http://www.udupibits.in
# ಶ್ರದ್ಧೆ ಮತ್ತು ಆಸಕ್ತಿಯ ಫಲ ಕೋಟೇಶ್ವರದ ಬೀಜೋತ್ಪಾದನಾ ಕೇಂದ್ರದಲ್ಲಿ ನಳನಳಿಸುತ್ತಿದೆ. ಕೃಷಿ ಇಲಾಖೆಯ ಪ್ರಮುಖ ಯೋಜನೆಯಡಿ ಬೀಜೋತ್ಪಾದನೆಯು ಒಂದು. ರೈತರಿಗೆ ಅತ್ಯುತ್ತಮ ತಳಿಯ ಬೀಜಗಳನ್ನು ಕರ್ನಾಟಕ ಸೀಡ್ಸ್ ಕಾರ್ಪೋರೇಷನ್ ಗೆ ಪೂರೈಸುವ ಹೊಣೆಯೂ ಇಲಾಖೆಗಿದೆ.

ಪ್ರಸಕ್ತ ಸಾಲಿನಲ್ಲಿ ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಖುಷಿಯಾಗಿದೆ. ಇಲಾಖೆಯ ಕೋಟೇಶ್ವರ ಬೀಜೋತ್ಪಾದನಾ ಕೇಂದ್ರ ಹಸಿರಿನಿಂದ ನಳನಳಿಸುತ್ತಿದೆ. ಭತ್ತದ ತೆನೆಗಳು ತೂಗಿ ಬಾಗಿವೆ. ಶ್ರದ್ದೆಯಿಂದ ದುಡಿದ ಎಲ್ಲರ ಮುಖದಲ್ಲೂ ಮಂದಹಾಸ ಮಿನುಗಿದೆ.

ವಿವಿಧ ಕಾರಣಗಳಿಂದ ಕೃಷಿ ಜಿಲ್ಲೆಯಲ್ಲಿ ನಶಿಸುತ್ತಿರುವ ಸಂದರ್ಭದಲ್ಲಿ, 14 ಎಕರೆ ವ್ಯಾಪ್ತಿಯಲ್ಲಿ ತೆನೆಗಳಿಂದ ತುಂಬಿ ಬಳುಕುತ್ತಿರುವ ಭತ್ತದ ಫಸಲನ್ನು ನೋಡುತ್ತಿದ್ದರೆ ಕೃಷಿಯಲ್ಲಿರುವ ಖುಷಿಯನ್ನು ಅಲ್ಲಗಳೆಯಲು ಹೇಗೆ ಸಾಧ್ಯ ?

ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಅಲಭ್ಯತೆಯ ವೇಳೆಯಲ್ಲಿ ಸ್ವಾಭಾವಿಕ ನೀರಿನ ಹರಿವು ಹಾಗೂ ಸ್ಥಳೀಯ ನೀರಿನ ಮೂಲಗಳನ್ನು ಬಳಸಿ, ಪ್ರತಿದಿನ 8ರಿಂದ 10 ಕೃಷಿ ಕಾರ್ಮಿಕರನ್ನು ಬಳಸಿ 800 ಮಾನವ ದಿನಗಳ ಶ್ರಮದಿಂದ ಸಂಪೂರ್ಣ ಪಾಳುಬಿದ್ದ ಭೂಮಿಯನ್ನು ಭತ್ತದ ಬಗ್ಗೆ ಹೆಚ್ಚೇನೂ ಮಾಹಿತಿ ಇರದ ರೇಷ್ಮೆ ಇಲಾಖೆಯ ಅಧಿಕಾರಿ ರಾಜೇಂದ್ರ ಶೆಟ್ಟಿಗಾರ ಅವರು ಕೃಷಿ ಇಲಾಖೆಗೆ ನಿಯೋಜನೆ ಗೊಂಡು ಕೃಷಿ ಬೀಜೋತ್ಪಾದನಾ
ಕೇಂದ್ರವನ್ನು ನಿರ್ವಹಿಸಿದ್ದಾರೆ. ಇವರ ಎಲ್ಲ ಶ್ರಮಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಆಂಥೊನಿ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.

14 ಎಕರೆ ಪ್ರದೇಶವನ್ನು ಯಂತ್ರ ನಾಟಿ ಮಾಡಿದ್ದು, ಎಂ ಒ 4 ಭತ್ತದ ತಳಿಯನ್ನು ಬಿತ್ತಲಾಗಿದೆ. ಕ್ರಮ ಬದ್ದವಾಗಿ ನಿರ್ವಹಣೆ, ವೈಜ್ಞಾನಿಕ ಕೃಷಿ, ತಂತ್ರಜ್ಞಾನದಿಂದ ಸುಮಾರು 150 ಕ್ವಿಂಟಾಲ್ ಭತ್ತದ ಇಳುವರಿ ನಿರೀಕ್ಷಿಸಬಹುದು ಎಂಬುದು ಅನುಭವಿ ರೈತರ ಅನಿಸಿಕೆ. ಕೊಟ್ಟಿಗೆ ಗೊಬ್ಬರ, ಯೂರಿಯಾ, ಪೊಟ್ಯಾಷ್, ಡಿಐಪಿ ನೀಡಲಾಗಿದ್ದು, ನಾಟಿಯ 12 ನೇ ದಿನದ ನಂತರ ಕೋನೋವೀಡರ್ ಮತ್ತು ಮಾನವ ಶ್ರಮದ ಮೂಲಕ ಕಳೆ ನಿರ್ವಹಣೆ ಮಾಡಲಾಗಿದೆ.

14 ಎಕರೆ ಭೂಮಿಯನ್ನು ಹಸನುಗೊಳಿಸಿ ನೈಸರ್ಗಿಕವಾಗಿ ಹರಿಯುತ್ತಿರುವ ಹಳ್ಳದ ನೀರನ್ನು ಕಿಂಡಿ ಅಣೆಕಟ್ಟು ರಚಿಸಿ ಪೈಪ್ಗಳ ಮೂಲಕ ಗದ್ದೆಗೆ ಹರಿಬಿಡಲಾಗಿದೆ. ಸುಮಾರು 8 ಎಕರೆ ಭೂಮಿಗೆ ಸಹಜ ನೀರು ಲಭ್ಯವಿದ್ದು, ಉಳಿದ ಭೂಮಿಗೆ ನೀರನ್ನು ಪಂಪ್ ಮುಖಾಂತರ ಹರಿಸಲಾಗುತ್ತಿದೆ. ಅಕಾಲಿಕ ಮಳೆಯಿಂದ ತುಂಬಿದ ತೆನೆಗೆ ಅಲ್ಪಸ್ವಲ್ಪ ಹಾನಿಯಾಗಿದೆ. ನೀರಿನ ರಭಸಕ್ಕೆ ಕೆಲವು ಪ್ರದೇಶದ ತೆನೆ ಕೊಚ್ಚಿಕೊಂಡು ಹೋಗಿದ್ದರೂ ಹೆಚ್ಚಿನ ತೊಂದರೆ ಆಗಿಲ್ಲ.

1962 ರಲ್ಲಿ ಪ್ರಾರಂಭವಾದ ಬೀಜೋತ್ಪಾದನಾ ಕೇಂದ್ರ ಸುತ್ತಮುತ್ತಲ ರೈತರಿಗೆ ಉಪಕಾರಿಯಾಗಿತ್ತು. ಇಲ್ಲಿಂದಲೇ ಸ್ಥಳೀಯ ರೈತರು ಬೀಜವನ್ನು ಖರೀದಿಸುತ್ತಿದ್ದರು. ಉತ್ಪಾದನೆ ಮತ್ತು ಆದಾಯ ಕೇಂದ್ರಕ್ಕೆ ಇತ್ತು. ಆದರೆ ಇತ್ತೀಚಿನ ಐದಾರು ವರ್ಷಗಳಿಂದ ಸ್ವಲ್ಪ ಹಿನ್ನಡೆಯಲ್ಲಿತ್ತು. ಕಳೆದ ಎಂಟು ತಿಂಗಳ ಹಿಂದೆ ರೇಷ್ಮೆ ಇಲಾಖೆ ಅಧಿಕಾರಿ ನಿಯೋಜನೆ ಮೇರೆಗೆ ಇಲ್ಲಿನ ಚುಕ್ಕಾಣಿ ಹಿಡಿದಾಗ ಭತ್ತ ಇಲ್ಲಿ ಈ ರೀತಿ ಬೆಳೆಯಬಹುದು ಎಂಬುದು ಯಾರಿಗೂ ಕಲ್ಪನೆ ಇರಲಿಲ್ಲ. ಅವರಿಗೂ ಭತ್ತದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ.

ಇದಕ್ಕೆ ಪೂರಕವಾಗಿ ಇವರಿಗೆ ನೆರವಿಗೆ ನಿಂತದ್ದು ಸಾಗರದ ರವೀಂದ್ರ ಭಟ್ ಅವರು. ಹಗಲು ರಾತ್ರಿ ಇಲ್ಲಿನ ಬೆಳೆಯನ್ನು ಕಾದ ಅವರು, ಸಂಪೂರ್ಣವಾಗಿ ಗದ್ದೆಯನ್ನೇ ತಮ್ಮ ಮನೆಯಾಗಿಸಿದ್ದಾರೆ.

ಇತರ ಬೆಳೆಗಾರರಿಗೆ ಇರುವಂತೆ ಇಲ್ಲೂ ನವಿಲು, ಹಂದಿಗಳ ಕಾಟವಿದೆ. ನವಿಲುಗಳು ಗುಂಪಾಗಿ ಭತ್ತದ ಗದ್ದೆಗೆ ಹಾರಿ ಬಂದಾಗ ಪಟಾಕಿ ಸಿಡಿಸಿ ಓಡಿಸುವುದು ಇವರ ಕೆಲಸ. ಕಾಡು ಹಂದಿಗಳ ಕಾಟದಿಂದ ರಾತ್ರಿ ಪೂರ ಗದ್ದೆಯಲ್ಲೇ ಓಡಾಡುವ ಭಟ್ಟರು, ಭತ್ತವನ್ನು ಸಂರಕ್ಷಿಸುವುದರಲ್ಲಿ ನಿರತರಾಗಿರುತ್ತಾರೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನಿರಂತರ ಭೇಟಿ, ಪ್ರೋತ್ಸಾಹದಿಂದ ಇಲ್ಲಿ ನಿಯೋಜನೆಗೊಂಡಿರುವ ರಾಜೇಂದ್ರ ಶೆಟ್ಟಿಗಾರ ಅವರು ಭತ್ತದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕೃಷಿ ಇಲ್ಲಿ ಅಧಿಕಾರಿಗಳಿಗೆ ಹಾಗೂ ರೈತರಿಗೆ ಖುಷಿ ನೀಡಿದೆ.

* ವಿಶೇಷ ಲೇಖನ : ವಾರ್ತಾ ಇಲಾಖೆ, ಉಡುಪಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s