Posts Tagged ‘ಕರ್ನಾಟಕ ಸರಕಾರ’

* http://www.udupibits.in * ಶ್ರೀರಾಮ ದಿವಾಣ.

# ತಾನೋರ್ವ ‘ಲಿಂಗತ್ವ ಅಲ್ಪಸಂಖ್ಯಾತ’ ಸಮುದಾಯಕ್ಕೆ ಸೇರಿದವನೆಂದು ಬಹಿರಂಗಗೊಳಿಸುವುದರ ಜೊತೆಗೆ, ಎಚ್.ಐ.ವಿ./ಏಡ್ಸ್ ಬಾಧಿತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಕಳೆದ 12 ವರ್ಷಗಳಿಂದ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ನಿವಾಸಿ ಸಂಜೀವ ಪೂಜಾರಿ ಅವರು, ನಿರಂತರ ಪ್ರಯತ್ನದ ಫಲವಾಗಿ ಕೊನೆಗೂ ಕರ್ನಾಟಕ ರಾಜ್ಯ ಸರಕಾರ ಕೊಡಮಾಡುವ ‘ಮೈತ್ರಿ ಯೋಜನೆ’ಯ ಫಲಾನುಭವಿಯಾಗಿದ್ದಾರೆ. ತನ್ನಂತಿರುವ ಇತರರಿಗೂ ಈ ಸಂದರ್ಭದಲ್ಲಿ ‘ಬನ್ನಿ, ನೀವೂ ಮೈತ್ರಿ ಯೋಜನೆಯ ಫಲಾನುಭವಿಗಳಾಗಿ..’ ಎಂದು ಕರೆ ಕೊಟ್ಟಿದ್ದಾರೆ.

2013-14ರ ಅಯವ್ಯಯ ಭಾಷಣದಲ್ಲಿ ಲಿಂಗತ್ವ ಅಲ್ಪಸಂಕ್ಯಾತರಿಗಾಗಿ ರಾಜ್ಯ ಸರಕಾರ ಮೈತ್ರಿ ಯೋಜನೆಯನ್ನು ಘೋಷಿಸಿತ್ತು. ಮೊದಲ ವರ್ಷ, ಈ ಯೋಜನೆಯ ಫಲಾನುಭವಿಗಳಾಗಲು 40ರಿಂದ 65 ವರ್ಷದೊಳಗಿನವರಾಗಿರಬೇಕು ಎಂದಿತ್ತು. ಈ ವರ್ಷ ವಯಸ್ಸಿನ ಮಿತಿಯನ್ನು 40ರಿಂದ 25ಕ್ಕೆ ಇಳಿಸಲಾಗಿರುವುದು ಒಂದು ಬದಲಾವಣೆ. ಉಳಿದಂತೆ ಈ ಯೋಜನೆಯ ಫಲಾನುಭವಿಗಳಾಗಲು ಹಲವಾರು ಅರ್ಹತೆ, ಮಾನದಂಡಗಳಿದ್ದು, ಇವುಗಳನ್ನೆಲ್ಲ ಪೂರೈಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯಬೇಕಾದರೆ, ಮಾನದಂಡಗಳನ್ನು ಸರಕಾರ ಸಡಿಲುಸುವುದು ಅನಿವಾರ್ಯವಾಗಿದೆ.

ಕೋಥಿ, ಮಂಗಳಮುಖಿ, ಜೋಗಪ್ಪಂದಿರು, ಹಿಜ್ರಾ, ಎಫ್.ಟು.ಎಂ. ಮೊದಲಾದವರು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಬರುತ್ತಿದ್ದು, ಇವರಿಗೆ ತಿಂಗಳೊಂದರ 500 ರು. ಮಾಸಿಕ ಮಾಸಾಶನ ನೀಡುವ ಯೋಜನೆಯೇ ‘ಮೈತ್ರಿ ಯೋಜನೆ’ಯಾಗಿದೆ. ಕಳೆದ ವರ್ಷ ಈ ಯೋಜನೆಯಲ್ಲಿ ಉಡುಪಿ ಜಿಲ್ಲೆಯಿಂದ ಒಬ್ಬರೇ ಒಬ್ಬರು ಫಲಾನುಭವಿ ಇರಲಿಲ್ಲ. ಈ ವರ್ಷ ಆ ಕೊರತೆಯನ್ನು ಸಂಜೀವ ವಂಡ್ಸೆ ಅವರು ನೀಗಿಸಿದ್ದಾರೆ.

2013ರ ಜುಲೈ 29ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುತ್ತೋಲೆಯಂತೆ, 2013ರ ಆಗಸ್ಟ್ ಒಂದರಂದು ಮೈತ್ರಿ ಯೋಜನೆ ರಾಜ್ಯದಲ್ಲಿ ಜ್ಯಾರಿಯಾಗಿದೆ. ಇವುಗಳ ಮಾನದಂಡಗಳನ್ನು ಪೂರೈಸುವುದೇ ಬಹಳ ಸವಾಲಿನ ಕೆಲಸವಾದುದರಿಂದ ಇರಬಹುದು, ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯಿಂದ ಈ ಯೋಜನೆಗೆ ಒಬ್ಬರೇ ಒಬ್ಬರು ಫಲಾನುಭವಿ ಇರಲಿಲ್ಲ.

ತಾನೋರ್ವ ಲಿಂಗತ್ವ ಅಲ್ಪಸಂಖ್ಯಾತ ಎನ್ನುವುದನ್ನು ಸ್ವಯಂ ಸ್ಪೂರ್ತಿಯಿಂದ ಘೊಷಿಸಿಕೊಂಡು, ಹೀಗೆ ಘೋಷಿಸಿಕೊಂಡ ಕಾರಣಕ್ಕೆ ಸಾಮಾಜಿಕವಾಗಿ ಎದುರಿಸಬೇಕಾಗಿ ಬರುವ ಪರಿಣಾಮಗಳನ್ನು ಸವಾಲಾಗಿ ಸ್ವೀಕರಿಸಿಕೊಂಡು, ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ನಿಂತು ದಿಟ್ಟತನದಿಂದಲೇ ಮುಂದುವರಿಯುತ್ತಿದ್ದ ಸಂಜೀವ ವಂಡ್ಸೆ ಅವರು ಮಾತ್ರ ನಿರಂತರ ಶ್ರಮದ ಬಳಿಕ ಇದೀಗ ಮೈತ್ರಿ ಯೋಜನೆಯ ಫಲಾನುಭವಿಯಾಗಲು ಸಾಧ್ಯವಾಗಿದೆ.

ಮಂಗಳೂರಿನ ದಿ.ವೀಣಾಧರಿ ಜೊತೆಗೆ ಕೆಲಸ ಮಾಡಿರುವ ಸಂಜೀವ ವಂಡ್ಸೆ ಅವರು, ಉಡುಪಿಯ ಜೀವನ ಸಂಘರ್ಷ, ಬೇಳೂರಿನ ಸ್ಪೂರ್ತಿಧಾಮ, ಉಡುಪಿಯ ದೀಪಜ್ಯೋತಿ, ಗಾರ್ಡ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್, ಕೆ.ಎನ್.ಪಿ. ಪ್ಲಸ್, ಬೆಂಗಳೂರಿನ ಸಂಗಮ, ಕರ್ನಾಟಕ ಎಚ್.ಐ.ವಿ. ಸೋಂಕಿತರ ಸಂಘಟನೆ, ಕರ್ನಾಟಕ ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆ, ಬೆಂಗಳೂರಿನ ಸಾರಥ್ಯ ಮೊದಲಾದ ಸರಕಾರೇತರ ಸ್ವಯಂಸೇವಾ ಸಂಸ್ಥೆಯಲ್ಲಿ ಎಚ್.ಐ.ವಿ./ಏಡ್ಸ್ ಬಾಧಿತರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದಾರೆ.

ಪ್ರಸ್ತುತ, ಉಡುಪಿಯ ಆಶ್ರಯ ಸಮುದಾಯ ಸಂಘಟನೆಯಲ್ಲಿ ಆಪ್ತ ಸಮಾಲೋಚಕರಾಗಿರುವ ಸಂಜೀವ ವಂಡ್ಸೆ ಅವರು, ಎಚ್.ಐ.ವಿ./ಏಡ್ಸ್ ಬಾಧಿತರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ, ಅವರ ಹಕ್ಕಿನ ರಕ್ಷಣೆಗಾಗಿ ಪಣ ತೊಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.

ಮೈತ್ರಿ ಯೋಜನೆಯ ಉಡುಪಿ ಜಿಲ್ಲೆಯ ಮೊದಲ ಫಲಾನುಭವಿ ತಾನು ಎನ್ನುವುದನ್ನು ಸ್ವತಹಾ ಹೆಮ್ಮೆಯಿಂದ ಘೋಷಿಸಿಕೊಳ್ಳುತ್ತಿರುವ ಸಂಜೀವ ಅವರು ತನ್ನಂತಿರುವ ಇತರರಿಗೂ, ಈ ಯೋಜನೆಯ ಫಲಾನುಭವಿಯಾಗುವಂತೆ ಕೋರಿದ್ದಾರೆ.

ಈಗಾಗಲೇ ರಾಜ್ಯದಲ್ಲಿ 250ರಿಂದ 300 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಮೈತ್ರಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಸಾಕಷ್ಟು ಮಂದಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿದ್ದು, ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತನ್ನನ್ನು (ಮೊಬೈಲ್ : 9845839697) ಅಥವಾ ಆಶ್ರಯ ಸಮುದಾಯ ಸಂಘಟನೆ (ದೂರವಾಣಿ : 0820-2521386) ನ್ನು ಸಂಪರ್ಕಿಸಬಹುದು ಎಂದು ಸಂಜೀವ ವಿನಂತಿಸಿದ್ದಾರೆ.

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ­ಡಳಿತ ವಿವಿಧ ಕಡೆಗಳಲ್ಲಿ ಅ.25ರಂದು ಒತ್ತುವರಿ ತೆರವು ಕಾರ್ಯಾ­ಚರಣೆ ನಡೆಸಿ 77.31 ಎಕರೆ ಒತ್ತುವರಿ ತೆರವು ಮಾಡಿದ್ದು, ವಶಪಡಿಸಿಕೊಂಡಿ­ರುವ ಭೂಮಿಯ ಮಾರುಕಟ್ಟೆ ಮೌಲ್ಯ 350 ಕೋಟಿ ರು. ಎಂದು
ಅಂದಾಜಿಸಲಾಗಿದೆ.

ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಯಲಹಂಕ ಹೋಬಳಿಯ ಬೆಳ್ಳಹಳ್ಳಿ ಗ್ರಾಮದ ಸರ್ಕಾರಿ ಬಂಡೆ. ಈ ಜಾಗದ ವಿಸ್ತೀರ್ಣ 32 ಎಕರೆ. ಇಲ್ಲಿ ಮುತ್ತುರಾಜ್ ಮತ್ತಿತ­ರರು ಕಳೆದ 20 ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಇತ್ತೀಚೆಗೆ ಈ ಗಣಿಗಳ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಸ್ಥಳೀಯ ನಿವಾಸಿಗಳು ಕೂಡಾ ಈ ಗಣಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿ 16 ಕಲ್ಲು ಗಣಿಗಳಿವೆ.

ಪರವಾನಗಿ ರದ್ದುಪಡಿಸಿದ ಬಳಿಕವೂ ಗಣಿಗಾರಿಕೆ ಅವ್ಯವಾಹತವಾಗಿ ಸಾಗಿತ್ತು. ಅಲ್ಲದೆ ಇಲ್ಲಿ 16 ಗುಡಿಸಲು ಸೇರಿದಂತೆ ಸುಮಾರು 50 ಮನೆಗಳನ್ನು ನಿರ್ಮಿಸ­ಲಾ­ಗಿತ್ತು. ಜಿಲ್ಲಾಡಳಿತ ನೋಟಿಸ್‌ ನೀಡಿದ್ದರೂ ಗಣಿಗಾರಿಕೆ ನಿಂತಿರಲಿಲ್ಲ. ಈ ಕಾರಣದಿಂದ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ಅ.25ರಂದು ಕಾರ್ಯಾ­ಚರಣೆ ನಡೆಸಿ ಈ ಗುಡಿಸಲುಗಳನ್ನು ನೆಲಸಮ ಮಾಡಲಾಯಿತು. ಇಲ್ಲಿದ್ದ ದೇವಸ್ಥಾನವನ್ನು ಹಾಗೆಯೇ ಬಿಡಲಾ­ಗಿದೆ. ವಶಪಡಿಸಿಕೊಂಡ ಜಾಗದ ಮೌಲ್ಯ 100 ಕೋಟಿ ರು.

‘ಜಮೀನನ್ನು ಕಸ ವಿಲೇವಾರಿಗಾಗಿ ಬಿಬಿಎಂಪಿಯ ಯಲಹಂಕ ವಲಯದ ಅಧಿಕಾರಿಗಳು ಕೋರಿದ್ದು, ರಾಜ್ಯ ಸರ್ಕಾರದ ಅನುಮತಿ ಪಡೆದು ಜಮೀನನ್ನು ಹಸ್ತಾಂತರ ಮಾಡಲಾಗು­ವುದು’ ಎಂದು ತಹಶೀಲ್ದಾರ್‌ ಬಾಳಪ್ಪ ಹಂದಿಹುಂದ್‌ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಹೆಸರಘಟ್ಟ ಹೋಬಳಿಯ ಕೊಂಡ­ಶೆಟ್ಟಿ­ಹಳ್ಳಿ ಗ್ರಾಮದಲ್ಲಿನ 10 ಎಕರೆ 3 ಗುಂಟೆ ಜಮೀನಿನ ಒತ್ತುವರಿಯನ್ನು ತೆರವುಗೊ­ಳಿ­ಸಲಾಗಿದೆ. ಇದು ಸರ್ಕಾರಿ ಗೋಮಾಳ ಜಮೀನು. ಹಿಂದೆ ಈ ಜಾಗವನ್ನು ಉಮ್ರಾ ಡೆವಲಪರ್ಸ್‌ ಸಂಸ್ಥೆಗೆ ಹರಾಜು ಮೂಲಕ ನೀಡಲಾ­ಗಿತ್ತು. ಈಗ ಇಲ್ಲಿನ ಕೃಷಿ ಒತ್ತುವರಿ­ಯನ್ನು ತೆರವು ಮಾಡಿ ಬಿಡ್‌ದಾರರಿಗೆ ಹಸ್ತಾಂತರಿಸಲಾಗಿದೆ.

ಇದೇ ಹೋಬಳಿಯ ಮಧುಗಿರಿಹಳ್ಳಿ ಗ್ರಾಮದಲ್ಲಿ 3 ಎಕರೆ 17 ಗುಂಟೆ ಖರಾಬು ಜಮೀನು ಕೆರೆ ಮುಳುಗಡೆ ಪ್ರದೇಶ. ಇದನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅದ್ದೆ ವಿಶ್ವನಾಥಪುರ ಗ್ರಾಮದಲ್ಲಿ 2 ಎಕರೆ 13 ಗುಂಟೆ ಜಮೀನು ಸರ್ಕಾರಿ ಗುಂಡು ತೋಪು ಆಗಿದ್ದು, ಇದರ ಒತ್ತುವರಿಯನ್ನೂ ತೆರವು­ಗೊಳಿಸಲಾಗಿದೆ

ಮಾದಪ್ಪನಹಳ್ಳಿ ಗ್ರಾಮದಲ್ಲಿ 4 ಎಕರೆ 23 ಗುಂಟೆ ಜಾಗದ ಒತ್ತುವರಿ ತೆರವು ಮಾಡಲಾಗಿದೆ. ಮಾವಳ್ಳಿಪುರ ಗ್ರಾಮದಲ್ಲಿ 19 ಗುಂಟೆ ಸರಕಾರಿ ಗುಂಡು ತೋಪು ಜಾಗದ ಒತ್ತುವರಿ ತೆರವು ಮಾಡಲಾಗಿದೆ. ಈ ಮೂಲಕ ಉತ್ತರ (ಹೆಚ್ಚುವರಿ) ತಾಲ್ಲೂಕಿನಲ್ಲಿ 52 ಎಕರೆ 35 ಗುಂಟೆ ಜಾಗದ ಒತ್ತುವರಿ ತೆರವುಗೊಳಿಸ­ಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 120 ಕೋಟಿ ರು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದಲ್ಲಿ 10 ಎಕರೆ ಗೋಮಾಳ ಜಾಗವನ್ನು ಕೋಣನಕುಂಟೆ ಎಜುಕೇಷನ್ ಟ್ರಸ್ಟ್‌ನ­ವ­ರಿಗೆ ಈ ಹಿಂದೆ ಲೀಸ್‌ಗೆ ನೀಡ­ಲಾಗಿತ್ತು. ಕಳೆದ ವರ್ಷ ಲೀಸ್‌ ರದ್ದು ಮಾಡಲಾಗಿತ್ತು. ಈ ಜಾಗದಲ್ಲಿ ಶೆಡ್‌ ನಿರ್ಮಿಸಲಾಗಿತ್ತು. ಇದನ್ನು ಈಗ ತೆರವು ಮಾಡಲಾಗಿದೆ. ಬೇಗೂರು ಹೋಬ­ಳಿಯ ಕಮ್ಮನಹಳ್ಳಿ ಗ್ರಾಮದಲ್ಲಿ ಕೆರೆಯ 1- ಎಕರೆ 25 ಗಂಟೆ ಜಾಗವನ್ನು ನಾಲ್ವರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಈ ಜಾಗಗಳ ಒತ್ತುವರಿ ತೆರವು ಮಾಡಿ 38 ಕೋಟಿ ರು. ಮೌಲ್ಯದ ಜಾಗವನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ ವಡೇರಹಳ್ಳಿ ಗ್ರಾಮದಲ್ಲಿ 1-ಎಕರೆ 17 ಗುಂಟೆ ವಿಸ್ತೀರ್ಣದ ಗೋಮಾಳದ ಒತ್ತುವರಿ ತೆರವುಗೊಳಿಸಿ 2 ಕೋಟಿ ರು. ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಸೊಣ್ಣೇನಹಳ್ಳಿ ಗ್ರಾಮದಲ್ಲಿ 10 ಗುಂಟೆ ಜಮೀನು ಒತ್ತುವರಿ ಮಾಡಿ­ಕೊಂಡು ಕೃಷಿ ಮಾಡಲಾಗುತ್ತಿತ್ತು. ಈ ಒತ್ತುವರಿಯನ್ನು ತಹಶೀಲ್ದಾರ್‌ ಡಾ.ಬಿ.ಆರ್‌.­ಹರೀಶ್‌ ನಾಯ್ಕ್‌ ನೇತೃತ್ವ­ದಲ್ಲಿ ತೆರವು ಮಾಡಿ 10 ಕೋಟಿ ರು. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.

ತೆರವುಗೊಳಿಸಿದ ಜಾಗವೇ ಮತ್ತೆ ಒತ್ತುವರಿ!

ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಕೊಮ್ಮಸಂದ್ರ ಗ್ರಾಮದಲ್ಲಿ 1 ಎಕರೆ 5 ಗುಂಟೆ ಮತ್ತು 9 ಎಕರೆ 35 ಗುಂಟೆ ಗುಂಡು­ತೋಪು ಜಮೀನಿನ ಒತ್ತುವರಿ ತೆರವು ಮಾಡಲಾಯಿತು. ಈ ಜಾಗದಲ್ಲಿ ಕೇರಳ ಮೂಲದ ರಾಜೇಂದ್ರ ಎಂಬವರು ಒತ್ತುವರಿ ಮಾಡಿ­ಕೊಂಡು 116 ಸೈಟ್‌ಗಳನ್ನು ನಿರ್ಮಿಸಿದ್ದರು. ಪಕ್ಕದ ಸರ್ವೆ ಸಂಖ್ಯೆಯ ಹೆಸರಿನಲ್ಲಿ ಈ ಸೈಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವು ಸೈಟ್‌ಗಳನ್ನು ಈಗಾಗಲೇ ಮಾರಾಟ ಆಗಿವೆ. ಪ್ರತಿ ಚದರ ಅಡಿಗೆ 1600 ರು.ಗಳಿಂದ 1800 ರು.ಗಳವರೆಗೆ ದರ ನಿಗದಿ ಮಾಡಿದ್ದರು. ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್‌ ನೋಟಿಸ್‌ ನೀಡಿದ್ದರು. ಆದರೆ, ಒತ್ತುವರಿ ತೆರವು ಮಾಡಿರಲಿಲ್ಲ. ಈಗ ವಶಪಡಿಸಿಕೊಂಡಿರುವ ಜಾಗದ ಮಾರುಕಟ್ಟೆ ಮೌಲ್ಯ 25 ಕೋಟಿ ರು.

‘ಕೆಲವು ವರ್ಷಗಳ ಹಿಂದೆಯೂ ಇಲ್ಲಿನ ಒತ್ತುವರಿ ತೆರವು ಮಾಡಲಾ­ಗಿತ್ತು. ಅಧಿ­ಕಾರಿಗಳು ಬದಲಾದ ಬಳಿಕ ರಾಜೇಂದ್ರ ಅವರು ಮತ್ತೆ ಒತ್ತುವರಿ ಮಾಡಿ­ಕೊಂಡು ತಡೆಗೋಡೆ
ನಿರ್ಮಿಸಿ­ದ್ದರು. ಹೀಗಾಗಿ ಕೆಲವು ಸಮಯ ಒತ್ತುವರಿ ಬಹಿ­ರಂಗ ಆಗಿರಲಿಲ್ಲ. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ತಹಶೀಲ್ದಾರ್‌ ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

450 ಎಕರೆ ತೆರವು

ಕಳೆದ ನಾಲ್ಕು ತಿಂಗಳಲ್ಲಿ ನಗರ ಜಿಲ್ಲಾಡಳಿತ 450 ಎಕರೆ ಒತ್ತುವರಿ ತೆರವು ಮಾಡಿದೆ. ‘ಜುಲೈನಲ್ಲಿ 25 ಎಕರೆ, ಆಗಸ್ಟ್‌ನಲ್ಲಿ 34 ಎಕರೆ, ಸೆಪ್ಟೆಂಬರ್‌ನಲ್ಲಿ 109 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಅಕ್ಟೋಬರ್‌ ತಿಂಗಳಿನಲ್ಲೇ 260 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಮುಂದಿನ ವಾರ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವ್ಯಾಪಕ ಪ್ರಮಾಣ­ದಲ್ಲಿ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌
ಸ್ಪಷ್ಟಪಡಿಸಿದ್ದಾರೆ.

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

# ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅತ್ಯಾಚಾರ ಅಸ್ತ್ರವಾಗಿದೆ, ಆಗುತ್ತಿದೆ. ದೇಶಗಳ ನಡುವೆ ಯುದ್ಧ ನಡೆಯುವಾಗಲೂ ಒಂದು ದೇಶದ ಸೈನಿಕರು (ಎಲ್ಲರೂ ಅಲ್ಲ) ತನ್ನ ಶತ್ರು ದೇಶವೆಂದು ತಿಳಿದುಕೊಂಡಿರುವ ದೇಶದ ಮಹಿಳೆಯರ ಮೇಲೆ ಅತ್ಯಾಚಾರ ಎಂಬ ಅಮಾನವೀಯ ಅಸ್ತ್ರವನ್ನು ಪ್ರಯೋಗ ಮಾಡುತ್ತಾರೆ. ವಿವಿಧ ಹೆಸರುಗಳಲ್ಲಿ ಕರೆಸಿಕೊಳ್ಳುತ್ತಿರುವ ಸೈನಿಕರು ದೇಶದೊಳಗೂ, ಯಾರ ವಿರುದ್ಧ ತಮ್ಮನ್ನು ಕಳುಹಿಸಲಾಗಿದೆಯೋ ಅಂಥವರ ವಿರುದ್ಧ ಮತ್ತು ತಾವು ಲಂಗರು ಹಾಕಿಕೊಂಡಿರುವ ಸ್ಥಳದಲ್ಲಿನ ಬಡ ಮಹಿಳೆಯರ ಮೇಲೆಯೂ
ಅತ್ಯಾಚಾರವೆಸಗುತ್ತಾರೆ.

ಶ್ರೀಲಂಕಾದಲ್ಲಿ ಅಲ್ಲಿನ ಸರಕಾರಕ್ಕೂ ಎಲ್.ಟಿ.ಟಿ.ಇ.ಗೂ ದೀರ್ಘ ಕಾಲದಿಂದ ಯುದ್ಧ ನಡೆಯುತ್ತಿತ್ತು. ಈ ಯುದ್ಧದಲ್ಲಿ ಶ್ರೀಲಂಕಾ ಸರಕಾರವನ್ನು ಬೆಂಬಲಿಸಿ, ಆ ದೇಶದ ಸೈನಿಕರೊಂದಿಗೆ ಸಹಕರಿಸಿ ತಮಿಳು ಹುಲಿಗಳನ್ನು ನಿರ್ನಾಮ ಮಾಡುವ ಉದ್ಧೇಶದೊಂದಿಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಭಾರತದ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದ್ದರು. ಶ್ರೀಲಂಕಾಕ್ಕೆ ಹೋದ ಭಾರತೀಯ ಸೈನಿಕರಲ್ಲಿ ಯಾರೋ ಕೆಲವು ಮಂದಿ ಲಜ್ಜೆಗೆಟ್ಟ ಸೈನಿಕರು ಶಾಂತಿಪಾಲನೆಯ ಹೆಸರಿನಲ್ಲಿ ತಮಿಳು ಮಹಿಳೆಯರ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ್ದರಂತೆ.

ಎಲ್ಟಿಟಿಇಯ ಶತ್ರುವಾದ ಶ್ರೀಲಂಕಾ ಸರಕಾರವನ್ನು ಬೆಂಬಲಿಸಿ ಭಾರತದ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟ ಕಾರಣಕ್ಕೆ, ಪ್ರಧಾನಿ ರಾಜೀವ್ ಗಾಂಧಿಯವರನ್ನು ಬಳಿಕ ಎಲ್ಟಿಟಿಇ ತನ್ನ ಆತ್ಮಹತ್ಯಾ ದಳವನ್ನು ಉಪಯೋಗಿಸಿ ಹತ್ಯೆಗೈದುದು ಹಳೆಯ ವಿಷಯ. ರಾಜೀವ್ ಅವರನ್ನು ಹತ್ಯೆಗೈಯುವ ಕೃತ್ಯದಲ್ಲಿ, ಎಲ್ಟಿಟಿಇಯ ಆತ್ಮಹತ್ಯಾ ಬಾಂಬರ್ ಆಗಿ ಕಾರ್ಯವೆಸಗಿದ ಒಬ್ಬಾಕೆ ಮಹಿಳೆ; ಭಾರತದ ಶಾಂತಿಪಾಲನಾ ಪಡೆಯ ಸೈನಿಕರು ಶ್ರೀಲಂಕಾದಲ್ಲಿ ತಮಿಳು ಮಹಿಳೆಯ ಮೇಲೆ ಅತ್ಯಾಚಾರವೆಸವೆಗುತ್ತಿದ್ದಾಗ ಅದೇ ಮನೆಯಲ್ಲಿದ್ದು ಆ ಕೃತ್ಯವನ್ನು ಕಣ್ಣಾರೆ ಕಂಡು ನೊಂದು ಬೆಂದು ಸೇಡಿನ ಜ್ವಾಲಾಗ್ನಿಯಲ್ಲಿ ಬೇಯುತ್ತಿದ್ದ ಅದೇ ಮನೆಯ ಮಗಳಾಗಿದ್ದಳು ಎಂಬುದು ಬಳಿಕ ಬಯಲಾದ ಒಂದು ವಿಷಯವಾಗಿದೆ.

ಕೆಲವು ವರ್ಷಗಳ ಹಿಂದೆ ಮಣಿಪುರದಲ್ಲಿ ಅಲ್ಲಿನ ಮಹಿಳೆಯರು ‘ಬನ್ನಿ, ನಮ್ಮನ್ನು ಅತ್ಯಾಚಾರ ಮಾಡಿ. ನಿಮ್ಮ ಗುರಿ ಈಡೇರಿಸಿಕೊಳ್ಳಿ’ ಎಂಬ ಘೋಷಣೆಯೊಂದಿಗೆ ತಮ್ಮ ರಾಜ್ಯದಲ್ಲಿ ಬೀಡುಬಿಟ್ಟ ತಮ್ಮದೇ ದೇಶದ ಸೈನಿಕರ ವಿರುದ್ಧ ಸೈನಿಕ ಪಡೆಯ ಕಚೇರಿಯ ಮುಂದುಗಡೆಯೇ ಬೆತ್ತಲಾಗುವ ಮೂಲಕವೇ ಪ್ರತಿಭಟನೆ ನಡೆಸಿದ್ದರು. ಇದು ದೇಶದಾದ್ಯಂತ ದೊಡ್ಡ ಮಟ್ಟದ ಸುದ್ಧಿಯಾಗಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಘಟನೆಯು ಉಗ್ರರ ಧಮನ, ಭಯೋತ್ಪಾದಕರ ನಿರ್ನಾಮ, ಶಾಂತಿ ಸ್ಥಾಪನೆ ಎಂಬಿತ್ಯಾದಿಗಳ ಹೆಸರಿನಲ್ಲಿ ಸೈನಿಕರು ನಡೆಸುವ ಭಯಾನಕ ವಿಕೃತಿಯೊಂದರ ಕರಾಳಮುಖವನ್ನು ಅನಾವರಣಗೊಳಿಸಿತ್ತು.

ಸೈನಿಕರು ನಡೆಸುವ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವುದು ಬಹಳ ಕಡಿಮೆಯೇ ಎಂದೇ ಹೇಳಬಹುದು. ಕಾರಣ, ದೇಶ ರಕ್ಷಣೆಯ ಹೆಸರಲ್ಲಿ ತೆರೆಮರೆಯಲ್ಲಿ ಇವರು ಇಂಥ ಕೃತ್ಯಗಳನ್ನು ನಡೆಸುವುದು. ಅತ್ಯಾಚಾರಕ್ಕೆ ತಾವು ಯಾರನ್ನು ಗುರಿಪಡಿಸುತ್ತಾರೋ, ಅಂಥವರನ್ನು ಬಳಿಕ ಹತ್ಯೆಗೈಯ್ಯುತ್ತಾರಾದುದರಿಂದ, ಇಂಥ ಪ್ರಕರಣಗಳಲ್ಲಿ ಯಾವುದೇ ರೀತಿಯ ಸಾಕ್ಷಿ ಪುರಾವೆಗಳು ಬಳಿಕ ಲಭ್ಯವಿರುವುದಿಲ್ಲ. ಇಡೀ ದೇಶ, ಸರಕಾರಗಳು ಸಹ ಸೈನಿಕರ ಪರವಾಗಿಯೇ ನಿಲ್ಲುವುದರಿಂದ ಅತ್ಯಾಚಾರಿಗಳು ಬಹುತೇಕ ಸಂದರ್ಭದಲ್ಲಿ ಸೈನಿಕರ ವಿರುದ್ಧ ದೂರು ನೀಡಲು ಧೈರ್ಯ ಮಾಡುವುದಿಲ್ಲ. ಧೈರ್ಯ ಮಾಡಿ ದೂರು ಕೊಟ್ಟರೂ ಈ ವ್ಯವಸ್ಥೆಯಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಅತ್ಯಾಚಾರಕ್ಕೆ ಒಳಗಾದ ಬಡ ಮಹಿಳೆಯರಲ್ಲಿ ಇರುವುದಿಲ್ಲ. ಇಂಥ ಲಾಭಗಳೇ ನೀಚ ಸೈನಿಕರನ್ನು ರಕ್ಷಿಸುತ್ತದೆ. ದೇಶದ ನಿಜವಾದ ದೇಶಪ್ರೇಮಿ, ಪ್ರಾಮಾಣಿಕ, ದಕ್ಷ, ವೀರ ಸೈನಿಕರನ್ನು ತಲೆತಗ್ಗಿಸುವಂತೆ ಮಾಡುತ್ತದೆ, ದೇಶದ ಸೈನಿಕರ ಬಗ್ಗೆಯೇ ಕೆಟ್ಟ ಚಿತ್ರಣ ಉಂಟಾಗಲೂ ಕಾರಣವಾಗುತ್ತದೆ.

ಸೈನಿಕರ ಕಥೆಯೇ ಹೀಗೆ ಅಂದ ಮೇಲೆ, ಇನ್ನು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕುಖ್ಯಾತಿ ಪಡೆದಿರುವ ನಮ್ಮ ಪೊಲೀಸ್ ಇಲಾಖೆಯಲ್ಲಿರುವ ಕೆಲವು ಮಂದಿ ಪೊಲೀಸರ ಕಥೆ ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಇಡೀ ಇಲಾಖೆಯೇ ನಾಚಿಕೆ ಪಡುವಷ್ಟು ಕೀಚಕತನದ ಕೆಲಸವನ್ನು ಇಲ್ಲಿರುವವರು ನಡೆಸಿದ್ದಾರೆ, ನಡೆಸುತ್ತಾರೆ. ನಮ್ಮ ದೇಶದಲ್ಲಿ ಅತ್ಯಾಚಾರ, ವಿವಿಧ ರೀತಿಯ ಲೈಂಗಿಕ ದೌರ್ಜನ್ಯದ ಪ್ರಕರಣಗಳು, ಮಹಿಳೆಯರ ಮೇಲೆ ನಿರಂತರವಾಗಿ ನಡೆಯುವ ಕಿರುಕುಳವೇ ಮೊದಲಾದ ಪ್ರಕರಣಗಳಿಗೆ ಪೊಲೀಸ್ ವ್ಯವಸ್ಥೆಯ ಕೊಡುಗೆಯೇ ದೊಡ್ಡದು.

ಹೆಣ್ಮಕ್ಕಳು ನಿಗೂಢವಾಗಿ ಕಾಣೆಯಾದಾಗ, ಅಪಹರಣಕ್ಕೀಡಾದಾಗ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿ ಹುಡುಕಾಡುವ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಗಳು, ‘ಅವಳು ಯಾರೊಂದಿಗಾದರು ಹೋಗಿರಬಹುದು, ಹೋಗಿ ಎರಡು ದಿನ ಹುಡುಕಿ. ಸಿಗದಿದ್ದರೆ ಆಮೇಲೆ ಬನ್ನಿ, ನೋಡೋಣ’ ಎಂದು ಮನೆಯವರನ್ನು ಸಾಗಹಾಕುವ ಪ್ರಕರಣಗಳೆಷ್ಟು ಬೇಕು ? ಮನೆಯವರು ಮನೆ ಮಗಳನ್ನು ಹುಡುಕಿ ಸುಸ್ತಾಗಿ ಪೊಲೀಸ್ ಠಾಣೆಗೆ ಎರಡನೇ ಬಾರಿ ಬಂದು ದೂರು ಕೊಡುವಷ್ಟರಲ್ಲಿ ಹೆಣ್ಮಗಳು ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿ ಆಕೆಯ ಕೊಳೆತು ನಾರುವ ಸ್ಥಿತಿಯಲ್ಲಿರುತ್ತದೆ. ಅಂದರೆ, ಇಂಥ ಪ್ರಕರಣಗಳಲ್ಲಿ ಪೊಲೀಸರ ಬೇಜವಾಬ್ದಾರಿ, ಕರ್ತವ್ಯಲೋಪ ಕಣ್ಣಿಗೆ ರಾಚುವಂತಿರುತ್ತದೆ, ಆದರೆ, ಇಂಥ ಅದಕ್ಷ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕಟ್ಟುನಿಟ್ಟಿನ ಶಿಸ್ತುಕ್ರಮ
ಕೈಗೊಳ್ಳುವುದಿಲ್ಲ. ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳ ಹೊಣೆಗೇಡಿತನ ಮತ್ತೆ ಮತ್ತೆ ನಿರಂತರವಾಗಿ ಮುಂದುವರಿಯುತ್ತದೆ, ಹೆಣ್ಮಕ್ಕಳು ಬಲಿಪಶುವಾಗುತ್ತಲೇ ಇರುತ್ತಾರೆ.

ಅಪರಿಚಿತ ಯುವತಿಯರು, ಬಡ ಕುಟುಂಬಕ್ಕೆ ಸೇರಿದವರು ಅತ್ಯಾಚಾರಕ್ಕೀಡಾಗಿ, ಕೊಲೆಯಾದ ಬಹುತೇಕ ಪ್ರಕರಣಗಳಲ್ಲಿ, ಹೆಚ್ಚಾಗಿ ಇಂಥ ಪ್ರಕರಣಗಳನ್ನು ‘ಅಸಹಜ ಮರಣ’ ಎಂದು ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುವ ಪೊಲೀಸ್ ಅಧಿಕಾರಿಗಳೇ ಅಧಿಕ. ಕೆಲವೊಮ್ಮೆ ‘ಕೊಲೆ’ ಎಂದು ಕೇಸು ದಾಖಲಿಸಲ್ಪಡುತ್ತದೆ. ಆದರೆ ಅಪ್ಪಿ ತಪ್ಪಿಯೂ ‘ಅತ್ಯಾಚಾರ’ ಎಂದು ಕೇಸು ದಾಖಲಿಸುವುದಿಲ್ಲ. ಅಪರಿಚಿತ ಮತ್ತು ಬಡ ಕುಟುಂಬಕ್ಕೆ ಸೇರಿದ ಹೆಣ್ಮಕ್ಕಳ ಶವವಾದರೆ ಸರಕಾರಿ ವೈದ್ಯಾಧಿಕಾರಿಗಳು ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆಯೇ ಹಾಗೆಯೇ ಬಿಳಿ ಬಟ್ಟೆಯಲ್ಲಿ ಸುತ್ತಿ ಶವವನ್ನು ಪೊಲೀಸರಿಗೋ, ಶವದ ವಾರೀಸುದಾರರ ಕುಟುಂಬಕ್ಕೋ ಹಸ್ತಾಂತರಿಸಿಬಿಡುತ್ತಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನೇ ನಡೆಸದೆ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿ ಶವವನ್ನು ಹಸ್ತಾಂತರಿಸಿದರೆ ಅತ್ಯಾಚಾರ ನಡೆದುದು ದಾಖಲಾಗುವುದಾದರೂ ಹೇಗೆ ? ಇಲ್ಲ, ಸಾಧ್ಯವೇ ಇಲ್ಲ. ಅತ್ಯಾಚಾರದ ಪ್ರಕರಣವೂ ದಾಖಲಾಗುವುದೇ ಇಲ್ಲ. ಆದರೆ, ಮರಣೋತ್ತರ ಪರೀಕ್ಷೆ ನಡೆಸದೆಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ನೀಡಿ ಪ್ರಕರಣವನ್ನು ಮುಚ್ಚಿ ಹಾಕಿದ ವೈದ್ಯಾಧಿಕಾರಿಗಳಿಗೆ ಭಡ್ತಿ ನೀಡಿ ಮಹತ್ಸಾಧನೆ ಮೆರೆಯುತ್ತದೆ.

ಪಶ್ಚಿಮ ಬಂಗಾಳದ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದನೂ, ನಟನೂ ಆದ ತಪಸ್ ಪಾಲ್ ಎಂಬಾತ ಇತ್ತೀಚೆಗೆ ತಮಗ್ಮ ಪಕ್ಷದ ಕಾರ್ಯಕರ್ತರ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ, ಎಡಪಕ್ಷದ ಕಾರ್ಯಕರ್ತರ ಮನೆ ಮಹಿಳೆಯರ ಮೇಲೆ ತನ್ನ ಪಕ್ಷದ ಕಾರ್ಯಕರ್ತರಿಗೆ ಅತ್ಯಾಚಾರವೆಸಗಲು ಕರೆ ಕೊಟ್ಟದ್ದು ಈಗಾಗಲೇ ಬಹಿರಂಗಗೊಂಡಿದೆ. ಕೇವಲ 2-3 ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣವಾಗಿರುವ ಫೇಸ್ ಬುಕ್ ನಲ್ಲಿ ಮಹಿಳಾ ಬರಹಗಾರ್ತಿಯೊಬ್ಬರನ್ನು ಉದ್ಧೇಶೀಸಿ ಕಮೆಂಟ್ ಹಾಕಿದ ತನ್ನನ್ನು ತಾನು ಸನಾತನವಾದಿ ಲೇಖಕ ಎಂದು ಗುರುತಿಸಿಕೊಂಡ
ವ್ಯಕ್ತಿಯೊಬ್ಬ, ‘ಅತ್ಯಾಚಾರಿಗಳಿಂದ ನಿಮ್ಮನ್ನು ಜುಟ್ಟು ಹಿಡಿದು
ಅತ್ಯಾಚಾರವೆಸಗಿಸಬೇಕು, ಆಗ ಎಲ್ಲಾ ಸರಿ ಆಗುತ್ತೆ’ ಎಂದು ಅತ್ಯಾಚಾರ ಎಂಬ
ಅಸ್ತ್ರವನ್ನು ಪ್ರಯೋಗಿಸಿ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಎಂದು ಬೇರೆ ಹೇಳುವ ಅಗತ್ಯವಿಲ್ಲ ಅನಿಸುತ್ತಿದೆ.

ಕಾರ್ಯಾಂಗ, ಶಾಸಕಾಂಗಗಳ ಜೊತೆಗೆ ಇಡೀ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ
ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಹೊತ್ತಿರುವ ಲೇಖನಿಯನ್ನೇ
ಖಡ್ಗವನ್ನಾಗಿಸಬೇಕಾದವರು ಸಹ ಪ್ರಸ್ತುತ ಅತ್ಯಾಚಾರವನ್ನೇ ಖಡ್ಗವನ್ನಾಗಿಸಿರುವುದು ವ್ಯವಸ್ತೆಯ ದುರಂತವಲ್ಲದೇ ಮತ್ತೇನು ? ಇಂದ್ರಿಯಗಳನ್ನು
ನಿಯಂತ್ರಣದಲ್ಲಿಟ್ಟುಕೊಳ್ಳಲಿಕ್ಕಾಗದ ವಿಕೃತ ಕಾಮುಕರು ದೈಹಿಕವಾಗಿ
ಅತ್ಯಾಚಾರವೆಸಗುತ್ತಾರೆ. ಅತ್ಯಾಚಾರದ ಮನಸ್ಸನ್ನು ಹೊಂದಿರುವ ವಿಕೃತರು
ಅತ್ಯಾಚಾರವೆಸಗಲು ಪ್ರಚೋದನೆ ನೀಡುತ್ತಾರೆ, ಮಾನಸಿಕವಾಗಿ ಅತ್ಯಾಚಾರವೆಸಗುತ್ತಾರೆ. ಟಿಆರ್ ಪಿಗಾಗಿ ಅಶ್ಲೀಲತೆಯನ್ನು ಅನಗತ್ಯವಾಗಿ ವೈಭವೀಕರಿಸುವ ಮೂಲಕ ಮಾಧ್ಯಮಗಳು ಸಹ ಇಂದು ಪರೋಕ್ಷವಾಗಿ ಅತ್ಯಾಚಾರವೆಸಗುವ ಪ್ರಕ್ರಿಯೆಯಲ್ಲಿಯೇ ತನ್ನ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸವೇ ಸರಿ. – ಶ್ರೀರಾಮ ದಿವಾಣ.

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

ವಿಶೇಷ ಲೇಖನ: ಬಿ.ಶಿವಕುಮಾರ್, ವಾರ್ತಾ ಇಲಾಖೆ, ಉಡುಪಿ.

# ಜಾಗತೀಕರಣದ ಪ್ರಭಾವದಿಂದ ಯುವಜನತೆ ಬಹಳ ವೇಗವಾಗಿ ವಿವಿಧ ಕಾರಣಗಳಿಗೋಸ್ಕರ ಅಪಾಯಕಾರಿ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದು, ಕ್ರಮೇಣ ಇದು ಚಟವಾಗಿ ಮನುಷ್ಯನನ್ನು ಚಟ್ಟಕ್ಕೇರಿಸುತ್ತದೆ. ಮಾದಕವಸ್ತು ಮತ್ತು ಅಪರಾಧಕ್ಕೆ ಅವಿನಾಭಾವ ಸಂಬಂಧ. ಇದು ಆರೋಗ್ಯವಂತ ಸಮಾಜಕ್ಕೆ ಮಾರಕ. ಪ್ರಸ್ತುತ ಈ ಸಮಸ್ಯೆ ಸಮಾಜಕ್ಕೆ ದೊಡ್ಡ ಪಿಡುಗಾಗಿದೆ.

ಮಾದಕ ವಸ್ತುಗಳ ಚರಿತ್ರೆ ಬಹು ದೊಡ್ಡದು. ಅನಾದಿ ಕಾಲದಿಂದ ಇಂದಿನವರೆಗೆ ಇದರ ಆಕರ್ಷಣೆ, ಚೆಲ್ಲಾಟ ನಿರಂತರವಾಗಿ ನಡೆದಿದೆ. ಈ ಮಾದಕ ವಸ್ತುಗಳು ನೋವಿಗೆ, ನರಳುವಿಕೆಗೆ, ದು:ಖಗಳಿಗೆ ಪರಿಹಾರವೆಂಬ ಭ್ರಮೆಯಿಂದ ಯುವ ಜನತೆ ಇವುಗಳ ದಾಸರಾಗುತ್ತಿದ್ದು, ಕ್ರಮೇಣ ಇವು ಅಮಲು ಏರಿಸಿ, ಮತ್ತು ಬರಿಸಿ ನಮ್ಮನ್ನು ತಮ್ಮ ಅಕ್ಟೋಪಸ್ ಹಿಡಿತಕ್ಕೆ ಸಿಕ್ಕಿಸಿಕೊಳ್ಳುತ್ತವೆ. ನಿಧಾನವಾಗಿ ಅಣು ಅಣುವಾಗಿ ನಮ್ಮನ್ನು ಕೊಲ್ಲುತ್ತವೆ. ಈ ಸಕ್ಕರೆ ಲೇಪಿತ ಕಾರ್ಕೋಟಕ ವಿಷಯವನ್ನು ಸ್ವ ಇಚ್ಚೆಯಿಂದ ಸೇವಿಸಿ, ನಾವು ನಾಶವಾಗುತ್ತಿದ್ದೇವೆ ಎಂಬುದು ಎಷ್ಟು ಜನರಿಗೆ ಗೊತ್ತು ?

ಒಮ್ಮೆ ಇವುಗಳಿಗೆ ದಾಸರಾದರೆ ಈ ವಿಷ ವರ್ತುಲದಿಂದ ಹೊರಬರುವುದು ಅತ್ಯಂತ ಕಷ್ಟ. ಪ್ರತಿ ವರ್ಷ ಈ ವಿಷ ವರ್ತುಲದಲ್ಲಿ ಬೀಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾನ್ಯವಾಗಿ 16 ರಿಂದ 25 ವರ್ಷದೊಳಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನತೆ ಈ ಮಾಯ ಜಾಲದಲ್ಲಿ ಸಿಲುಕುತ್ತಿದ್ದಾರೆ. ಮಾದಕ ವಸ್ತುಗಳ ಸಾಗಾಣಿಕೆಯನ್ನು ನಿಗ್ರಹಿಸಲು ಬಿಗಿಯಾದ ಕಾನೂನುಗಳು ಇದ್ದರೂ ಸಹ ಕೇವಲ ಕಾನೂನಿನಿಂದ ಇದರ ಪರಿಹಾರ ಸಾಧ್ಯವಿಲ್ಲ. ಸಮಾಜದಲ್ಲಿ ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಇದರ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ರಕ್ಷಿಸುವುದೇ ಅತ್ಯುತ್ತಮ ಮಾರ್ಗ.

ಮಾದಕ ವ್ಯಸನಿಗಳು ಸಾಮಾನ್ಯವಾಗಿ ಉಪಯೋಗಿಸುವ ಪದಾರ್ಥಗಳೆಂದರೆ, ಬೀಡಿ/ಸಿಗರೇಟು, ಪಾನ್ ಮಸಾಲ್, ಗುಟ್ಕಾ, ಬಿಯರ್, ವಿಸ್ಕಿ, ಬ್ರಾಂದಿ ಸೇರಿದಂತೆ ಮದ್ಯಪಾನ, ಗಾಂಜಾ, ಭಂಗಿ ಸೊಪ್ಪು, ಹಶೀನ್, ಚರಸ್, ಕೊಕೇನ್, ಬ್ರೌನ್ ಶುಗರ್, ಹೆರಾಯಿನ್ ನಂತಹ ಅಫೀಮು ಪದಾರ್ಥಗಳು, ನೋವು ಶಮನ ಮಾಡುವ ಮಾತ್ರೆ, ಇಂಜೆಕ್ಷನ್ ಗಳು ಸಾಮಾನ್ಯ.

ಇಂತಹ ಮಾದಕ ವಸ್ತುಗಳನ್ನು ಸೇವಿಸುವ ವ್ಯಕ್ತಿಗಳು ಏಡ್ಸ್, ಇತರೆ ಲೈಂಗಿಕ ರೋಗಗಳು, ಬಂಜೆತನ, ಬುದ್ದಿ ಭ್ರಮಣೆಯಂತಹ ರೋಗಗಳಿಗೆ ತುತ್ತಾಗುವುದಲ್ಲದೇ ಹೆಚ್ಚು ಚಟವಿರುವವರು ಸಲಿಂಗ ಕಾಮ, ವಿಕೃತ ಕಾಮಗಳಲ್ಲಿ ತೂಡಗುವುದಲ್ಲದೇ ಬಹು ಮಂದಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದರಿಂದ ಅಪಾಯಕಾರಿ ರೋಗಗಳಿಗೆ ಬೇಗ ತುತ್ತಾಗುತ್ತಾರೆ.

ಅಲ್ಲದೇ ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಭೀಕರ ಅಪಘಾತಗಳು ಹಾಗೂ ಅಪರಾಧ ಪ್ರಕರಣಗಳಿಗೆ ಕಾರಣವಾಗುತ್ತದೆ. ಮಾದಕ ವಸ್ತುಗಳ ಸೇವನೆಯ ಅಮಲಿನಲ್ಲಿ ವ್ಯಕ್ತಿಗಳ ದೇಹ ಮತ್ತು ಮನಸ್ಸುಗಳು ತಮ್ಮ ಸಮತೋನವನ್ನು ಕಳೆದುಕೊಂಡು, ಸರಿ ತಪ್ಪು ನಿರ್ಧಾರ ಮಾಡುವ ಶಕ್ತಿ ಹಾಗೂ ಮಾನವೀಯ ಭಾವನೆಗಳನ್ನು ಕಳೆದುಕೊಳ್ಳುತ್ತಾರೆ.

ಮಾದಕ ವಸ್ತುಗಳನ್ನು ಪಡೆಯಲು ಹಣದ ಅವಶ್ಯಕತೆಗಾಗಿ ಕಳ್ಳತನ,ಕೊಲೆ, ದರೋಡೆಯಂತಹ ಕೃತ್ಯಗಳಲ್ಲಿ ಭಾಗಿಯಗುತ್ತಾರೆ. ತಮ್ಮ ವರ್ತನೆಗಳ ಪರಿಣಾಮ ಕುರಿತ ಅರಿವಿಲ್ಲದೇ, ಶಿಕ್ಷೆಯ ಅರಿವಿಲ್ಲದೇ ಲೈಂಗಿಕ ಅತ್ಯಾಚಾರದಂತಹ ಹೀನ ಕೃತ್ಯಗಳಲ್ಲಿ ತೊಡಗುತ್ತಾರೆ.

ಯಾವುದೋ ಕೆಟ್ಟ ಆಕಸ್ಮಿಕ ಗಳಿಗೆಯಲ್ಲಿ ಈ ಚಟಕ್ಕ ಒಳಗಾಗಿರುವ ವ್ಯಕ್ತಿಗೆ ಆದಷ್ಟು ಬೇಗ ಚಿಕಿತ್ಸೆ ನೀಡಿ ಚಟದಿಂದ ಬಿಡುಗಡೆ ಗೊಳಿಸಲು ಸಾಧ್ಯವಿದೆ. ಹಾಗೂ ಮನೋವೈದ್ಯರಲ್ಲಿ ಅಥವಾ ಮಾನಸಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸಬಹುದು. ಅಲ್ಲದೇ ಇಂತಹ ವ್ಯಕ್ತಿಗಳಿಗೆ ಕುಟುಂಬದವರ, ಸ್ನೇಹಿತರ ಹಾಗೂ ಸಮಾಜದ ಸಹಾನುಭೂತಿ ಹಾಗೂ ಸಹಾಯವೂ ಮುಖ್ಯವಾಗಿದ್ದು, ಚಿಕಿತ್ಸೆಯ ನಂತರ ಸುತ್ತಲಿನ ಪರಿಸರ ಹಾಗೂ ಸಮಾಜದ ನೆರವು ಅತೀ ಅವಶ್ಯಕ

ಮಾದಕ ವಸ್ತುಗಳ ವಿರುದ್ಧ ಇಡೀ ಸಮಾಜ ಒಗ್ಗಟ್ಟಾಗಿ ಹೋರಾಡಬೇಕಿದೆ. ಮನಸ್ಸಿಗೆ ತೀವ್ರ ಚಿಂತೆ, ಆಘಾತ, ವ್ಯಥೆ, ನಿರಾಸೆ ಆವರಿಸಿದಾಗ ಕುಟುಂಬದ ಹಾಗೂ ಬಂಧು ಮಿತ್ರರ ನೆರವಿನಿಂದ ಸಲಹೆ ಪಡೆದು ಓದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದ ಇತರೆ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೇ ಧಾರ್ಮೀಕ ಕೇಂದ್ರಗಳ ಭೇಟಿ, ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸ, ಯೋಗ, ಪ್ರಾಣಾಯಾಮ ಮುಂತಾದವುಳನ್ನು ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಕುರಿತು ಸೂಕ್ತ ಅರಿವು ಮೂಡಿಸಬೇಕು ಹಾಗೂ ಸಮಾಜದ ವಿವಿಧ ಸಂಘ ಸಂಸ್ಥೆಗಳು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕು ಈ ನಿಟ್ಟಿನಲ್ಲಿ ಜೂನ್ 26 ರಂದು ಆಚರಿಸುವ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಲಿ. ಸಮಾಜ ಮಾದಕ ವಸ್ತುಗಳ ಮಾಯಾಜಾಲದಿಂದ ಹೊರಬರಲಿ.

ಉಡುಪಿ: ನಗರದ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಆಯುರ್ವೇದ ವಿಭಾಗದಲ್ಲಿ ಜೂನ್ 9ರಂದು ಬೆಳಗ್ಗೆ ವೈದ್ಯರಿಲ್ಲದೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದವರು ಬಳಿಕ ಬೇರೆ ದಾರಿ ಇಲ್ಲದೆ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾದ ವಿದ್ಯಾಮಾನ ನಡೆದಿದೆ.

ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ವಿಭಾಗವಿದ್ದು, ಇಲ್ಲಿ ಇಬ್ಬರು ವೈದ್ಯರು ಹಾಗೂ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆ ಕೂಡಾ ಈ ವಿಭಾಗಕ್ಕೆ ಚಿಕಿತ್ಸೆಗಾಗಿ ಮತ್ತು ಔಷಧಕ್ಕಾಗಿ ಅಸೌಖ್ಯ ಬಾಧಿತರು ಆಗಮಿಸಿದ್ದರು. ವೈದ್ಯರನ್ನು ಭೇಟಿಯಾಗಲು ವೈದ್ಯರನ್ನು ಭೇಟಿಯಾಗುವ ಮೊದಲು ಮಾಡಿಸಬೇಕಾದ ಚೀಟಿಯನ್ನು ಸಹ ಹಣ ನೀಡಿ ಪಡೆದುಕೊಂಡಿದ್ದರು.

ಔಷಧಕ್ಕಾಗಿ ಆಸ್ಪತ್ರೆಗೆ ಬಮದ ಚೀಟಿಯನ್ನೂ ಮಾಡಿಸಿಕೊಂಡ ರೋಗಿಗಳು ಮಾತ್ರ ಸೋಮವಾರ ತೀವ್ರ ನಿರಾಸೆ ಅನುಭವಿಸಿದರು. ಇರಬೇಕಾದ ಇಬ್ಬರು ವೈದ್ಯರೂ ಸೋಮವಾರ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಲೇ ಇಲ್ಲ. ಬೆಳಗ್ಗೆ ಗಂಟೆ 10ರಿಂದ 12.15ರ ವರೆಗೆ ವೈದ್ಯರು ಬರಬಹುದು ಎಂದು ಆಸ್ಪತ್ರೆಯಲ್ಲಿ ಕಾದುಕುಳಿತ ರೋಗಿಗಳು ನಂತರ ಸುಸ್ತಾಗಿ ವೈದ್ಯರಿಗೆ, ಸಿಬ್ಬಂದಿಗಳಿಗೆ ಹಾಗೂ ಸರಕಾರಕ್ಕೆ ಹಿಡಿಶಾಪ ಹಾಕುತ್ತಾ ಆಸ್ಪತ್ರೆಯಿಂದ
ನಿರ್ಗಮಿಸಿದರು.

ಆಸ್ಪತ್ರೆಯಿಂದ ನಿರ್ಗಮಿಸುವ ಸಮಯದಲ್ಲಿ ಸಿಬ್ಬಂದಿಗಳು ರೋಗಿಗಳಲ್ಲಿ ಸಂಜೆ ಗಂಟೆ 3.30ಕ್ಕೆ ಮತ್ತೆ ಬರುವಂತೆ ಸೂಚಿಸಿದರೆನ್ನಲಾಗಿದೆ. ಇಲ್ಲಿನ ವೈದ್ಯರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಮ್ಮದೇ ಸಮಯಕ್ಕೆ ಆಸ್ಪತ್ರೆಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವುದು, ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಯಾರಾದರೂ ಬಂದದ್ದಿದ್ದಲ್ಲಿ ಆಗ ಮಾತ್ರ ಅವರನ್ನು ಪರೀಕ್ಷಿಸಿ ಮತ್ತೆ ಹೊರಗಡೆಗೆ ಹೋಗುವುದು, ಒಂದಿಡೀ ದಿನ ಆಸ್ಪತ್ರೆಗೆ ಬಾರದೇ ಮರುದಿನ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವುದು ಇತ್ಯಾದಿ ನಡೆಯುತ್ತಿದೆ. ಇದಾವುದನ್ನೂ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ನೊಂದವರು ದೂರಿದ್ದಾರೆ.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್ ಅವರಲ್ಲಿ ಈ ಹಿಂದೆ ಅನೇಕರು ದೂರು ನೀಡಿದಂತೆಯೇ ಸೋಮವಾರವೂ ದೂರು ನೀಡಿದ್ದಾರೆ. ಆದರೆ ಡಾ.ನಾಯಕ್ರವರು ಬಡ ರೋಗಿಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ದೂರುಗಳನ್ನು
ಕಡೆಗಣಿಸುವುದರಿಂದಾಗಿ ವೈದ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೋರ್ವಳಿಗೆ ಡಾ.ಭಾಸ್ಕರ ಪಾಲನ್ ಎಂಬವರು ಚಿಕಿತ್ಸೆ ನಿರಾಕರಿಸಿದ ಘಟನೆಯೂ ನಡೆದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿತ್ತು. ಪ್ರಧಾನ ಕಾರ್ಯದರ್ಶಿಗಳು ಪ್ರಕರಣದ ತನಿಖೆ ನಡೆಸುವಂತೆ ಇಲಾಖಾ ಆಯುಕ್ತರಿಗೆ ಆದೇಶ
ನೀಡಿದ್ದಾರಾದರೂ, ಆಯುಕ್ತರು ದೂರಿನ ಮೇಲೆ ತನಿಖೆಯನ್ನೇ ನಡೆಸದೆ ಮುಚ್ಚಿ
ಹಾಕಿದ್ದಾರೆನ್ನಲಾಗಿದೆ. ಇಂಥ ಹಲವಾರು ಪ್ರಕರಣಗಳು ಇಲ್ಲಿ ನಿರಂತರವಾಗಿ
ನಡೆಯುತ್ತಿದೆಯಾದರೂ, ಸಂತ್ರಸ್ತರಿಗೆ ಮಾತ್ರ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾತ್ರ ಯಾರೊಬ್ಬರೂ ಮಾಡುತ್ತಿಲ್ಲವೆಂದು ಆರೋಪಿಸಲಾಗಿದೆ.

ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸರಕೆ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಯಾರೊಬ್ಬರೂ ಸರಕಾರಿ ಆಸ್ಪತ್ರೆಯನ್ನು ಬಡ ರೋಗಿಗಳ ಪರವಾಗಿ ಸುಧಾರಣೆ ಮಾಡುವ ಕಡೆಗೆ ಕಾಳಜಿಯಿಂದ ಗಮನ ಕೊಡದೆ ಕಾರಣ, ಸರಕಾರಿ
ಆಸ್ಪತ್ರೆಗಳೆಂದರೆ ಬಡವರಿಗೆ ಇಂದು ನರಕಮಯವಾಗಿ ಪರಿಣಮಿಸಿದೆ.