರೆವಾಸ ಮತ್ತು ತಲಾ ರೂ 10 ಸಾವಿರ ದಂಡ ವಿಧಿಸಲಾಗಿದೆ.

11.15ಕ್ಕೆ ಆರಂಭ: ಜಯಲಲಿತಾ ವಿರುದ್ಧದ ಪ್ರಕರಣದ ವಿಚಾರಣೆ ನಡೆ­ಸಿದ ನ್ಯಾಯಾಧೀಶ ಜಾನ್‌ ಮೈಕೆಲ್‌ ಡಿ ಕುನ್ಹ ಅವರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆವರಣದ ಗಾಂಧಿ ಭವನದಲ್ಲಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದಲ್ಲಿ ಬೆಳಿಗ್ಗೆ 11.30ಕ್ಕೆ ಆದೇಶ ಪ್ರಕಟಿಸಿದರು. ‘ಈ ಪ್ರಕರಣದ ನಾಲ್ವರು ಆರೋಪಿಗಳೂ ದೋಷಿ­ಗಳು ಎಂಬುದು ವಿಚಾರಣೆ­ಯಲ್ಲಿ ಸಾಬೀತಾಗಿದೆ’ ಎಂದು ನ್ಯಾಯಾ­ಧೀಶರು ಮೊದಲಿಗೆ ತಿಳಿಸಿದರು.

ಶಿಕ್ಷೆಯ ಪ್ರಮಾಣ ಕುರಿತು ತನಿಖಾ ಸಂಸ್ಥೆ ಪರ ವಿಶೇಷ ಪಬ್ಲಿಕ್‌ ಪ್ರಾಸಿ­ಕ್ಯೂಟರ್‌ ಭವಾನಿ ಸಿಂಗ್‌ ಮತ್ತು ಅಪ­ರಾಧಿ­ಗಳ ಪರ ವಕೀಲರು ವಾದ ಮಂಡಿ­ಸಿ­ದರು. ಮಧ್ಯಾಹ್ನ 3 ಗಂಟೆಗೆ ಮತ್ತೆ ಕಲಾಪ ಆರಂಭವಾಯಿತು. ನ್ಯಾಯಾ­ಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಿ, ಅಪರಾಧಿಗಳನ್ನು ಕಾರಾಗೃಹದ ವಶಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಿದರು. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಂಜೆ 6.05ಕ್ಕೆ ಜಯಲಲಿತಾ ಸೇರಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಲಯ­ದಿಂದ ಕರೆದೊಯ್ದ ಬೆಂಗಳೂರು ನಗರ ಪೊಲೀಸರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ಒಪ್ಪಿಸಿದರು.

ಜಯಲಲಿತಾ, ಅವರ ಸ್ನೇಹಿತೆ ಶಶಿಕಲಾ ನಟರಾಜನ್‌ ಮತ್ತು ಸಂಬಂಧಿ ಜೆ.ಇಳವರಸಿ ಅವರನ್ನು ನಗ­ರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾ­ಗೃಹದ ಮಹಿಳಾ ಕೈದಿಗಳ ವಿಭಾಗದಲ್ಲಿ ಇರಿಸಲಾಗಿದೆ.

ಮತ್ತೊಬ್ಬ ಅಪರಾಧಿ, ಜಯಲಲಿತಾ ಅವರ ದತ್ತುಪುತ್ರ ವಿ.ಎನ್‌.­ಸುಧಾಕರನ್‌ ಅವರನ್ನು ಕಾರಾಗೃಹದ ಅತಿ ಗಣ್ಯ ವ್ಯಕ್ತಿ­ಗಳ ವಿಭಾಗದ ಕೊಠಡಿಯಲ್ಲಿ ಇರಿಸಲಾಗಿದೆ.

‘ಸಂಜೆ 6.05ರ ಸುಮಾರಿಗೆ ಜೈಲಿಗೆ ಬಂದ ಆ ನಾಲ್ಕೂ ಮಂದಿಯ ವಿವರ­ಗಳನ್ನು ಕೈದಿಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಿಕೊಂಡು ಹಾಜರಾತಿ ತೆಗೆದು­ಕೊಳ್ಳಲಾಯಿತು. ನಂತರ ಅವರನ್ನು ಜೈಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾ­ಸಣೆಗೆ ಒಳಪಡಿಸಲಾಯಿತು’ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದರು.

ಅವರೆಲ್ಲರಿಗೂ ತಲಾ ಎರಡು ಬೆಡ್‌ಶೀಟ್‌ ಹಾಗೂ ಜಮಖಾನ ಕೊಡ­ಲಾಗಿದೆ. ಮೂವರು ಮಹಿಳೆಯರಿಗೆ ಬಿಳಿ ಸೀರೆ, ಸುಧಾಕರನ್‌ ಅವರಿಗೆ ಬಿಳಿ ಪ್ಯಾಂಟ್‌ ಹಾಗೂ ಶರ್ಟ್‌ ಕೊಡಲಾಗಿದೆ. ಜಯಲಲಿತಾ ಅವರ ಮೇಲ್ವಿಚಾರಣೆ­ಗಾಗಿ ಮೈಸೂರಿನ ಕಾರಾಗೃಹದಿಂದ ಮಹಿಳಾ ಸೂಪರಿಂಟೆಂಡೆಂಟ್‌ ಒಬ್ಬರನ್ನು ಕರೆಸಿ­ಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾತ್ರಿ ಊಟಕ್ಕೆ ಮೊಸರನ್ನ: ‘ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ಅವರಿಗೆ ರಾತ್ರಿ ಊಟಕ್ಕೆ ಒಂದು ಮುದ್ದೆ, ಎರಡು ಚಪಾತಿ, 450 ಗ್ರಾಂ ಅನ್ನ ಹಾಗೂ 500 ಮಿ.ಲೀ ಕಾಳು ಸಾಂಬಾರು ನೀಡಲಾಗಿದೆ. ಜಯಲಲಿತಾ ಅವರು ಮನವಿ ಮಾಡಿಕೊಂಡಂತೆ ಅವರಿಗೆ ಮೊಸರನ್ನ, ಹಣ್ಣು ಮತ್ತು ಬ್ರೆಡ್‌ ನೀಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೌನಕ್ಕೆ ಶರಣು: ‘ನ್ಯಾಯಾಲಯದ ತೀರ್ಪಿನಿಂದ ಸಾಕಷ್ಟು ವಿಚಲಿತರಾದಂತೆ ಕಂಡುಬಂದ ಜಯಲಲಿತಾ ಅವರು ಕೊಠಡಿಯಲ್ಲಿ ಮೌನವಾಗಿದ್ದರು. ತಮ್ಮ ಆಪ್ತರಾದ ಶಶಿಕಲಾ ಮತ್ತು ಇಳವರಸಿ ಅವರ ಜತೆಯೂ ಮಾತನಾಡುತ್ತಿಲ್ಲ’ ಎಂದು ಕಾರಾಗೃಹ ಮೂಲಗಳು ತಿಳಿಸಿವೆ.

ಜೈಲು ಸೇರಿದ ಮೊದಲ ಸಿ.ಎಂ

ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾ­ಗಲೇ ಜೈಲು ಸೇರಿದ ಮೊದಲಿಗರು. ಇದರ ಜೊತೆಯಲ್ಲೇ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರೂ100 ಕೋಟಿಯಷ್ಟು ಭಾರಿ ದಂಡ ವಿಧಿಸಿದ ಮೊದಲ ಪ್ರಕರಣವೂ ಹೌದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s