ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಮಾಡದ ಪ್ರಕರಣ: ಪೌರಾಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು

Posted: ಅಕ್ಟೋಬರ್ 14, 2014 in Uncategorized

http://www.udupibits.in news

ಉಡುಪಿ: ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿರುವ ಕಾತ್ಯಾಯಿನಿ ಮಂಟಪದ ಖಾತೆ ಮತ್ತು ಆರ್ ಟಿಸಿಯನ್ನು ದೇವಸ್ಥಾನದ ಹೆಸರಿಗೆ ಮಾಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶವನ್ನು 17 ವರ್ಷ ಕಳೆದರೂ ಪಾಲನೆ ಮಾಡದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಕಡಿಯಾಳಿ ಹಿತರಕ್ಷಣಾ ಸಮಿತಿಯ ಸಂಚಾಲಕ ಕೆ.ಶ್ರೀನಿವಾಸ ಹೆಬ್ಬಾರ್ ಅವರು ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶ್ರೀನಿವಾಸ ಹೆಬ್ಬಾರ್ ಅವರ ದೂರಿನಂತೆ, ಕಡಿಯಾಳಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ರಾವ್ ವಿರುದ್ಧ ಲೋಕಾಯುಕ್ತ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಶಿವಳ್ಳಿ ಗ್ರಾಮದ ಕಡಿಯಾಳಿ ದೇವಸ್ಥಾನದ ಮುಂಭಾಗದ ಸರ್ವೆ ನಂಬ್ರ 128/41 ಮತ್ತು 128/42ರಲ್ಲಿರುವ 22.50 ಸೆಂಟ್ಸ್ ಸ್ಥಳದಲ್ಲಿ ಸರ್ವಮಂಗಳಾ ಕಲಾ ಮಂಟಪ ಸಮಿತಿ ಎಂಬ ಹೆಸರಿನ ಬೇನಾಮಿ ಸಂಸ್ಥೆಯೊಂದು ಅನಧಿಕೃತ ಕಟ್ಟಡವನ್ನು ನಿರ್ಮಿಸಿತ್ತು. ಬೇನಾಮಿ ಸಂಸ್ಥೆಯ ಸ್ವಯಂಘೋಷಿತ ಕಾರ್ಯದರ್ಶಿಯೊಬ್ಬರು ಈ ಕಲ್ಯಾಣ ಮಂಟಪದ ಮೂಲಕ ಬರುವ ಆದಾಯವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿದ್ದು, ಈ ಬಗ್ಗೆ ಕಳೆದ ಹಲವಾರು ಸಮಯಗಳಿಂದ ದೂರುಗಳು ಕೇಳಿಬರುತ್ತಿತ್ತು.

ಈ ಸ್ಥಳ ಮತ್ತು ಕಟ್ಟಡ ದೇವಸ್ಥಾನಕ್ಕೆ ಸೇರಿದ್ದು. ಆದರೆ, ಅನಧಿಕೃತ ಸಮಿತಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಈ ಕಟ್ಟಡವನ್ನು ತನ್ನ ವ್ಯಕ್ತಿಗತವಾದ ಕಟ್ಟಡವೆಂದೇ ಹೇಳಿಕೊಳ್ಳುತ್ತಾ, ಅದರಲ್ಲಿ ಬರುವ ಲಾಭವನ್ನು ತನ್ನದನ್ನಾಗಿಸಿಕೊಂಡು ಬರುತ್ತಿದ್ದರು. ಈ ಬಗ್ಗೆ ಭಕ್ತರು ಸಂಬಂಧಿಸಿದವರಿಗೆ ದೂರು ನೀಡುತ್ತಾ ಮುಂದುವರಿದಾಗ, ಒಂದು ಹಂತದಲ್ಲಿ ಜಿಲ್ಲಾಧಿಕಾರಿಗಳು ಕಟ್ಟಡವನ್ನು ದೇವಸ್ಥಾನದ ಹೆಸರಿಗೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದರು.

ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ಆದೇಶವನ್ನು ಪಾಲನೆ ಮಾಡದೆ, ಪೌರಾಯುಕ್ತರು ಹಾಗೂ ಕಾರ್ಯನಿರ್ವಹಣಾಧಿಕಾರಿಯವರು, ಈ ಹಿಂದಿನಂತೆಯೇ ಮುಂದುವರಿಯಲು ಬಿಟ್ಟದ್ದರು. ಈ ಬಗ್ಗೆ ಇದೀಗ ಹೆಬ್ಬಾರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ.

ನಿಮ್ಮ ಟಿಪ್ಪಣಿ ಬರೆಯಿರಿ