Posts Tagged ‘ಕೃಷಿ ಇಲಾಖೆ’

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗವನ್ನು ಹತೋಟಿ ಮಾಡಲು ಬೇರೆ ಬೇರೆ ಕಂಪೆನಿಗಳು ಸಾವಯವ ಸಸ್ಯ ಜನ್ಯ ಔಷಧಿಗಳನ್ನು ಬೇರೆ ಬೇರೆ ರೀತಿಯ ಅನೇಕ ಹೆಸರಿನಲ್ಲಿ (Bio-fite, Bio-pot, Agri-Biotech, Agri-foss, Agri-pos, Fito-Phose, Eco-Min, Pro-Alex, MCF, Beco-Min) ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾರಾಟ ಮಾಡುತ್ತಿರುವ ಔಷಧಿಯನ್ನು ರೈತರು ಸಿಂಪಡಿಸಿ ನಂತರದಲ್ಲಿ ಈ ರೀತಿ ಔಷಧಿಯನ್ನು ಸಿಂಪಡಿಸಿದ ತೋಟಗಳಲ್ಲಿ ಅಡಿಕೆ ಕಾಯಿಗಳು ಉದುರುವುದು, ಕೊಳೆಯುವುದು, ಒಡೆಯುವುದು, ಬೇಗ ಮಾಗುವುದು, ಈ ರೀತಿ ಸಮಸ್ಯೆಗಳು ಉಲ್ಬಣಿಸಿ ಅಡಿಕೆ ಬೆಳೆಗಾರರಿಗೆ ಇಳುವರಿ ಕಡಿಮೆಯಾಗಿ ನಷ್ಟವಾಗುತ್ತಿರುವ ಬಗ್ಗೆ ಅನೇಕ ರೈತರು ಹಾಗೂ ರೈತ ಮುಖಂಡರು ಇಲಾಖೆಗೆ ಮಾಹಿತಿ ನೀಡಿ ದೂರು ಸಲ್ಲಿಸಿರುತ್ತಾರೆ. ಈ ರೀತಿ ಸಾವಯವ ಸಸ್ಯ ಜನ್ಯ ಮೂಲ ಔಷಧಿಯನ್ನು ನಿಯಂತ್ರಿಸಲು ಯಾವುದೇ ರೀತಿಯ ನಿಯಮಗಳಿರುವುದಿಲ್ಲ. ಇಲಾಖೆ ಹಾಗೂ ಸಂಶೋಧನಾ ಸಂಸ್ಧೆಗಳು ಈ ರೀತಿ ಔಷಧಿಯನ್ನು ಉಪಯೋಗಿಸಬಾರದಾಗಿ ರೈತರಲ್ಲಿ ಈಗಾಗಲೇ ಅನೇಕ ಮನವಿ ಬಾರಿ ಮಾಡಿದೆ.ಈ ರೀತಿಯ ಔಷಧಿಗಳನ್ನು ಸಿಂಪಡಿಸಲು ಇಲಾಖಾ ಹಾಗೂ ಸಂಶೋಧನ ಸಂಸ್ಥೆಗಳು ಶಿಫಾರಸ್ಸು ಮಾಡಿರುವುದಿಲ್ಲ. ಇದರ ಬದಲಾಗಿ ಅಡಿಕೆ ಕೊಳೆ ರೋಗವನ್ನು ಸರ್ಮಪಕವಾಗಿ ನಿಯಂತ್ರಿಸಲು ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಲು ರೈತರಲ್ಲಿ ಮನವಿ ಮಾಡಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ರೈತರು ಶೇ. 1 ರ ಬೋರ್ಡೋ ದ್ರಾವಣವನ್ನು ತಯಾರಿಸಲು 1 ಕೆ.ಜಿ. ಸುಣ್ಣ ಹಾಗೂ 1 ಕೆ.ಜಿ ಮೈಲುತುತ್ತನ್ನು ಮೊದಲಿಗೆ ತಲಾ 10 ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಕರಗಿಸಿ, ನಂತರ 80 ಲೀಟರ್ ನೀರುಳ್ಳ 1 ಡ್ರಮ್ಮಿಗೆ ಈ ಎರಡು ಕರಗಿದ ದ್ರಾವಣಗಳನ್ನು ಒಂದೇ ಸಮಯದಲ್ಲಿ ಮಿಶ್ರಣ ಮಾಡಿ ತಯಾರಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಿಸಿದ ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಮರದ ಗೊನೆಗಳು ಹಾಗೂ ಎಲೆಗಳ ಭಾಗಗಳು ಚೆನ್ನಾಗಿ ತೊಯ್ಯುವಂತೆ ಸಿಂಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

http://www.udupibits.in
# ಶ್ರದ್ಧೆ ಮತ್ತು ಆಸಕ್ತಿಯ ಫಲ ಕೋಟೇಶ್ವರದ ಬೀಜೋತ್ಪಾದನಾ ಕೇಂದ್ರದಲ್ಲಿ ನಳನಳಿಸುತ್ತಿದೆ. ಕೃಷಿ ಇಲಾಖೆಯ ಪ್ರಮುಖ ಯೋಜನೆಯಡಿ ಬೀಜೋತ್ಪಾದನೆಯು ಒಂದು. ರೈತರಿಗೆ ಅತ್ಯುತ್ತಮ ತಳಿಯ ಬೀಜಗಳನ್ನು ಕರ್ನಾಟಕ ಸೀಡ್ಸ್ ಕಾರ್ಪೋರೇಷನ್ ಗೆ ಪೂರೈಸುವ ಹೊಣೆಯೂ ಇಲಾಖೆಗಿದೆ.

ಪ್ರಸಕ್ತ ಸಾಲಿನಲ್ಲಿ ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಖುಷಿಯಾಗಿದೆ. ಇಲಾಖೆಯ ಕೋಟೇಶ್ವರ ಬೀಜೋತ್ಪಾದನಾ ಕೇಂದ್ರ ಹಸಿರಿನಿಂದ ನಳನಳಿಸುತ್ತಿದೆ. ಭತ್ತದ ತೆನೆಗಳು ತೂಗಿ ಬಾಗಿವೆ. ಶ್ರದ್ದೆಯಿಂದ ದುಡಿದ ಎಲ್ಲರ ಮುಖದಲ್ಲೂ ಮಂದಹಾಸ ಮಿನುಗಿದೆ.

ವಿವಿಧ ಕಾರಣಗಳಿಂದ ಕೃಷಿ ಜಿಲ್ಲೆಯಲ್ಲಿ ನಶಿಸುತ್ತಿರುವ ಸಂದರ್ಭದಲ್ಲಿ, 14 ಎಕರೆ ವ್ಯಾಪ್ತಿಯಲ್ಲಿ ತೆನೆಗಳಿಂದ ತುಂಬಿ ಬಳುಕುತ್ತಿರುವ ಭತ್ತದ ಫಸಲನ್ನು ನೋಡುತ್ತಿದ್ದರೆ ಕೃಷಿಯಲ್ಲಿರುವ ಖುಷಿಯನ್ನು ಅಲ್ಲಗಳೆಯಲು ಹೇಗೆ ಸಾಧ್ಯ ?

ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಅಲಭ್ಯತೆಯ ವೇಳೆಯಲ್ಲಿ ಸ್ವಾಭಾವಿಕ ನೀರಿನ ಹರಿವು ಹಾಗೂ ಸ್ಥಳೀಯ ನೀರಿನ ಮೂಲಗಳನ್ನು ಬಳಸಿ, ಪ್ರತಿದಿನ 8ರಿಂದ 10 ಕೃಷಿ ಕಾರ್ಮಿಕರನ್ನು ಬಳಸಿ 800 ಮಾನವ ದಿನಗಳ ಶ್ರಮದಿಂದ ಸಂಪೂರ್ಣ ಪಾಳುಬಿದ್ದ ಭೂಮಿಯನ್ನು ಭತ್ತದ ಬಗ್ಗೆ ಹೆಚ್ಚೇನೂ ಮಾಹಿತಿ ಇರದ ರೇಷ್ಮೆ ಇಲಾಖೆಯ ಅಧಿಕಾರಿ ರಾಜೇಂದ್ರ ಶೆಟ್ಟಿಗಾರ ಅವರು ಕೃಷಿ ಇಲಾಖೆಗೆ ನಿಯೋಜನೆ ಗೊಂಡು ಕೃಷಿ ಬೀಜೋತ್ಪಾದನಾ
ಕೇಂದ್ರವನ್ನು ನಿರ್ವಹಿಸಿದ್ದಾರೆ. ಇವರ ಎಲ್ಲ ಶ್ರಮಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಆಂಥೊನಿ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.

14 ಎಕರೆ ಪ್ರದೇಶವನ್ನು ಯಂತ್ರ ನಾಟಿ ಮಾಡಿದ್ದು, ಎಂ ಒ 4 ಭತ್ತದ ತಳಿಯನ್ನು ಬಿತ್ತಲಾಗಿದೆ. ಕ್ರಮ ಬದ್ದವಾಗಿ ನಿರ್ವಹಣೆ, ವೈಜ್ಞಾನಿಕ ಕೃಷಿ, ತಂತ್ರಜ್ಞಾನದಿಂದ ಸುಮಾರು 150 ಕ್ವಿಂಟಾಲ್ ಭತ್ತದ ಇಳುವರಿ ನಿರೀಕ್ಷಿಸಬಹುದು ಎಂಬುದು ಅನುಭವಿ ರೈತರ ಅನಿಸಿಕೆ. ಕೊಟ್ಟಿಗೆ ಗೊಬ್ಬರ, ಯೂರಿಯಾ, ಪೊಟ್ಯಾಷ್, ಡಿಐಪಿ ನೀಡಲಾಗಿದ್ದು, ನಾಟಿಯ 12 ನೇ ದಿನದ ನಂತರ ಕೋನೋವೀಡರ್ ಮತ್ತು ಮಾನವ ಶ್ರಮದ ಮೂಲಕ ಕಳೆ ನಿರ್ವಹಣೆ ಮಾಡಲಾಗಿದೆ.

14 ಎಕರೆ ಭೂಮಿಯನ್ನು ಹಸನುಗೊಳಿಸಿ ನೈಸರ್ಗಿಕವಾಗಿ ಹರಿಯುತ್ತಿರುವ ಹಳ್ಳದ ನೀರನ್ನು ಕಿಂಡಿ ಅಣೆಕಟ್ಟು ರಚಿಸಿ ಪೈಪ್ಗಳ ಮೂಲಕ ಗದ್ದೆಗೆ ಹರಿಬಿಡಲಾಗಿದೆ. ಸುಮಾರು 8 ಎಕರೆ ಭೂಮಿಗೆ ಸಹಜ ನೀರು ಲಭ್ಯವಿದ್ದು, ಉಳಿದ ಭೂಮಿಗೆ ನೀರನ್ನು ಪಂಪ್ ಮುಖಾಂತರ ಹರಿಸಲಾಗುತ್ತಿದೆ. ಅಕಾಲಿಕ ಮಳೆಯಿಂದ ತುಂಬಿದ ತೆನೆಗೆ ಅಲ್ಪಸ್ವಲ್ಪ ಹಾನಿಯಾಗಿದೆ. ನೀರಿನ ರಭಸಕ್ಕೆ ಕೆಲವು ಪ್ರದೇಶದ ತೆನೆ ಕೊಚ್ಚಿಕೊಂಡು ಹೋಗಿದ್ದರೂ ಹೆಚ್ಚಿನ ತೊಂದರೆ ಆಗಿಲ್ಲ.

1962 ರಲ್ಲಿ ಪ್ರಾರಂಭವಾದ ಬೀಜೋತ್ಪಾದನಾ ಕೇಂದ್ರ ಸುತ್ತಮುತ್ತಲ ರೈತರಿಗೆ ಉಪಕಾರಿಯಾಗಿತ್ತು. ಇಲ್ಲಿಂದಲೇ ಸ್ಥಳೀಯ ರೈತರು ಬೀಜವನ್ನು ಖರೀದಿಸುತ್ತಿದ್ದರು. ಉತ್ಪಾದನೆ ಮತ್ತು ಆದಾಯ ಕೇಂದ್ರಕ್ಕೆ ಇತ್ತು. ಆದರೆ ಇತ್ತೀಚಿನ ಐದಾರು ವರ್ಷಗಳಿಂದ ಸ್ವಲ್ಪ ಹಿನ್ನಡೆಯಲ್ಲಿತ್ತು. ಕಳೆದ ಎಂಟು ತಿಂಗಳ ಹಿಂದೆ ರೇಷ್ಮೆ ಇಲಾಖೆ ಅಧಿಕಾರಿ ನಿಯೋಜನೆ ಮೇರೆಗೆ ಇಲ್ಲಿನ ಚುಕ್ಕಾಣಿ ಹಿಡಿದಾಗ ಭತ್ತ ಇಲ್ಲಿ ಈ ರೀತಿ ಬೆಳೆಯಬಹುದು ಎಂಬುದು ಯಾರಿಗೂ ಕಲ್ಪನೆ ಇರಲಿಲ್ಲ. ಅವರಿಗೂ ಭತ್ತದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ.

ಇದಕ್ಕೆ ಪೂರಕವಾಗಿ ಇವರಿಗೆ ನೆರವಿಗೆ ನಿಂತದ್ದು ಸಾಗರದ ರವೀಂದ್ರ ಭಟ್ ಅವರು. ಹಗಲು ರಾತ್ರಿ ಇಲ್ಲಿನ ಬೆಳೆಯನ್ನು ಕಾದ ಅವರು, ಸಂಪೂರ್ಣವಾಗಿ ಗದ್ದೆಯನ್ನೇ ತಮ್ಮ ಮನೆಯಾಗಿಸಿದ್ದಾರೆ.

ಇತರ ಬೆಳೆಗಾರರಿಗೆ ಇರುವಂತೆ ಇಲ್ಲೂ ನವಿಲು, ಹಂದಿಗಳ ಕಾಟವಿದೆ. ನವಿಲುಗಳು ಗುಂಪಾಗಿ ಭತ್ತದ ಗದ್ದೆಗೆ ಹಾರಿ ಬಂದಾಗ ಪಟಾಕಿ ಸಿಡಿಸಿ ಓಡಿಸುವುದು ಇವರ ಕೆಲಸ. ಕಾಡು ಹಂದಿಗಳ ಕಾಟದಿಂದ ರಾತ್ರಿ ಪೂರ ಗದ್ದೆಯಲ್ಲೇ ಓಡಾಡುವ ಭಟ್ಟರು, ಭತ್ತವನ್ನು ಸಂರಕ್ಷಿಸುವುದರಲ್ಲಿ ನಿರತರಾಗಿರುತ್ತಾರೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನಿರಂತರ ಭೇಟಿ, ಪ್ರೋತ್ಸಾಹದಿಂದ ಇಲ್ಲಿ ನಿಯೋಜನೆಗೊಂಡಿರುವ ರಾಜೇಂದ್ರ ಶೆಟ್ಟಿಗಾರ ಅವರು ಭತ್ತದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕೃಷಿ ಇಲ್ಲಿ ಅಧಿಕಾರಿಗಳಿಗೆ ಹಾಗೂ ರೈತರಿಗೆ ಖುಷಿ ನೀಡಿದೆ.

* ವಿಶೇಷ ಲೇಖನ : ವಾರ್ತಾ ಇಲಾಖೆ, ಉಡುಪಿ.

ಉಡುಪಿ; ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರ, ಬ್ರಹ್ಮಾವರ ಮತ್ತು ಮಂಗಳೂರಿನ ಕೃಷಿ ವಿಜ್ಙಾನ ಕೇಂದ್ರ, ಉಡುಪಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಉಡುಪಿಯ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳು, ದ.ಕ. ಮತ್ತು ಉಡುಪಿ ಜಿಲ್ಲಾ ಕೃಷಿಕ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.8 ಮತ್ತು 9 ರಂದು ಎರಡು ದಿನಗಳ ಕಾಲ ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ”ಕೃಷಿ ಮೇಳ-2012” ನಡೆಯಿತು. 8 ರ ಬೇಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಸ ಪೂಜಾರಿ ಕೃಷಿ ಮೇಳವನ್ನು ಉದ್ಘಾಟಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು. ಎರಡು ದಿನಗಳ ಕಾಲವೂ ವಿವಿಧ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳು ನಡೆದವು. ವಸ್ತು ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಸಾವಿರಾರು ಜನರು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.
ಡಾ.ಎಂ.ಹನುಮಂತಪ್ಪ, ಡಾ.ಜಯಲಕ್ಷ್ಮಿ ನಾರಾಯಣ ಹೆಗಡೆ, ದುಗ್ಗೇ ಗೌಡ, ವಿ.ಎಸ್.ಅಶೋಕ್ ಮೊದಲಾದವರು ಕೃಷಿ ಮೇಳದ ನೇತೃತ್ವ ವಹಿಸಿದ್ದರು.