Posts Tagged ‘ಎನ್ ಕೌಂಟರ್’

ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.