Posts Tagged ‘ಕೃಷಿಕರು’

http://www.udupibits.in
# ಉಡುಪಿಯಲ್ಲಿ ರೇಷ್ಮೆ ಬೆಳೆಯತ್ತ ಆಕರ್ಷಿತರಾಗಿದ್ದಾರೆ ಹೊಸ ರೈತರು. ಕಳೆದ ಸಾಲಿನಲ್ಲಿ ಸುಮಾರು ಒಟ್ಟು 75 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದ ರೇಷ್ಮೆ, ಪ್ರಸಕ್ತ ಸಾಲಿನಲ್ಲಿ ಮತ್ತೆ ಹೊಸದಾಗಿ 12 ಎಕರೆ ಪ್ರದೇಶದಲ್ಲಿ ವ್ಯಾಪಿಸುವ ಮೂಲಕ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಉಡುಪಿ ಜಿಲ್ಲೆಯ 15 ಹೊಸ ರೈತರು ರೇಷ್ಮೆ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕಾರ್ಕಳ ತಾಲೂಕಿನ ಮಾಳ, ಅಜೆಕಾರು, ಹೆಬ್ರಿ, ಮುದ್ರಾಡಿಯಲ್ಲಿ, ಕುಂದಾಪುರ ತಾಲೂಕಿನ ಅಜ್ರಿ, ಕೊಡ್ಲಾಡಿ, ಕರ್ಕುಂಜೆ, ಅಮಾಸೆಬೈಲು, ಕೆರಾಡಿ, ಮಾರಣಕಟ್ಟೆಯಂತಹ ಪ್ರದೇಶಗಳಲ್ಲಿ ರೇಷ್ಮೆ ಕೃಷಿಯತ್ತ ರೈತರು ವಾಲಿದ್ದಾರೆ.

ಅತ್ಯಂತ ವೈಜ್ಞಾನಿಕವಾಗಿ ಬೆಳೆಯುವ ಬೆಳೆ ರೇಷ್ಮೆ; ನಾಜೂಕಾದ ಈ ಬೆಳೆಯನ್ನು ರೇಷ್ಮೆ ಇಲಾಖೆಯ ಪರಿಣಿತರು ನೀಡಿದ ತರಬೇತಿ ಮತ್ತು ಮಾಹಿತಿಯಂತೆ ಬೆಳೆಯಬೇಕು.

ಇರುವೆ, ಜಿರಳೆಗಳ ಕಾಟ ಹಾಗೂ ಹೆಚ್ಚಿನ ಕಾಳಜಿ ಮತ್ತು ಜಾಗ್ರತೆ ರೇಷ್ಮೆ ಮೊಟ್ಟೆಯ ಬಗ್ಗೆ ರೈತರಿಗಿರಬೇಕು. ಉಡುಪಿಯಲ್ಲಿ 91 ರೈತ ಕುಟುಂಬ ರೇಷ್ಮೆ ಬೆಳೆಯಲ್ಲಿ ತಮ್ಮನ್ನು ತೊಡಗಿಸಿದ್ದು, ಹೆಚ್ಚಿನ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರದು.

ರೇಷ್ಮೆ ಇಲಾಖೆ ರೈತರಿಗೆ ವಿ 1 ತಳಿಯನ್ನು ಶಿಫಾರಸ್ಸು ಮಾಡಿದ್ದು, ಹೆಚ್ಚಿನ ಉತ್ಪಾದನೆ ಬರುವಂತೆ ನೋಡಿಕೊಂಡಿದ್ದಾರೆ. ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಈಗಾಗಲೇ ಆಸಕ್ತ ರೈತರಿಗೆ ತರಬೇತಿ ನೀಡಿದೆ. ಐದು ದಿನಗಳ ಕಾಲ ತರಬೇತಿ ಮತ್ತು ಒಂದು ದಿನ ಮೈಸೂರಿನ ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಹಾಗೂ ಉಡುಪಿಯ ಯಶಸ್ವೀ ರೈತರ ಅನಿಸಿಕೆಗಳನ್ನು ಹಂಚಿಕೊಳ್ಳಲು ಹೊಸ ರೈತರಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿ ಉಪೇಂದ್ರ ನಾಯಕ್ ಅವರು.

ಉಡುಪಿಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಕೊರತೆ ಇದ್ದರೂ, ರೈತರ ಆಸಕ್ತಿಗೆ ಪೂರಕವಾಗಿ ಇಲಾಖೆ ಸ್ಪಂದಿಸುತ್ತಿರುವುದರಿಂದ ನೆಲೆ ವಿಸ್ತರಿಸುವಲ್ಲಿ ಉಡುಪಿಯಲ್ಲಿ ರೇಷ್ಮೆ ಯಶಸ್ಸು ಕಾಣುತ್ತಿದೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗವನ್ನು ಹತೋಟಿ ಮಾಡಲು ಬೇರೆ ಬೇರೆ ಕಂಪೆನಿಗಳು ಸಾವಯವ ಸಸ್ಯ ಜನ್ಯ ಔಷಧಿಗಳನ್ನು ಬೇರೆ ಬೇರೆ ರೀತಿಯ ಅನೇಕ ಹೆಸರಿನಲ್ಲಿ (Bio-fite, Bio-pot, Agri-Biotech, Agri-foss, Agri-pos, Fito-Phose, Eco-Min, Pro-Alex, MCF, Beco-Min) ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾರಾಟ ಮಾಡುತ್ತಿರುವ ಔಷಧಿಯನ್ನು ರೈತರು ಸಿಂಪಡಿಸಿ ನಂತರದಲ್ಲಿ ಈ ರೀತಿ ಔಷಧಿಯನ್ನು ಸಿಂಪಡಿಸಿದ ತೋಟಗಳಲ್ಲಿ ಅಡಿಕೆ ಕಾಯಿಗಳು ಉದುರುವುದು, ಕೊಳೆಯುವುದು, ಒಡೆಯುವುದು, ಬೇಗ ಮಾಗುವುದು, ಈ ರೀತಿ ಸಮಸ್ಯೆಗಳು ಉಲ್ಬಣಿಸಿ ಅಡಿಕೆ ಬೆಳೆಗಾರರಿಗೆ ಇಳುವರಿ ಕಡಿಮೆಯಾಗಿ ನಷ್ಟವಾಗುತ್ತಿರುವ ಬಗ್ಗೆ ಅನೇಕ ರೈತರು ಹಾಗೂ ರೈತ ಮುಖಂಡರು ಇಲಾಖೆಗೆ ಮಾಹಿತಿ ನೀಡಿ ದೂರು ಸಲ್ಲಿಸಿರುತ್ತಾರೆ. ಈ ರೀತಿ ಸಾವಯವ ಸಸ್ಯ ಜನ್ಯ ಮೂಲ ಔಷಧಿಯನ್ನು ನಿಯಂತ್ರಿಸಲು ಯಾವುದೇ ರೀತಿಯ ನಿಯಮಗಳಿರುವುದಿಲ್ಲ. ಇಲಾಖೆ ಹಾಗೂ ಸಂಶೋಧನಾ ಸಂಸ್ಧೆಗಳು ಈ ರೀತಿ ಔಷಧಿಯನ್ನು ಉಪಯೋಗಿಸಬಾರದಾಗಿ ರೈತರಲ್ಲಿ ಈಗಾಗಲೇ ಅನೇಕ ಮನವಿ ಬಾರಿ ಮಾಡಿದೆ.ಈ ರೀತಿಯ ಔಷಧಿಗಳನ್ನು ಸಿಂಪಡಿಸಲು ಇಲಾಖಾ ಹಾಗೂ ಸಂಶೋಧನ ಸಂಸ್ಥೆಗಳು ಶಿಫಾರಸ್ಸು ಮಾಡಿರುವುದಿಲ್ಲ. ಇದರ ಬದಲಾಗಿ ಅಡಿಕೆ ಕೊಳೆ ರೋಗವನ್ನು ಸರ್ಮಪಕವಾಗಿ ನಿಯಂತ್ರಿಸಲು ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಲು ರೈತರಲ್ಲಿ ಮನವಿ ಮಾಡಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ರೈತರು ಶೇ. 1 ರ ಬೋರ್ಡೋ ದ್ರಾವಣವನ್ನು ತಯಾರಿಸಲು 1 ಕೆ.ಜಿ. ಸುಣ್ಣ ಹಾಗೂ 1 ಕೆ.ಜಿ ಮೈಲುತುತ್ತನ್ನು ಮೊದಲಿಗೆ ತಲಾ 10 ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಕರಗಿಸಿ, ನಂತರ 80 ಲೀಟರ್ ನೀರುಳ್ಳ 1 ಡ್ರಮ್ಮಿಗೆ ಈ ಎರಡು ಕರಗಿದ ದ್ರಾವಣಗಳನ್ನು ಒಂದೇ ಸಮಯದಲ್ಲಿ ಮಿಶ್ರಣ ಮಾಡಿ ತಯಾರಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಿಸಿದ ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಮರದ ಗೊನೆಗಳು ಹಾಗೂ ಎಲೆಗಳ ಭಾಗಗಳು ಚೆನ್ನಾಗಿ ತೊಯ್ಯುವಂತೆ ಸಿಂಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

http://www.udupibits.in news

ಉಡುಪಿ: ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ರೈತ ಸೂರ್ಯ ಯೋಜನೆಯಲ್ಲಿನ ಅವ್ಯವಹಾರ ಸಹಿತ ಪ್ರಮುಖ ಐದು ಪ್ರಮುಖ ಪ್ರಕರಣಗಳ ವಿರುದ್ಧ ಜಿಲ್ಲಾ ಕೃಷಿಕ ಸಂಘದ ಸದಸ್ಯರು ಇಂದು (18.10.2014) ಪೂರ್ವಾಹ್ನ ಉಡುಪಿಯ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಹೊಸ ಪಂಪು ವಿದ್ಯುತ್ ಸಂಪರ್ಕಕ್ಕೆ 10 ಸಾವಿರ ರು. ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವುದು, ವಿದ್ಯುತ್ ದರ ಏರಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲೈನ್ ಮೆನ್ ಗಳನ್ನು ನೇಮಕಾತಿ ಮಾಡದಿರುವುದರ ವಿರುದ್ಧವೂ ಕೃಷಿಕರು ಪ್ರತಿಭಟಿಸಿದರು. ರೈತ ಸೂರ್ಯ ಯೋಜನೆಯಲ್ಲಿ ರಾಜ್ಯದ ರೈತರು ಪಾಲ್ಗೊಳ್ಳಬೇಕೆಂದು ಪ್ರಚಾರಪಡಿಸಿದ ಅಲ್ಪ ಕಾಲದಲ್ಲಿಯೇ ಆನ್ ಲೈನ್ ನಲ್ಲಿ ಎಲ್ಲಾ ಕೋಟಾ ಮುಕ್ತಾಯಗೊಂಡಿರುವುದು ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ನಿರ್ವಹಣೆಗಾಗಿ ಲೈನ್ ಮೆನ್ ಗಳ ಕೊರತೆಯಿದ್ದು, ಕೂಡಲೇ ಲೈನ್ ಮೆನ್ ಗಳನ್ನು ನೇಮಕಾತಿ ಮಾಡುವ ಮೂಲಕ ಈ ಕೊರತೆಯನ್ನು ನೀಗಿಸಬೇಕು, ಈ ಬಾರಿ ಸಾಕಷ್ಟು ಮಳೆಯಾಗಿರುವುದರಿಂದ ವಿದ್ಯುತ್ ಲೋಡ್ ಶೆಡ್ಡಿಂಗ್ ಕೈಬಿಡಬೇಕು ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ದರ ಅಧಿಕವಿರುವುದರಿಂಝದ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದೂ ಕೃಷಿಕರು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ವಿದ್ಯುತ್ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಆರೋಪಿಸಿದರು.

ಪ್ರತಿಭಟನಾ ಸಭೆಯ ಬಳಿಕ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು ಕಾರ್ಯನಿವರ್ಾಹಕ ಇಂಜಿನಿಯರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕೋಶಾಧಿಕಾರಿ ಪಾಂಡುರಂಗ ನಾಯಕ್ ಹಿರಿಯಡ್ಕ, ಕಾರ್ಯದರ್ಶಿ ರವೀಂದ್ರ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಉಡುಪಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆ ಮುಂದಿಟ್ಟು ಉಡುಪಿ ತಾಲೂಕು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ 500 ಕ್ಕೂ ಅಧಿಕ ಮಂದಿ ನಿವೇಶನರಹಿತರನ್ನು ಇಂದು ಸಂಜೆ ಪೋಲಿಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು. ಮನೆ ಮತ್ತು ನಿವೇಶನಗಳನ್ನು ಕೋರಿ ಸ್ಥಳೀಯಾಡಳಿ ಸಂಸ್ಥೆಗಳಿಗೆ ಅರ್ಜಿಗಳನ್ನು ಸಲ್ಲಿಸಿದವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು, ಶ್ರೀಮಂತರು ಅಕ್ರಮವಾಗಿ ಕಬಳಿಸಿಕೊಂಡಿರುವ ಸರಕಾರಿ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಂಡು ಆ ಭುಮಿಯನ್ನು ನಿವೇಶನ ರಹಿತರಿಗೆ ವಿತರಿಸಬೇಕು, ಸರಕಾರಿ
ಭೂಮಿಯಲ್ಲಾಗಲಿ, ಅರಣ್ಯ ಭೂಮಿಯಲ್ಲಾಗಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಬಡವರ ಪ್ರಕರಣಗಳನ್ನು ಸಕ್ರಮಗೊಳಿಸಿ ಅವರಿಗೆ ಹಕ್ಕುಪತ್ರಗಳನ್ನು ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವಿಶೇಷ ಘಟಕ ಯೋಜನೆಯ ಅನುದಾನದಲ್ಲಿ ಮನೆ ನಿರ್ಮಿಸಿಕೊಡಬೇಕು, ಮನೆ ನಿರ್ಮಿಸಲು ಸಬ್ಸಿಡಿ ಸಹಿತ ಸಾಲದ ಮೊತ್ತವನ್ನು ಗ್ರಾಮೀಣ ಪ್ರದೇಶಕ್ಕೆ ರು. 2 ಲಕ್ಷ ಮತ್ತು ನಗರ ಪ್ರದೇಶಕ್ಕೆ ರು. 3 ಲಕ್ಷ ನಿಗದಿ ಮಾಡಬೇಕು, ಸರಕಾರಿ ಭೂಮಿ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಭೂಮಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಗತ್ಯ ಹಣ ಒದಗಿಸಿಕೊಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಿವೇಶನ ರಹಿತರು ಹೋರಾಟ ಹಮ್ಮಿಕೊಂಡಿದ್ದರು. ಸಿಐಟಿಯು ಬೆಂಬಲದೊಂದಿಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಂಡ ಹೋರಾಟದ ಭಾಗವಾಗಿ ಉಡುಪಿ ತಾಲೂಕು ಶಾಖೆಯು ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕವಿ ಮುದ್ದಣ ಮಾರ್ಗ, ಕೋರ್ಟ್ ರೋಡ್ ಮೂಲಕ ತಾ.ಪಂ.ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಬಳಿಕ ತಾ.ಪಂ.ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿ, ತಾಲೂಕು ಕಾರ್ಯದರ್ಶಿ ದೋಗು ಸುವರ್ಣ ಹಾಗೂ ವೆಂಕಟೇಶ ಕೋಣಿ ಮಾತನಾಡಿದರು. ಮುಖಂಡರುಗಳಾದ ಎಚ್.ವಿಠಲ ಪೂಜಾರಿ, ಕಾಪು ಲಕ್ಷ್ಮಣ, ಕೆ.ಶಂಕರ್, ಪಿ.ವಿಶ್ವನಾಥ ರೈ, ರಾಜೀವ ಪಡುಕೋಣೆ ಮುಂತಾದವರು ನೇತೃತ್ವ ವಹಿಸಿದ್ದರು.
ಧರಣಿ ನಿರತರ ಬಳಿಗೆ ಬಂದ ತಾ.ಪಂ.ಅಧಿಕಾರಿ ಎ.ಶ್ರೀನಿವಾಸ ರಾವ್, 2 ಗ್ರಾ.ಪಂ.ಗಳಲ್ಲಿ ನಿವೇಶನಗಳನ್ನು ವಿತರಿಸಲಾಗಿದೆ. 10 ಗ್ರಾ.ಪಂ.ಗಳಲ್ಲಿ ನಿವೇಶನ ರಹಿತರಿಗೆ ಭೂಮಿ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಉಡುಪಿ: ಎದೆ ನೋವಿನ ಔಷಧ ಎಂದು ತಿಳಿದು ಕಪಾಟಿನಲ್ಲಿಟ್ಟಿದ್ದ ಗದ್ದೆಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಪೆರ್ಡೂರು ಗ್ರಾಮದ ಹೊಸಳಿಗೆ ಹೊಸಮನೆ ನಿವಾಸಿ ಸಂಜೀವ ಶೆಟ್ಟಿ (38) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ 5 ಗಂಟೆಗೆ ಕೀಟ ನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಸಂಜೀವ ಶೆಟ್ಟಿಯವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯವರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ, ಶನಿವಾರ ಬೆಳಗ್ಗೆ 6 ಗಂಟೆಗೆ ಅವರು ಮೃತಪಟ್ಟರು.
ಈ ಬಗ್ಗೆ ಮೃತರ ಸಹೋದರ ಸುಬ್ಬಣ್ಣ ಶೆಟ್ಟಿ ನೀಡಿದ ದೂರಿನ ಪ್ರಕಾರ ಹಿರಿಯಡ್ಕ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಆವರಣವಿಲ್ಲದ ಬಾವಿಯ ಪಕ್ಕ ಹುಲ್ಲು ಕೊಯ್ಯುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ಬಾವಿಗೆ ಬಿದ್ದು ಅವಿವಾಹಿತ ಯುವತಿ ದೀಪಾ (21) ಮೃತಪಟ್ಟ ದುರ್ಘಟನೆ ಆದಿತ್ಯವಾರ ಸಂಜೆ ಚೇರ್ಕಾಡಿ ಗ್ರಾಮದ ಬೆನಗಲ್ ಎಂಬಲ್ಲಿ ಸಂಭವಿಸಿದೆ.
ಈ ಬಗ್ಗೆ ಮೃತಳ ಅಣ್ಣ ಸುರೇಶ್ ನಾಯ್ಕ ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ನಿವಾಸಿ ಮುಕ್ತಾನಂದ ಶೆಟ್ಟಿ (48) ಎಂಬವರು ಹುಲ್ಲು ಕಠಾವು ಮಾಡುತ್ತಿದ್ದಾಗ ಅಕಸ್ಮಾತ್ ಬಾವಿಗೆ ಬಿದ್ದು
ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತರ ಸಹೋದರ ಚಂದ್ರಹಾಸ ಶೆಟ್ಟಿ ನೀಡಿದ ದೂರಿನ ಪ್ರಕಾರ ಕಾರ್ಕಳ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.