Posts Tagged ‘ಕೃಷಿ’

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗವನ್ನು ಹತೋಟಿ ಮಾಡಲು ಬೇರೆ ಬೇರೆ ಕಂಪೆನಿಗಳು ಸಾವಯವ ಸಸ್ಯ ಜನ್ಯ ಔಷಧಿಗಳನ್ನು ಬೇರೆ ಬೇರೆ ರೀತಿಯ ಅನೇಕ ಹೆಸರಿನಲ್ಲಿ (Bio-fite, Bio-pot, Agri-Biotech, Agri-foss, Agri-pos, Fito-Phose, Eco-Min, Pro-Alex, MCF, Beco-Min) ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾರಾಟ ಮಾಡುತ್ತಿರುವ ಔಷಧಿಯನ್ನು ರೈತರು ಸಿಂಪಡಿಸಿ ನಂತರದಲ್ಲಿ ಈ ರೀತಿ ಔಷಧಿಯನ್ನು ಸಿಂಪಡಿಸಿದ ತೋಟಗಳಲ್ಲಿ ಅಡಿಕೆ ಕಾಯಿಗಳು ಉದುರುವುದು, ಕೊಳೆಯುವುದು, ಒಡೆಯುವುದು, ಬೇಗ ಮಾಗುವುದು, ಈ ರೀತಿ ಸಮಸ್ಯೆಗಳು ಉಲ್ಬಣಿಸಿ ಅಡಿಕೆ ಬೆಳೆಗಾರರಿಗೆ ಇಳುವರಿ ಕಡಿಮೆಯಾಗಿ ನಷ್ಟವಾಗುತ್ತಿರುವ ಬಗ್ಗೆ ಅನೇಕ ರೈತರು ಹಾಗೂ ರೈತ ಮುಖಂಡರು ಇಲಾಖೆಗೆ ಮಾಹಿತಿ ನೀಡಿ ದೂರು ಸಲ್ಲಿಸಿರುತ್ತಾರೆ. ಈ ರೀತಿ ಸಾವಯವ ಸಸ್ಯ ಜನ್ಯ ಮೂಲ ಔಷಧಿಯನ್ನು ನಿಯಂತ್ರಿಸಲು ಯಾವುದೇ ರೀತಿಯ ನಿಯಮಗಳಿರುವುದಿಲ್ಲ. ಇಲಾಖೆ ಹಾಗೂ ಸಂಶೋಧನಾ ಸಂಸ್ಧೆಗಳು ಈ ರೀತಿ ಔಷಧಿಯನ್ನು ಉಪಯೋಗಿಸಬಾರದಾಗಿ ರೈತರಲ್ಲಿ ಈಗಾಗಲೇ ಅನೇಕ ಮನವಿ ಬಾರಿ ಮಾಡಿದೆ.ಈ ರೀತಿಯ ಔಷಧಿಗಳನ್ನು ಸಿಂಪಡಿಸಲು ಇಲಾಖಾ ಹಾಗೂ ಸಂಶೋಧನ ಸಂಸ್ಥೆಗಳು ಶಿಫಾರಸ್ಸು ಮಾಡಿರುವುದಿಲ್ಲ. ಇದರ ಬದಲಾಗಿ ಅಡಿಕೆ ಕೊಳೆ ರೋಗವನ್ನು ಸರ್ಮಪಕವಾಗಿ ನಿಯಂತ್ರಿಸಲು ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಲು ರೈತರಲ್ಲಿ ಮನವಿ ಮಾಡಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ರೈತರು ಶೇ. 1 ರ ಬೋರ್ಡೋ ದ್ರಾವಣವನ್ನು ತಯಾರಿಸಲು 1 ಕೆ.ಜಿ. ಸುಣ್ಣ ಹಾಗೂ 1 ಕೆ.ಜಿ ಮೈಲುತುತ್ತನ್ನು ಮೊದಲಿಗೆ ತಲಾ 10 ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಕರಗಿಸಿ, ನಂತರ 80 ಲೀಟರ್ ನೀರುಳ್ಳ 1 ಡ್ರಮ್ಮಿಗೆ ಈ ಎರಡು ಕರಗಿದ ದ್ರಾವಣಗಳನ್ನು ಒಂದೇ ಸಮಯದಲ್ಲಿ ಮಿಶ್ರಣ ಮಾಡಿ ತಯಾರಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಿಸಿದ ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಮರದ ಗೊನೆಗಳು ಹಾಗೂ ಎಲೆಗಳ ಭಾಗಗಳು ಚೆನ್ನಾಗಿ ತೊಯ್ಯುವಂತೆ ಸಿಂಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

http://www.udupibits.in
# ಶ್ರದ್ಧೆ ಮತ್ತು ಆಸಕ್ತಿಯ ಫಲ ಕೋಟೇಶ್ವರದ ಬೀಜೋತ್ಪಾದನಾ ಕೇಂದ್ರದಲ್ಲಿ ನಳನಳಿಸುತ್ತಿದೆ. ಕೃಷಿ ಇಲಾಖೆಯ ಪ್ರಮುಖ ಯೋಜನೆಯಡಿ ಬೀಜೋತ್ಪಾದನೆಯು ಒಂದು. ರೈತರಿಗೆ ಅತ್ಯುತ್ತಮ ತಳಿಯ ಬೀಜಗಳನ್ನು ಕರ್ನಾಟಕ ಸೀಡ್ಸ್ ಕಾರ್ಪೋರೇಷನ್ ಗೆ ಪೂರೈಸುವ ಹೊಣೆಯೂ ಇಲಾಖೆಗಿದೆ.

ಪ್ರಸಕ್ತ ಸಾಲಿನಲ್ಲಿ ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಖುಷಿಯಾಗಿದೆ. ಇಲಾಖೆಯ ಕೋಟೇಶ್ವರ ಬೀಜೋತ್ಪಾದನಾ ಕೇಂದ್ರ ಹಸಿರಿನಿಂದ ನಳನಳಿಸುತ್ತಿದೆ. ಭತ್ತದ ತೆನೆಗಳು ತೂಗಿ ಬಾಗಿವೆ. ಶ್ರದ್ದೆಯಿಂದ ದುಡಿದ ಎಲ್ಲರ ಮುಖದಲ್ಲೂ ಮಂದಹಾಸ ಮಿನುಗಿದೆ.

ವಿವಿಧ ಕಾರಣಗಳಿಂದ ಕೃಷಿ ಜಿಲ್ಲೆಯಲ್ಲಿ ನಶಿಸುತ್ತಿರುವ ಸಂದರ್ಭದಲ್ಲಿ, 14 ಎಕರೆ ವ್ಯಾಪ್ತಿಯಲ್ಲಿ ತೆನೆಗಳಿಂದ ತುಂಬಿ ಬಳುಕುತ್ತಿರುವ ಭತ್ತದ ಫಸಲನ್ನು ನೋಡುತ್ತಿದ್ದರೆ ಕೃಷಿಯಲ್ಲಿರುವ ಖುಷಿಯನ್ನು ಅಲ್ಲಗಳೆಯಲು ಹೇಗೆ ಸಾಧ್ಯ ?

ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಅಲಭ್ಯತೆಯ ವೇಳೆಯಲ್ಲಿ ಸ್ವಾಭಾವಿಕ ನೀರಿನ ಹರಿವು ಹಾಗೂ ಸ್ಥಳೀಯ ನೀರಿನ ಮೂಲಗಳನ್ನು ಬಳಸಿ, ಪ್ರತಿದಿನ 8ರಿಂದ 10 ಕೃಷಿ ಕಾರ್ಮಿಕರನ್ನು ಬಳಸಿ 800 ಮಾನವ ದಿನಗಳ ಶ್ರಮದಿಂದ ಸಂಪೂರ್ಣ ಪಾಳುಬಿದ್ದ ಭೂಮಿಯನ್ನು ಭತ್ತದ ಬಗ್ಗೆ ಹೆಚ್ಚೇನೂ ಮಾಹಿತಿ ಇರದ ರೇಷ್ಮೆ ಇಲಾಖೆಯ ಅಧಿಕಾರಿ ರಾಜೇಂದ್ರ ಶೆಟ್ಟಿಗಾರ ಅವರು ಕೃಷಿ ಇಲಾಖೆಗೆ ನಿಯೋಜನೆ ಗೊಂಡು ಕೃಷಿ ಬೀಜೋತ್ಪಾದನಾ
ಕೇಂದ್ರವನ್ನು ನಿರ್ವಹಿಸಿದ್ದಾರೆ. ಇವರ ಎಲ್ಲ ಶ್ರಮಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಆಂಥೊನಿ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.

14 ಎಕರೆ ಪ್ರದೇಶವನ್ನು ಯಂತ್ರ ನಾಟಿ ಮಾಡಿದ್ದು, ಎಂ ಒ 4 ಭತ್ತದ ತಳಿಯನ್ನು ಬಿತ್ತಲಾಗಿದೆ. ಕ್ರಮ ಬದ್ದವಾಗಿ ನಿರ್ವಹಣೆ, ವೈಜ್ಞಾನಿಕ ಕೃಷಿ, ತಂತ್ರಜ್ಞಾನದಿಂದ ಸುಮಾರು 150 ಕ್ವಿಂಟಾಲ್ ಭತ್ತದ ಇಳುವರಿ ನಿರೀಕ್ಷಿಸಬಹುದು ಎಂಬುದು ಅನುಭವಿ ರೈತರ ಅನಿಸಿಕೆ. ಕೊಟ್ಟಿಗೆ ಗೊಬ್ಬರ, ಯೂರಿಯಾ, ಪೊಟ್ಯಾಷ್, ಡಿಐಪಿ ನೀಡಲಾಗಿದ್ದು, ನಾಟಿಯ 12 ನೇ ದಿನದ ನಂತರ ಕೋನೋವೀಡರ್ ಮತ್ತು ಮಾನವ ಶ್ರಮದ ಮೂಲಕ ಕಳೆ ನಿರ್ವಹಣೆ ಮಾಡಲಾಗಿದೆ.

14 ಎಕರೆ ಭೂಮಿಯನ್ನು ಹಸನುಗೊಳಿಸಿ ನೈಸರ್ಗಿಕವಾಗಿ ಹರಿಯುತ್ತಿರುವ ಹಳ್ಳದ ನೀರನ್ನು ಕಿಂಡಿ ಅಣೆಕಟ್ಟು ರಚಿಸಿ ಪೈಪ್ಗಳ ಮೂಲಕ ಗದ್ದೆಗೆ ಹರಿಬಿಡಲಾಗಿದೆ. ಸುಮಾರು 8 ಎಕರೆ ಭೂಮಿಗೆ ಸಹಜ ನೀರು ಲಭ್ಯವಿದ್ದು, ಉಳಿದ ಭೂಮಿಗೆ ನೀರನ್ನು ಪಂಪ್ ಮುಖಾಂತರ ಹರಿಸಲಾಗುತ್ತಿದೆ. ಅಕಾಲಿಕ ಮಳೆಯಿಂದ ತುಂಬಿದ ತೆನೆಗೆ ಅಲ್ಪಸ್ವಲ್ಪ ಹಾನಿಯಾಗಿದೆ. ನೀರಿನ ರಭಸಕ್ಕೆ ಕೆಲವು ಪ್ರದೇಶದ ತೆನೆ ಕೊಚ್ಚಿಕೊಂಡು ಹೋಗಿದ್ದರೂ ಹೆಚ್ಚಿನ ತೊಂದರೆ ಆಗಿಲ್ಲ.

1962 ರಲ್ಲಿ ಪ್ರಾರಂಭವಾದ ಬೀಜೋತ್ಪಾದನಾ ಕೇಂದ್ರ ಸುತ್ತಮುತ್ತಲ ರೈತರಿಗೆ ಉಪಕಾರಿಯಾಗಿತ್ತು. ಇಲ್ಲಿಂದಲೇ ಸ್ಥಳೀಯ ರೈತರು ಬೀಜವನ್ನು ಖರೀದಿಸುತ್ತಿದ್ದರು. ಉತ್ಪಾದನೆ ಮತ್ತು ಆದಾಯ ಕೇಂದ್ರಕ್ಕೆ ಇತ್ತು. ಆದರೆ ಇತ್ತೀಚಿನ ಐದಾರು ವರ್ಷಗಳಿಂದ ಸ್ವಲ್ಪ ಹಿನ್ನಡೆಯಲ್ಲಿತ್ತು. ಕಳೆದ ಎಂಟು ತಿಂಗಳ ಹಿಂದೆ ರೇಷ್ಮೆ ಇಲಾಖೆ ಅಧಿಕಾರಿ ನಿಯೋಜನೆ ಮೇರೆಗೆ ಇಲ್ಲಿನ ಚುಕ್ಕಾಣಿ ಹಿಡಿದಾಗ ಭತ್ತ ಇಲ್ಲಿ ಈ ರೀತಿ ಬೆಳೆಯಬಹುದು ಎಂಬುದು ಯಾರಿಗೂ ಕಲ್ಪನೆ ಇರಲಿಲ್ಲ. ಅವರಿಗೂ ಭತ್ತದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ.

ಇದಕ್ಕೆ ಪೂರಕವಾಗಿ ಇವರಿಗೆ ನೆರವಿಗೆ ನಿಂತದ್ದು ಸಾಗರದ ರವೀಂದ್ರ ಭಟ್ ಅವರು. ಹಗಲು ರಾತ್ರಿ ಇಲ್ಲಿನ ಬೆಳೆಯನ್ನು ಕಾದ ಅವರು, ಸಂಪೂರ್ಣವಾಗಿ ಗದ್ದೆಯನ್ನೇ ತಮ್ಮ ಮನೆಯಾಗಿಸಿದ್ದಾರೆ.

ಇತರ ಬೆಳೆಗಾರರಿಗೆ ಇರುವಂತೆ ಇಲ್ಲೂ ನವಿಲು, ಹಂದಿಗಳ ಕಾಟವಿದೆ. ನವಿಲುಗಳು ಗುಂಪಾಗಿ ಭತ್ತದ ಗದ್ದೆಗೆ ಹಾರಿ ಬಂದಾಗ ಪಟಾಕಿ ಸಿಡಿಸಿ ಓಡಿಸುವುದು ಇವರ ಕೆಲಸ. ಕಾಡು ಹಂದಿಗಳ ಕಾಟದಿಂದ ರಾತ್ರಿ ಪೂರ ಗದ್ದೆಯಲ್ಲೇ ಓಡಾಡುವ ಭಟ್ಟರು, ಭತ್ತವನ್ನು ಸಂರಕ್ಷಿಸುವುದರಲ್ಲಿ ನಿರತರಾಗಿರುತ್ತಾರೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನಿರಂತರ ಭೇಟಿ, ಪ್ರೋತ್ಸಾಹದಿಂದ ಇಲ್ಲಿ ನಿಯೋಜನೆಗೊಂಡಿರುವ ರಾಜೇಂದ್ರ ಶೆಟ್ಟಿಗಾರ ಅವರು ಭತ್ತದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕೃಷಿ ಇಲ್ಲಿ ಅಧಿಕಾರಿಗಳಿಗೆ ಹಾಗೂ ರೈತರಿಗೆ ಖುಷಿ ನೀಡಿದೆ.

* ವಿಶೇಷ ಲೇಖನ : ವಾರ್ತಾ ಇಲಾಖೆ, ಉಡುಪಿ.

http://www.udupibits.in news

ಉಡುಪಿ: ಪ್ರತೀ ವರ್ಷದಂತೆ ಈ ವರ್ಷವು ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಭತ್ತ ಕಠಾವು ಯಂತ್ರಗಳು ಬಂದಿದ್ದರೂ, ಮದ್ಯವರ್ತಿಗಳು ಹೆಚ್ಚಾಗಿದ್ದು, ರೈತರಿಂದ ಮನಬಂದಂತೆ ಬಾಡಿಗೆ ವಸೂಲಿ ಮಾಡುವ ವ್ಯೆವಸ್ಥೆ ಅವ್ಯಾಹತವಾಗಿ ನಡೆದುಕೊಂಡೇ ಬಂದಿದೆ. ಈ ಬಗ್ಗೆ ಹಿಂದಿನ ವರ್ಷಗಳಂತೆ ಈ ವರ್ಷವೂ ದರ ನಿಯಂತ್ರಣಕ್ಕೆ ರೈತರಿಂದ ಹಾಗೂ ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿಗಳಿಂದ ಬೇಡಿಕೆಗಳು ಬಂದ ಕಾರಣ ಸಂಘಟನೆ, ಯಂತ್ರ
ಸರಬರಾಜುದಾರರೊಂದಿಗೆ ಮಾತುಕತೆ ನಡೆಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಫ್ತಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭವಾದ ಯಂತ್ರಗಳ ಬಾಡಿಗೆ ಕೇಂದ್ರಗಳ ಪೈಕಿ, ಅಜೆಕಾರಿನ ಕೇಂದ್ರದಲ್ಲಿ ಮಾತ್ರ ಕಠಾವು ಯಂತ್ರ ಬಂದಿದ್ದರೂ, ನುರಿತ ಚಾಲಕರ ಸಮಸ್ಯೆಯಿಂದ ರೈತರಿಗೆ ಈ ಬಾರಿ ಅದರ ಪ್ರಯೋಜನ ಸಿಗುವ ಸಾಧ್ಯತೆ ಕಡಿಮೆ ಎಂದು ಕೃಷಿ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಜಿಲ್ಲೆಯ ಮೂರು ಕಡೆ ಪ್ರಾರಂಭವಾಗುವ ಬಾಡಿಗೆ ಕೇಂದ್ರಗಳ ಮೂಲಕ ಲಭ್ಯವಾಗುವ ಕಠಾವು ಯಂತ್ರಗಳು ಜಿಲ್ಲೆಯ ರೈತರ ಸಂಪೂರ್ಣ
ಬೇಡಿಕೆಗಳನ್ನು ಪೂರೈಸಲೂ ಕೂಡ ಅಸಾಧ್ಯವಾಗಿದೆ. ಬಾಡಿಗೆ ಕೇಂದ್ರಗಳು ಭತ್ತ ಕಠಾವು ಯಂತ್ರಗಳಿಗೆ ಪ್ರತೀ ಗಂಟೆಗೆ 1600 ರು. ಬಾಡಿಗೆ ನಿಗದಿಪಡಿಸಿದ್ದು, ರೈತರು ಮುಂಚಿತವಾಗಿ ಬುಕ್ ಮಾಡಿ, 20 % ಹಣವನ್ನು ಮುಂಗಡ ಠೇವಣಿಯಾಗಿ ಇಡಬೇಕಾಗಿದೆ ಎಂದು ಸತ್ಯನಾರಾಯಣ ಉಡುಪ ವಿವರ ನೀಡಿದ್ದಾರೆ.

ಮಳೆಯ ಕಾರಣ ಕಠಾವು ವಿಳಂಬವಾಗಿದ್ದಲ್ಲದೇ, ಹವಾಮಾನ ಇಲಾಖೆಯ ಸೂಚನೆಯಂತೆ ಮುಂದಿನ ವಾರದಲ್ಲಿ ಪುನ: ಮಳೆ ಪ್ರಾರಂಭವಾಗಬಹುದೆಂಬ ಆತಂಕದಲ್ಲಿ ರೈತರು ಪೈಪೋಟಿಗೆ ಬಿದ್ದವರಂತೆ ಕಠಾವಿಗೆ ಮುಂದಾಗಿದ್ದಾರೆ. ಇದನ್ನೆ ನೆಪವಾಗಿಟ್ಟುಕೊಂಡು, ಯಂತ್ರ ಬಾಡಿಗೆದಾರರು ಬಾಡಿಗೆಯನ್ನು 2500 ರು.ಗಳಿಂದ 2800 ರು.ಗಳವರೆಗೆ ಪ್ರತಿ ಗಂಟೆಗೆ ರೈತರಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಉಡುಪ ಮಾಹಿತಿ ನೀಡಿದ್ದಾರೆ.

ಈ ಕಾರಣದಿಂದ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಿರಿಯಡ್ಕ ಮುಂಡಾಜೆಯ ಸುರೇಶ ನಾಯಕ್ ನೇತೃತ್ವದಲ್ಲಿ ಕೆಲವು ಯಂತ್ರ ಸರಬರಾಜುದಾರರನ್ನು ಸಂಪರ್ಕಿಸಿ, ಮಾತುಕತೆ ನೆಡೆಸಿತು. ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿಗಳ ಮೂಲಕ ಅಥವಾ ಗ್ರಾಮಗಳ ರೈತರು ಒಂದು ಗುಂಪಾಗಿ ತಮಗೆ ಅಗತ್ಯವಿರುವಷ್ಟು ಯಂತ್ರಗಳನ್ನು ತಿಳಿಸಿದಲ್ಲಿ, 2000 ರು.ಗಳಿಂದ 2200 ರು.ಗಳ ಗರಿಷ್ಠ ದರದಲ್ಲಿ ಭತ್ತ ಕಠಾವು ಯಂತ್ರಗಳನ್ನು ಒದಗಿಸಿಕೊಡಲು ಸರಬರಾಜುದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಉಡುಪ ಸ್ಪಷ್ಟಪಡಿಸಿದ್ದಾರೆ.

ಈ ಹಾರ್ವೆಸ್ಟ್ರ್ ಯಂತ್ರಗಳು ಬೆಲ್ಟ್ ಆಧಾರಿತವಾಗಿದ್ದು, ನೀರಿರುವ ಗದ್ದೆಗಳಲ್ಲೂ ಕಟಾವು ಮಾಡಲು ಸಾಧ್ಯವಿದೆ. ಅದೇ ರೀತಿ ಟಯರ್ ಆಧಾರಿತ ಯಂತ್ರಗಳನ್ನು ಬೇಕಿದ್ದರೆ ತರಿಸಲು ತಯಾರಿದ್ದು, ಅದನ್ನು ಪ್ರತಿ ಗಂಟೆಗೆ 1800 ರು.ಗಳಂತೆ ಬಾಡಿಗೆಗೆ ನೀಡಲೂ ಸಾಧ್ಯವಿರುವುದಾಗಿ ಯಂತ್ರ ಸರಬರಾಜುದಾರರು ತಿಳಿಸಿದ್ದರೂ, ನೀರಿನ ಗದ್ದೆಗಳಲ್ಲಿ ಕಠಾವು ಮಾಡಲು ಕಷ್ಟಸಾಧ್ಯವೆಂದು ಮಾತುಕತೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು ಎಂದು ಉಡುಪ ತಿಳಿಸಿದ್ದಾರೆ.

ಈ ರೀತಿ ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿಗಳ ಮೂಲಕ ಅಥವಾ ಗ್ರಾಮಗಳ ರೈತರು ಒಂದು ಗುಂಪಾಗಿ, ಕಠಾವು ಯಂತ್ರಕ್ಕೆ ಬೇಡಿಕೆ ಸಲ್ಲಿಸಿದರೆ ಅಂತಹ ರೈತರ ಗುಂಪಿಗೆ ಯಂತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲು ಸಂಘಟನೆ ತಯಾರಿದೆ. ಹೆಚ್ಚು ಹೆಚ್ಚು ಕಠಾವು ಪ್ರದೇಶಗಳಿದ್ದಲ್ಲಿ, ಕನಿಷ್ಠ ಬಾಡಿಗೆಗೆ ಯಂತ್ರ
ಸರಬರಾಜುದಾರರು ಮುಂದಾಗುತ್ತಾರೆ. ಇದಕ್ಕಿಂತ ಕಡಿಮೆ ದರದಲ್ಲಿ ಕಠಾವು ಯಂತ್ರಗಳನ್ನು ಒದಗಿಸಲು ಯಾವುದೇ ಯಂತ್ರ ಸರಬರಾಜುದಾರರು ತಯಾರಿದ್ದರೆ, ಆ ಬಗ್ಗೆ ಸಂಪರ್ಕಿಸಿದಲ್ಲಿ ರೈತರ ಹಿತದೃಷ್ಠಿಯಿಂದ ಅಂತಹವರ ಮಾಹಿತಿಯನ್ನೂಪ್ರಕಟ ಮಾಡಲು ಸಂಘಟನೆ ಬದ್ದವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಿ.ವಿ.ಪೂಜಾರಿ ಪೆರ್ಡೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಈ ಬಗ್ಗೆ ಸುರೇಶ ನಾಯಕ್ (9480016147, 8971465847), ಭಾ.ಕಿ. ಸಂ.ಪದಾಧಿಕಾರಿಗಳಾದ ಸತ್ಯನಾರಾಯಣ ಉಡುಪ ಜಪ್ತಿ (9448843888), ಕುಂದಾಪುರ ತಾಲೂಕಿನ ಪ್ರ.ಕಾರ್ಯದರ್ಶಿ ವೆಂಕಟೇಶ ಹೆಬ್ಬಾರ್ ಹೊಸ್ಕೋಟೆ (9844425186), ಉಡುಪಿ ತಾಲೂಕಿನ ಪ್ರ.ಕಾರ್ಯದರ್ಶಿ ಆಸ್ತೀಕ ಶಾಸ್ತ್ರಿ ಗುಂಡ್ಮಿ (9019646953), ಕಾರ್ಕಳ ತಾಲೂಕಿನ ಪ್ರ. ಕಾರ್ಯದರ್ಶಿ ಗೋವಿಂದರಾಜ್ ಭಟ್ ಕಡ್ತಲ (9880232804), ಉಡುಪಿ ಕಾರ್ಯಾಲಯ (0820-2536450), ಕಾರ್ಕಳ ಕಾರ್ಯಾಲಯ (08258-233035), ಕುಂದಾಪುರ ಕಾರ್ಯಾಲಯ (08254-235469) ಗಳಿಗೆ ಸಂಪರ್ಕಿಸಬಹುದೆಂದು ಭಾ. ಕಿ. ಸಂ. ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಗೆ ಈ ಬಗ್ಗೆ ಸಂಘಟನೆ ಮನವಿ ಮಾಡಿಕೊಳ್ಳುತ್ತಿದ್ದು, ಕಳೆದ ವರ್ಷ ಕೃಷಿ ಇಲಾಖಾ ಜಂಟಿ ನಿರ್ದೇಶಕರು ಸಭೆ ಕರೆದಿದ್ದರೂ, ಯಂತ್ರ ಸರಬರಾಜುದಾರರ್ಯಾರೂ ಬಾರದ ಕಾರಣ ಗೊಂದಲದಲ್ಲಿ ಕೊನೆಗೊಂಡಿತ್ತು. ಆದರೆ ಈ ವರ್ಷ ಜಿಲ್ಲಾಧಿಕಾರಿಗಳು ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತ ಪ್ರತಿನಿಧಿಗಳ ಹಾಗೂ ಯಂತ್ರ ಸರಬರಾಜುದಾರ ಸಭೆ ಕರೆದಿರುವ ಬಗ್ಗೆ ಸಂಘಟನೆಗೆ ಆಮಂತ್ರಣ ಬಂದಿದೆಯಾದರೂ ಈ ಪ್ರಯತ್ನ ಮೊದಲೇ ಆಗ ಬೇಕಿತ್ತು, ಈಗ ವಿಳಂಬವಾಯಿತು ಎಂದು ಸಂಘಟನೆ ಅಬಿಪ್ರಾಯಪಟ್ಟಿದೆ.

http://www.udupibits.in news

ಉಡುಪಿ: ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ರೈತ ಸೂರ್ಯ ಯೋಜನೆಯಲ್ಲಿನ ಅವ್ಯವಹಾರ ಸಹಿತ ಪ್ರಮುಖ ಐದು ಪ್ರಮುಖ ಪ್ರಕರಣಗಳ ವಿರುದ್ಧ ಜಿಲ್ಲಾ ಕೃಷಿಕ ಸಂಘದ ಸದಸ್ಯರು ಇಂದು (18.10.2014) ಪೂರ್ವಾಹ್ನ ಉಡುಪಿಯ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಹೊಸ ಪಂಪು ವಿದ್ಯುತ್ ಸಂಪರ್ಕಕ್ಕೆ 10 ಸಾವಿರ ರು. ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವುದು, ವಿದ್ಯುತ್ ದರ ಏರಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲೈನ್ ಮೆನ್ ಗಳನ್ನು ನೇಮಕಾತಿ ಮಾಡದಿರುವುದರ ವಿರುದ್ಧವೂ ಕೃಷಿಕರು ಪ್ರತಿಭಟಿಸಿದರು. ರೈತ ಸೂರ್ಯ ಯೋಜನೆಯಲ್ಲಿ ರಾಜ್ಯದ ರೈತರು ಪಾಲ್ಗೊಳ್ಳಬೇಕೆಂದು ಪ್ರಚಾರಪಡಿಸಿದ ಅಲ್ಪ ಕಾಲದಲ್ಲಿಯೇ ಆನ್ ಲೈನ್ ನಲ್ಲಿ ಎಲ್ಲಾ ಕೋಟಾ ಮುಕ್ತಾಯಗೊಂಡಿರುವುದು ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ನಿರ್ವಹಣೆಗಾಗಿ ಲೈನ್ ಮೆನ್ ಗಳ ಕೊರತೆಯಿದ್ದು, ಕೂಡಲೇ ಲೈನ್ ಮೆನ್ ಗಳನ್ನು ನೇಮಕಾತಿ ಮಾಡುವ ಮೂಲಕ ಈ ಕೊರತೆಯನ್ನು ನೀಗಿಸಬೇಕು, ಈ ಬಾರಿ ಸಾಕಷ್ಟು ಮಳೆಯಾಗಿರುವುದರಿಂದ ವಿದ್ಯುತ್ ಲೋಡ್ ಶೆಡ್ಡಿಂಗ್ ಕೈಬಿಡಬೇಕು ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ದರ ಅಧಿಕವಿರುವುದರಿಂಝದ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದೂ ಕೃಷಿಕರು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ವಿದ್ಯುತ್ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಆರೋಪಿಸಿದರು.

ಪ್ರತಿಭಟನಾ ಸಭೆಯ ಬಳಿಕ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು ಕಾರ್ಯನಿವರ್ಾಹಕ ಇಂಜಿನಿಯರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕೋಶಾಧಿಕಾರಿ ಪಾಂಡುರಂಗ ನಾಯಕ್ ಹಿರಿಯಡ್ಕ, ಕಾರ್ಯದರ್ಶಿ ರವೀಂದ್ರ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

‘ಹಸಿದು ಹಲಸು ಹಣ್ಣು ತಿನ್ನು, ಉಂಡು ಬಾಳೆ ಹಣ್ಣು ತಿನ್ನು’ ಎನ್ನುವ ಗಾದೆ ಎಲ್ಲರಿಗೂ ಚಿರಪರಿಚಿತ. ಹಸಿದ ಹೊಟ್ಟೆಗೆ ಹಲಸಿನ ಹಣ್ಣು ಸಿಕ್ಕರಂತೂ ಮೃಷ್ಟಾನ್ನ ಉಂಡಷ್ಟೇ ಖುಶಿ. ಹಲಸಿನ ಹಣ್ಣಿನಲ್ಲಿ ಸಕ್ಕರೆ ಅಂಶ ಮತ್ತು ಅನ್ನಾಂಗಗಳಿದ್ದು ಹಲಸಿನ ಬೀಜದಲ್ಲಿ ಸಾರಜನಕ, ಪಿಷ್ಠ ಹಾಗೂ ಖನಿಜಾಂಶಗಳು ಇದ್ದು ಆರೋಗ್ಯಕ್ಕೆ ಹಿತಕಾರಿಯಾಗಿದೆ. ವರ್ಷಪೂರ್ತಿ ಹಸಿರೆಲೆಗಳನ್ನು ಹೊದ್ದುಕೊಂಡಿರುವ ಹಲಸಿನ ಮರ ಮಾನವ ಆಹಾರವಾಗಿ, ಪಶು ಆಹಾರವಾಗಿ ಔಷಧ ತಯಾರಿಸಲು ಹಾಗೂ ಪೀಠೋಪಕರಣಗಳನ್ನು ತಯಾರಿಸಲು ಕಟ್ಟಿಗೆಯಾಗಿ ಹಲವಾರು ರೂಪಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಲವಾರು ಔಷಧೀಯ ಗುಣವುಳ್ಳ ಹಲಸು ರಕ್ತದ ಒತ್ತಡ, ಪಿತ್ತ ನಾಶಕ, ಬಲವರ್ಧಕ ಮತ್ತು ವೀರ್ಯವರ್ಧಕವಾಗಿ ಆಯುರ್ವೇದದ ಚಿಕಿತ್ಸೆಯಲ್ಲಿ ಮತ್ತು ಔಷಧಗಳಲ್ಲಿ ಬಳಸಲ್ಪಡುತ್ತದೆ.
ದಕ್ಷಿಣ ಭಾರತದಲ್ಲಿ ಬೆಳೆದ ಹಲಸು ಇಂದು ಉತ್ತರ ಭಾರತದ ದೆಹಲಿ, ಕಲ್ಕತ್ತ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳ ಜನರ ತರಕಾರಿಯಾಗಿ ಬಳಸಲ್ಪಡುತ್ತದೆ. ಕೇರಳ ರಾಜ್ಯವೊಂದರಿಂದಲೇ ಹಲಸಿನ ಸೀಸನ್ ನಲ್ಲಿ ದಿನಕ್ಕೆ 750 ಟನ್ ಅಂದರೆ ಪ್ರತಿ ನಿತ್ಯ 20 ಟನ್ನಿನ 3 ಡಜನ್ ಗೂ ಮಿಕ್ಕಿದ ಲಾರಿ ಲೋಡುಗಳು ಸರಾಸರಿ 3 ದಿನ 3000 ಕಿ.ಮೀ ಸಾಗಿಸಿ ವರ್ಷಕ್ಕೆ ಕನಿಷ್ಟ ಅರ್ಧ ಲಕ್ಷಟನ್ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸರಬರಾಜು ಮಾಡುತ್ತ 10000 ಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿ ಅನ್ನ ನೀಡಿದೆ. ಕೇರಳದಲ್ಲಿ ಮೊದ ಮೊದಲು ಕೊಂಡೋಗಿ, ಒಮ್ಮೆ ಅದು ಹೊದರೆ ಸಾಕು ಮಳೆಗಾಲದಲ್ಲಿ ಕೊಳೆತು ನುಸಿ ಹುಟ್ಟಿ ತಲೆನೋವು ಮಾಡುತ್ತದೆ ಎನ್ನುತ್ತಿದ್ದ ರೈತರು ಈಗ ಹಲಸೊಂದಕ್ಕೆ 25-30 ರೂಪಾಯಿ ಕೇಳುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿಯೂ ಹಲಸಿನ ಉಪಯೋಗವಾಗಲಿದೆ. ಇವತ್ತು ಗೃಹಿಣಿಯರು ತಾವೇ ಸ್ವತಃ ಆಹಾರ ವಿಜ್ಞಾನಿಗಳಂತೆ ಹಲವಾರು ಹಲಸಿನ
ತಿನಿಸುಗಳನ್ನು ತಯಾರಿಸುತ್ತಿದ್ದಾರೆ. ಕಳೆದ ಎರಡು ಹಲಸಿನ ಮೇಳದಲ್ಲಿ
ಪ್ರದರ್ಶಿಸಲ್ಪಟ್ಟ ಹಲಸಿನ ತಿನಿಸುಗಳಾದ ಪೇಡಾ, ಪಾಯಸ, ಹಪ್ಪಳ, ಸಂಡಿಗೆ, ಜಾಮ್, ಜಲ್ಲಿ, ಜೂಸ್, ಮುಳುಕ, ರೊಟ್ಟಿ, ಹೋಳಿಗೆ, ಚಕ್ಕುಲಿ ಮತ್ತು ಉಪ್ಪಿನಕಾಯಿ ಇತ್ಯಾದಿ ನೂರಕ್ಕೂ ಹೆಚ್ಚು ಹಲಸಿನ ಉತ್ತನ್ನಗಳನ್ನು ತಯಾರಿಸುವುದರಲ್ಲಿ ಮಹಿಳೆಯರು
ಯಶಸ್ವಿಯನ್ನು ಸಾಧಿಸಿದ್ದಾರೆ. ಆದರೆ ಆ ಎಲ್ಲಾ ಹಲಸಿನ ತಿನಿಸುಗಳ ರೆಸಿಪಿಯನ್ನು ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಹೊರತರುವ ಕೆಲಸ ಮಾಡಬೇಕಿದೆ.
ದೊಡ್ಡ ದೊಡ್ಡ ಮರಗಳನ್ನು ಏರಿ ಹಲಸು ಕೊಯ್ಯುವುದು ಸುಲಭದ ಕೆಲಸವಲ್ಲ. ಹಲಸಿನ ಮರವೇರಿ ಹಲಸನ್ನು ಹಾಳಾಗದಂತೆ ಇಳಿಸುವುದೇ ಒಂದು ಕಲೆ. ಅದಕ್ಕೆ ನುರಿತ ಕಾರ್ಮಿಕರ ಅವಶ್ಯಕತೆ ಇದೆ. ಪ್ರತಿ ಹಲಸು ಬೆಳೆಯುವ ಪ್ರದೇಶದಿಂದ ಎಳೆ ಹಲಸನ್ನು ಎಚ್ಚರದಿಂದ ಕೊಯ್ದು ತಂದು ಸಂಗ್ರಹಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಸಂಘ ಸಂಸ್ಥೆಗಳು
ಹುಟ್ಟಿಕೊಳ್ಳಬೇಕಿದೆ. ಹಣ್ಣಿನಲ್ಲಿಯೇ ಅತಿದೊಡ್ಡ ಹಣ್ಣಾದ ಹಲಸು ಅತಿ ಹೆಚ್ಚಿನ ಉತ್ಫಾಹಣ್ಣಿನಲ್ಲಿಯೇ ಅತಿದೊಡ್ಡ ಹಣ್ಣಾದ ಹಲಸು ಅತಿ ಹೆಚ್ಚಿನ ಉತ್ಫಾಧನೆಯನ್ನು ನೀಡುತ್ತಿದ್ದರೂ ಕೂಡ ಅದರ ಬಳಕೆ ಕಡಿಮೆಯೆ ಅದಕ್ಕಾಗಿ ಹಲಸಿನ ಹಣ್ಣಿನ ಮೌಲ್ಯವರ್ಧನೆಗೆ ಹೆಚ್ಚು ಒತ್ತು ಕೊಟ್ಟು ಅದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ.
ನಾಗರೀಕ ಆಹಾರ ಪದ್ದತಿಯ ಬದಲಾವಣೆಯಿಂದ ನಗರದಲ್ಲಿರುವ ಜನರಿಗೆ ಹಲಸಿನ ನಾನಾ ತಿಂಡಿಗಳ ಪರಿಚಯ ಮಾಡಿಸುವ ಹಲಸಿನ ವಿವಿಧ ಹಾಗೂ ವಿಶಿಷ್ಟ ತಿನಿಸುಗಳಿಗೆ ಬಹುಮಾನ ವಿತರಿಸುವ ಮೂಲಕ ಹಲಸಿನ ಹೊಸ ತಿನಿಸುಗಳ ಬಗೆಬಗೆಗಿನ ಸಂಶೋಧನೆಗೆ ಪ್ರಚೋಧಿಸುವ ಅಳಿವಿನ ಅಂಚಿನಲ್ಲಿರುವ ಹಾಗೂ ವರ್ಷ ಪೂರ್ತಿ ಹಣ್ಣನ್ನು ನೀಡುವ ಹಲಸಿನ ತಳಿಗಳನ್ನು ಗುರುತಿಸಿ, ಉಳಿಸಿ, ಬೆಳೆಸುವ ಹಾಗೂ ಬೆಳೆದ ಹಲಸು ಉಪಯೋಗಿಸದೆ ಹಾಳಾಗುವುದನ್ನು ತಡೆಯುವ ಸದ್ದುದೇಶದಿಂದ 2011 ಹಾಗೂ 2012 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲಸಿನ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು ಈ ವರ್ಷ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಉಡುಪಿ, ವಲಯ ಕೃಷಿ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಜಿಲ್ಲಾ ಕೃಷಿಕ ಸಮಾಜ, ಉಡುಪಿ, ಕೃಷಿ, ತೋಟಗಾರಿಕೆ ಮತ್ತು ಜಲಾನಯನ ಇಲಾಖೆ, ಉಡುಪಿ ಇವರ
ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಹಲಸಿನ ಮೇಳವನ್ನು ಜೂನ್ 25 ಮತ್ತು 26 ರಂದು ಎರಡು ದಿನಗಳ ಕಾಲ ಉಡುಪಿ ಸಮೀಪದ ಬ್ರಹ್ಮಾವರದಲ್ಲಿರುವ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಉಡುಪಿ: ಕಟಪಾಡಿ ಸಮೀಪದ ಮಟ್ಟು ಕೊಪ್ಲ ಸಾಂದೀಪನಿ ಶಾಲೆಯಲ್ಲಿ ‘ಮಟ್ಟು ಗುಳ್ಳ (ಬದನೆ): ವೈಜ್ಞಾನಿಕ ಬೇಸಾಯ ಕ್ರಮ ಅಳವಡಿಕೆ’ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಜಿ.ಪಂ.ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ತೋಟಗಾರಿಕಾ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಸದಾಶಿವ ರಾವ್, ನಿವೃತ್ತ ಅಧಿಕಾರಿ ಕೆ.ಪಿ.ರಮೇಶ್, ವಿಜ್ಞಾನಿಗಳಾದ ಧನಂಜಯ, ಶಂಕರ್, ಶ್ರೀಮತಿ ಸಾಧನಾ, ಶ್ರೀಮತಿ ವಸಂತಿ ಆಚಾರ್ಯ, ಪ್ರೆಸಿಲ್ಲಾ ಡಿಮೆಲ್ಲೊ, ಶ್ರೀಮತಿ ಕವಿತಾ, ಕು.ಅಶ್ವಿನಿ ಶೆಟ್ಟಿ, ರತ್ನಾಕರ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಕೇಶ್ ಒಳಕಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಮಗ್ರ ಮಾಹಿತಿ ನೀಡಿದರು.