Posts Tagged ‘ಉಡುಪಿ ಜಿಲ್ಲಾ ಪೊಲೀಸ್’

ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

ಉಡುಪಿ: ಉಡುಪಿ ನಗರದ ಕಾಡಬೆಟ್ಟು ಜೀವನ್ ನಗರದ ರಾಮಣ್ಣ ಶೆಟ್ಟಿ ಕಂಪೌಂಡಿನಲ್ಲಿರುವ ನಿವಾಸಿ ಶ್ರೀಮತಿ ಪ್ರಭಾಮಣಿ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಮೈಮೇಲಿದ್ದ ಚಿನ್ನಾಭರಣ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ಧೇಶದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಮನೆಯಲ್ಲಿದ್ದ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಇಲೆಕ್ಟ್ರಿಕ್ ವಯರ್ ಬಿಗಿದು ಕೊಲೆ ಮಾಡಲು ಯತ್ನಿಸಿ, ಪ್ರಭಾಮಣಿ ಬೊಬ್ಬಿಟ್ಟಾಗ, ಪರಿಸರವಾಸಿಗಳು ಬರುವುದನ್ನು ನೋಡಿ ಓಡಿ ಹೋಗಿ ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಕಿದಿಯೂರು ಗ್ರಾಮದ ಶಿವಗಿರಿ ನಿವಾಸಿ ಗಿರೀಶ್ ಕುಮಾರ್ ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ ಬಿ.ಅಮರಣ್ಣನವರ್ ಅವರು ಇಂದು 4 ವರ್ಷ ಕಠಿಣ ಸಜೆ ಮತ್ತು 2 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2013ರ ಜೂನ್ 28ರಂದು ಪೂರ್ವಾಹ್ನ 11 ಗಂಟೆಗೆ ಗಿರೀಶ್ ಕುಮಾರ್ ಈ ಕೊಲೆ ಯತ್ನ ಕೃತ್ಯ ಎಸಗಿದ್ದನು. ಇದರಿಂದಾಗಿ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಸಾದಾ ಸ್ವರೂಪದ ಗಾಯವಾಗಿತ್ತು. ಪ್ರಭಾಮಣಿಯವರ ಬೊಬ್ಬೆ ಕೇಳಿ ಮನೆಗೆ ಬಂದ ಮನೆ ಪಕ್ಕದ ಶ್ರೀಮತಿ ಸುಲೋಚನಾ ಹಾಗೂ ಶ್ರೀಮತಿ ಸುಧಾ ಸಾಕ್ಷಿದಾರರಾಗಿದ್ದರು. ಕೃತ್ಯದ ಬಗ್ಗೆ ಪ್ರಭಾಮಣಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪ್ಪಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ಇತ್ತೀಚೆಗೆ ನಿಗೂಢವಾಗಿ ಸಾವಿಗೀಡಾದ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಸಮೀಪದ ಆಲಂದೂರು ಕೋಲ್ಮಕ್ಕಿ ನಿವಾಸಿ ಶಂಕರ ಕೊಠಾರಿ-ಸಾವಿತ್ರಿ ಕೊಠಾರಿ ದಂಪತಿಗಳ ಏಕೈಕ ಪುತ್ರಿ ರತ್ನಾ ಕೊಠಾರಿ (16) ಮನೆಗೆ ಜುಲೈ 24ರಂದು ಶ್ರೀ ಕ್ಷೇತ್ರ ಕೇಮಾರುವಿನ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಸಂತೈಸಿದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರ ಜೊತೆ ಮಾತನಾಡಿದ ಮನೆಯವರು, ರತ್ನಾಳದು ಕೊಲೆ. ಆದರೆ ಕೊಲೆ ಮಾಡಿದವರು ಯಾರೆಂದು ಮಾತ್ರ ನಮಗೆ ತಿಳಿದಿಲ್ಲ. ರತ್ನಾ ಕಾಲೇಜು ಮುಗಿಸಿ ಮನೆಗೆ ಬಾರದೆ ನಿಗೂಢವಾಗಿ ಅದೇ ದಿನದಂದು ನಾವು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು ಎಂದು ದೂರಿಕೊಂಡರು.

ಕೇಮಾರು ಸ್ವಾಮೀಜಿಯವರ ಜೊತೆಗೆ ರತ್ನಾಳ ಮನೆಗೆ ಭೇಟಿ ನೀಡಿದ ಹೆಜಮಾಡಿಯ ದಯಾನಮದ ಹಾಗೂ ಹಿಂದೂ ಯುವ ಸೇನೆಯ ಪದಾಧಿಕಾರಿಗಳು ಪ್ರತ್ಯೇಕವಾಗಿ ಬಡ ಕುಟುಂಬಕ್ಕೆ ಆರ್ಥಿಕ ಸಹಾಯಯವನ್ನು ಸ್ವಾಮೀಜಿಯವರ ಮೂಲಕ ಹಸ್ತಾಂತರಿಸಿದರು. ವಿದ್ಯಾರ್ಥಿ ಸೇನೆಯ ಮೂಲಕ ಇನ್ನೊಮ್ಮೆ ಕುಟುಂಬಕ್ಕೆ ನಿಧಿ ಸಮಪರ್ಿಸುವುದಾಗಿ ಯುವಸೇನೆಯ ನಾಯಕರು ತಿಳಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಈಶ ವಿಠಲ ಸ್ವಾಮೀಜಿಯವರು, ರತ್ನಾಳ ಸಾವಿನಿಂದಾಗಿ ಅಪಾರವಾಗಿ ನೊಂದಿರುವ ಕುಟುಂಬಕ್ಕೆ ದುಖಃವನ್ನು ಸಹಿಸುವ ಶಕ್ತಿ ದೊರಕಲಿ, ರತ್ನಾಳ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು. ರತ್ನಾಳ ನಿಗೂಢ ಸಾವಿನ ಪ್ರಕರಣದಲ್ಲಿ ಆರೋಪಿಗಳು ಯಾರೇ ಆಗಿರಲಿ, ಅವರನ್ನು ಪೊಲೀಸರು ಶೀಘ್ರವಾಗಿ ಬಂಧಿಸಬೇಕು. ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದಲ್ಲಿ ರತ್ನಾಳ ಮನೆಯವರು ಹಾಗೂ ಹೋರಾಟ ನಿರತ ಸ್ಥಳೀಯ ಸಂಘ-ಸಂಸ್ಥೆಗಳ ಸಲಹೆ ಪಡೆದುಕೊಂಡು, ಅವರ ಸಹಕಾರದೊಂದಿಗೆ ಸಕ್ರಿಯವಾಗಿ ಹೋರಾಟ ರೂಪಿಸುವುದಾಗಿ ಸ್ಪಷ್ಟಪಡಿಸಿದರು.

ರತ್ನಾಳ ನಿಗೂಢಚ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿದರೆ ಯಾವುದೇ ಪ್ರಯೋಜನವಾಗದು, ಸಿಐಡಿಯವರು ಇದುವರೆಗೆ ನಡೆಸಿದ ತನಿಖೆಗಳಲ್ಲಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದು ಬಹಳ ಕಡಿಮೆಯೇ. ಹಾಗಾಗಿ ಪೊಲೀಸರೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಒತ್ತಡ ಹಾಕಬೇಕು ಎಂದು ಸ್ವಾಮೀಜಿ ಹೇಳಿದರು.

ಅತ್ಯಾಚಾರಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ಅಭಿಪ್ರಾಯಪಟ್ಟ ಸ್ವಾಮೀಜಿ, ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಸಮಾಜ ಗೌರವಿಸುವಂತಾಗಬಾರದು ಎಂದು ಕಳಕಳಿ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತರಾದ ರವಿ ಶೆಟ್ಟಿ ಬ್ರಹ್ಮಾವರ, ವಸಮತ ಗಿಳಿಯಾರ್, ಉದ್ಯಮಿ ದಯಾನಂದ ಹೆಜಮಾಡಿ, ಹಿಂದೂ ಯುವ ಸೇನೆಯ ಶಿವಕುಮಾರ್ ಕರ್ಜೆ, ಸಚಿನ್ ಮೊದಲಾದವರು ಕೇಮಾರು ಸ್ವಾಮೀಜಿಯವರ ಜೊತೆಗಿದ್ದರು.

ಉಡುಪಿ: ಕುದಿ ಗ್ರಾಮದ ಸರ್ವೆ ನಂಬ್ರ 85/2ರ ಹತ್ತು ಸೆಂಟ್ಸ್ ಸ್ಥಳವನ್ನು ಕಬಳಿಸುವ ದುರುದ್ಧೇಶದಿಂದ ಇಲ್ಲಿ ವಾಸವಾಗಿರುವ ವೇದವ್ಯಾಸ ಅಡಿಗ ಎಂಬವರ ಬಡ ಬ್ರಾಹ್ಮಣ ಕುಟುಂಬಕ್ಕೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಹುನ್ನಾರದೊಂದಿಗೆ ಸ್ಥಳೀಯ
ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಫಲಭರಿತ ಮರಗಳನ್ನು ಕಡಿದು ನಾಶಪಡಿಸಿದ್ದು, ಇದರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮಕೈಗೊಳ್ಳದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ದೇಜಪ್ಪ ಹಿರಿಯಡ್ಕ ಮುನ್ನೆಚ್ಚರಿಕೆ ನೀಡಿದ್ದಾರೆ.

ದೇವಸ್ಥಾನದ ಮುಖ್ಯಸ್ಥರಾದ ಕುದಿ ವಸಂತ ಶೆಟ್ಟಿ, ಅರ್ಚಕರಾದ ಗುರುರಾಜ ಭಟ್ ಹಾಗೂ ಇತರರು ಅಡಿಗರವರ ಸ್ಥಳಕ್ಕೆ ಪದೇ ಪದೇ ಅಕ್ರಮ ಪ್ರವೇಶ ಮಾಡುವುದು, ಬಲವಂತವಾಗಿಯೇ ಲಕ್ಷಾಂತರ ರು. ಬೆಲೆ ಬಾಳುವ ಬೋಗಿ ಮರ, ಫಲಭರಿತ ತೆಂಗಿನ ಮರಗಳನ್ನು ಕಡಿದಿದ್ದಾರೆ. ಸರಕಾರಿ ಜಾಗದಲ್ಲಿರುವ ಕೊಳವೆಬಾವಿಯನ್ನೂ ನಾಶಪಡಿಸಿದ್ದಾರೆ. ಆಕ್ಷೇಪಿಸಿದಾಗ ಜಾಗ ಬಿಟ್ಟು ತೆರಳುವಂತೆಯೂ, ಹೋಗದಿದ್ದರೆ ಬಿಡುವುದಿಲ್ಲವೆಂದು ಜೀವ ಬೆದರಿಕೆ
ಹಾಕುತ್ತಿದ್ದಾರೆ. ಇಂಥ ಯಾವುದೇ ದೌರ್ಜನ್ಯ ಮತ್ತು ಅಕ್ರಮಗಳ ವಿರುದ್ಧವೂ ಪೊಲೀಸ್ ಇಲಾಖೆಯಾಗಲಿ, ಅರಣ್ಯ ಇಲಾಖೆಯಾಗಲಿ, ಕಂದಾಯ ಇಲಾಖೆಯಾಗಲಿ ಇದುವರೆಗೂ ಸೂಕ್ತ ಕ್ರಮ ಕೈಗೊಳ್ಳದೆ ಪಕ್ಷಪಾತವೆಸಗಿದೆ ಎಂದು ದೇಜಪ್ಪ ಹಿರಿಯಡ್ಕ ಆರೋಪಿಸಿದ್ದಾರೆ.

ವೇದವ್ಯಾಸ ಅಡಿಗ ಕುಟುಂಬ ಹತ್ತು ಸೆಂಟ್ಸ್ ಸ್ಥಳದಲ್ಲಿ ಕಾನೂನು ಬದ್ಧವಾಗಿಯೇ ವಾಸ್ತವ್ಯವಿದ್ದಾರೆ. ಕಳೆದ 15ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ವಾಸ್ತವ್ಯವಿರುವ ಬಡ ಕುಟುಂಬದ ಸ್ಥಿರಾಸ್ತಿಯನ್ನು ಕಬಳಿಸುವ ಉದ್ಧೇಶದಿಂದ ಇದೀ ಈ ಜಾಗ ದೇವಸ್ಥಾನಕ್ಕೆ ಸೇರಿದ್ದು ಎಂದು ವಾದಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈ ಜಾಗ ದೇವಸ್ಥಾನಕ್ಕೆ ಸೇರಿದ್ದಲ್ಲ. ಸರಕಾರದಿಂದ ಅಡಿಗರ ಕಕುಟುಂಬಕ್ಕೆ ಕಾನೂನುಬದ್ಧವಾಗಿ ಲಭಿಸಿದ ಭೂಮಿ ಎಂದು ದಸಂಸ ಮುಖಂಡ ದೇಜಪ್ಪ ಸ್ಪಷ್ಟಪಡಿಸಿದ್ದಾರೆ.

ಬಡ ಕುಟುಂಬದ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ತಡಮಡದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿರುವ ದಸಂಸ ಮುಖಂಡ ದೇಜಪ್ಪ ಅವರು, ವೇದವ್ಯಾಸ ಅಡಿಗ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದೂ ಮನವಿ
ಮಾಡಿದ್ದಾರೆ.

ಉಡುಪಿ: ತಮ್ಮನ್ನು ತಾವೇ ಪೊಲೀಸರೆಂದು ಗುರುತಿಸಿಕೊಂಡ ಮೂವರು ಅಪರಿಚಿತ ಗಂಡಸರು ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಬೆದರಿಸಿ, ಸಹಾಯ ಮಾಡುವವರಂತೆ ನಟಿಸಿ 1.10 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಮ್ಮು ಅಪಹರಿಸಿದ ಪ್ರಕರಣ ಜೂನ್ 6 ರಂದು ಬೆಳಗ್ಗೆ ಗಂಟೆ 11.30 ಕ್ಕೆ ಉಡುಪಿ ರಥಬೀದಿ ಬಳಿಯ ವುಡ್ಲ್ಯಾಂಡ್ ಹೊಟೇಲ್ ಪಕ್ಕ ನಡೆದಿದೆ.
ಆಂದ್ರಪ್ರದೇಶ ರಾಜ್ಯದ ತಿರುಪತಿ ನಿವಾಸಿ ಭಾರತಿ, ಪತಿ ನಾಗರಮಠ ನಾಗರಾಜ್ ಭಟ್ ಜೊತೆ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಗವಹಿಸಲು ಕೋಟೇಶ್ವರಕ್ಕೆ ಆಗಮಿಸಿದ್ದರು. ಹೀಗೆ ಬಂದವರು ಉಡುಪಿ ಶ್ರೀಕೃಷ್ಣ ದೇವಸ್ಥಾನಕ್ಕೆ ಬಂದಿದ್ದರು. ಇಲ್ಲಿಂದ
ಕೋಟೇಶ್ವರದಲ್ಲಿರುವ ಸಂಬಂಧಿಕರ ಮನೆಗೆ ಹೋಗುವ ಉದ್ದೇಶದಿಂದ ರಥಬೀದಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ, ವುಡ್ ಲ್ಯಾಂಡ್ ಹೊಟೇಲ್ ಪಕ್ಕ ದಿಢೀರನೇ ಪ್ರತ್ಯಕ್ಷರಾದ ಮೂವರು ಅಪರಿಚಿತರು, ‘ನಾವು ಪೊಲೀಸರು, ಇಲ್ಲಿ ಇದೀಗ ಕಳ್ಳತನ ಬಹಳ ಜೋರಾಗಿದೆ.
ಕುತ್ತಿಗೆಯಲ್ಲಿರುವ ಚಿನ್ನದ ಸರಗಳನ್ನು ತೆಗೆದು ಬ್ಯಾಗ್ನಲ್ಲಿ ಹಾಕುವುದು ಒಳ್ಳೆಯದು’ ಎಂದು ಬೆದರಿಸಿ ಉಚಿತ ಸಲಹೆ ನೀಡಿದರು ಎನ್ನಲಾಗಿದೆ.
ಕೂಡಲೇ ಭಾರತಿಯವರು ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು ಒಂದೂವರೆ ಪವನ್ ತೂಕದ ಒಂದು ಎಳೆಯ ಗುಂಡುಗಳಿರುವ ಚಿನ್ನದ ಸರವನ್ನು ಕುತ್ತಿಗೆಯಿಮದ ತೆಗೆದು ಬ್ಯಾಗ್ ಗೆ ಹಾಕಿದರು. ಬ್ಯಾಗ್ ಗೆ ಹಾಕುವ ಸಮಯದಲ್ಲಿ ಮೂವರ ಪೈಕಿ ಓರ್ವ ವ್ಯಕ್ತಿ ಸಹಾಯ ಮಾಡಿದನೆನ್ನಲಾಗಿದೆ.
ಭಾರತಿ ಸರ್ವಿಸ್ ಬಸ್ ನಿಲ್ದಾಣಕ್ಕೆ ತಲುಪಿದಾಗ ಬ್ಯಾಗ್ನ್ನು ಪರಿಶೀಲಿಸಿದರು. ಆಗ ಚಿನ್ನ ಇರಲಿಲ್ಲ. ಕೂಡಲೇ ಮೊಸ ಹೋದುದು ಅರಿವಾಗಿ ಸ್ಥಳದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಹಾಗೂ ಭಾರತಿಯವರು ಅಪರಿಚಿತ ಮೋಸಗಾರರಿಗಾಗಿ
ಹುಡುಕಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಭಾರತಿ ನೀಡಿದ ದೂರಿನ ಪ್ರಕಾರ ಉಡುಪಿ ನಗರ ಠಾಣೆಯ ಪೊಲೀಸರು ಅಪರಿಚಿತರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.