Posts Tagged ‘ಕಾರ್ಕಳ’

ಉಡುಪಿ: ಆವರಣ ಗೋಡೆಯಿಂದ ಬಿದ್ದು ಕೈ ಮೂಳೆ ಮುರಿತಕ್ಕೊಳಗಾದ, ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿ ತುರ್ತು ಚಿಕಿತ್ಸೆ ಒದಗಿಸದೆ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ನಡೆದಿದೆ.

ಅಜೆಕಾರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರ ಪುತ್ರ ರಾಘವೇಂದ್ರ (11) ಎಂಬಾತ ವಸತಿ ನಿಲಯದಲ್ಲಿದ್ದು, ಆರನೇ ತರಗತಿ ಕಲಿಯುತ್ತಿದ್ದಾನೆ. ನವೆಂಬರ್ 9ರಂದು ಆದಿತ್ಯವಾರ ಸಂಜೆ 5 ಗಂಟೆ ಸುಮಾರಿಗೆ ಆವರಣ ಗೋಡೆ ಮೇಲೆ ಹಾಕಿದ್ದ ಬಟ್ಟೆಗಳನ್ನು ತೆಗೆಯಲೆಂದು ಗೋಡೆ ಹತ್ತಿದ ಸಮಯದಲ್ಲಿ ಕೆಳಗೆ ಬಿದ್ದು ರಾಘವೇಂದ್ರನ ಕೈ ಮೂಳೆ ಮುರಿದಿತ್ತು.

ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಭಾಸ್ಕರ್ ಎಂಬವರು ಇದ್ದರಾದರೂ ಅವರು ಯಾವುದೇ ಗಾಯಾಳು ವಿದ್ಯಾರ್ಥಿಗೆ ಯಾವುದೇ ತುರ್ತು ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ. ಬದಲಾಗಿ ವಿಷಯವನ್ನು ವಾರ್ಡನ್ ಸಂತೋಷ್ ಅವರಿಗೆ ತಿಳಿಸಿ ಕೈ ತೊಳೆದುಕೊಂಡರೆನ್ನಲಾಗಿದೆ.

ಘಟನೆ ನಡೆದ ದಿನವೇ ವಿಷಯ ವಾರ್ಡನ್ ಸಂತೋಷ್ ಅವರ ಗಮನಕ್ಕೆ ಬಂದಿತ್ತಾದರೂ, ಅವರು ಸಹ ವಸತಿ ನಿಲಯಕ್ಕೆ ಬಂದು ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಒದಗಿಸುವ ಪ್ರಾಥಮಿಕ ಕರ್ತವ್ಯವವನ್ನು ಸಹ ಅವರು ಮಾಡಲಿಲ್ಲವೆನ್ನಲಾಗಿದೆ. ಈ ವಸತಿ ನಿಲಯದ ಸಿಬ್ಬಂದಿಗಳು ಎಷ್ಟೊಂದು ಬೇಜವಾಬ್ದಾರರು ಎಂದರೆ, ಬಾಲಕ ಬಿದ್ದು ಕೈ ಮುರಿಸಿಕೊಂಡ ಬಗ್ಗೆ ಕನಿಷ್ಟ ಮಾಹಿತಿಯನ್ನೂ ಕೂಡಾ ಯಾರೊಬ್ಬರೂ ಬಾಲಕನ ಹೆತ್ತವರಿಗೆ ತಿಳಿಸಲಿಲ್ಲವೆಂದು ದೂರಲಾಗಿದೆ.

ಘಟನೆ ನಡೆದ ಮರುದಿನ ಮಧ್ಯಾಹ್ನದ ವರೆಗೂ ಗಾಯಾಳು ವಿದ್ಯಾರ್ಥಿಯನ್ನು ಕಡೆಗಣಿಸಿದ ವಸತಿ ನಿಲಯದ ಅಧಿಕೃತರು, ಮರುದಿನ ಅಪರಾಹ್ನ ಬಾಲಕನನ್ನು ಬೈಕೊಂದರಲ್ಲಿ ಕರೆದುಕೊಂಡು ಹೋಗಿ ತಂದೆ ಸುರೇಶ್ ಅವರ ಸ್ವಾಧೀನದಲ್ಲಿ ಬಿಟ್ಟು ಕೈ ತೊಳೆದುಕೊಂಡಿದ್ದಾರೆ. ಹೆತ್ತವರು ಸೋಮವಾರ ರಾತ್ರಿ ಗಾಯಾಳು ರಾಘವೇಂದ್ರನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದಾರೆ.

ಉಡುಪಿ: ಎರಡು ಕೋಟಿ ರು. ವೆಚ್ಚ ಮಾಡಿ ಕಾರ್ಕಳದ ಬಂಡಿಮಠದಲ್ಲಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಮುಂದಿನ ಶುಕ್ರವಾರದೊಳಗೆ ಸದ್ಬಳಕೆ ಮಾಡದೇ ಇದ್ದಲ್ಲಿ ಸಂಬಂಧಿಸಿದವರ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಕೇಸು ಮತ್ತು ಸಾರಿಗೆ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕಾರ್ಕಳ ಪುರಸಭಾ ಸದಸ್ಯ ಬಂಡಿಮಠ ಬಸ್ ನಿಲ್ದಾಣ ಹೋರಾಟಗಾರ ಮುಹಮ್ಮದ್ ಶರೀಫ್ ಅವರು ಜಿಲ್ಲಾಡಳಿತಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಗಸ್ಟ್ 1ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾರ್ಕಳ ತಾಲೂಕಿನ ಅಭಿವೃದ್ಧಿಯನ್ನು
ದೃಷ್ಟಿಯಲ್ಲಿರಿಸಿಕೊಂಡು ಬಂಡಿಮಠದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಪುರಸಭೆಯ ಸರ್ವ ಸದಸ್ಯರು ಒಮ್ಮತದಿಂದ ಕೈಗೊಂಡ ನಿರ್ಣಯದ ಪ್ರಕಾರವೇ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಇದುವರೆಗೂ ಸದ್ಬಳಕೆ ಮಾಡುವ ಕೆಲಸ ನಡೆದಿಲ್ಲ ಎಂದು ಶರೀಫ್ ಆರೋಪಿಸಿದರು.

ಕೆಎಸ್ಆರ್ ಟಿಸಿ ಬಸ್ ಗಳು ಮಾತ್ರ ಪ್ರಸ್ತುತ ಬಂಡಿಮಠ ಬಸ್ ನಿಲ್ದಾಣಕ್ಕೆ ಬರುತ್ತಿವೆ. ಆದರೆ ಒಂದೇ ಒಂದು ಕೆಎಸ್ಆರ್ಟಿಸಿ ಬಸ್ ಸಹ ಕಾರ್ಕಳ-ಮಂಗಳೂರು ನಡುವೆ
ಸಂಚರಿಸುತ್ತಿಲ್ಲ. ಇದು ಹೊರತುಪಡಿಸಿದರೆ ಕೇವಲ 8-10 ಖಸಗಿ ಬಸ್ ಗಳು ಮಾತ್ರ ಇಲ್ಲಿಗೆ ಬರುತ್ತಿವೆ. ಬೆಂಗಳೂರು ಮುಂತಾದ ದೂರದ ಊರುಗಳಿಗೆ ಸಂಚರಿಸುವ ಬಸ್ ಗಳು ಕೂಡಾ ಇದೇ ಬಸ್ ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಬೇಕು ಎಂದಿದೆ. ಆದರೆ ಯಾವುದೂ ನಡೆಯುತ್ತಿಲ್ಲ ಎಂದು ಮುಹಮ್ಮದ್ ಶರೀಫ್ ವಿಷಾಧ ವ್ಯಕ್ತಪಡಿಸಿದರು.

ಖಾಸಗಿ ಬಸ್ ಮಾಲಕರು ಮತ್ತು ವರ್ತಕರ ಲಾಬಿಗೆ ಸಾರಿಗೆ ಇಲಾಖಾಧಿಕಾರಿಯಾದ ಅರುಣ್ ಕುಮಾರ್ ಸಿಂಗ್ ಮಣಿದಿರುವುದೇ ಇದಕ್ಕೆ ಕಾರಣ. ಸಾರಿಗೆ ಇಲಾಖಾಧಿಕಾರಿಗಳು ಖಾಸಗಿ ಬಸ್ ಗಳ ಹಿಂದಿನ ಸಂಚಾರ ಮಾರ್ಗವನ್ನು ಬದಲಾಯಿಸಬೇಕು. ಆದರೆ ಅವರು ಹಾಗೆ ಮಾಡದೆ ಬಸ್ ಮಾಲೀಕರ ಪರ ಬ್ಯಾಟಿಂಗ್ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಇದೆಲ್ಲ ಗೊತ್ತಿದ್ದರೂ ಜಿಲ್ಲಾಧಿಕಾರಿಗಳು ಸಹ ಮೌನವಹಿಸಿದ್ದಾರೆ ಎಂದು ಮುಹಮ್ಮದ್ ಶರೀಪ್ ದೂರಿದರು.

ಕಾರ್ಕಳದಲ್ಲಿರುವ ಎರಡೂ ಬಸ್ ನಿಲ್ದಾಣಗಳನ್ನೂ ಸಮಾನವಾಗಿ ಬಳಕೆ ಮಾಡಬೇಕು ಎಂಬುದು ಹೈಕೋರ್ಟ್ 2102ರಲ್ಲಿ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಆದರೆ ಈ ಆದೇಶವನ್ನು ಜಿಲ್ಲಾಡಳಿತ ಪಾಲಿಸದೇ ಇರುವುದು ದುರಂತ. ಸರ್ವ ಪಕ್ಷಗಳ 23 ಸದಸ್ಯರೂ ಪುರಸಭೆಯೊಒಳಗೆ ಬಂಡಿಮಠ ಬಸ್ ನಿಲ್ದಾಣದ ಪರವಾಗಿಯೇ ಮಾತಾಡುತ್ತಾರೆ. ಆದರೆ ಇವರೂ ಸಹ ಹೊರಗಡೆ ಮೌನವಾಗುತ್ತಾರೆ ಎಂದು ಶರೀಫ್ ಮಾರ್ಮಿಕವಾಗಿ ವಸ್ತುಸ್ಥಿತಿಯನ್ನು ವಿವರಿಸಿದರು.

ಜಿಲ್ಲಾಧಿಕಾರಿಗಳು ಎರಡು ಬಾರಿ ಬಂಡಿಮಠ ಬಸ್ ನಿಲ್ದಾಣದ ಪರವಾಗಿ ನೋಟಿಫಿಕೇಶನ್ ಮಾಡಿದ್ದಾರೆ. ಆದರೆ ನೋಟಿಫಿಕೇಶನ್ ಮಾತ್ರ ಕಾರ್ಯಗತವಾಗಿಲ್ಲ. ಹೀಗೆ ಮಾಡಿದ ಎರಡೇ ದಿನದಲ್ಲಿ ಖಾಸಗಿ ಬಸ್ ಗಳ ಪರ್ಮಿಟ್ ನ್ನು ಬದಲಾವಣೆ ಮಾಡುವ ಅಧಿಕಾರ ಮತ್ತು ಅವಕಾಶ ಜಿಲ್ಲಾಧಿಕಾರಿಗಳಿಗೆಯಾದರೂ ಅವರದನ್ನು ಮಾಡಿಲ್ಲ. ಕಳೆದ 20 ದಿನಗಳಿಂದ ಸತತವಾಗಿ ಸಾರಿಗೆ ಇಲಾಖಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವ ಯತ್ನ
ನಡೆಸಿದ್ದೇನಾದರೂ ವಿಫಲವಾಗಿದೆ ಎಂದು ಹೇಳಿದ ಶರೀಫ್ ಅವರು, ವಾರದೊಳಗೆ ಬೇಡಿಕೆ ಈಡೇರದೇ ಇದ್ದಲ್ಲಿ ಹೈಕೋರ್ಟಲ್ಲಿ ನ್ಯಾಯಾಂಗ ನಿಂದನೆ ದಾವೆ ದಾಖಲಿಸಲಾಗುವುದು ಮತ್ತು ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು. ಜೊತೆಗೆ ಹೋರಾಟಗಳನ್ನೂ ಆರಂಭಿಸಲಾಗುವುದು ಎಂದು ತಿಳಿಸಿದರು.

# ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತನಿಕೋಡು ಚೆಕ್ ಪೋಸ್ಟ್ ನಲ್ಲಿ ಜಾನಾವಾರು ಸಾಗಾಟ ಮಾಡುತ್ತಿದ್ದ ಮಂಗಳೂರು ಸಮೀಪದ ಜೋಕಟ್ಟೆಯ ಕಬೀರ್ (28) ಎಂಬವರನ್ನು ಗುಂಡು ಹೊಡೆದು ಕೊಲೆಗೈದ ಎಎನ್ಎಫ್ ಪೊಲೀಸ್ ಪೇದೆ ನವೀನ್ ನಾಯ್ಕ ಎಂಬವರಿಗೆ ಕಾರ್ಕಳ ವಿಧಾನಸಭೆಯ ಭಾರತೀಯ ಜನತಾ ಪಾರ್ಟಿಯ ಶಾಸಕ ವಿ.ಸುನಿಲ್ ಕುಮಾರ್ ಹಾಗೂ ಸಂಘ ಪರಿವಾರದ ಕೆಲವು ಮಂದಿ ನಾಯಕರು 50 ಸಾವಿರ ರು.ಗಳಿಂದ 50 ಲಕ್ಷ ರು.ಗಳವರೆಗೆ ನಗದು ಬಹುಮಾನ ಘೊಷಿಸಿದ್ದಾರೆ.

ಇದೊಂದು ಅತೀ ಕೆಟ್ಟ ಬೆಳವಣಿಗೆ. ಅಕ್ಷಮ್ಯ ಅಪರಾಧವೇ ಸರಿ. ಕೆಲವೊಂದು ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ತಮ್ಮ ಶತ್ರುಗಳನ್ನು ಕೊಂದವರಿಗೆ ಬಹುಮಾನ ಘೋಷಿಸಿರುವುದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾದುದಿದೆ. ಅವುಗಳಾದರೋ ಅಧಿಕೃತವಾಗಿಯೇ ಉಗ್ರಗಾಮಿ ಸಂಘಟನೆಗಳು. ಇದೇ ಕಾರಣಕ್ಕೆ ಹಲವು ದೇಶಗಳು ಇಂಥ ಸಂಘಟನೆಗಳನ್ನು ನಿಷೇಧಿಸಿದ್ದು ಜಗಜ್ಜಾಹೀರು. ಆದರೆ, ಈ ಸಂಘ ಪರಿವಾರದ ಸಂಘಟನೆಗಳಿಗೇನಾಗಿದೆ ?

ತಮ್ಮದು ಸಾಂಸ್ಕೃತಿಕ ಸಂಘಟನೆ, ರಾಜಕೀಯ ಪಕ್ಷ ಎಂದೆಲ್ಲಾ ಘೋಷಿಸಿಕೊಂಡು ಕೊಲೆಗಡುಕನಿಗೆ ಬಹುಮಾನ ಪ್ರಕಟಿಸಿದರೆ, ಮುಸ್ಲೀಮ್ ಉಗ್ರ ಸಂಘಟನೆಗಳಿಗೂ, ಸಂಘ ಪರಿವಾರದ ಸಂಘಟನೆಗಳಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ. ಮುಸ್ಲೀಮ್ ಉಗ್ರ ಸಂಘಟನೆಯ ಹಾದಿಯನ್ನೇ ಸಂಘ ಪರಿವಾರದ ಸಂಘಟನೆಗಳೂ ಹಿಡಿಯುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಸಂಘ ಪರಿವಾರದ ಸಂಘಟನೆಗಳು ಮುಸ್ಲೀಮ್ ಧ್ವೇಷವನ್ನೇ ಉಸಿರಾಡುತ್ತಿರುವುದೇ ಇವರು ಹೀಗೆ ಹೇಳಲು ಕಾರಣವೆಂಬುದನ್ನು ಯಾರೂ ಬೇಕಾದರೂ ಅರ್ಥೈಸಿಕೊಳ್ಳಬಹುದು. ಆದರೆ, ಹೀಗೆ ಘೋಷಿಸುವುದು ಕಾನೂನು ಬಾಹಿರ, ಅನೈತಿಕ.

‘ಕಬೀರ್ ನನ್ನು ಕೊಲೆಗೈದ ನವೀನ್ ನಾಯ್ಕನಿಗೆ ಧನ ಸಹಾಯದ ಜೊತೆಗೆ, ಇಂಥ ಘಟನೆಗಳು ಇನ್ನಷ್ಟೂ ನಡೆಯಬೇಕು, ನವೀನ್ ನಾಯ್ಕನಂಥವರು ನೂರಾರು ಜನ ತಯಾರಾಗಬೇಕು’ ಎಂದೂ ಶಾಸಕ ಸುನಿಲ್ಕುಮಾರ್ ತನ್ನ ಭಾಷಣದಲ್ಲಿ ಘೋಷಿಸಿದ್ದರು. ಇದು ಅಪರಾಧ ಕೃತ್ಯಕ್ಕೆ ಬಹಿರಂಗವಾಗಿಯೇ ಬೆಂಬಲ, ಪ್ರೋತ್ಸಾಹ, ಪ್ರಚೋದನೆ ಕೊಟ್ಟಂತೆ. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆಗೆ ಪ್ರೋತ್ಸಾಹ, ಪ್ರಚೋದನೆ, ಕೊಲೆಗಾರನಿಗೆ ಬೆಂಬಲ ನೀಡುವುದು ಸಹ ಅಷ್ಟೇ ದೊಡ್ಡ ಅಪರಾಧ. ಒಂದು ರೀತಿಯಲ್ಲಿ ಇದು ಇಂಥದ್ದೇ ಮುಂದಿನ ಕೊಲೆಗಳಿಗೆ ಸುಪಾರಿ ಕೊಟ್ಟಂತೆ.

ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ಸಹ ಯಾವುದೇ ದೇಶಗಳೂ ಕೂಡಾ ಭಯೋತ್ಪಾದಕರ ಹತ್ಯೆಗೆ ಬಹಿರಂಗವಾಗಿ ಕರೆ ಕೊಡುವುದಿಲ್ಲ. ಬದಲಾಗಿ ಭಯೋತ್ಪಾದಕರ ಭಾವಚಿತ್ರವನ್ನು ಸಾರ್ವಜನಿಕಗೊಳಿಸುವುದರ ಜೊತೆಗೆ ಮಾಹಿತಿ ನೀಡಿದವರಿಗೆ ಲಕ್ಷಾಂತರ ರು.ಗಳ ಬಹುಮಾನ ಘೋಷಿಸುತ್ತವೆ. ನಕ್ಸಲೀಯ ಚಳುವಳಿಯಲ್ಲಿ ನಿರತರಾದವರ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸುತ್ತದೆ. ಇದರ ಅರ್ಥ, ಶಂಕಿತ ಆರೋಪಿಗಳು ಜೀವಂತ ಸೆರೆ ಸಿಕ್ಕಬೇಕು ಎಂಬುದಲ್ಲದೇ ಮತ್ತೇನೂ ಅಲ್ಲ. ಆರೋಪಿಗಳು ಜೀವಂತ ಸೆರೆ
ಹಿಡಿಯಲ್ಪಡಬೇಕು. ಬಳಿಕ ಇವರನ್ನು ಇಲಾಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮತ್ತಷ್ಟೂ ಮಾಹಿತಿಗಳನ್ನು ಸಂಗ್ರಹಿಸಬೇಕು, ನಂತರ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಬೇಕು, ಅಂತಿಮವಾಗಿ ಅಪರಾಧ ಸಾಬೀತಾಗಿ ಶಿಕ್ಷೆ ನೀಡಬೇಕು ಎಂಬ ಉದ್ಧೇಶವೇ ಇಲ್ಲಿರುವುದು ಹೊರತು ಬೇರೇನೂ ಅಲ್ಲ. ವಾಸ್ತವ ಮತ್ತು ಆಶಯ ಹೀಗಿರುವಾಗ ಕೊಲೆ ಆರೋಪಿಯೋರ್ವನಿಗೆ ನಗದು ಬಹುಮಾನ ಘೋಷಿಸುವುದು, ಇಂಥ ಕೃತ್ಯಗಳು ಇನ್ನಷ್ಟೂ ನಡೆಯಬೇಕು ಎಂದು ಪ್ರಚೋದಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಶಾಸಕ ಸುನಿಲ್ ಕುಮಾರ್ ಹಾಗೂ ಇತರ ಕೆಲವರು ವ್ಯಕ್ತಪಡಿಸಿರುವ ಅಭಿಪ್ರಾಯ, ನಿಲುವುಗಳು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಅಧಿಕೃತ ನಿಲುವುಗಳಾ ಎನ್ನುವುದು ಬಿಜೆಪಿ ಮತ್ತು ಸಂಘ ಪರಿವಾರದ ಸಂಬಂಧಿಸಿದ ಸಂಘಟನೆಗಳು ಸ್ಪಷ್ಟಪಡಿಸಿಬೇಕು. ಬಿಜೆಪಿ ಮತ್ತು ಸಂಬಂಧಿಸಿದ ಸಂಘಟನೆಗಳು ಹೀಗೆ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ. ಕಾರಣ, ಈ ವಿಷಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನಿಷೇಧಿತ ನಕ್ಸಲೀಯ ಸಂಘಟನೆಯಾದ ಸಿಪಿಐ (ಮಾವೋವಾದಿ) ಪಕ್ಷದ ನೀತಿಯನ್ನೇ ಅನುಸರಿಸಬಹುದು. ನಕ್ಸಲರು ಆಕ್ರಮಣ ಮಾಡಲು ಸೂಕ್ತ ಕಾಲ ಎಂದು ಕಂಡು ಬಂದಾಗ ಆಕ್ರಮಣ ನಡೆಸಿಬಿಡುತ್ತವೆ. ಬಳಿಕ ಪ್ರಭುತ್ವದ ಕಾರ್ಯಾಚರಣೆ ಚುರುಕುಗೊಂಡಾಗ, ಹಿಂದೆ ಸರಿದು ಬಿಡುತ್ತದೆ. ಇದು ನಕ್ಸಲ್ ಸಂಘಟನೆಯ ಒಂದು ಯುದ್ಧತಂತ್ರ. ಸಂಘ ಪರಿವಾರ ಕೂಡಾ ಹೀಗೆಯೇ ಮಾಡಿಬಿಡುವ ಸಾಧ್ಯತೆ ಇದೆ. ಭಾಷಣಗಳಲ್ಲಿ ತನ್ನ ನಿಜ ಮುಖವನ್ನು ಪ್ರದರ್ಶಿಸುವುದು. ಬಳಿಕ ಸಮಸ್ಯೆಯಾದಾಗ ‘ಅದು ಒಬ್ಬ ವ್ಯಕ್ತಿಯ ವಯುಕ್ತಿಕ ಅಭಿಪ್ರಾಯ, ಅವರ ಅಭಿಪ್ರಾಯಕ್ಕೂ ಸಂಘಟನೆಗೂ ಸಂಬಂಧವೇ ಇಲ್ಲ’ ಎಂದು ಹೇಳಿಬಿಡಬಹುದು.

ಶಾಸಕ ಸುನಿಲ್ ಕುಮಾರ್ ಆಗಲೀ, ಸಂಘ ಪರಿವಾರದ ಸಂಘಟನೆಗಳಾಗಲೀ ಸ್ಪಷ್ಟನೆ ಕೊಡುವುದಕ್ಕಿಂತಲೂ ಮುಖ್ಯವಾದುದು, ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ರಾಷ್ಟ್ರಪತಿ, ರಾಜ್ಯಪಾಲರು, ಚುನಾವಣಾ ಆಯೋಗ, ಲೋಕಸಭಾಧ್ಯಕ್ಷರು, ವಿಧಾನಸಭೆಯ ಸಭಾಪತಿಗಳು, ಪೊಲೀಸ್ ಇಲಾಖಾಧಿಕಾರಿಗಳೆಲ್ಲ ಏನು ಮಾಡುತ್ತಿದ್ದಾರೆ ಎಂಬುದು ಬಹಿರಂಗವಾಗಬೇಕು. ಭಾರತದ ಸಂವಿಧಾನದಲ್ಲಿ ಸಂವಿಧಾನದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿಕೊಂಡು ಶಾಸಕನಾದ ವ್ಯಕ್ತಿ ಹೀಗೆ ಭಾಷಣ ಮಾಡಲು ಅವಕಾಶ ಇದೆಯೇ, ಇಲ್ಲವೇ, ಇಲ್ಲವೆಂದಾದರೆ ಹಾಗೆ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಪಕ್ಷ ಮತ್ತು ಸಂಘಟನೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಬೇಕು.

ದೇಶದಲ್ಲಿ ಸಮರ್ಥವಾದೊಂದು ಚುನಾವಣಾ ಆಯೋಗ ಇರುತ್ತಿದ್ದರೆ, ಬಿಜೆಪಿಯಂಥ ಪಕ್ಷ ನೋಂದಣಿಯೇ ಆಗುತ್ತಿರಲಿಲ್ಲ. ಹೋಗಲಿ, ಹೇಗೋ ನೋಂದಣಿಯಾಯಿತು. ನೋಂದಣಿಯಾದ ಮೇಲೆ ಪಕ್ಷಗಳ ನಡೆ-ನುಡಿ ಬಹಿರಂಗಕ್ಕೆ ಬಂದ ಬಳಿಕವಾದರೂ, ಪಕ್ಷದ ನಿಜವಾದ ಧ್ಯೇಯೋದ್ಧೇಶಗಳು ಜಗಜ್ಜಾಹೀರುಗೊಂಡ ಬಳಿಕವಾದರೂ ಅಂಥ ಪಕ್ಷದ ನೋಂದಣಿಯನ್ನು ರದ್ದುಗೊಳಿಸುವ ಕೆಲಸ ಮಾಡಬೇಡವೇ ? ಯಾಕೆ ಈ ತುರ್ತು ಕೆಲಸವನ್ನು ಚುನಾವಣಾ ಆಯೋಗ ಅಥವಾ ಇತರ ಸಂಸ್ಥೆಗಳು, ಹಿರಿಯ ಅಧಿಕಾರಿಗಳು ಮಾಡುತ್ತಿಲ್ಲ ? ಶಾಸಕರ ಶಾಸಕತ್ವವನ್ನಾದರೂ ರದ್ದುಪಡಿಸಬೇಡವೇ ?

ಇದು ಬಿಜೆಪಿಗೆ ಮಾತ್ರ ಸೀಮಿತವಾದ ಮಾತಲ್ಲ. ಇತರ ಕೆಲವು ಪ್ರಮುಖ ರಾಜಕೀಯ ಪಕ್ಷಗಳೂ ಬಿಜೆಪಿಯ ಸಾಲಿನಲ್ಲೇ ಇವೆ. ಶಾಸಕ ಸುನಿಲ್ ಕುಮಾರ್ ರಂಥ ಇನ್ನಷ್ಟು ಜನಪ್ರತಿನಿಧಿಗಳೂ ಈ ಪಟ್ಟಿಯಲ್ಲಿದ್ದಾರೆ. ಇಂಥವರೆಲ್ಲರ ಪಟ್ಟಿಯೊಂದನ್ನು ತಯಾರಿಸಿ ಇವರುಗಳ ವಿರುದ್ಧ ಕ್ರಮಕೈಗೊಳ್ಳುವ ಕನಿಷ್ಟ ಕರ್ತವ್ಯವನ್ನೂ ಯಾಕೆ ಯಾವ ಜವಾಬ್ದಾರಿಯುತ ಸಂಸ್ಥೆಗಳೂ ಮಾಡುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಸಂವಿಧಾನಬದ್ಧವಾಗಿ ನಡೆಯದ ಜನಪ್ರತಿನಿಧಿಗಳ ಜನಪ್ರತಿನಿಧಿತ್ವವನ್ನು ಯಾವುದೇ ಮುಲಾಜಿಲ್ಲದೆ ರದ್ದುಪಡಿಸಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವಂಥ ಸಂಸ್ಥೆಗಳು, ಅವುಗಳು ಎಷ್ಟೇ ದೊಡ್ಡ ಸಂಸ್ಥೆಗಳಾಗಿರಲಿ ಅಂಥ ಸಂಸ್ಥೆಗಳನ್ನು ನಿಷೇಧಿಸಬೇಕು.

ಮಾದರಿಯಾಗಬೇಕಾದ, ಆದರ್ಶವಾಗಬೇಕಾದ ಪಕ್ಷಗಳು, ಸಂಘಟನೆಗಳು, ಜನಪ್ರತಿನಿಧಿಗಳು, ಸಂವಿಧಾನ ವಿರೋಧಿಯಾಗಿ, ಕಾನೂನು ಬಾಗಿರವಾಗಿ ನಡೆದುಕೊಳ್ಳುವುದು, ಇವುಗಳು ಒಂದು ಮನೋರಂಜನೆಯ ವಿಷಯ ಎಂಬಂತೆ ಪತ್ರಿಕೆಗಳಲ್ಲಿ, ಟಿವಿ ಛಾನೆಲ್ ಗಳಲ್ಲಿ ಪ್ರಸಾರವಾಗುವುದು, ಮರುದಿನವೇ ಇವುಗಳೆಲ್ಲವನ್ನೂ ಎಲ್ಲರೂ ಮರೆತುಬಿಡುವುದು ಇಂದು ನಡೆಯುತ್ತಿದೆ. ಕಳೆದ ಐದಾರು ದಶಕಗಳಿಂದಲೂ ದೇಶದಲ್ಲಿ ಹೀಗೆಯೇ ನಡೆದುಕೊಂಡು ಬಂದಿದೆ. ಕ್ರಮ ತೆಗೆದುಕೊಳ್ಳಬೇಕಾದವರು ಜಾಣ ಮೌನ ವಹಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಇಂಥ ಅಕ್ರಮಗಳು ಯಾವುದೇ ಅಡೆತಡೆಗಳೂ ಇಲ್ಲದೆ ಮುಂದುವರಿದುಕೊಂಡು ಬಂದಿದೆ.

ಕಳೆದ ಆರು ದಶಕಗಳಿಂದ ದೇಶ ಮತ್ತು ರಾಜ್ಯವನ್ನಾಳಿದ ಸರಕಾರಗಳು, ಮಂತ್ರಿಗಳು, ಉನ್ನತ ಸರಕಾರಿ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಮರ್ಥವಾಗಿ, ದಕ್ಷತೆಯಿಂದ ನಿರ್ವಹಿಸದೇ ಇದ್ದುದೇ ಇಂದಿನ ಇಂಥ ಎಲ್ಲಾ ಅವಾಂತರಗಳಿಗೂ ಮೂಲ ಕಾರಣ. ಬಹುಕಾಲ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವೇ ಒಂದು ಮಾನ್ಯತೆ ಕಳೆದುಕೊಳ್ಳಬೇಕಾದ, ರದ್ದುಗೊಳಬೇಕಾದ ಪಕ್ಷವಾಗಿರುವಾಗ, ಈ ಪಕ್ಷದಲ್ಲೇ ಜನಪ್ರತಿನಿಧಿತ್ವವನ್ನು ಕಳೆದುಕೊಳ್ಳಬೇಕಾದ ಜನಪ್ರತಿನಿಧಿಗಳು ಇರುವಾಗ, ಇಂಥ ಪಕ್ಷದ ಸರಕಾರ ಸಂವಿಧಾನಬದ್ಧವಾಗಿ, ಕಾನೂನು ಪ್ರಕಾರ ನಡೆದುಕೊಳ್ಳುವ ಸಾಹಸವನ್ನು ಪ್ರದರ್ಶಿಸಲು ಸಾಧ್ಯವಿಲ್ಲ ತಾನೇ ? ಇಲ್ಲಿ ಆಗಿರುವುದು ಸಹ ಇದುವೇ ! – ಶ್ರೀರಾಮ ದಿವಾಣ.

ಉಡುಪಿ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರ್ ಕೈಕಂಬ ನಿವಾಸಿ ಹಜರತ್ (38) ಎಂಬಾತ ಹಿರ್ಗಾನ ಗ್ರಾಮದ ಪೆರ್ನಬೆಟ್ಟು ನಿವಾಸಿ ಪ್ರಕಾಶ್ ನಾಯಕ್ (39) ಎಂಬವರ ಪತ್ನಿಯನ್ನು ಮಾನಭಂಗ ಮಾಡುವ ಉದ್ಧೇಶದಿಂದ ಅಪಹರಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯ ಪೋಲಿಸರು ಹಜರತ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಶಿವಪುರ ಗ್ರಾಮದ ನಿವಾಸಿ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅಪ್ಪು (50) ಎಂಬವರು ಶಿವಪುರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಮೈದಾನದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯಲ್ಲಿ ಮದ್ಯಪಾನ ಮಾಡಿ ಕುಣಿದು
ಕುಪ್ಪಳಿಸುತ್ತಿದ್ದ ಅಪ್ಪು, ರಾತ್ರಿ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಂದು ಉಡುಪಿಯ ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಢಶಾಲಾ ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಬ್ರಹ್ಮಾವರ ವಲಯಕ್ಕೆ ಸೇರಿದ ಮೂಡುಗಿಳಿಯಾರು ಸರಕಾರಿ ಪ್ರೌಢಶಾಲಾ ತಂಡಕ್ಕೆ ಪ್ರಥಮ ಪ್ರಶಸಸ್ತಿ ಲಭಿಸಿದೆ.
ಮೂಡುಗಿಳಿಯಾರು ಸರಕಾರಿ ಪ್ರೌಢಶಾಲಾ ಬಾಲ್ ಬ್ಯಾಡ್ಮಿಂಟನ್ ತಂಡವು ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ಇದು ಮೂರನೇ
ಬಾರಿಯಾಗಿದೆ. ಕಳೆದ ಎರಡು ವರ್ಷ ಸಹ ಇದೇ ಶಾಲೆಯ ತಂಡಕ್ಕೆ ಪ್ರಥಮ ಪ್ರಸಸ್ತಿ ಸಂದಿದೆ. ಈ ವರ್ಷದ ತಂಡದಲ್ಲಿ ನೇತ್ರಾವತಿ, ದಿವ್ಯ, ಸುಜಾತಾ, ಸೌಜನ್ಯ, ಸ್ವಾತಿ, ಚಿತ್ರಾ, ಸೌಜನ್ಯ ಶೆಟ್ಟಿ ಹಾಗೂ ಸುಲೇಖಾ ಭಾಗಿಯಾಗಿದ್ದರು.
ಬಾಲಕರ ವಿಭಾಗದಲ್ಲಿ ಕುಂದಾಪುರ ವಲಯದ ಗಂಗೊಳ್ಳಿಯ ಎಸ್ ವಿ ಆಂಗ್ಲ ಮಾದ್ಯಮ ಪ್ರೌಢಶಾಲಾ ತಂಡ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ. ದ್ವಿತಿಯ ಪ್ರಶಸ್ತಿಗಳನ್ನು ಬಾಲಕರ ವಿಭಾಗದಲ್ಲಿ ಬ್ರಹ್ಮಾವರ ವಲಯದ ಹೇರಾಡಿ ಎಸ್ ವಿ ವಿ ಎನ್ ಆಂಗ್ಲ ಮಾದ್ಯಮ ಪ್ರೌಢಶಾಲಾ ತಂಡ ಮತ್ತು ಬಾಲಕಿಯರ ವಿಭಾಗದಲ್ಲಿ ಕಾರ್ಕಳ ವಲಯದ ಪೆರ್ವಾಜೆಯ ಸರಕಾರಿ ಪ್ರೌಢಶಾಲಾ ತಂಡ ಪಡೆದುಕೊಂಡಿದೆ.
ಪ್ರಶಸ್ತಿ ವಿಜೇತ ತಂಡಗಳು ಅಕ್ಟೋಬರ್ ತಿಂಗಳಲ್ಲಿ ಚಾಮರಾಜನಗರದಲ್ಲಿ ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದೆ. ವಿಜೇತ ತಂಡಗಳಿಗೆ ಸಂಜೆ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಅಜ್ಜರಕಾಡು ಸರಕಾರಿ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರೂ, ವಕೀಲರೂ ಆದ ಜಯಪ್ರಕಾಶ್ ಕೆದ್ಲಾಯ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಪ್ರಕೃತಿಯ ಮಾಜಿ ಅಧ್ಯಕ್ಷರಾದ ರವೀಂದ್ರ ಆಚಾರ್ಯ, ಜಿಲ್ಲಾ ದೈಹಿಕ
ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜಪ್ಪ, ತೀರ್ಪುಗಾರರಾಗಿದ್ದ ಸುದರ್ಶನ್, ಅಜ್ಜರಕಾಡು ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನಾ, ದೈಹಿಕ ಶಿಕ್ಷಕರಾದ ಸೋಮಪ್ಪ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು.