* http://www.udupibits.in * ಶ್ರೀರಾಮ ದಿವಾಣ.

# ತಾನೋರ್ವ ‘ಲಿಂಗತ್ವ ಅಲ್ಪಸಂಖ್ಯಾತ’ ಸಮುದಾಯಕ್ಕೆ ಸೇರಿದವನೆಂದು ಬಹಿರಂಗಗೊಳಿಸುವುದರ ಜೊತೆಗೆ, ಎಚ್.ಐ.ವಿ./ಏಡ್ಸ್ ಬಾಧಿತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಕಳೆದ 12 ವರ್ಷಗಳಿಂದ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ನಿವಾಸಿ ಸಂಜೀವ ಪೂಜಾರಿ ಅವರು, ನಿರಂತರ ಪ್ರಯತ್ನದ ಫಲವಾಗಿ ಕೊನೆಗೂ ಕರ್ನಾಟಕ ರಾಜ್ಯ ಸರಕಾರ ಕೊಡಮಾಡುವ ‘ಮೈತ್ರಿ ಯೋಜನೆ’ಯ ಫಲಾನುಭವಿಯಾಗಿದ್ದಾರೆ. ತನ್ನಂತಿರುವ ಇತರರಿಗೂ ಈ ಸಂದರ್ಭದಲ್ಲಿ ‘ಬನ್ನಿ, ನೀವೂ ಮೈತ್ರಿ ಯೋಜನೆಯ ಫಲಾನುಭವಿಗಳಾಗಿ..’ ಎಂದು ಕರೆ ಕೊಟ್ಟಿದ್ದಾರೆ.

2013-14ರ ಅಯವ್ಯಯ ಭಾಷಣದಲ್ಲಿ ಲಿಂಗತ್ವ ಅಲ್ಪಸಂಕ್ಯಾತರಿಗಾಗಿ ರಾಜ್ಯ ಸರಕಾರ ಮೈತ್ರಿ ಯೋಜನೆಯನ್ನು ಘೋಷಿಸಿತ್ತು. ಮೊದಲ ವರ್ಷ, ಈ ಯೋಜನೆಯ ಫಲಾನುಭವಿಗಳಾಗಲು 40ರಿಂದ 65 ವರ್ಷದೊಳಗಿನವರಾಗಿರಬೇಕು ಎಂದಿತ್ತು. ಈ ವರ್ಷ ವಯಸ್ಸಿನ ಮಿತಿಯನ್ನು 40ರಿಂದ 25ಕ್ಕೆ ಇಳಿಸಲಾಗಿರುವುದು ಒಂದು ಬದಲಾವಣೆ. ಉಳಿದಂತೆ ಈ ಯೋಜನೆಯ ಫಲಾನುಭವಿಗಳಾಗಲು ಹಲವಾರು ಅರ್ಹತೆ, ಮಾನದಂಡಗಳಿದ್ದು, ಇವುಗಳನ್ನೆಲ್ಲ ಪೂರೈಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯಬೇಕಾದರೆ, ಮಾನದಂಡಗಳನ್ನು ಸರಕಾರ ಸಡಿಲುಸುವುದು ಅನಿವಾರ್ಯವಾಗಿದೆ.

ಕೋಥಿ, ಮಂಗಳಮುಖಿ, ಜೋಗಪ್ಪಂದಿರು, ಹಿಜ್ರಾ, ಎಫ್.ಟು.ಎಂ. ಮೊದಲಾದವರು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಬರುತ್ತಿದ್ದು, ಇವರಿಗೆ ತಿಂಗಳೊಂದರ 500 ರು. ಮಾಸಿಕ ಮಾಸಾಶನ ನೀಡುವ ಯೋಜನೆಯೇ ‘ಮೈತ್ರಿ ಯೋಜನೆ’ಯಾಗಿದೆ. ಕಳೆದ ವರ್ಷ ಈ ಯೋಜನೆಯಲ್ಲಿ ಉಡುಪಿ ಜಿಲ್ಲೆಯಿಂದ ಒಬ್ಬರೇ ಒಬ್ಬರು ಫಲಾನುಭವಿ ಇರಲಿಲ್ಲ. ಈ ವರ್ಷ ಆ ಕೊರತೆಯನ್ನು ಸಂಜೀವ ವಂಡ್ಸೆ ಅವರು ನೀಗಿಸಿದ್ದಾರೆ.

2013ರ ಜುಲೈ 29ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುತ್ತೋಲೆಯಂತೆ, 2013ರ ಆಗಸ್ಟ್ ಒಂದರಂದು ಮೈತ್ರಿ ಯೋಜನೆ ರಾಜ್ಯದಲ್ಲಿ ಜ್ಯಾರಿಯಾಗಿದೆ. ಇವುಗಳ ಮಾನದಂಡಗಳನ್ನು ಪೂರೈಸುವುದೇ ಬಹಳ ಸವಾಲಿನ ಕೆಲಸವಾದುದರಿಂದ ಇರಬಹುದು, ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯಿಂದ ಈ ಯೋಜನೆಗೆ ಒಬ್ಬರೇ ಒಬ್ಬರು ಫಲಾನುಭವಿ ಇರಲಿಲ್ಲ.

ತಾನೋರ್ವ ಲಿಂಗತ್ವ ಅಲ್ಪಸಂಖ್ಯಾತ ಎನ್ನುವುದನ್ನು ಸ್ವಯಂ ಸ್ಪೂರ್ತಿಯಿಂದ ಘೊಷಿಸಿಕೊಂಡು, ಹೀಗೆ ಘೋಷಿಸಿಕೊಂಡ ಕಾರಣಕ್ಕೆ ಸಾಮಾಜಿಕವಾಗಿ ಎದುರಿಸಬೇಕಾಗಿ ಬರುವ ಪರಿಣಾಮಗಳನ್ನು ಸವಾಲಾಗಿ ಸ್ವೀಕರಿಸಿಕೊಂಡು, ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತು ದಿಟ್ಟತನದಿಂದಲೇ ಮುಂದುವರಿಯುತ್ತಿದ್ದ ಸಂಜೀವ ವಂಡ್ಸೆ ಅವರು ಮಾತ್ರ ನಿರಂತರ ಶ್ರಮದ ಬಳಿಕ ಇದೀಗ ಮೈತ್ರಿ ಯೋಜನೆಯ ಫಲಾನುಭವಿಯಾಗಲು ಸಾಧ್ಯವಾಗಿದೆ.

ಮಂಗಳೂರಿನ ದಿ.ವೀಣಾಧರಿ ಜೊತೆಗೆ ಕೆಲಸ ಮಾಡಿರುವ ಸಂಜೀವ ವಂಡ್ಸೆ ಅವರು, ಉಡುಪಿಯ ಜೀವನ ಸಂಘರ್ಷ, ಬೇಳೂರಿನ ಸ್ಪೂರ್ತಿಧಾಮ, ಉಡುಪಿಯ ದೀಪಜ್ಯೋತಿ, ಗಾರ್ಡ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್, ಕೆ.ಎನ್.ಪಿ. ಪ್ಲಸ್, ಬೆಂಗಳೂರಿನ ಸಂಗಮ, ಕರ್ನಾಟಕ ಎಚ್.ಐ.ವಿ. ಸೋಂಕಿತರ ಸಂಘಟನೆ, ಕರ್ನಾಟಕ ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆ, ಬೆಂಗಳೂರಿನ ಸಾರಥ್ಯ ಮೊದಲಾದ ಸರಕಾರೇತರ ಸ್ವಯಂಸೇವಾ ಸಂಸ್ಥೆಯಲ್ಲಿ ಎಚ್.ಐ.ವಿ./ಏಡ್ಸ್ ಬಾಧಿತರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದಾರೆ.

ಪ್ರಸ್ತುತ, ಉಡುಪಿಯ ಆಶ್ರಯ ಸಮುದಾಯ ಸಂಘಟನೆಯಲ್ಲಿ ಆಪ್ತ ಸಮಾಲೋಚಕರಾಗಿರುವ ಸಂಜೀವ ವಂಡ್ಸೆ ಅವರು, ಎಚ್.ಐ.ವಿ./ಏಡ್ಸ್ ಬಾಧಿತರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ, ಅವರ ಹಕ್ಕಿನ ರಕ್ಷಣೆಗಾಗಿ ಪಣ ತೊಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

ಮೈತ್ರಿ ಯೋಜನೆಯ ಉಡುಪಿ ಜಿಲ್ಲೆಯ ಮೊದಲ ಫಲಾನುಭವಿ ತಾನು ಎನ್ನುವುದನ್ನು ಸ್ವತಹಾ ಹೆಮ್ಮೆಯಿಂದ ಘೋಷಿಸಿಕೊಳ್ಳುತ್ತಿರುವ ಸಂಜೀವ ಅವರು ತನ್ನಂತಿರುವ ಇತರರಿಗೂ, ಈ ಯೋಜನೆಯ ಫಲಾನುಭವಿಯಾಗುವಂತೆ ಕೋರಿದ್ದಾರೆ.

ಈಗಾಗಲೇ ರಾಜ್ಯದಲ್ಲಿ 250ರಿಂದ 300 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಮೈತ್ರಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಸಾಕಷ್ಟು ಮಂದಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿದ್ದು, ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತನ್ನನ್ನು (ಮೊಬೈಲ್ : 9845839697) ಅಥವಾ ಆಶ್ರಯ ಸಮುದಾಯ ಸಂಘಟನೆ (ದೂರವಾಣಿ : 0820-2521386) ನ್ನು ಸಂಪರ್ಕಿಸಬಹುದು ಎಂದು ಸಂಜೀವ ವಿನಂತಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s