ಅನಧಿಕೃತ ಗೈರು : ಇಲಾಖಾ ವಿಚಾರಣೆಯ ನೋಟೀಸ್

Posted: ಅಕ್ಟೋಬರ್ 27, 2014 in Uncategorized

ಉಡುಪಿ: ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ಪರಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಎಡಾಣಿ ಗ್ರಾಮದ ಖಾಯಂ ನಿವಾಸಿ ಮತ್ತು ಉಡುಪಿ ಕುತ್ಪಾಡಿಯ ಎಸ್.ಡಿ.ಎಂ.ಆಯುರ್ವೇದ ಆಸ್ಪತ್ರೆ ಬಳಿ ವಾಸವಾಗಿದ್ದ ಮಂಜೆಗೌಡ ಎಂಬವರು 2007ರ ಆಗಸ್ಟ್ 2ರಂದು ಮಧ್ಯಾಹ್ನದಿಂದ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾದ ಕಾರಣ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1966 ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 106 ಎ ಮತ್ತು 108ರಂತೆ ಇಲಾಖಾ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ನ್ಯಾಧೀಶರು/ ಶಿಸ್ತು ಪ್ರಾಧಿಕಾರ ಜಿಲ್ಲಾ ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

ಇಲಾಖಾ ವಿಚಾರಣೆ ಸಂಖ್ಯೆ 4/2014ರ ನೋಟೀಸುಗಳನ್ನು ನ್ಯಾಯಾಲಯದ ಮೂಲಕ ಮತ್ತು ನೋಂದಾಯಿತ ಅಂಚೆ ಮೂಲಕ ಕಳುಹಿಸಲಾಗಿದ್ದರೂ ಸಹ, ಸದ್ರಿ ವಿಳಾಸದಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಜಾರಿಯಾಗಿರುವುದಿಲ್ಲ. ಆದುದರಿಂದ, ಇಲಾಖಾ ವಿಚಾರಣೆ ಸಂಖ್ಯೆ 4/2014 ರ ಬಗ್ಗೆ ಈ ಮೂಲಕ ಪ್ರಕಟಣೆಯನ್ನು ನೀಡುತ್ತಿದ್ದು, ಏನಾದರೂ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಇದ್ದರೆ ಈ ಪ್ರಕಟಣೆಯ 15 ದಿನಗಳೊಳಗಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು/ ಶಿಸ್ತು ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ಉಡುಪಿ ಇಲ್ಲಿ ಖುದ್ದಾಗಿ ಹಾಜರಾಗಿ ಸಲ್ಲಿಸತಕ್ಕದ್ದು, ತಪ್ಪಿದ್ದಲ್ಲಿ ಲಿಖಿತ ಹೇಳಿಕೆ ಇಲ್ಲ ಎಂದು ತಿಳಿದು
ವಿಚಾರಣೆಯನ್ನು ಮುಂದುವರೆಸಲಾಗುವುದು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು/ ಶಿಸ್ತು ಪ್ರಾಧಿಕಾರ ಜಿಲ್ಲಾ ನ್ಯಾಯಾಲಯ ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಟಿಪ್ಪಣಿ ಬರೆಯಿರಿ