http://www.udupibits.in news

ತನಿಖಾ ವರದಿ : ಶ್ರೀರಾಮ ದಿವಾಣ.
ಉಡುಪಿ: ಸರಕಾರ, ಸಾರ್ವಜನಿಕ ಸೇವೆಗೆ ಉಪಯೋಗಿಸಲೆಂದು ಲಯನ್ಸ್ ಕ್ಲಬ್ ಗೆ ಕೊಡುಗೆಯಾಗಿ ನೀಡಿದ ಅಂಬ್ಯುಲೆನ್ಸ್ ನ್ನು ಬಸ್ರೂರು ರಾಜೀವ್ ಶೆಟ್ಟಿ ಎಂಬವರು ತನ್ನ ಸ್ವಂತ ಹೆಸರಿಗೆ ಬದಲಾಯಿಸಿಕೊಂಡು ಸುಧೀರ್ಘ ಎಂಟು ವರ್ಷಗಳ ಕಾಲ ಅಕ್ರಮವಾಗಿ ಮನೆ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡು ಅಂತಿಮವಾಗಿ ಗುಜರಿಗೆ ಹಾಕುವ ಪರಿಸ್ಥಿತಿ ತಲುಪಿದಾಗ ಇಂಡಿಯನ್ ರೆಸ್ ಕ್ರಾಸ್ ಸೊಸೈಟಿಗೆ ಹಸ್ತಾಂತರಿಸಿ ಕೈತೊಳೆದುಕೊಳ್ಳುವ ಮೂಲಕ ಹಾಡಹಗಲೇ ಸರಕಾರ, ಲಯನ್ಸ್ ಕ್ಲಬ್ ಮತ್ತು ರೆಡ್ ಕ್ರಾಸ್ ಸೊಸೈಟಿಯನ್ನು ವಂಚಿಸಿದ ಪ್ರಕರಣವೊಂದು ದಾಖಲಾತಿಗಳ ಸಹಿತ ಇದೀಗ ಬಹಿರಂಗಕ್ಕೆ ಬಂದಿದೆ.

ಕಾಗ್ರೆಸ್ ಪಕ್ಷದ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ಅವರು, ತಮ್ಮ ರಾಜ್ಯ ಸಭಾ ಸದಸ್ಯತ್ವದ ಪ್ರದೇಶಾಭಿವೃದ್ಧಿ ನಿಧಿಯಿಂದ 2000-2001ನೇ ಸಾಲಿನಲ್ಲಿ ಉಡುಪಿ ಲಯನ್ಸ್ ಕ್ಲಬ್ ಗೆಂದು ಅಂಬ್ಯುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡುತ್ತಾರೆ. 25.08.2000 ರಲ್ಲಿ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರ ಹೆಸರಿನಲ್ಲಿ ಇದು ನೋಂದಣಿಯಾಗುತ್ತದೆ.

ಮೊದಲ ಮೂರು ವರ್ಷಗಳ ಕಾಲ ಈ ಅಂಬ್ಯುಲೆನ್ಸ್ ಸದುದ್ಧೇಶಕ್ಕೆ ಬಳಕೆಯಾಗಿದೆಯೋ, ದುರ್ಬಳಕೆಯಾಗಿದೆಯೋ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ, ಬಳಿಕದ ಸುಧೀರ್ಘ ಎಂಟು ವರ್ಷಗಳ ಕಾಲ ಈ ಸರಕಾರಿ ಅಂಬ್ಯುಲೆನ್ಸ್ ಕೆಲಸ ಮಾಡಿದ್ದು, ಬಸ್ರೂರು ರಾಜೀವ್ ಶೆಟ್ಟಿಯವರ ಸ್ವಂತದ ಸ್ವಾರ್ಥ ಉದ್ಧೇಶಗಳಿಗಾಗಿ ಮಾತ್ರ ಎಂಬುದು ಯಾವ ಅನುಮಾನಕ್ಕೂ ಎಡೆಯಿಲ್ಲದಂತೆ ಸ್ಪಷ್ಟವಾಗುತ್ತದೆ.

ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರ ಹೆಸರಿನಲ್ಲಿದ್ದ ಸರಕಾರಿ ಅಂಬ್ಯುಲೆನ್ಸ್ ನ್ನು, 2003ರ ಫೆಬ್ರವರಿ 9ರಂದು ಬಸ್ರೂರು ರಾಜೀವ್ ಶೆಟ್ಟಿ ತನ್ನ ಹೆಸರಿಗೆ
ಮಾಡಿಸಿಕೊಳ್ಳುತ್ತಾರೆ. ‘ಮಿಸ್ಟರ್ ಎಂ.ಜೆ.ಎಫ್. ಲಯನ್, ಬಸ್ರೂರು ರಾಜೀವ್ ಶೆಟ್ಟಿ, ಸನ್ ಆಫ್ ಶಿವರಾಮ ಶೆಟ್ಟಿ, 11-2-70 ಇ, ಪದ್ಮಜ, ಉಡುಪಿ’ ಎಂಬ ಹೆಸರಿಗೆ
ಅಂಬ್ಯುಲೆನ್ಸ್ ವರ್ಗಾವಣೆಯಾಗುತ್ತದೆ. ಆಶ್ಚರ್ಯವೆಂದರೆ, ಈ ವಿಳಾಸ ಬಸ್ರೂರು ರಾಜೀವ್ ಶೆಟ್ಟಿಯವರ ಮನೆಯ ವಿಳಾಸವಾಗಿರುವುದು.

ಆಸ್ಕರ್ ಫೆರ್ನಾಂಡಿಸ್ ಅವರು ಸರಕಾರದಿಂದ ಲಭ್ಯವಾಗುವ ಪ್ರದೇಶಾಭಿವೃದ್ಧಿ ನಿಧಿಯಿಂದ ಸಾರ್ವಜನಿಕರ ಉಪಯೋಗಕ್ಕೆಂದು 2000 ರಲ್ಲಿ ಲಯನ್ಸ್ ಕ್ಲಬ್ ಗೆ ಕೊಡಮಾಡಿದ ನೀಡಿದ ಅಂಬ್ಯುಲೆನ್ಸ್, 2003ರಿಂದ 2011ರ ವರೆಗೆ, ಎಂಟು ವರ್ಷಗಳ ಕಾಲ ಉಡುಪಿ ಮತ್ತು ಕುಂದಾಪುರ ತಾಲೂಕಿನಾದ್ಯಂತ ಅಕ್ರಮವಾಗಿ ಬಳಕೆಯಾಗಿದೆ. ತೋಟಕ್ಕೆ ಗೊಬ್ಬರ ಹಾಕುವುದರ ಸಹಿತ ವಿವಿಧ ರೀತಿಯ ಖಾಸಗಿ ಕೆಲಸಗಳಿಗೆ ನಿರಂತರವಾಗಿ ದುರ್ಬಳಕೆಯಾದ ಕಾರಣ, ಅಂಬ್ಯುಲೆನ್ಸ್ ಗುಜರಿಗೆ ಹಾಕುವ ಹಂತ ತಲುಪಿದೆ.

ಅಂತಿಮ ಹಂತದಲ್ಲಿ ಬಸ್ರೂರು ರಾಜೀವ್ ಶೆಟ್ಟಿಯವರ ತಲೆಗೆ ಹೊಳೆದ ಮಹಾನ್ ಐಡಿಯಾವೇ, ಅಂಬ್ಯುಲೆನ್ಸ್ ನ್ನು ಗುಜರಿಗೆ ಹಾಕುವ ಬದಲು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಗೆ ಹಸ್ತಾಂತರಿಸಿ ಬಿಡುವುದು ! 2011ರ ಮಾರ್ಚ್ 9ರಂದು ಅಂಬ್ಯುಲೆನ್ಸ್ ಬಸ್ರೂರು ರಾಜೀವ್ ಶೆಟ್ಟಿ ಹೆಸರಿನಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಕೆಯ ಕಾರ್ಯದರ್ಶಿ ಹೆಸರಿಗೆ ಬದಲಾಗಿ ಬಿಡುತ್ತದೆ.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಹೆಸರಿಗೆ ಅಂಬ್ಯುಲೆನ್ಸ್ ನೋಂದಣಿಯಾದ ನಂತರ, ರೆಡ್ ಕ್ರಾಸ್ ಮೂಲಕ, ರೆಡ್ ಕ್ರಾಸ್ ಖಜಾನೆಯಿಂದ ಅಂಬ್ಯುಲೆನ್ಸ್ ದುರಸ್ತಿಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಬರೋಬ್ಬರಿ ಒಂದು ಲಕ್ಷ ರು.ಗಳಿಗೂ ಅಧಿಕ ಹಣವನ್ನು ರೆಡ್ ಕ್ರಾಸ್ ಸೊಸೈಟಿ ಕರ್ಚು ಮಾಡುತ್ತದೆ.

ಅಕ್ರಮ ಅನುಮೋದಿಸದ ಡಾ.ಶರತ್..

2011ರಲ್ಲಿ ಬಸ್ರೂರು ರಾಜೀವ್ ಶೆಟ್ಟಿ ಉಡುಪಿ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿಯಾಗಿದ್ದರೆ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರು ಉಪ ಸಭಾಪತಿಯಾಗಿದ್ದರು. ಪ್ರಾಮಾಣಿಕರೂ, ದಕ್ಷರು ಆದ ಉಪ ಸಭಾಪತಿ ಡಾ.ಶರತ್ ಕುಮಾರ್ ರಾವ್ ಅವರು, ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರ ಅಂಬ್ಯುಲೆನ್ಸ್ ಅಕ್ರಮಕ್ಕೆ ಸಹಮತ ವ್ಯಕ್ತಪಡಿಸಿದೆ, ಇರ್ಣವನ್ನು ಅನುಮೋದಿಸದೆ, ವಿರೋಧ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಗೆ ಲಿಖಿತವಾಗಿ ಆಕ್ಷೇಪ ದಾಖಲಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡುತ್ತಾರೆ ಡಾ.ಶರತ್.

ಪರಿಣಾಮ ಮಾತ್ರ ಶೂನ್ಯ, ಧ್ವೇಷ ಸಾಧನೆ !

2011ರ ಮೇ 12ರಂದು ಡಾ.ಶರತ್ ಅವರು ನೀಡಿದ ದೂರಿನ ಮೇಲೆ ಈವರೆಗೂ ಜಿಲ್ಲಾಧಿಕಾರಿಗಳೂ, ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ತನಿಖೆ ನಡೆಸಿಲ್ಲ. ಆದರೆ..

ಅಂಬ್ಯುಲೆನ್ಸ್ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಡಾ.ಶರತ್ ಕುಮಾರ್ ರಾವ್ ಅವರು ಅನುಮೋದನೆ ನೀಡದೆ ಲಿಖಿತವಾಗಿಯೇ ಆಕ್ಷೇಪ ದಾಖಲಿಸಿದ ಪರಿಣಾಮವಾಗಿ ಬಸ್ರೂರು ರಾಜೀವ್ ಶೆಟ್ಟಿಯವರು ತೀವ್ರ ಮುಜುಗರ ಅನುಭವಿಸಿದರು. ಡಾ.ಶರತ್ ವಿರುದ್ಧ ಭಾರೀ ಆಕ್ರೋಶ, ಸಿಟ್ಟು, ಧ್ವೇಷ ಪ್ರದರ್ಶಿಸತೊಡಗಿದರು.

ಈ ಧ್ವೇಷ ಸಾಧನೆಯ ಮುಂದುವರಿದ ಭಾಗವಾಗಿಯೇ, ಬಳಿಕ ಡಾ.ಶರತ್ ಕುಮಾರ್ ರಾವ್ ವಿರುದ್ಧ ರೆಡ್ ಕ್ರಾಸ್ ಸೊಸೈಟಿ, ಪೊಲೀಸ್ ಠಾಣೆ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಹಾಗೂ ಆರೋಗ್ಯ ಇಲಾಖೆಯ ಜಾಗೃತಕೋಶದಲ್ಲಿ ಮಹಿಳೆಯೊಬ್ಬರ ಮೂಲಕ ಸುಳ್ಳು ದೂರು ಸಲ್ಲಿಕೆಯ ಪ್ರಹಸನ ಆರಂಭವಾಯಿತು.

ಡಾ.ಶರತ್ ಕುಮಾರ್ ರಾವ್ ವಿರುದ್ಧ, ಮಹಿಳೆಯೊಬ್ಬಾಕೆ ಎಲ್ಲೆಲ್ಲಾ ದೂರು ನೀಡಿದ್ದಾರೋ, ಅಲ್ಲೆಲ್ಲಾ ದೂರು ಕೊಟ್ಟ ಕೆಲವೇ ದಿನಗಳ ಅಂತರದಲ್ಲಿ ದೂರಿನ ಬಗ್ಗೆ ತನಿಖೆಯಾಗುತ್ತದೆ. ಇಂತಹ ತನಿಖೆಗಳೆಲ್ಲವೂ ಪೂರ್ವಾಗ್ರಹದಿಂದಲೂ, ಪಕ್ಷಪಾತದಿಂದಲೂ, ಏಕಪಕ್ಷೀಯವಾಗಿಯೂ ನಡೆಯುತ್ತಿದ್ದವು. ಪರಿಣಾಮವಾಗಿ, ತನಿಖಾ ವರದಿಗಳೆಲ್ಲವೂ ಡಾ.ಶರತ್ ವಿರುದ್ಧವೇ ಸೃಷ್ಟಿಯಾಗುತ್ತಿದ್ದವು. ರೆಡ್ ಕ್ರಾಸ್ ಸೊಸೈಟಿಯಲ್ಲಿ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು ತನಿಖೆಯನ್ನೇ ನಡೆಸದೆ ಡಾ.ಶರತ್ ಕುಮಾರ್ ರಾವ್ ಅವರನ್ನು ಏಕಪಕ್ಷೀಯವಾಗಿ ಉಪ ಸಭಾಪತಿ ಸ್ಥಾನದಿಂದ ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ಉಚ್ಛಾಟಿಸುತ್ತಾರೆ.

ಡಾ.ಶರತ್ ಕುಮಾರ್ ಅವರನ್ನು ರೆಡ್ ಕ್ರಾಸ್ ಸೊಸೈಟಿಯಿಂದ ಉಚ್ಛಾಟಿಸುವ ಬಸ್ರೂರು ರಾಜೀವ್ ಶೆಟ್ಟಿ, ಡಾ.ಶರತ್ ಉಚ್ಛಾಟನೆಯಿಂದ ಕಾಲಿ ಬೀಳುವ ಸ್ಥಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಮಚಂದ್ರ ಬಾಯಿರಿ ಅವರನ್ನು ನೇಮಕ ಮಾಡುತ್ತಾರೆ.

ಬಸ್ರೂರು ರಾಜೀವ್ ಶೆಟ್ಟಿಯವರು ರೆಡ್ ಕ್ರಾಸ್ ಸೊಸೈಟಿಯಲ್ಲಿ ತನಗೊಂದು ಸ್ಥಾನ ಕಲ್ಪಿಸಿಕೊಟ್ಟದ್ದಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸುವ ಪ್ರಕ್ರಿಯೆಯ ಭಾಗವಾಗಿ, ಶ್ರೀಮತಿ ವೀಣಾ ಶೆಟ್ಟಿ ಡಾ.ಶರತ್ ವಿರುದ್ಧ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ನೀಡಿದ ದೂರಿಗೆ ಸಂಬಂಧಿಸಿದಂತೆ ಪ್ರಧಾನ ಕಾರ್ಯದರ್ಶಿಯವರಿಂದ ಪೂರ್ವ ನಿರ್ಧರಿತ ಸಂಚಿನ ಭಾಗವಾಗಿ ತನಿಖಾಧಿಕಾರಿಯಾಗಿ ನಿಯುಕ್ತಗೊಳ್ಳುವ ಡಿಎಚ್ಓ ಡಾ.ರಾಮಚಂದ್ರ ಬಾಯಿರಿಯವರು ಡಾ.ಶರತ್ ಕುಮಾರ್ ವಿರುದ್ಧ ಪ್ರಧಾನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸುತ್ತಾರೆ.

ಆರೋಗ್ಯ ಇಲಾಖೆಯ ಭ್ರಷ್ಟರಿಗೂ, ಬಸ್ರೂರು ರಾಜೀವ್ ಶೆಟ್ಟಿಯವರಿಗೂ ಅದೆಂಥದ್ದೋ ಸಂಬಂಧ ? ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ನಿರ್ದೇಶಕರಾದ ಡಾ.ಧನ್ಯ ಕುಮಾರ್, ಉಪ ನಿರ್ದೇಶಕರಾದ ಡಾ.ಕೆ.ಬಿ.ಈಸ್ವರಪ್ಪ, ಡಿಎಚ್ಓ ಡಾ.ರಾಮಚಂದ್ರ ಬಾಯಿರಿ, ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಬಸ್ರೂರು ರಾಜೀವ್ ಶೆಟ್ಟಿ ಸಹಿತ ಇನ್ನೂ ಕೆಲವರು ಷಡ್ಯಂತ್ರದಲ್ಲಿ ಒಂದಾಗುತ್ತಾರೆ. ತೆರೆಮರೆಯಲ್ಲಿ ಭಾಗಿಯಾಗುತ್ತಾರೆ. ದಕ್ಷರೂ, ಪ್ರಾಮಾಣಿಕರೂ ಆದ ಡಾ.ಶರತ್ ಕುಮಾರ್ ರಾವ್ ಅವರನ್ನು ಜೀವಂತವಾಗಿ ಮುಗಿಸುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತದೆ. ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ.

ಮದನ್ ಗೋಪಾಲ್ ಆರೋಗ್ಯ ಇಲಾಖೆಯಿಂದ ವರ್ಗಾವಣೆಗೊಂಡು ಸರಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾದ ಬಳಿಕ, ಮದನ್ ಗೋಪಾಲ್ ಅವರಿಂದ ತೆರವಾದ ಪ್ರಧಾನ ಕಾರ್ಯದಶರ್ಿ ಸ್ಥಾನ ವಹಿಸಿಕೊಂಡ ಶಿವಶೈಲಂ ಎಂಬವರು ಸಹ ಇತ್ತೀಚೆಗೆ ಉಡುಪಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದವರು, ಬಸ್ರೂರು ಜೊತೆಗೆ ರೆಡ್ ಕ್ರಾಸ್ ಸೊಸೈಟಿಗೆ ಭೇಟಿ ನೀಡಿ ಗುಂಪು ಫೋಟೋಗಡೆ ಫೋಸ್ ಕೊಡುತ್ತಾರೆ. ಜೊತೆಯಾಗಿ ಉಪಹಾರ ಸೇವಿಸಿ ಧನ್ಯತೆ ಅನುಭವಿಸುತ್ತಾರೆ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s